ಇತ್ತೀಚೆಗೆ ಓರ್ವ ಹೆಸರಾಂತ ಯೋಗ ತರಬೇತಿ ಶಿಕ್ಷಕರು ಒಂದು ವ್ಯಾಖ್ಯಾನದಲ್ಲಿ ತನ್ನ ಆರೋಗ್ಯದ ರಹಸ್ಯವನ್ನು ಹೇಳುವಾಗ ಅವರ ತನ್ನ ದಿನಚರ್ಯೆಯನ್ನು ಹೇಳಿದರು. ಅದು ಸಂಪೂರ್ಣವಾಗಿ ಆಯುರ್ವೇದದಲ್ಲಿ ಹೇಳಿದಂತಹ ನಿಯಮಗಳಿಗನುಸಾರವೇ ಇತ್ತು. ಆಯುರ್ವೇದವು ಸಾವಿರಾರು ವರ್ಷಗಳಿಂದಲೂ ಇದೆ; ಅದರ ಸಿದ್ಧಾಂತಗಳು ಈಗಲೂ ಹಾಗೆಯೇ ಇವೆ ಮತ್ತು ಅವುಗಳ ಆಧಾರದಿಂದ ಮನುಷ್ಯನು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು; ಆದ್ದರಿಂದಲೇ ಆಯುರ್ವೇದವು ಶಾಶ್ವತ ಶಾಸ್ತ್ರವಾಗಿದೆ. ಇಂದಿನ ಲೇಖನದಲ್ಲಿ ನಾವು ‘ನಮ್ಮ ದಿನಚರಿ ಆಯುರ್ವೇದಕ್ಕನುಸಾರ ಹೇಗಿರಬೇಕು ? ಅದು ಏಕೆ ಹಾಗಿರಬೇಕು ? ಎಂಬುದರ ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ. ಇಂದಿನ ಧಾವಂತದ ಮತ್ತು ಒತ್ತಡದ ಜೀವನದಲ್ಲಿ ನಮಗೆ ಆದರ್ಶ ದಿನಚರ್ಯೆಯನ್ನು ಒಂದೇ ದಿನದಲ್ಲಿ ಶೇ. ೧೦೦ ರಷ್ಟು ಪಾಲಿಸುವುದು ಸಾಧ್ಯವಾಗುತ್ತದೆ ಎಂದೇನಿಲ್ಲ; ಆದರೆ ಪ್ರತಿಯೊಬ್ಬರು ಆ ಆದರ್ಶ ಜೀವನಶೈಲಿಯನ್ನು ಹೆಚ್ಚೆಚ್ಚು ಅನುಸರಿಸಲು ಪ್ರಯತ್ನಿಸಬೇಕು.
೧. ಬೆಳಗ್ಗೆ ಬೇಗ ಏಳಬೇಕು
‘ಬ್ರಾಹ್ಮೆ ಮುಹೂರ್ತೆ ಉತ್ತಿಷ್ಠೇತ್ ಸ್ವಸ್ಥೋ ರಕ್ಷಾರ್ಥಮಾಯುಷಃ |
(ಅಷ್ಟಾಂಗಹೃದಯ, ಸೂತ್ರಸ್ಥಾನ, ಅಧ್ಯಾಯ ೨, ಶ್ಲೋಕ ೧)’, ಅಂದರೆ ‘ಆರೋಗ್ಯವಂತ ವ್ಯಕ್ತಿಯು ಒಳ್ಳೆಯ ಆರೋಗ್ಯಕ್ಕಾಗಿ ಬ್ರಾಹ್ಮ ಮುಹೂರ್ತದಲ್ಲಿ ಏಳಬೇಕು (೩.೩೦ ರಿಂದ ೫.೩೦).’ ಚಿಕ್ಕ ಮಕ್ಕಳು, ರೋಗಿಗಳು, ವೃದ್ಧರು ಅಥವಾ ರಾತ್ರಿ ತಡವಾಗಿ ಮಲಗುವವರಿಗೆ, ಇದು ಅನ್ವಯಿಸುವುದಿಲ್ಲ. ಈ ಶ್ಲೋಕದಲ್ಲಿ ‘ಆರೋಗ್ಯಕರ ವ್ಯಕ್ತಿ’ ಎಂಬುದನ್ನು ಒತ್ತಿ ಹೇಳಲಾಗಿದೆ. ಪ್ರತಿದಿನ ಬ್ರಾಹ್ಮ ಮುಹೂರ್ತದಲ್ಲಿ ಏಳಬೇಕು; ಆದರೆ ಅದಕ್ಕಾಗಿ ರಾತ್ರಿ ಬೇಗ ಮಲಗಬೇಕು ಮತ್ತು ಸುಮಾರು ೭ ಗಂಟೆಗಳ ನಿದ್ರೆಯಾಗಬೇಕು. ಇದರಿಂದ ತಮ್ಮ ಆಯುಷ್ಯದ ರಕ್ಷಣೆಯಾಗುತ್ತದೆ. ಮುಂಜಾನೆ ಬೇಗ ಏಳುವುದರಿಂದ ಮಲಪ್ರವೃತ್ತಿ ಸ್ವಚ್ಛವಾಗುತ್ತದೆ. ಪ್ರತಿದಿನ ತಡವಾಗಿ ಏಳುವ ವ್ಯಕ್ತಿಗಳಿಗೆ ಮಲವಿಸರ್ಜನೆಯ ತೊಂದರೆ ಆಗುತ್ತಲೇ ಇರುತ್ತದೆ. ಆಗ ಮಲವಿಸರ್ಜನೆ ಆಗುವುದಿಲ್ಲವೆಂದು (ಹೊಟ್ಟೆ ಸ್ವಚ್ಛ ಆಗುವುದಿಲ್ಲವೆಂದು) ಚಹಾ ಕುಡಿಯುವುದು, ತಂಬಾಕು ತಿನ್ನುವುದು ಇದೆಲ್ಲ ಮಾಡದಿದ್ದರೆ ಶೌಚವೇ ಆಗುವುದಿಲ್ಲ. ಹೊಟ್ಟೆ ಸ್ವಚ್ಛ ಆಗದಿದ್ದರೆ, ಅನೇಕ ರೋಗಗಳು ಬರುತ್ತವೆ. ಬಾಯಿಗೆ ವಾಸನೆ ಬರುವುದು, ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಹಸಿವು ಆಗದಿರುವುದು, ಆಲಸ್ಯ ಇಂತಹ ಸಮಸ್ಯೆಗಳುಂಟಾಗುತ್ತವೆ; ಆದ್ದರಿಂದ ರಾತ್ರಿ ಬೇಗ ಮಲಗುವುದು ಮತ್ತು ಬೆಳಗ್ಗೆ ಬೇಗ ಏಳುವುದು ಈ ಸರಳ ಕೃತಿ ನಮ್ಮ ಆರೋಗ್ಯದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
೨. ಬೆಳಗ್ಗೆ ಎದ್ದ ನಂತರ ಮೊದಲು ಶೌಚಕ್ಕೆ ಹೋಗಬೇಕು
ಬೆಳಗ್ಗೆ ಎದ್ದ ನಂತರ ಶೌಚಕ್ಕೆ ಆಗುವುದು, ಇದು ಒಳ್ಳೆಯ ಆರೋಗ್ಯದ ಲಕ್ಷಣವಾಗಿದೆ. ಕೆಲವರು ಶೌಚಕ್ಕೆ ಹೋದಾಗ ದಿನಪತ್ರಿಕೆಯನ್ನು ಓದುವುದು, ಸಂಚಾರವಾಣಿಯನ್ನು (ಮೊಬೈಲ್) ನೋಡುವುದು ಇತ್ಯಾದಿ ಕೃತಿಗಳನ್ನು ಮಾಡುತ್ತಾರೆ. ಇದು ತುಂಬಾ ತಪ್ಪಾಗಿದೆ. ಮಲ-ಮೂತ್ರ ವಿಸರ್ಜನೆಯನ್ನು ಮಾಡುವಾಗ ಮನಸ್ಸನ್ನು ವಿಚಲಿತಗೊಳಿಸುವ ವಿಷಯಗಳು ಘಟಿಸಿದರೆ ಸರಿಯಾಗಿ ಶೌಚ ಆಗುವುದಿಲ್ಲ. ಅದರ ಪರಿಣಾಮವೆಂದು ಅಂತಹ ವ್ಯಕ್ತಿಯು ತುಂಬಾ ಸಮಯದ ವರೆಗೆ ಶೌಚಾಲಯದಲ್ಲಿರುತ್ತಾನೆ; ಆದ್ದರಿಂದ ಇಂತಹ ತಪ್ಪುಗಳನ್ನು ತಡೆಗಟ್ಟಬೇಕು. ಯಾರಿಗೆ ಶೌಚಕ್ಕೆ ಹೋಗುವ ಸಂವೇದನೆ ಬಂದಿರುವುದಿಲ್ಲವೋ, ಅವರು ಬಲವಂತವಾಗಿ ಶೌಚ ಮಾಡಬಾರದು. ಶೌಚಕ್ಕೆ ಹೋಗುವ ಸಂವೇದನೆ ಬಂದ ನಂತರವೇ ಶೌಚಕ್ಕೆ ಹೋಗಬೇಕು.
