ಅತಿಸಾರ (ಭೇದಿ) (Diarrhoea) ಕಾಯಿಲೆಗೆ ಹೊಮಿಯೋಪಥಿ ಔಷಧಗಳ ಮಾಹಿತಿ

ಮನೆಯಲ್ಲಿಯೆ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೧೪)

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನ ಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆಯನ್ನು ಹೇಗೆ ಮಾಡಬಹುದು ? ಹೋಮಿಯೋಪತಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ವಿಷಯಗಳ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.

ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳ ಮೇಲೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೧೫ ನೇ ಸಂಚಿಕೆಯಲ್ಲಿ ನಾವು ‘ವಾಂತಿ’ ರೋಗಕ್ಕೆ ತೆಗೆದುಕೊಳ್ಳಬೇಕಾದ ಆರೈಕೆ ಮತ್ತು ಅದಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳ ಮಾಹಿತಿಯನ್ನು ಓದಿದೆವು. ನೇರವಾಗಿ ಕಾಯಿಲೆಗಳಿಗೆ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !

ಭೇದಿಯೆಂದರೆ ದಿನದಲ್ಲಿ ೫ ಕ್ಕಿಂತ ಹೆಚ್ಚು ಬಾರಿ ಶೌಚ, ಅಂದರೆ ತೆಳು(ನೀರಿನಂತೆ) ಶೌಚ ಆಗುವುದು, ಇದಲ್ಲದೆ ಹೊಟ್ಟೆ ನೋವು, ಹೊಟ್ಟೆ ತೊಳೆಸಿದಂತೆ ಆಗುವುದು (ವಾಕರಿಕೆ), ಹೊಟ್ಟೆ ಉಬ್ಬಿದಂತೆ ಅನಿಸುವುದು, ಪದೇ ಪದೇ ಬಾಯಾರಿಕೆಯಾಗುವುದು, ತೂಕ ಕಡಿಮೆಯಾಗುವುದು, ಜ್ವರ ಬರುವುದು, ವಾಂತಿಯಾಗುವುದು, ನಿರ್ಜಲೀಕರಣ (dehydration), ಇವು ಈ ಕಾಯಿಲೆಯ ಇತರ ಲಕ್ಷಣ ಗಳಾಗಿವೆ. ಕಡು ಬಣ್ಣದ ಮೂತ್ರ ಆಗುವುದು, ೩-೪ ಕ್ಕಿಂತಲೂ ಕಡಿಮೆ ಸಲ ಮೂತ್ರವಾಗುವುದು. ಚರ್ಮ, ಮುಖ, ತುಟಿ, ಕಣ್ಣುಗಳು ಒಣಗುವುದು, ತಲೆತಿರುಗುವುದು, ಆಯಾಸ, ಏಕಾಗ್ರತೆ ಇಲ್ಲದಿರುವುದು, ತಲೆ ಭಾರ, ಇವು ನಿರ್ಜಲೀಕರಣದ ಇತರ ಲಕ್ಷಣಗಳಾಗಿವೆ.

ಭೇದಿಯು ದೂಷಿತ ಹಾಗೂ ಅಸ್ವಚ್ಛ ಆಹಾರ ಅಥವಾ ನೀರು ಸೇವಿಸುವುದರಿಂದಾಗುವ ಕಾಯಿಲೆಯಾಗಿದೆ. ತೀವ್ರ ಭೇದಿ ಸಾಮಾನ್ಯವಾಗಿ ವಿಷಾಣು (virus), ಜೀವಾಣು (bacteria) ಮತ್ತು ಪರಜೀವಿ (parasites) ಇವುಗಳಿಂದಾಗಿ ಆಗುತ್ತದೆ. ಭೇದಿಯಿಂದ ಕಲುಷಿತವಾದ ನೀರಿನ ಅಸಮರ್ಪಕ ನಿರ್ವಹಣೆಯಿಂದ ರೋಗ ಹರಡುತ್ತದೆ.

ಭೇದಿಗೆ ಇತರ ಕಾರಣಗಳೂ ಇರಬಹುದು, ಉದಾ. ಗ್ರಹಣಿ (Irritable bowel syndrome), ಥೈರಾಯ್ಡ ಗ್ರಂಥಿಯ ಕಾರ್ಯ ಮಂದವಾಗುವುದು (hypothyroidism) ಇತ್ಯಾದಿ

೧. ಭೇದಿ ಆಗದಂತೆ / ಹರಡದಂತೆ ಏನು ಮಾಡಬೇಕು ?

