ಅಧ್ಯಾತ್ಮದಿಂದ ಎಷ್ಟು ಮಾನಸಿಕ ಬಲ ಸಿಗುತ್ತದೆ ?

ಅಧ್ಯಾತ್ಮ – ‘ಅಧಿ+ಆತ್ಮ, ಅಂದರೆ ನಮ್ಮತ್ತ ನೋಡುವುದು. ಅರ್ಥಾತ್ ನಮ್ಮತ್ತ ನಾವೇ ನೋಡುವುದರಲ್ಲಿ ಆತ್ಮಪರೀಕ್ಷಣೆ ಬರುತ್ತದೆ. ಆತ್ಮಪರೀಕ್ಷಣೆಯಿಂದಾಗಿ ನಮ್ಮ ಜೀವನದ ಆಳದಲ್ಲಿ ಹುದುಗಿರುವ ಜೀವನದ ಅರ್ಥವೇನು ? ಎಂಬುದರ ವಿಚಾರ ಆರಂಭವಾಗುತ್ತದೆ ಮತ್ತು ಆ ಮೇಲೆ ‘ಪೂರ್ಣತ್ವದ ಒಂದು ಭರವಸೆ ಮೂಡುತ್ತದೆ. ನಮ್ಮ ದೈನಂದಿನ ಜೀವನಕ್ಕಿಂತ, ಅದರಲ್ಲಿನ ಅನೇಕ ಐಹಿಕ ವಿಷಯಗಳಿಗಿಂತ, ದೊಡ್ಡದು ಏನಾದರೂ ಮತ್ತು ಪರಿಪೂರ್ಣವಾಗಿರುವ ಆಳವಾದ ಅರ್ಥವನ್ನು ನೀಡುವಂತಹದ್ದು ಜೀವನದಲ್ಲಿ ಏನೋ ಇದೆ ಎಂಬುದರ ಅರಿವು ಮೂಡುತ್ತದೆ. ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಏನು ಅರ್ಥ ಅಡಗಿಕೊಂಡಿದೆ ? ಎಂಬುದನ್ನು ಕಂಡು ಹಿಡಿದು ಅದರಲ್ಲಿ ನಮ್ಮದು ಅಂದರೆ ಮಾನವನ ಸ್ಥಾನವೇನು ? ಕಾರ್ಯವೇನು ? ಎಂಬುದನ್ನು ಕಂಡು ಹಿಡಿಯುವ ಒಂದು ಆಂತರಿಕ ಇಚ್ಛೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಈ ಪ್ರಕ್ರಿಯೆ ಎಂದರೆ ಆಧ್ಯಾತ್ಮಿಕತೆ !

೧. ಅಧ್ಯಾತ್ಮ ಮತ್ತು ಧರ್ಮದ ನಡುವಿನ ವ್ಯತ್ಯಾಸ

ಅಧ್ಯಾತ್ಮ ಮತ್ತು ಧರ್ಮ ಇವೆರಡೂ ವಿಷಯಗಳು ಸಮಾನ ವಲ್ಲ. ಅಧ್ಯಾತ್ಮ ಮತ್ತು ಧರ್ಮ ಇವೆರಡೂ ಸ್ವಸಂಸ್ಕೃತಿಯದ್ದೇ ಭಾಗವಾಗಿವೆ. ‘ಮಾನವನಿಗಿಂತ ಶ್ರೇಷ್ಠ ದೇವರು ಅಥವಾ ಇಂತಹ ಶಕ್ತಿ ಅಥವಾ ಇಂತಹವರು ಯಾರಾದರೂ ಇರುತ್ತಾರೆ, ಇದನ್ನು ಆಧ್ಯಾತ್ಮಿಕ ಮನುಷ್ಯ ನಂಬುತ್ತಾನೆ ಅಥವಾ ನಂಬುವುದಿಲ್ಲ. ಆಸ್ತಿಕ ಮತ್ತು ನಾಸ್ತಿಕ ಇವರಿಬ್ಬರೂ ಆಧ್ಯಾತ್ಮಿಕವಾಗಿರಬಹುದು. ಧರ್ಮವು ಮನುಷ್ಯನಿಗೆ ಬದುಕುವ ಮಾರ್ಗವನ್ನು ತೋರಿಸುತ್ತದೆ; ಆದರೆ ಹೆಚ್ಚಾಗಿ ಧಾರ್ಮಿಕತೆಯು ರೂಢಿ-ಪರಂಪರೆ, ಪರಮೇಶ್ವರ ಸ್ತುತಿ, ಪೂಜೆ, ಪ್ರಾರ್ಥನೆ ಇವುಗಳಿಂದ ವ್ಯಕ್ತವಾಗುತ್ತದೆ. ತದ್ವಿರುದ್ಧ ಆಧ್ಯಾತ್ಮಿಕತೆಗೆ ಕರ್ಮಕಾಂಡದ ಬಂಧನವಿಲ್ಲ. ಹೀಗಿದ್ದರೂ ಧಾರ್ಮಿಕತೆ, ಧರ್ಮಶ್ರದ್ಧೆ ಮತ್ತು ಆಧ್ಯಾತ್ಮಿಕತೆ ಇವು ಕೈಯಲ್ಲಿ ಕೈಹಾಕಿ ನಡೆಯುತ್ತವೆ.