೩. ಹಲ್ಲು ಉಜ್ಜುವುದು ಮತ್ತು ಬಾಯಿ ಮುಕ್ಕಳಿಸುವುದು
ಹಲ್ಲುಜ್ಜಲು ಪ್ರಸ್ತುತ ಎಲ್ಲೆಡೆ ‘ಟೂಥಪೇಸ್ಟ್’ಅನ್ನೇ ಬಳಸ ಲಾಗುತ್ತದೆ. ನಮ್ಮಲ್ಲಿ ವನಸ್ಪತಿಗಳ ಎಳೆಯ ಕಡ್ಡಿಗಳನ್ನು ಕಚ್ಚುವುದು, ದಂತಮಂಜನದ ಬಳಕೆ ಮೊದಲಿನಿಂದ ಇತ್ತು; ಆದರೆ ಭಾರತದಲ್ಲಿ ಪಾಶ್ಚಿಮಾತ್ಯರು ಟೂಥಪೇಸ್ಟಿನ ಅಭ್ಯಾಸವನ್ನು ಮಾಡಿಸಿದರು. ಕಾಲಕ್ಕನುಸಾರ ಈ ಬದಲಾವಣೆಯಾಗಿದ್ದರೂ ನಾವು ಹಲ್ಲು ಉಜ್ಜಲು ನಡುನಡುವೆ ದಂತಮಂಜನವನ್ನು ಬಳಸಬೇಕು. ಅದರಲ್ಲಿನ ಒಗರು, ಖಾರ ಮತ್ತು ಕಹಿ ರುಚಿಯಿರುವ ವನಸ್ಪತಿಗಳಿಂದ ಹಲ್ಲು ಮತ್ತು ದವಡೆಗಳ ರಕ್ಷಣೆಯಾಗುತ್ತದೆ.
ಅನಂತರ ಗಂಡೂಷ ಅಂದರೆ ಬಾಯಿ ಮುಕ್ಕಳಿಸುವುದು ಆವಶ್ಯಕವಾಗಿರುತ್ತದೆ. ಅದು ನೀರಿನಿಂದಾಗಿರಲಿ, ಔಷಧಿ ಕಶಾಯ ದಿಂದ ಅಥವಾ ಎಣ್ಣೆಯಿಂದಾಗಿರಲಿ. ಹಲ್ಲು, ಒಸಡುಗಳು, ಗಂಟಲು ಇವುಗಳ ಆರೋಗ್ಯ ಚೆನ್ನಾಗಿರಲು ಎಣ್ಣೆ (ಎಳ್ಳು ಅಥವಾ ಕೊಬ್ಬರಿಎಣ್ಣೆ) ಯಿಂದ ಮುಕ್ಕಳಿಸಬೇಕು. ಮುಕ್ಕಳಿಸಿದ ನಂತರ ಆ ಎಣ್ಣೆಯನ್ನು ಉಗುಳಬೇಕು. ಇದಕ್ಕೆ ‘ಆಯಿಲ್ ಪುಲ್ಲಿಂಗ್’ ಎನ್ನುತ್ತಾರೆ.
೪. ಪ್ರತಿದಿನ ಅಭ್ಯಂಗ ಮಾಡುವುದು ಮಹತ್ವದ್ದಾಗಿದೆ !