ಅ. ಶೌಚಾಲಯದಿಂದ ಬಂದ ಮೇಲೆ ಸಾಬೂನಿನಿಂದ ಕೈಯನ್ನು ಸ್ವಚ್ಛ ತೊಳೆದುಕೊಳ್ಳಬೇಕು.
ಆ. ಭೇದಿಯಾಗಿರುವ ಮಗುವಿನ ‘ಡಾಯಪರ್’ (diaper) ಬದಲಾಯಿಸಿದ ನಂತರ ಸಾಬೂನಿನಿಂದ ಸ್ವಚ್ಛ ಕೈ ತೊಳೆದು ಕೊಳ್ಳಬೇಕು.
ಇ. ಅಡುಗೆಯ ಮೊದಲು ಹಾಗೂ ನಂತರ ಕೈಯನ್ನು ತೊಳೆದುಕೊಳ್ಳಬೇಕು.
ಈ. ಕುದಿಸಿದ ಅಥವಾ ‘ಫಿಲ್ಟರ್’ ಮಾಡಿದ ನೀರು ಕುಡಿಯಬೇಕು
ಉ. ಬಿಸಿ ಪಾನೀಯವನ್ನು ಕುಡಿಯಬೇಕು.
ಊ. ನವಜಾತ ಶಿಶು ಹಾಗೂ ಮಕ್ಕಳಿಗೆ ವಯಸ್ಸಿಗನುಸಾರ ಆಹಾರ ನೀಡಬೇಕು.
ಎ. ೬ ತಿಂಗಳ ವರೆಗಿನ ಮಕ್ಕಳಿಗೆ ಕೇವಲ ಸ್ತನಪಾನ ಮಾಡಿಸಬೇಕು.
ಐ. ಖಾದ್ಯ ಪದಾರ್ಥಗಳನ್ನು ಯೋಗ್ಯ ರೀತಿಯಲ್ಲಿ ಸಂಗ್ರಹಣೆ ಮತ್ತು ನಿರ್ವಹಣೆ ಮಾಡುವುದು.
ಓ. ತಂಗಳ ಆಹಾರವನ್ನು ಸೇವಿಸಬಾರದು.
ಔ. ಕರಿದ ಹಾಗೂ ಮಸಾಲೆ ಪದಾರ್ಥಗಳನ್ನು ತ್ಯಜಿಸಬೇಕು
ಅಂ. ನಿರ್ಜಂತುಕೀಕರಣ (ಪಾಶ್ಚರಾಯಿಜ್ಡ) ಮಾಡದ ಹಾಲನ್ನು ಕುಡಿಯಬಾರದು.
ಕ. ರಸ್ತೆಯ ಬದಿಯಲ್ಲಿ ಸಿಗುವ (street food) ಆಹಾರ ಪದಾರ್ಥಗಳನ್ನು ತಿನ್ನಬಾರದು.

೨. ನಿರ್ಜಲೀಕರಣ (dehydration) ವನ್ನು ತಡೆಗಟ್ಟಲು ಏನು ಮಾಡಬೇಕು ?

ಯಾವುದೇ ಕಾರಣದಿಂದ ಭೇದಿ ಆಗಿದ್ದರೂ, ನಿರ್ಜಲೀಕರಣವನ್ನು ತಡೆಗಟ್ಟಲು ‘ಜಲಸಂಜೀವನಿ’ (ಓರಲ್‌ ರಿಹೈಡ್ರೇಶನ್‌ ಸೊಲ್ಯುಶನ್‌ – ಓ.ಆರ್‌.ಎಸ್‌.) ಇದು ಒಳ್ಳೆಯ ಉಪಚಾರವಾಗಿದೆ. ಜಲಸಂಜೀವನಿ ಇದು ನೀರು ಮತ್ತು ‘ಇಲೆಕ್ಟ್ರೋಲೈಟ್’ ಇವುಗಳ ಮಿಶ್ರಣವಾಗಿದೆ. ಪೇಟೆ ಯಲ್ಲಿ ‘ಓ.ಆರ್‌.ಎಸ್‌.’ನ ಸಿದ್ಧ ಪ್ಯಾಕೇಟ್‌ಗಳು ಸಿಗುತ್ತವೆ; ಆದರೆ ಒಂದು ವೇಳೆ ಅವು ಸಿಗದಿದ್ದರೆ ಕುದಿಸಿ ತಣ್ಣಗಾದ ೧ ಲೀಟರ್‌ ನೀರಿನಲ್ಲಿ ೬ ಚಮಚ ಸಕ್ಕರೆ ಹಾಗೂ ಅರ್ಧ ಚಮಚ ಉಪ್ಪು ಮಿಶ್ರಣ ಮಾಡಿ ನಾವು ‘ಜಲ ಸಂಜೀವನಿ’ಯನ್ನು ತಯಾರಿಸಬಹುದು.

