ಪಿ.ವಿ. ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಎಂ.ಎಸ್. ಸ್ವಾಮಿನಾಥನ್ ಇವರಿಗೆ ಭಾರತ ರತ್ನ !

ನವ ದೆಹಲಿ – ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಎಕ್ಸ್’ ಖಾತೆಯ ಮೂಲಕ ಘೋಷಿಸಿದರು. ಇವರೊಂದಿಗೆ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಮತ್ತು ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಡಾ. ಎಂ.ಎಸ್. ಸ್ವಾಮಿನಾಥನ್ ಅವರಿಗೂ ಭಾರತ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು. ಕೆಲವು ದಿನಗಳ ಹಿಂದೆ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪುರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.

ಮಾಜಿ ಪ್ರಧಾನಿ ನರಸಿಂಹರಾವ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ‘ಮಾಜಿ ಪ್ರಧಾನಿ ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಲು ನನಗೆ ಸಂತೋಷವಾಗಿದೆ. ಖ್ಯಾತ ವಿದ್ವಾನ್ ರಾಜಕಾರಣಿ ಪಿ. ವಿ. ನರಸಿಂಹರಾವ್ ಅವರು ಭಾರತದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಮತ್ತು ಸಂಸದ ಮತ್ತು ವಿಧಾನಸಭೆ ಸದಸ್ಯರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರ ದೂರದೃಷ್ಟಿಯ ನಾಯಕತ್ವದಿಂದಾಗಿ ಭಾರತ ಆರ್ಥಿಕ ರಂಗದಲ್ಲಿ ಮುಂದೆ ಬಂದಿತು. ನರಸಿಂಹರಾವ್ ಅವರ ಪ್ರಧಾನಿ ಅವಧಿಯನ್ನು ದೇಶಕ್ಕೆ ಮಹತ್ವದ ಕಾಲಾವಧಿ ಎಂದು ಪರಿಗಣಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ವಿಶ್ವ ಮಾರುಕಟ್ಟೆಗೆ ಭಾರತದ ಬಾಗಿಲು ತೆರೆದರು. ಇದು ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸಿತು. ಇದರೊಂದಿಗೆ ವಿದೇಶಾಂಗ ನೀತಿ, ಭಾಷೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವರ ಕೊಡುಗೆಯು ಭಾರತದ ಅಭಿವೃದ್ಧಿಗೆ ಕಾರಣವಾಯಿತು ಮಾತ್ರವಲ್ಲದೆ ದೇಶವನ್ನು ಸಾಂಸ್ಕೃತಿಕವಾಗಿ ಮತ್ತು ಬೌದ್ಧಿಕವಾಗಿ ಶ್ರೀಮಂತಗೊಳಿಸಿತು.

ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿದ ಚೌಧರಿ ಚರಣ್ ಸಿಂಗ್ !

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಮೋದಿ, ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಿ ಗೌರವಿಸುತ್ತಿರುವುದು ನಮ್ಮ ಸರಕಾರದ ಭಾಗ್ಯವಾಗಿದೆ. ಚೌಧರಿ ಚರಣ್ ಸಿಂಗ್ ಅವರ ಅತ್ಯುತ್ತಮ ಕೊಡುಗೆಗಾಗಿ ನಾವು ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇವೆ. ಅವರು ತಮ್ಮ ಇಡೀ ಜೀವನವನ್ನು ರೈತರ ಹಕ್ಕುಗಳಿಗಾಗಿ ಮತ್ತು ರೈತರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿ ಅಥವಾ ದೇಶದ ಗೃಹ ಸಚಿವರಾಗಲಿ, ಈ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಾಗ ಅವರು ರಾಷ್ಟ್ರದ ಏಳಿಗೆಗೆ ಮಾತ್ರ ಪ್ರಾಮುಖ್ಯತೆ ನೀಡಿದರು. ತುರ್ತುಪರಿಸ್ಥಿತಿಯ ವಿರುದ್ಧವೂ ಅವರು ಬಲವಾದ ನಿಲುವು ತಳೆದರು. ನಮ್ಮ ರೈತ ಸಹೋದರರಿಗೆ ಅವರ ಸಮರ್ಪಣೆ ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಅವರ ಸನ್ನದ್ಧತೆ ನಮಗೆ ಸ್ಫೂರ್ತಿ ನೀಡುತ್ತದೆ.” ಎಂದು ಹೇಳಿದರು.