ಪ್ರತಿದಿನ ಶರೀರಕ್ಕೆ ಎಣ್ಣೆಯನ್ನು ಹಚ್ಚುವುದರ ಮಹತ್ವವನ್ನು ನಾವು ಈ ಹಿಂದೆಯೂ ತಿಳಿದುಕೊಂಡಿದ್ದೇವೆ. ಅಭ್ಯಂಗ ಮಾಡುವುದರಿಂದ ಶರೀರದ ದಣಿವು ದೂರವಾಗುತ್ತದೆ, ವಾತ ಕಡಿಮೆಯಾಗುತ್ತದೆ, ಶರೀರ ಗಟ್ಟಿಮುಟ್ಟಾಗುತ್ತದೆ, ಆಯುಷ್ಯ ಹೆಚ್ಚಾಗುತ್ತದೆ, ಚರ್ಮಕ್ಕೆ ಕಾಂತಿ ಬರುತ್ತದೆ, ಶರೀರವು ಸುದೃಢ ವಾಗುತ್ತದೆ. ನಮ್ಮಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಅಥವಾ ಚಳಿಗಾಲದಲ್ಲಿ ಅಭ್ಯಂಗ ಮಾಡಲಾಗುತ್ತದೆ. ಇತರ ಸಮಯದಲ್ಲಿ ಯಾರು ಅಭ್ಯಂಗ ಮಾಡುವುದು ಕಂಡುಬರುವುದಿಲ್ಲ; ಆದರೆ ಆಯುರ್ವೇದವು ದಿನಚರಿಯಲ್ಲಿ ಇದನ್ನು ಸೇರಿಸಿದೆ, ಅಂದರೆ ಪ್ರತಿದಿನ ಅಭ್ಯಂಗವಾಗುವುದು ಅಪೇಕ್ಷಿತವಾಗಿದೆ. ಪ್ರತಿದಿನ ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ವಾರದಲ್ಲಿ ೨ ಬಾರಿಯಾದರೂ ಸಂಪೂರ್ಣ ಶರೀರಕ್ಕೆ ಅಭ್ಯಂಗವನ್ನು (ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದು) ಮಾಡಬೇಕು. ಅದಕ್ಕಾಗಿ ಎಳ್ಳೆಣ್ಣೆಯನ್ನು ಬಳಸಬಹುದು. ಸಂಪೂರ್ಣ ದೇಹಕ್ಕೆ ಅಭ್ಯಂಗ ಮಾಡಲು ಸಾಧ್ಯವಾಗದಿದ್ದರೆ, ತಲೆ ಮತ್ತು ಕಾಲುಗಳಿಗಾದರೂ ಅವಶ್ಯ ಎಣ್ಣೆಯನ್ನು ಹಚ್ಚಬೇಕು. ಕಫದ ತೊಂದರೆಯಿದ್ದರೆ ಅಥವಾ ಅಜೀರ್ಣವಾಗಿದ್ದರೆ, ಅಂತಹವರು ಅಭ್ಯಂಗ ಮಾಡಬಾರದು.
೫. ಪ್ರತಿದಿನ ವ್ಯಾಯಾಮ ಮಾಡುವುದು
ವ್ಯಾಯಾಮದ ಲಾಭಗಳಂತೂ ಎಲ್ಲರಿಗೂ ಗೊತ್ತಿವೆ. ವ್ಯಾಯಾಮದಿಂದ ದೇಹವು ಹಗುರವಾಗುತ್ತದೆ, ವ್ಯಾಯಾಮದಿಂದ ದಿನವಿಡಿ ನಾವು ಮಾಡುವ ಕೆಲಸಗಳಿಗೆ ಶಕ್ತಿ ಸಿಗುತ್ತದೆ. ದೇಹ ಗಟ್ಟಿಮುಟ್ಟಾಗುತ್ತದೆ. ವ್ಯಾಯಾಮವನ್ನು ಮಾಡುವಾಗ ಅದನ್ನು ತಮ್ಮ ಶಕ್ತಿಯ ಅರ್ಧದಷ್ಟು ಮಾಡಬೇಕು, ಅಂದರೆ ಬಾಯಿಯಿಂದ ಉಸಿರು ತೆಗೆದುಕೊಳ್ಳಬೇಕು ಎಂದು ಅನಿಸಿದಾಗ, ನಿಲ್ಲಿಸಬೇಕು. ಅತೀ ವ್ಯಾಯಾಮ ಮಾಡಬಾರದು.
೬. ಮೈಗೆ ಉಟಣೆ (ಸುಗಂಧಿ ಲೇಪನ) ಹಚ್ಚುವುದು ಮತ್ತು ನಂತರ ಸ್ನಾನ ಮಾಡುವುದು
ಇದಕ್ಕೆ ಆಯುರ್ವೇದದಲ್ಲಿ ‘ಉದ್ವರ್ತನ’ ಎನ್ನುತ್ತಾರೆ. ಮೈಗೆ ಪ್ರತಿದಿನ ಸುಗಂಧಿ ಲೇಪನ ಹಚ್ಚುವುದರಿಂದ ಕಫ ಕಡಿಮೆಯಾಗುತ್ತದೆ, ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ, ಚರ್ಮ ವನ್ನು ಸ್ಚಚ್ಛಗೊಳಿಸುತ್ತದೆ. ಲೇಪನವನ್ನು ಹಚ್ಚಿದ ನಂತರ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಭುಜದಿಂದ ಕೆಳಗೆ ಬಿಸಿ ನೀರನ್ನು ಬಳಸಬೇಕು, ತಲೆ ಮತ್ತು ಮುಖವನ್ನು ತೊಳೆಯುವಾಗ ಉಗುರುಬೆಚ್ಚಗೆ ಅಥವಾ ತಣ್ಣಗಿರುವ ನೀರಿ ನಿಂದ ತೊಳೆಯಬೇಕು. ತಲೆ ಮತ್ತು ಕೂದಲಿಗಾಗಿ ಬಿಸಿ ನೀರು ಹಾನಿಕರವಾಗಿದೆ. ಯಾರಿಗೆ ಶೀತ, ಅಜೀರ್ಣ, ಭೇದಿ ಇರುತ್ತದೆಯೋ, ಅವರು ಮತ್ತು ಸಾಮಾನ್ಯ ವ್ಯಕ್ತಿಗಳು ಊಟದ ನಂತರ ಸ್ನಾನವನ್ನು ಮಾಡಬಾರದು.