ಅ. ೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರತಿಯೊಂದು ಭೇದಿಯ ನಂತರ ಕಾಲು ಅಥವಾ ಅರ್ಧ ಕಪ್‌ ‘ಜಲಸಂಜೀವನಿ’ಯನ್ನು ಕುಡಿಸಬೇಕು.
ಆ. ೨ ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಪ್ರತಿ ಯೊಂದು ಭೇದಿಯ ನಂತರ ಅರ್ಧದಿಂದ ಒಂದು ಕಪ್‌ ‘ಜಲಸಂಜೀವನಿ’ ಕೊಡಬೇಕು.
ಇ. ಪ್ರೌಢರು ಪ್ರತಿಯೊಂದು ಭೇದಿಯ ನಂತರ ೧ ಲೋಟ ‘ಜಲಸಂಜೀವನಿ’ ಕುಡಿಯಬೇಕು.

೩. ಭೇದಿ ಆದಾಗ ತಜ್ಞರ ಸಲಹೆಯನ್ನು ಯಾವಾಗ ಪಡೆಯಬೇಕು ?

ಅ. ಭೇದಿ ೨ ದಿನಗಳಿಗಿಂತ ಹೆಚ್ಚು ದಿನ ಇದ್ದಲ್ಲಿ.
ಆ. ನಿರ್ಜಲೀಕರಣದ ಲಕ್ಷಣಗಳಿದ್ದಲ್ಲಿ.
ಇ. ಹೊಟ್ಟೆಯಲ್ಲಿ ಅಥವಾ ಗುದಾಶಯದಲ್ಲಿ ತೀವ್ರ ವೇದನೆ ಆಗುವುದು.
ಈ. ಮಲ ಕಪ್ಪು ಅಥವಾ ಗಟ್ಟಿಯಾದಾಗ.
ಉ. ೧೦೨ ಅಂಶ ಫೆರನ್ಹಾಯಿಟ್‌ಗಿಂತ ಹೆಚ್ಚು ಜ್ವರವಿದ್ದರೆ.

೪. ಹೋಮಿಯೋಪಥಿ ಔಷಧಗಳು ಮೇಲೆ ನೀಡಿರುವ ಲಕ್ಷಣಗಳ ಹೊರತು ಬೇರೆ ವೈಶಿಷ್ಟ್ಯ ಪೂರ್ಣ ಲಕ್ಷಣಗಳಿದ್ದರೆ ಯಾವ ಔಷಧಿಯನ್ನು ತೆಗೆದು ಕೊಳ್ಳಬೇಕು, ಎಂಬುದನ್ನು ಮುಂದೆ ಕೊಡಲಾಗಿದೆ.

೪ ಅ. ಪೊಡೊಫಾಯಲಮ್‌ (podophyllum)
೪ ಅ ೧. ಹೊಲಸು ನೀರಿನಂತೆ, ನೊರೆಯೊಂದಿಗೆ ಮೇಲೆ ನೀರು ಹಾಗೂ ಕೆಳಗೆ ಹಿಟ್ಟಿನ ಹಾಗೆ ಒಂದು ಥರ ಇರುವಂತಹ (Chalk and cheese like stools) ಶೌಚ ಆಗುವುದು.
೪ ಅ ೨. ಶೌಚ ಅತ್ಯಂತ ದುರ್ಗಂಧಯುಕ್ತ ಆಗಿರುವುದು.
೪ ಅ ೩. ಆಹಾರಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಭೇದಿ ಆಗುವುದು.
೪ ಅ ೪. ಭೇದಿ ಆಗುವಾಗ ಹೊಟ್ಟೆಯಲ್ಲಿ ವೇದನೆ ಆಗದಿರುವುದು.

