ಸಂದುಗಳ ಕಾಳಜಿಯನ್ನು ಮೊದಲಿನಿಂದಲೇ ತೆಗೆದುಕೊಳ್ಳಬೇಕು !

ಸಂದುನೋವಿನ ವಿಷಯದಲ್ಲಿ ಸಾಂಕೇತಿಕ ಚಿತ್ರ

ಮುಪ್ಪಿನಲ್ಲಿ ಸಂದುಗಳ ನೋವು ಆರಂಭವಾದಾಗ, ‘ಸಂಧಿವಾತದ ತೊಂದರೆ ಆರಂಭವಾಯಿತು’, ಎಂದು ನಾವು ಹೇಳುತ್ತೇವೆ. ‘ಸಂಧಿವಾತ’ ಎಂಬ ಹೆಸರಿನಿಂದಲೇ ನಮಗೆ ಸಂದುಗಳಲ್ಲಿ ವಾತ ದೋಷದಿಂದಾಗುವ ಕಾಯಿಲೆ, ಎಂಬುದು ಗಮನಕ್ಕೆ ಬರುತ್ತದೆ ! ಈ ಸಂಧಿವಾತವು ಶರೀರದ ಯಾವುದೇ ಸಂಧಿಯಲ್ಲಿ ಆಗಬಹುದು. ಸಂಧಿವಾತದ ಸ್ವರೂಪವನ್ನು ತಿಳಿದುಕೊಳ್ಳುವ ಮೊದಲು ನಾವು ಸಂದುಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

೧. ಸಂದುಗಳ ರಚನೆ ಹೇಗಿರುತ್ತದೆ ?

ಅ. ನಮ್ಮ ಶರೀರದಲ್ಲಿ ಮುಖ್ಯವಾಗಿ ಎರಡು ರೀತಿಯ ಸಂದುಗಳಿರುತ್ತವೆ. ಒಂದು ವಿಧವೆಂದರೆ ಹೆಚ್ಚು ಅಲುಗಾಡದಿರುವ ಸಂದುಗಳು, ಈ ಸಂದುಗಳಲ್ಲಿ ಹೆಚ್ಚು ಟೊಳ್ಳು ಇರುವುದಿಲ್ಲ. ಬೆನ್ನೆಲುಬು (ಸ್ಪೈನ್) ಮತ್ತು ತಲೆಯಲ್ಲಿ ಈ ಸಂದುಗಳಿರುತ್ತವೆ. ಇನ್ನೊಂದು ವಿಧವೆಂದರೆ, ಈ ಸಂದುಗಳು ಸಹಜವಾಗಿ ಅಲುಗಾಡುತ್ತವೆ ಹಾಗೂ ಅವುಗಳಲ್ಲಿ ಸ್ವಲ್ಪ ಟೊಳ್ಳು ಇರುತ್ತದೆ, ಉದಾ. ಭುಜ, ಮೊಣಕೈ, ಮೊಣಕಾಲು (ಮಂಡಿ), ಸೊಂಟ, ಪಾದದ ಕೀಲು, ಬೆರಳು ಇತ್ಯಾದಿ.

ಆ. ಸಂದುಗಳಲ್ಲಿ ಎರಡು ಎಲುಬುಗಳು ಒಟ್ಟಾಗುವಲ್ಲಿ ಘರ್ಷಣೆಯಾಗಬಾರದೆಂದು ಅತ್ಯಂತ ನುಣುಪಾದ ಹಾಗೂ ಮೃದುವಾದ ಮೃದ್ವಸ್ಥಿ ತಟ್ಟೆ  (intervertebral Disc) ಇರುತ್ತದೆ.

ಇ. ಎಲುಬುಗಳು ಪರಸ್ಪರ ಜೋಡಿಸಿಕೊಂಡಿರಬೇಕೆಂದು ಅವುಗಳ ಸುತ್ತಲೂ ಅಸ್ಥಿರಜ್ಜು (Muscle Ligaments) ಇರುತ್ತವೆ.

ಈ. ಸೈಕಲಿನ ಚಕ್ರಗಳು ಸರಿಯಾಗಿ ತಿರುಗಬೇಕೆಂದು ನಾವು ಅದಕ್ಕೆ ಎಣ್ಣೆಯನ್ನು ಹಾಕುತ್ತೇವೆ, ಅದೇ ರೀತಿ ಸಂದುಗಳ ಚಲನವಲನ ಸರಿಯಾಗಿ ಆಗಬೇಕೆಂದು ಎಲುಬುಗಳ ಸುತ್ತಲೂ ಎಣ್ಣೆಯಂತಹ ಒಂದು ದ್ರವ ಪದಾರ್ಥ ಇರುತ್ತದೆ. ಅದಕ್ಕೆ ‘ಸೈನೋವಿಯಲ್‌ ಫ್ಲುಯಿಡ್’ ಎನ್ನುತ್ತಾರೆ.

ಉ. ಆಯುರ್ವೇದಕ್ಕನುಸಾರ ಸಂದುಗಳಲ್ಲಿ ಕಫದೋಷವು ಕೀಲೆಣ್ಣೆಯ ಕಾರ್ಯವನ್ನು ಮಾಡುತ್ತದೆ, ವಾತದೋಷ ಸಂದುಗಳ ಚಲನವಲನಕ್ಕೆ ಸಹಕಾರಿಯಾಗಿರುತ್ತದೆ. ಇಂತಹ ಸಂದುಗಳನ್ನು ಪ್ರಾರಂಭದಿಂದಲೇ ಕಾಪಾಡಿಕೊಂಡರೆ ಮುಪ್ಪಿನಲ್ಲಿ ಕೂಡ ಶರೀರದ ಸಂದುಗಳು ಆರೋಗ್ಯವಾಗಿ ಹಾಗೂ ಸಕ್ಷಮವಾಗಿರಬಹುದು.

೨. ಸಂಧಿವಾತ ಬರಲು ಕಾರಣಗಳೇನು ?

ಅ. ಸತತ ತಂಪಗಿನ ಸ್ಥಳದಲ್ಲಿ ಕುಳಿತುಕೊಳ್ಳುವುದು, ಸತತವಾಗಿ ನೀರಿನಲ್ಲಿ ಕೆಲಸ ಮಾಡುವುದು, ಸತತ ಏರ್‌ಕಂಡಿಶನ್‌ನಲ್ಲಿ ಕುಳಿತುಕೊಳ್ಳುವುದು.

ಆ. ಕುಳಿತು ಮಾಡುವ ಕೆಲಸಗಳು ಅಥವಾ ನಿರಂತರ ಅತ್ಯಂತ ಕಷ್ಟದ ಕೆಲಸಗಳನ್ನು ಮಾಡುವುದು.

ಇ. ಸಂದುಗಳಿಗೆ ಹೊಡೆತ ಬೀಳುವುದು ಅಥವಾ ನೋವಾಗುವುದು.

ಈ. ಅತ್ಯಂತ ಸ್ಥೂಲಕಾಯ ಶರೀರ

ಉ. ಮುಪ್ಪಿನಲ್ಲಿ ಸಂದುಗಳ ದ್ರವಪದಾರ್ಥ ಕಡಿಮೆಯಾಗಿ ಎಲುಬುಗಳು ಸವೆಯುವುದು ಹಾಗೂ ಸಂದುಗಳಲ್ಲಿ ನೋವಾಗುವುದು

ಊ. ಕ್ಷಯರೋಗದಂತಹ ಕಾಯಿಲೆ (ಟಿಬಿ), ಗುಪ್ತರೋಗ ಅಥವಾ ಬೇರೆ ಯಾವುದೇ ಪ್ರಕಾರದ ಜಂತುಗಳ (Bacteria) ಸೋಂಕು, ಚಿಕ್ಕ ವಯಸ್ಸಿನಲ್ಲಿ ಆಗಿರುವ ‘ರುಮ್ಯಾಟಿಕ್‌ ಫಿವರ್‘ (Rheumatic Fever – ವಿಶಿಷ್ಟ ಪ್ರಕಾರದ ಜ್ವರ) ಈ ಕಾಯಿಲೆಯೂ ಸಂದುನೋವಿಗೆ ಕಾರಣವಾಗಬಹುದು. ಸಂದುಗಳಲ್ಲಿ ನೋವು, ಊತ ಇಂತಹ ಲಕ್ಷಣಗಳು ಪ್ರಾರಂಭದಲ್ಲಿ ಕಂಡು ಬರುತ್ತವೆ. ಈ ಲಕ್ಷಣಗಳನ್ನು ದುರ್ಲಕ್ಷಿಸಿದರೆ ಮುಂದೆ ಸಂದುಗಳಲ್ಲಿ ಶಾಶ್ವತವಾದ ವಿಕೃತಿಗಳು ಉಂಟಾಗಬಹುದು.

೩. ಸಂಧಿವಾತ ಬರಬಾರದೆಂದು ಯಾವ ಕಾಳಜಿಗಳನ್ನು ತೆಗೆದುಕೊಳ್ಳಬೇಕು ?

ಅ. ಸತತವಾಗಿ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬಾರದು ಹಾಗೂ ಏರ್‌ಕಂಡೀಶನ್‌ನಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳಬಾರದು

ಆ. ತಣ್ಣೀರಿನಲ್ಲಿ ಸ್ನಾನ ಮಾಡಬಾರದು.

ಇ. ಅತೀ ಶಾರೀರಿಕ ಶ್ರಮ, ಅತೀವ್ಯಾಯಾಮ (ಜಿಮ್‌ನಲ್ಲಿ ಗಂಟೆಗಟ್ಟಲೆ ವ್ಯಾಯಾಮ) ಮಾಡಬಾರದು

ಈ. ಒಂದೇ ಸ್ಥಳದಲ್ಲಿ ಸತತ ೨-೩ ಗಂಟೆ ಕುಳಿತುಕೊಂಡು ಅಥವಾ ೫ ರಿಂದ ೬ ಗಂಟೆ ನಿಂತುಕೊಂಡು ಕೆಲಸ ಮಾಡಬಾರದು.

ಉ. ಮಲಗುವಾಗ ಮೃದುವಾದ ಫೋಮ್‌ನ ಹಾಸಿಗೆಯನ್ನು ಉಪಯೋಗಿಸಬಾರದು. ಆದಷ್ಟು ಮರದ ಮಂಚದ ಮೇಲೆ ಹತ್ತಿಯ ಹಾಸಿಗೆ (ಗಾದಿ) ಹಾಕಿ ಮಲಗಬೇಕು.

ಊ. ವಯಸ್ಸಿಗನುಸಾರ ಶಾರೀರಿಕ ಸವಕಳಿ (ಸವೆಯುವಿಕೆ) ಕಾರಣವಾಗಿದ್ದರೂ, ಶರೀರದ ತಪ್ಪು ಚಲನವಲನ, ಅಯೋಗ್ಯ ರೀತಿ ಚಲನಚಲನಗಳೂ (ಓರೆಕೋರೆಯಾಗಿ ಕುಳಿತುಕೊಳ್ಳುವುದು, ಏಳುವುದು, ನಡೆದಾಟ ಅಥವಾ ಅಯೋಗ್ಯ ಪದ್ಧತಿಯಲ್ಲಿ ಭಾರ ಎತ್ತುವುದು ಇತ್ಯಾದಿ) ಸಂದುನೋವಿಗೆ ಮಹತ್ವದ ಕಾರಣಗಳಾಗಿವೆ. ಅವುಗಳನ್ನು ತಪ್ಪಿಸಬೇಕು.

ಎ. ಆಯುರ್ವೇದವು ದಿನಚರ್ಯೆಯಲ್ಲಿಯೆ ಅಭ್ಯಂಗವನ್ನು ಹೇಳಿದೆ, ಅಂದರೆ ಪ್ರತಿದಿನ ಶರೀರಕ್ಕೆ ಎಣ್ಣೆ ಹಚ್ಚುವುದು, ಅದರ ಹಿಂದೆ ಎಷ್ಟು ದೂರದೃಷ್ಟಿ ಇದೆ, ಎಂಬುದು ನಮಗೆ ಈಗ ತಿಳಿಯುತ್ತದೆ. ಸಾಧ್ಯವಿದ್ದರೆ ಪ್ರತಿದಿನ ಅಥವಾ ವಾರಕ್ಕೆ ೨ – ೩ ದಿನವಾದರೂ ಸಂಪೂರ್ಣ ಶರೀರಕ್ಕೆ ಎಣ್ಣೆಯನ್ನು ಹಚ್ಚಬೇಕು.