೨. ಇಂದಿನ ಧಾವಂತದ ಜೀವನದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನವು ಆಧಾರ ನೀಡುತ್ತದೆ !

ಅಧ್ಯಾತ್ಮದ ಒಲವಿರುವವರು ಬಹಳಷ್ಟು ಸಲ ಧಾರ್ಮಿಕರೂ ಆಗಿರುತ್ತಾರೆ. ಧಾರ್ಮಿಕ ಗ್ರಂಥಗಳ ವಾಚನ, ನಿರೂಪಣೆ, ಅವುಗಳ ಅರ್ಥದ ಬಗ್ಗೆ ಚರ್ಚಿಸುವುದು ಮತ್ತು ವಾದವಿವಾದಗಳಲ್ಲಿ ಭಾಗವಹಿಸುವುದು; ಜಪ, ನಾಮಸ್ಮರಣೆ ಇವುಗಳಿಂದ ಮನಸ್ಸನ್ನು ಶಾಂತಗೊಳಿಸುವುದು, ಧ್ಯಾನಧಾರಣೆಯಿಂದ ಮನಸ್ಸಿನ ಶಕ್ತಿಯನ್ನು ಹೆಚ್ಚಿಸುವುದು, ಇಂತಹ ಬೇರೆ ಬೇರೆ ಪದ್ಧತಿಗಳಿಂದ ‘ಸ್ವವನ್ನು ಹುಡುಕಲಾಗುತ್ತದೆ. ಇವೆಲ್ಲವನ್ನೂ ಚರ್ಚೆ ಮಾಡುವ ಕಾರಣ ವೇನೆಂದರೆ, ಇಂದಿನ ಸಂಘರ್ಷಮಯ ಜೀವನದಲ್ಲಿ ಮನಃಶಾಂತಿಯನ್ನು ಪಡೆಯುವುದು ಅತ್ಯಂತ ಆವಶ್ಯಕವಾಗಿದೆ. ಸುತ್ತಲಿನ ಅನೇಕ ಭೌತಿಕ ವಿಷಯಗಳ ಪ್ರಲೋಭನೆ, ಜೀವನದಲ್ಲಿ ಯಶಸ್ವಿಯಾಗಲು ಮಾಡಬೇಕಾದ ಸ್ಪರ್ಧೆ, ಅತ್ಯಂತ ಒತ್ತಡಮಯ ಮತ್ತು ಅಸುರಕ್ಷಿತ ದೈನಂದಿನ ಜೀವನ ಇವೆಲ್ಲವುಗಳಿಂದ ಜೀವ ಬೇಡವೆನಿಸುತ್ತದೆ. ಜೀವನದಲ್ಲಿ ಆನಂದ ಕಳೆದುಕೊಂಡಿದ್ದೇವೆಯೇ ಎನ್ನುವ ಭೀತಿಯುಂಟಾಗುತ್ತದೆ. ಕೌಟುಂಬಿಕ, ವ್ಯಾವಹಾರಿಕ ಮತ್ತು ಸಾರ್ವಜನಿಕ ಜೀವನ ಇವೆಲ್ಲ ಕ್ಷೇತ್ರಗಳಲ್ಲಿ ಹೋರಾಡುತ್ತಾ ಅಬಾಲವೃದ್ಧರು ಸೋತು ಹೋಗುತ್ತಾರೆ. ಮನಸ್ಸಿನಲ್ಲಿ ಬರುವ ಚಿಂತೆ, ದುಃಖ, ಯಾವುದಾದರೊಂದು ಆಪತ್ತಿನ ನಂತರ ಮನಸ್ಸಿನ ಮೇಲಾಗುವ ಆಘಾತ ಇವೆಲ್ಲವನ್ನೂ ಯಶಸ್ವಿಯಾಗಿ ಎದುರಿಸುವಾಗ ಇತರ ಅನೇಕ ವಿಷಯಗಳ ಹಾಗೆ ಆಧ್ಯಾತ್ಮಿಕ ದೃಷ್ಟಿಕೋನಗಳಿಂದ ತುಂಬಾ ಲಾಭವಾಗುತ್ತದೆ, ಇದು ಇದುವರೆಗಿನ ವಿವಿಧ ಶಾಸ್ತ್ರೀಯ ಸಂಶೋಧನೆಯಿಂದ ತಿಳಿದುಬಂದಿದೆ.

೩. ಅಧ್ಯಾತ್ಮದ ಒಲವು ಇರುವ ಮತ್ತು ಇಲ್ಲದಿರುವ ವ್ಯಕ್ತಿಗಳಲ್ಲಿನ ವ್ಯತ್ಯಾಸ

ಏನಾದರೊಂದು ಸಂಕಟಗಳು ಬಂದಾಗ ಪರಿಸ್ಥಿತಿಯನ್ನು ದೂಷಿಸುತ್ತಾ ಕುಳಿತರೆ, ಮನಸ್ಸಿಗೆ ನಿರಾಶೆ ಬರುತ್ತದೆ; ಆದರೆ ‘ದೇವರಿಗೆ ಈ ಪ್ರಸಂಗದಿಂದ ನನಗೆ ಏನೋ ಕಲಿಸಲಿಕ್ಕಿದೆ ಅಥವಾ ‘ದೇವರು ಏನೆಲ್ಲ ಮಾಡುತ್ತಾನೆಯೋ, ಅದೆಲ್ಲವೂ ನನ್ನ ಒಳಿತಿಗಾಗಿಯೇ ಇದೆ, ಎನ್ನುವ ವ್ಯಕ್ತಿಗೆ ತಕ್ಷಣ ನಿರಾಶೆ ಬರುವುದಿಲ್ಲ. ಅಧ್ಯಾತ್ಮದ ಬಗ್ಗೆ ಒಲವಿರುವ ವ್ಯಕ್ತಿಯ ಮೆದುಳಿನ ನರಮಂಡಲಗಳ ಜಾಲದಲ್ಲಿ ಬದಲಾವಣೆಯಾಗುತ್ತದೆ. ಅಂತಃಸ್ರಾವಕ ವ್ಯವಸ್ಥೆ (ಎಂಡೋಕ್ರಾಯ್ನಿ ಸಿಸ್ಟಮ) ಮತ್ತು ಪ್ರತಿಕಾರ ಶಕ್ತಿಯಲ್ಲಿ ಅನುಕೂಲಕರ ಬದಲಾವಣೆಯಾಗುತ್ತದೆ; ಆದ್ದರಿಂದ ಆ ವ್ಯಕ್ತಿಗೆ ರೋಗಗಳಿಂದ (ಶಾರೀರಿಕ ಮತ್ತು ಮಾನಸಿಕ) ರಕ್ಷಣೆಯಾಗುತ್ತದೆ. ವೃದ್ಧಾಪ್ಯದಲ್ಲಿ ಬರುವ ವಿಷಾದದ ಮನೋರೋಗವನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ಎದುರಿಸಿದರೆ, ಖಿನ್ನತೆ ಕಡಿಮೆಯಾಗುತ್ತದೆ.
‘ನನ್ನಿಂದಾದ ಯಾವುದೋ ತಪ್ಪು ಅಥವಾ ಪಾಪಕ್ಕಾಗಿ ನನಗೆ ಶಿಕ್ಷೆಯಾಗುತ್ತಿದೆ ಅಥವಾ ‘ನಾನು ಆರೋಗ್ಯವಾಗಿರುವುದು ನನ್ನ ಕೈಯಲ್ಲಿಲ್ಲ, ಅದು ಕೆಲವು ದುಷ್ಟ ಶಕ್ತಿಗಳ ಕೈಯಲ್ಲಿದೆ, ಎಂದು ವಿಚಾರ ಮಾಡುವವರಿಗೆ ಹೆಚ್ಚು ನಿರಾಶೆಯಾಗುತ್ತದೆ. ತದ್ವಿರುದ್ಧ ಜೀವನದಲ್ಲಿ ಸಮಾಧಾನದಲ್ಲಿರುವ ಮತ್ತು ‘ತನ್ನ ಜೀವನದಲ್ಲಿ ಯಾವುದೋ ಶುದ್ಧ ಉದ್ದೇಶವಿದೆ, ಎಂದು ತಿಳಿಯುವವರಿಗೆ ಕಡಿಮೆ ನಿರಾಶೆ ಬರುತ್ತದೆ.

೪. ಆಪತ್ತುಗಳ ನಂತರದ ಕಾಲದಲ್ಲಿ ಆಧ್ಯಾತ್ಮಿಕ ಪ್ರವಚನಗಳಿಂದ ಬಹಳ ಸಕಾರಾತ್ಮಕ ಉಪಯೋಗವಾಗುತ್ತದೆ

ಅರ್ಬುದ ರೋಗದಂತಹ ರೋಗಗಳನ್ನು ಎದುರಿಸುವಾಗ ಅಥವಾ ಹೃದಯರೋಗವನ್ನು ಸ್ವೀಕರಿಸುವಾಗ ಅಥವಾ ಬೆನ್ನುಹುರಿಯ ಶಸ್ತ್ರಚಿಕಿತ್ಸೆಯಿಂದ ಗುಣಮುಖವಾಗುವಾಗ ಉದ್ಭವಿಸುವ ಅತಿಚಿಂತೆಯನ್ನು ನಿಯಂತ್ರಿಸಿಕೊಳ್ಳಲು ಅಧ್ಯಾತ್ಮ ಉಪಯುಕ್ತವಾಗುತ್ತದೆ. ಆಪತ್ಕಾಲದ ನಂತರ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮುಖಂಡರ ಉಪದೇಶ-ಪ್ರವಚನಗಳಿಂದ ಬಹಳ ಸಕಾರಾತ್ಮಕ ಉಪಯೋಗವಾಗುತ್ತವೆ, ಎಂಬುದು ನಮ್ಮಲ್ಲಿ ಲಾತೂರ್ ಮತ್ತು ಕಚ್ಛ್ (ಗುಜರಾತ) ನಲ್ಲಿ ಆಗಿರುವ ಭೂಕಂಪಗಳ ನಂತರ ಅನುಭವಕ್ಕೆ ಬಂದಿತು. ಈ ಪ್ರಕ್ರಿಯೆಯಲ್ಲಿ ಸಹಕಾರದ ಭಾವನೆ ಮತ್ತು ಪರಸ್ಪರರಿಗೆ ಸಿಗುವ ಮಾನಸಿಕ ಆಧಾರ ಮಹತ್ವದ್ದಾಗಿರುತ್ತದೆ. ಮಾನಸಿಕ ರೋಗಿಗಳಿಂದ ಮಾಹಿತಿ ತೆಗೆದುಕೊಳ್ಳುವಾಗ ಅವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನವನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ.