೪ ಆ. ಕ್ರೋಟೊನ್‌ ಟಿಗ್ಲಿಯಮ್‌ (Croton Tiglium)
೪ ಆ ೧. ಹಳದಿ ಬಣ್ಣದ, ನೀರಿನಂತೆ ಭೇದಿ ಆಗುವುದು
೪ ಆ ೨. ಹೊಟ್ಟೆಯಲ್ಲಿ ಗಡಗಡ ಎಂಬ ಶಬ್ದ, ಬಂದೂಕಿನ ಗುಂಡಿನಂತಹ ಸ್ಫೋಟಕ ಹಾಗೂ ದೊಡ್ಡ ಶಬ್ದವನ್ನು ಮಾಡುತ್ತಾ ಶೌಚ ಹೊರಗೆ ಬರುವುದು ೪ ಆ ೩. ಸ್ವಲ್ಪ ಆಹಾರ ಅಥವಾ ನೀರು ಕುಡಿದರೂ ತಕ್ಷಣ ಶೌಚಕ್ಕೆ ಹೋಗಬೇಕಾಗುವುದು.

೪ ಇ. ಚಾಯನಾ ಆಫಿಸಿನಾಲಿಸ್‌ (China Officinalis)
೪ ಇ ೧. ಹಣ್ಣುಗಳನ್ನು ಸೇವಿಸಿದಾಗ ಭೇದಿ ಆಗುವುದು.
೪ ಇ ೨. ದುರ್ಗಂಧಯುಕ್ತ, ಜೀರ್ಣವಾಗದ ಆಹಾರದ ಜೊತೆಗೆ ಭೇದಿ ಆಗುವುದು.
೪ ಇ ೩. ಭೇದಿ ಆಗುವಾಗ ಹೊಟ್ಟೆಯಲ್ಲಿ ವೇದನೆಗಳು ಆಗದಿರುವುದು.
೪ ಇ ೪. ಭೇದಿಯೊಂದಿಗೆ ತುಂಬಾ ವಾಯು ಹೊರ ಬೀಳುವುದು

೪ ಈ. ಎಲೊಯಿ ಸೊಕೊಟ್ರೀನಾ (Aloe Socotrina)

೪ ಈ ೧. ಬೆಳಗ್ಗೆ ಬೇಗನೆ ಭೇದಿಯಾಗುವ ಲಕ್ಷಣಗಳು (ಹೊಟ್ಟೆ ನೋಯಿಸುವುದು) ಕಾಣಿಸುವುದು ಹಾಗೂ ಅದನ್ನು ನಿಯಂತ್ರಿಸಲು ಸಾಧ್ಯವಾಗದೆ ಇರುವುದರಿಂದ ಶೌಚಾಲಯದ ಕಡೆಗೆ ಓಡಿಹೋಗಬೇಕಾಗುವುದು.
೪ ಈ ೨. ಶೌಚಕ್ಕೆ ಹೋಗುವ ಮೊದಲು ಹಾಗೂ ಶೌಚ ಆಗುವಾಗ ಹೊಟ್ಟೆಯಲ್ಲಿ ಕತ್ತರಿಸಿದ ಹಾಗೆ ಅಥವಾ ಹಿಂಡಿದ ಹಾಗೆ ತೀವ್ರ ವೇದನೆ ಆಗುವುದು, ಭೇದಿಯಾದ ನಂತರ ವೇದನೆಗಳು ನಿಲ್ಲುವುದು.
೪ ಈ ೩. ಭೇದಿಯ ನಂತರ ತುಂಬಾ ಬೆವರು ಬಂದು ಆಯಾಸವಾಗುವುದು ಮತ್ತು ಬಸವಳಿದಂತೆ ಆಗುವುದು.

೪ ಉ. ಡಲ್ಕಮಾರಾ (Dulcamara)

೪ ಉ ೧. ತಂಪು, ಆರ್ದ್ರ, ಇಬ್ಬನಿಯುಕ್ತ ವಾತಾವರಣದಿಂದ ಅಥವಾ ಹವಾಮಾನದಲ್ಲಿ ಬದಲಾವಣೆಯಾದುದರಿಂದ ಭೇದಿ ಆಗುವುದು.
೪ ಉ ೨. ನೆಲಮಾಳಿಗೆಯಲ್ಲಿ (cellar) ಕೆಲಸ ಮಾಡುವ ವ್ಯಕ್ತಿಗಳಿಗೆ ಭೇದಿ ಆಗುವುದು.
೪ ಉ ೩. ನಾಭಿಯ ಸುತ್ತಲೂ ವೇದನೆಗಳಾಗಿ ಹುಳಿ ನೀರಿನಂತಹ ಭೇದಿ; ವಿಶೇಷವಾಗಿ ರಾತ್ರಿ ಭೇದಿಯಾಗುವುದು
೪ ಉ ೪. ತುಂಬಾ ಸೋರಿಹೋದಂತಾಗುವುದು.