೭. ಸ್ನಾನ ಮಾಡಿದ ನಂತರ ಊಟ ಮಾಡಬೇಕು
ರಾತ್ರಿ ಸೇವಿಸಿದ ಆಹಾರ ಸಂಪೂರ್ಣ ಜೀರ್ಣವಾದ ನಂತರವೇ ತಮ್ಮ ಆರೋಗ್ಯಕ್ಕಾಗಿ ಯೋಗ್ಯ ಮತ್ತು ಅವಶ್ಯಕವಿದ್ದಷ್ಟೇ ಊಟವನ್ನು ಮಾಡಬೇಕು.
ದಿನಚರ್ಯೆಯನ್ನು ಪಾಲಿಸುವುದು ಏಕೆ ಆವಶ್ಯಕ ?
ನೀವು ಈ ಲೇಖನದಲ್ಲಿ ನೀಡಿದ ದಿನಚರ್ಯೆಯ ಅಧ್ಯಯನ ಮಾಡಿ ದರೆ, ನಿಮ್ಮ ಗಮನಕ್ಕೆ ಬರುತ್ತದೆ,
ಅ. ವ್ಯಾಯಾಮ ಮತ್ತು ಸ್ನಾನ ಮಾಡಿದ ನÀಂತರ ದೇಹದಲ್ಲಿನ ಜಠರಾಗ್ನಿ ಪ್ರಜ್ವಲಿತವಾಗುತ್ತದೆ ಮತ್ತು ಆ ಸಮಯದಲ್ಲಿ ಆಹಾರ ವನ್ನು ಸೇವಿಸಿದರೆ ಯೋಗ್ಯ ರೀತಿಯಲ್ಲಿ ಜೀರ್ಣವಾಗುತ್ತದೆ. ‘ನನಗೆ ಎದ್ದನಂತರ ಮೊದಲು ಚಹಾ ಬೇಕೇ ಬೇಕು’, ಎಂದು ಅನೇಕ ಜನರು ಹೇಳುತ್ತಿರುತ್ತಾರೆ. ಹೊಟ್ಟೆಯು ಖಾಲಿ ಇದ್ದಾಗ ಚಹಾ ಕುಡಿಯುವುದರಿಂದ ಜಠರಾಗ್ನಿ ಮಂದವಾಗುತ್ತದೆ ಮತ್ತು ಅಲ್ಲಿಂದಲೇ ಅಜೀರ್ಣದ ತೊಂದರೆಗಳು ಪ್ರಾರಂಭವಾಗುತ್ತವೆ.
ಆ. ಪ್ರತಿದಿನ ಆಹಾರದಷ್ಟೇ ವ್ಯಾಯಾಮವೂ ಮಹತ್ವದ್ದಾಗಿದೆ, ಇದನ್ನು ಮನಸ್ಸಿನಲ್ಲಿ ಬಿಂಬಿಸಬೇಕು.
ಇ. ತಮ್ಮ ನೌಕರಿ, ವ್ಯವಸಾಯದ ಸ್ವರೂಪ ಹೇಗಿದೆಯೋ, ಅದರಂತೆ ತಮ್ಮ ಆಯೋಜನೆಯನ್ನು ಮಾಡಿ ದಿನಚರ್ಯೆ ಯಲ್ಲಿ ಹೇಳಿದ ಯಾವ ಯಾವ ಕೃತಿಗಳು ಸಾಧ್ಯವಿವೆಯೋ, ಅವುಗಳನ್ನು ಮಾಡಲು ಪ್ರಾರಂಭಿಸಬೇಕು, ಇದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುವುದು.
– ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