೫. ಮಾನಸಿಕ ಉಪಚಾರಗಳಲ್ಲಿಯೂ ಆಧ್ಯಾತ್ಮಿಕತೆಯಿಂದ ಮಾನಸಿಕ ಸ್ವಾಸ್ಥ್ಯ ಸುಧಾರಣೆಯಾಗುವುದು

ಮಾನಸಿಕ ಉಪಚಾರಗಳಲ್ಲಿಯೂ ಅಧ್ಯಾತ್ಮವನ್ನು ಉಪಯೋಗಿಸಲು ಆರಂಭಿಸಲಾಗಿದೆ. ದೇವಸ್ಥಾನಗಳು, ಅಲ್ಲಿನ ವಾತಾವರಣ, ಭಜನೆ-ಕೀರ್ತನೆ, ನಾಮಸ್ಮರಣೆ, ಇವು ಆಧ್ಯಾತ್ಮಿಕತೆ ಯನ್ನು ಹೆಚ್ಚಿಸಲು ಉಪಯುಕ್ತವಾಗಿವೆ. ನಮ್ಮ ಚಿಕಿತ್ಸಾಲಯಕ್ಕೆ ಬರುವ ಮಂಗಲತಾಯಿ ಎಂಬ ಹೆಸರಿನ ರೋಗಿ ಪ್ರತಿವರ್ಷ (ಪಂಢರಪುರದ ಯಾತ್ರೆಗೆ) ಆಷಾಢ ಏಕಾದಶಿಗೆ ಪಂಢರಪುರಕ್ಕೆ ಹೋಗಿ ಕಾರ್ತಿಕ ಏಕಾದಶಿಯ ವರೆಗೆ ಅಲ್ಲಿ ಉಳಿದುಕೊಂಡು ಮಾನಸಿಕ ಬಲವನ್ನು ಪಡೆದು ವಾಪಾಸು ಬರುತ್ತಿದ್ದರು. ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಇವುಗಳು ಚಿಂತೆ, ಖಿನ್ನತೆ, ಹೃದಯರೋಗ, ಅತೀಯಾದ ರಕ್ತದೊತ್ತಡದಂತಹ ರೋಗಗಳಲ್ಲಿ ಬಹಳ ಉಪಯುಕ್ತವಾಗಿವೆ. ತನ್ನನ್ನು ತಾನು ನೋಡಲು ಗಮನವನ್ನು ಕೇಂದ್ರೀಕರಿಸಬಹುದು. ವರ್ತಮಾನದಲ್ಲಿ ಜೀವಿಸುವ ಶಿಕ್ಷಣವು ಸಹ ಸಿಗುತ್ತದೆ. ಇಂತಹವುಗಳಿಂದ ಮಾನಸಿಕ ಸ್ವಾಸ್ಥ್ಯವು ಹೆಚ್ಚಾಗುತ್ತದೆ.

೬. ಭಜನೆ, ಈಶ್ವರಸ್ತುತಿ, ಪ್ರಾರ್ಥನೆ ಇವುಗಳಿಂದ ಮನಃಶಾಂತಿ ಮತ್ತು ಸಮಾಧಾನ ಸಿಗುವುದು

ಆಧ್ಯಾತ್ಮಿಕ ಮನೋವೃತ್ತಿಯಿಂದ ಆಸೆ, ಸಮಾಧಾನ, ಕ್ಷಮಾಶೀಲತೆ ಮತ್ತು ಪ್ರೇಮ ಇವುಗಳು ಉಂಟಾಗುತ್ತದೆ. ನೃತ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ ಮುಂತಾದ ಕಲಾ-ಆವಿಷ್ಕಾರಗಳಿಂದಲೂ ಆಧ್ಯಾತ್ಮಿಕತೆಯು ವ್ಯಕ್ತವಾಗುತ್ತದೆ. ನಿಸರ್ಗದ ಸಾನಿಧ್ಯದಲ್ಲಿಯೂ ಒಂದು ಅವರ್ಣನೀಯ ಮಾನಸಿಕ ಶಾಂತಿ ಲಭಿಸುತ್ತದೆ. ಪ್ರಾರ್ಥನೆಯಲ್ಲಿಯೂ ಅಂತರ್ಮುಖಗೊಳಿಸುವ, ಲೀನತೆ, ವಿನಮ್ರ ಭಾವ ಮೂಡಿಸುವ ಶಕ್ತಿ ಇರುತ್ತದೆ. ದೊಡ್ಡ ಧ್ವನಿಯಲ್ಲಿ ಉಚ್ಚರಿಸುವ ಮಂತ್ರೋಚ್ಚಾರ, ಯಾವುದೇ ರಾಗದಲ್ಲಿ ಮತ್ತು ತಾಳದಲ್ಲಿ ಒಟ್ಟಾಗಿ ಹೇಳುವಂತಹ ಭಜನೆ, ಈಶ್ವರಸ್ತುತಿ, ಪ್ರವಚನಗಳು ಇತ್ಯಾದಿಗಳಿಂದ ಅಪಾರ ಮನಃಶಾಂತಿ ಮತ್ತು ಸಮಾಧಾನವು ಸಿಗುತ್ತದೆ.

೭. ಸಂತಸಾಹಿತ್ಯ ಪ್ರಪಂಚದಿಂದ ಅಧ್ಯಾತ್ಮವನ್ನು ಅವಲಂಬಿಸುವ ಶಿಕ್ಷಣ ದೊರೆಯುವುದು

ನಮ್ಮಲ್ಲಿ ಸಂತಸಾಹಿತ್ಯಗಳು ನಾವು ನಮ್ಮ ಸಂಸಾರ ಮಾಡುವಾಗ ಆಧ್ಯಾತ್ಮಿಕತೆಯನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ? ಎಂಬುದರ ಬೋಧನೆ ನೀಡುತ್ತವೆ. ಸಮರ್ಥ ರಾಮದಾಸ ಸ್ವಾಮಿಗಳಂತೂ ‘ಮನಾಚೆ ಶ್ಲೋಕವನ್ನೇ ಬರೆದಿದ್ದಾರೆ. ನಮ್ಮಲ್ಲಿನ ದುಃಖ ಮತ್ತು ಚಿಂತೆಯನ್ನು ಕಡಿಮೆಗೊಳಿಸಲು ನಮ್ಮ ಆಚೆಗಿನ ವ್ಯಾಪಕ ವಿಚಾರ ಮಾಡುವ ಸಲಹೆಯನ್ನು ಅವರು ನೀಡುತ್ತಾರೆ. ಆದ್ದರಿಂದಲೇ ಅವರು ಹೇಳುತ್ತಾರೆ,

ಮನಾ ಮಾನಸೀ ದುಃಖ ಆಣೂ ನಕೋ ರೆ |
ಮನಾ ಸರ್ವಥಾ ಶೋಕ ಚಿಂತಾ ನಕೋ ರೆ ||
ವಿವೇಕೆ ದೇಹೆಬುದ್ಧಿ ಸೋಡೂನಿ ದ್ಯಾವೀ |
ವಿದೇಹೀಪಣೆ ಮುಕ್ತಿ ಭೋಗೀತ ಜಾವೀ ||

(ಅರ್ಥ : ಮನವೇ ಮನಸ್ಸಿನಲ್ಲಿ ದುಃಖ ತರದಿರು. ಮನಸ್ಸೇ ದುಃಖ ಮತ್ತು ಚಿಂತೆ ಮಾಡದಿರು.
ವಿವೇಕದಿಂದ ದೇಹಬುದ್ಧಿಯನ್ನು ಬಿಡಬೇಕು. ಮುಕ್ತಿಯನ್ನು ಬಾಹ್ಯವಾಗಿ ಅನುಭವಿಸಬೇಕು.)

ಸಂತಶ್ರೇಷ್ಠ ಜ್ಞಾನೇಶ್ವರರು ಹೇಳುತ್ತಾರೆ, ‘ವಿಶ್ವಾಚೆ ಆರ್ತ ಮಾಝ್ಯಾ ಮನೀ ಪ್ರಕಾಶಲೆ | ಅವಘೇಚೀ ಜಾಲೆ ದೇಹ ಬ್ರಹ್ಮ ||

ಅರ್ಥ : ಪ್ರಪಂಚದ ಬೆಳಕು ನನ್ನ ಮನಸ್ಸಿನಲ್ಲಿ ಪ್ರಕಾಶಿಸಿತು, ಸಂಪೂರ್ಣ ದೇಹವೇ ಬ್ರಹ್ಮವಾಯಿತು. ಹೀಗೆ ಸಮಯಕ್ಕನುಸಾರ ಬರುವ ಅನುಭೂತಿಗಳು ಸ್ವಯಂಶೋಧನೆಯತ್ತ ಹೊರಳಿಸುವಂತಹದ್ದಾಗಿವೆ. ಇಂತಹ ಅನುಭೂತಿಗಳು ಮನಸ್ಸಿಗೆ ಉಲ್ಲಾಸವನ್ನು ಕೊಡುತ್ತವೆ. ಭವಿಷ್ಯವನ್ನು ನೋಡುವ ಸಕಾರಾತ್ಮಕ ದೃಷ್ಟಿಕೋನವನ್ನುಂಟು ಮಾಡುತ್ತವೆ, ಅಂದರೆ ಮಾನಸಿಕ ಸ್ವಾಸ್ಥ್ಯಕ್ಕಾಗಿ ಉಪಯುಕ್ತವಾಗಿವೆ.

– ಡಾ. ಜಾಹ್ನವೀ ಕೇದಾರೆ, ಮನೋರೋಗ ತಜ್ಞರು (ಆಧಾರ : ದೈನಿಕ ‘ಲೋಕಸತ್ತಾದ ಜಾಲತಾಣ)