೪ ಊ. ಪಲ್ಸೆಟಿಲಾ ನಿಗ್ರಿಕನ್ಸ್ (Pulsatilla Nigricans)
೪ ಊ ೧. ಸ್ನಿಗ್ಧ ಪದಾರ್ಥ, ಐಸ್ಕ್ರೀಮ್‌ ಸೇವಿಸುವುದು, ಚಳಿ ಅಥವಾ ಭಯದಿಂದ ಭೇದಿಯಾಗುವುದು.
೪ ಊ ೨. ಕೇವಲ ರಾತ್ರಿ, ಹೊಟ್ಟೆಯಲ್ಲಿ ತೀವ್ರ ನೋವುಂಟಾಗಿ ಭೇದಿಯಾಗುವುದು.
೪ ಊ ೩. ಮಲದ ಬಣ್ಣ ಹಾಗೂ ಸ್ವರೂಪದಲ್ಲಿ ಪದೇಪದೇ ಬದಲಾವಣೆಯಾಗುವುದು.

೪ ಎ. ಅರ್ಸೇನಿಕಮ್‌ ಆಲ್ಬಮ್‌ (Arsenic Album)
೪ ಎ ೧. ಅಕ್ಕಿ ತೊಳೆದ ನೀರಿನಂತೆ ತೆಳು ಭೇದಿಯಾಗುವುದು
೪ ಎ ೨. ಭೇದಿಗೆ ತುಂಬಾ ದುರ್ಗಂಧ ಬರುವುದು.
೪ ಎ ೩. ಗುದದ್ವಾರದ ಜಾಗದಲ್ಲಿ ಉರಿಯುವುದು.
೪ ಎ ೪. ಅಸ್ವಸ್ಥತೆ ಹಾಗೂ ಸಾವಿನ ಭಯವೆನಿಸುವುದು.
೪ ಎ ೫. ತುಂಬಾ ಬಾಯಾರಿಕೆಯಾಗಿ ಸ್ವಲ್ಪ ಸ್ವಲ್ಪ ಸಮಯದ ನಂತರ ಅನೇಕ ಬಾರಿ ನೀರು ಕುಡಿಯುವುದು.

೫. ಬಾರಾಕ್ಷಾರ ಔಷಧಗಳು

೫ ಅ ೧. ಫೆರಮ್‌ ಫಾಸ್ಫೋರಿಕಮ್‌ (Ferrum Phosphoricum)
ಅ. ಸತತ ನೀರಿನಂತೆ ತೆಳ್ಳಗೆ, ಹಸಿರು ಬಣ್ಣದ ಭೇದಿಯಾಗುವುದು.
ಆ. ಜೀರ್ಣವಾಗದ ಆಹಾರದಿಂದ ಭೇದಿಯಾಗುವುದು.
ಇ. ನೋವು ಇಲ್ಲದೆ ಭೇದಿಯಾಗುವುದು.

೫ ಆ ೨. ಮ್ಯಗ್ನೇಶಿಯಮ್‌ ಫಾಸ್ಫೋರಿಕಮ್‌ (Magnesium Phosphoricum)
ಅ. ಮಲ ತೆಳು ಹಾಗೂ ರಭಸದಿಂದ ಹೊರಬೀಳುವುದು
ಆ. ಹೊಟ್ಟೆಯಲ್ಲಿ ನೋಯಿಸಿ ಭೇದಿಯಾಗುವುದು.
ಇ. ವಾಯುವಿನಿಂದ (ಗ್ಯಾಸ) ಹೊಟ್ಟೆಯಲ್ಲಿ ವೇದನೆ ಗಳಾಗುವುದು, ಕಾಲುಗಳನ್ನು ಹೊಟ್ಟೆಯ ಮೇಲೆ ತಂದಾಗ ಹಾಗೂ ಬಿಸಿ ನೀರಿನಿಂದ ಕಾಸಿದರೆ ಸಮಾಧಾನವಾಗುವುದು.

‘ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಿ ಇಡಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು.