ಅಮೇರಿಕಾ ರಷ್ಯಾದ ಮೇಲೆ ದಾಳಿ ಸಾರಿದರೆ, ನಾವು ರಷ್ಯಾಗೆ ಸೈನ್ಯವನ್ನು ಕಳುಹಿಸುತ್ತೇವೆ ! – ಚೀನಾದ ಎಚ್ಚರಿಕೆ

ಫ್ರಾನ್ಸ್ ನ ರಾಷ್ಟ್ರಾಧ್ಯಕ್ಷರು ಉಕ್ರೇನ್‌ಗೆ ನ್ಯಾಟೋ ಸೈನ್ಯವನ್ನು ಕಳುಹಿಸುವಂತೆ ಕೋರಿದ್ದರು !

ಬೀಜಿಂಗ್ (ಚೀನಾ) – ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಇವರು ಕೆಲವು ದಿನಗಳ ಹಿಂದೆ `ನ್ಯಾಟೊ’ ಗೆ ತನ್ನ ಸೈನ್ಯವನ್ನು ಉಕ್ರೇನ್ ದೇಶಕ್ಕೆ ಕಳುಹಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಈಗ ಚೀನಾವು `ಅಮೇರಿಕಾ ಅಥವಾ ‘ನ್ಯಾಟೊ’ ದೇಶಗಳು ರಷ್ಯಾ ಮೇಲೆ ದಾಳಿ ನಡೆಸಿದರೆ, ಚೀನಾ ರಷ್ಯಾವನ್ನು ಬೆಂಬಲಿಸಿ ತನ್ನ ಸೈನ್ಯವನ್ನು ಕಳುಹಿಸುವುದು ಎಂದು ಚೀನಾದ ರಕ್ಷಣಾ ಸಚಿವಾಲಯದ ಪ್ರತಿನಿಧಿಯು ಬೆದರಿಕೆ ಹಾಕಿದ್ದಾರೆ. ಒಂದು ಟೆಲಿಗ್ರಾಮ್ ಚಾನಲ್ ಈ ವಾರ್ತೆಯನ್ನು ನೀಡಿದೆ. ಕಳೆದ ವಾರ, ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಇವರು ಅಮೇರಿಕಾಗೆ ಎಚ್ಚರಿಕೆ ನೀಡುತ್ತಾ, ರಷ್ಯಾ ಪರಮಾಣು ಯುದ್ಧಕ್ಕೆ ಸಿದ್ಧವಾಗಿದೆ ಮತ್ತು ಉಕ್ರೇನ್ ನಲ್ಲಿ ಅಮೇರಿಕಾ ತನ್ನ ಸೈನ್ಯವನ್ನು ನಿಯೋಜಿಸಿದರೆ ಯುದ್ಧವು ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಿದ್ದರು.

ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಮ್ಯಾಕ್ರಾನ್ ಇವರೂ ಸಹ ಕೆಲವು ದಿನಗಳ ಹಿಂದೆ, ಉಕ್ರೇನ್‌ಗೆ ಸಿಗುವ ನೆರವನ್ನು ಕಡಿಮೆ ಮಾಡುವುದೆಂದರೆ; ರಷ್ಯಾಗೆ ಶರಣಾದಂತೆ ಎಂದು ಹೇಳಿದ್ದರು. ನಾನು ಹೀಗಾಗಲು ಬಿಡಲು ಇಚ್ಛಿಸುವುದಿಲ್ಲ. ನಾನು ಇದರ ಪ್ರಾರಂಭವನ್ನೂ ಮಾಡುವುದಿಲ್ಲ; ಆದರೆ ರಷ್ಯಾದ ಸೈನ್ಯವನ್ನು ಹೊರಹಾಕಲು ನಮಗೆ ಉಕ್ರೇನ್ ನಲ್ಲಿ ಪ್ರತ್ಯಕ್ಷ ಹೋಗಿ ಯಾವುದೇ ರೂಪದಲ್ಲಿಯಾದರೂ ಕ್ರಮ ಕೈಕೊಳ್ಳುವುದು ಆವಶ್ಯಕವಾಗಿದೆ ಎಂದು ಹೇಳಿದ್ದರು.

.. ಮೂರನೇ ಮಹಾಯುದ್ಧ ನಡೆಯುವುದು ! – ಇಟಲಿ

ಮ್ಯಾಕ್ರನ್ ಅವರ ಹೇಳಿಕೆಯ ಬಗ್ಗೆ ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಾಜಾನಿಯವರು ಒಂದು ಸಂದರ್ಶನದಲ್ಲಿ ಮಾತನಾಡುತ್ತಾ, `ನ್ಯಾಟೋ’ ತನ್ನ ಸೈನ್ಯವನ್ನು ಉಕ್ರೇನ್‌ಗೆ ಕಳುಹಿಸುತ್ತದೆ ಎಂದು ನನಗೆ ಅನಿಸುವುದಿಲ್ಲ. ಹೀಗಾದರೆ ದೊಡ್ಡ ತಪ್ಪಾಗುತ್ತದೆ. ನಾವು ಉಕ್ರೇನ್‌ಗೆ ಅದು ತನ್ನ ಸ್ವಂತದ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುವಷ್ಟು ಸಹಾಯ ಮಾಡಬೇಕು. ಉಕ್ರೇನ್ ನ್ನು ಪ್ರವೇಶಿಸಿ, ರಷ್ಯಾ ವಿರುದ್ಧ ಹೋರಾಡುವುದೆಂದರೆ, ಮೂರನೇ ಮಹಾಯುದ್ಧಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ಹೇಳಿದರು.