ಏ. ಯುವಕರು ಮತ್ತು ಮಧ್ಯಮ ವಯಸ್ಸಿನ ವ್ಯಕ್ತಿಗಳು ನಿಯಮಿತ ವ್ಯಾಯಾಮ ಮತ್ತು ವೃದ್ಧರು ಯೋಗಾಸನಗಳನ್ನು ನಿಯಮಿತವಾಗಿ ಮಾಡಬೇಕು. ಸಂದುಗಳ ನಿಯಂತ್ರಿತ ಚಲನವಲನಕ್ಕೆ ವ್ಯಾಯಾಮ ಹಾಗೂ ಯೋಗಾಸನ ಸಹಾಯ ಮಾಡುತ್ತವೆ.

ಒ. ಆಹಾರದಲ್ಲಿ ಹಾಲು, ರಾಗಿ, ಒಗ್ಗರಣೆ ಸೊಪ್ಪು, ನುಗ್ಗೆ, ಇಂತಹ ಪದಾರ್ಥಗಳಿರಬೇಕು.

೪. ಸಂಧಿವಾತಕ್ಕೆ ಚಿಕಿತ್ಸೆ

ಸಂಕ್ಷಿಪ್ತದಲ್ಲಿ ಹೇಳುವುದಾದರೆ ಯಾವುದಾದರೊಂದು ಯಂತ್ರ ದೀರ್ಘ ಕಾಲ ಚೆನ್ನಾಗಿ ಇರಬೇಕೆಂದು ನಾವು ಅದನ್ನು ಪ್ರತಿದಿನ ಉಪಯೋಗಿಸುತ್ತೇವೆ, ಅವಶ್ಯಕತೆಗನುಸಾರ ಕೀಲೆಣ್ಣೆ ಹಾಕುತ್ತೇವೆ, ಸ್ವಚ್ಛ ಮಾಡುತ್ತೇವೆ ನಮ್ಮ ಶರೀರದ್ದೂ ಕೂಡ ಹಾಗೆಯೇ ಇದೆ. ಶರೀರವನ್ನು ಸಕ್ಷಮವಾಗಿಡುವುದು, ಅಭ್ಯಂಗ ಹಾಗೂ ಶರೀರ ಶುದ್ಧಿಗಾಗಿ ಪಂಚಕರ್ಮ ಮಾಡಿಸುವುದು, ಇತ್ಯಾದಿಗಳನ್ನು ನಿಯಮಿತವಾಗಿ ಮಾಡಬೇಕು.

ಆಯುರ್ವೇದದಲ್ಲಿ ಸ್ನೇಹನ (ವಿಶಿಷ್ಟ ಎಣ್ಣೆಯಿಂದ ಮಾಲೀಶ್‌ ಮಾಡುವುದು), ಸ್ವೇದನ (ಹಬೆ ತೆಗೆದುಕೊಳ್ಳುವುದು. ಶಾಖ ಕೊಡುವುದು), ಬಸ್ತಿ, ಸಂದುಗಳಿಗೆ ಲೇಪ ಹಾಕುವುದು, ಜೀರ್ಣಶಕ್ತಿ ಹೆಚ್ಚಾಗಲು ಹೊಟ್ಟೆಗೆ ಔಷಧ ತೆಗೆದುಕೊಳ್ಳುವುದು, ವಿಶಿಷ್ಟ ವ್ಯಾಯಾಮಗಳನ್ನು ಮಾಡುವುದು, ಇಂತಹ ಉಪಚಾರಗಳನ್ನು ಮಾಡಿಸಿಕೊಳ್ಳಬೇಕು, ಅದರಿಂದ ಒಳ್ಳೆಯ ಪರಿಣಾಮವಾಗುತ್ತದೆ. ಯಾವ ರೋಗಿ ಯಾವ ತೈಲದಿಂದ ಮಾಲೀಶ ಮಾಡಬೇಕು ? ಶಾಖ ಯಾವ ಪದ್ಧತಿಯಲ್ಲಿ ಕೊಡಬೇಕು ? ಮತ್ತು ಸಂಧಿವಾತದ ಔಷಧೋಪಚಾರದ ವಿಷಯದಲ್ಲಿ ಮಾತ್ರ ವೈದ್ಯರಿಂದ ತಿಳಿದುಕೊಳ್ಳಬೇಕು.

– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ (೨೪.೧೨.೨೦೨೩)