ಅಜೀರ್ಣ ಅಥವಾ ಅಪಚನ ಇದು ಎಲ್ಲರಿಗೂ ಗೊತ್ತಿರುವ ಕಾಯಿಲೆ; ಆದರೆ ಈ ಕಾಯಿಲೆಯನ್ನು ಸಾಮಾನ್ಯ ಕಾಯಿಲೆ ಎಂದು ದುರ್ಲಕ್ಷಿಸಲಾಗುತ್ತದೆ. ಜೀರ್ಣಶಕ್ತಿ ಹಾಳಾದರೆ, ಅದು ಅನೇಕ ರೋಗಗಳಿಗೆ ಮೂಲ ಕಾರಣವಾಗುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಆದುದರಿಂದ ಈ ವಾರದ ಲೇಖನದಲ್ಲಿ ನಾವು ಅದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳುವವರಿದ್ದೇವೆ. ಅಜೀರ್ಣಕ್ಕೆ ನಾವು ಸ್ವತಃ ಜವಾಬ್ದಾರರಾಗಿರುತ್ತೇವೆ. ನಾಲಿಗೆಯ ಮೇಲೆ ನಿಯಂತ್ರಣ ಇಲ್ಲದಿರುವುದೇ ಅಜೀರ್ಣಕ್ಕೆ ಮುಖ್ಯ ಕಾರಣವಾಗಿದೆ.
೧. ಅಜೀರ್ಣದ ಹಿಂದಿನ ಮುಖ್ಯ ಕಾರಣಗಳು
ಅ. ಜೀರ್ಣವಾಗಲು ಜಡವಿರುವ (ಶ್ರೀಖಂಡ, ಬಾಸುಂದಿ, ಚೀಸ್, ಪಿಝ್ಝಾ, ಬರ್ಗರ್, ಚಿಕನ್, ಮಟನ್), ಅತಿ ಎಣ್ಣೆಯುಕ್ತ, ಅತಿತುಪ್ಪಯುಕ್ತ ಪದಾರ್ಥಗಳನ್ನು, ಅತಿ ತಂಪು ಪಾನೀಯ, ಐಸ್‌ಕ್ರೀಮ್ ಇತ್ಯಾದಿಗಳನ್ನು ಯಾವಾಗಲೂ ತಿನ್ನುತ್ತಿರುವುದು.
ಆ. ಹಸಿವೆ ಇಲ್ಲದಿರುವಾಗಲೂ ತಿನ್ನುವುದು.
ಇ. ತಂಗಳು ಆಹಾರ ಸೇವಿಸುವುದು.
ಈ. ಅತಿ ಹೆಚ್ಚು ನೀರು ಕುಡಿಯುವುದು.
ಉ. ಬಾಳೆಹಣ್ಣು, ಹಾಲು, ಇತರ ಹಣ್ಣುಗಳು, ಸಾಲಡ, ಇಂತಹ ಪದಾರ್ಥಗಳನ್ನು ಯಾವಾಗಲೂ ತಿನ್ನುತ್ತಿರುವುದು.
ಊ. ಅತಿಶ್ರಮ ಅಥವಾ ಯಾವಾಗಲೂ ಕುಳಿತುಕೊಂಡು ಕೆಲಸ ಮಾಡುವುದು, ಉದಾ. (ಗಣಕೀಯ ಕೆಲಸ).
ಎ. ಹಗಲಿನಲ್ಲಿ ಮಲಗುವುದು
ಏ. ರಾತ್ರಿ ಜಾಗರಣೆ ಮಾಡುವುದು.
ಐ. ಮಲಮೂತ್ರಗಳ ಸಂವೇದನೆಗಳನ್ನು ತಡೆಹಿಡಿಯುವುದು
ಒ. ಸಿಟ್ಟು, ಭಯ, ಮತ್ಸರ ಇತ್ಯಾದಿ ಮಾನಸಿಕ ದೋಷಗಳಿಂದಾಗಿ ಆಹಾರ ಜೀರ್ಣವಾಗುವುದಿಲ್ಲ. ನಾವು ಮೇಲಿನ ಕಾರಣಗಳ ಅಧ್ಯಯನ ಮಾಡಿದರೆ, ಈ ಕಾರಣಗಳನ್ನು ತಪ್ಪಿಸಿದರೆ, ನಾವು ನಮ್ಮ ಜೀರ್ಣಕ್ಷಮತೆಯನ್ನು ಸುಧಾರಿಸುವ ದೃಷ್ಟಿಯಿಂದ ಪ್ರಯತ್ನಿಸಬಹುದು.
೨. ಅಜೀರ್ಣವಾಗಿರುವುದರ ಲಕ್ಷಣಗಳು ಅಜೀರ್ಣದ ಲಕ್ಷಣಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಅ. ಹೊಟ್ಟೆ ನೋವು, ಹೊಟ್ಟೆ ಉಬ್ಬುವಿಕೆ, ಹುಳಿ ತೇಗು, ಹೊಟ್ಟೆ ತೊಳೆಸುವಿಕೆ, ದುರ್ಗಂಧಯುಕ್ತ ಗ್ಯಾಸ ಹೋಗುವುದು, ಭೇದಿಯಾಗುವುದು ಅಥವಾ ಶೌಚ ಸರಿಯಾಗಿ ಆಗದಿರುವುದು, ಬಾಯಿಗೆ ರುಚಿ ಇಲ್ಲದಿರುವುದು, ಊಟ ಮಾಡಬೇಕೆಂದು ಅನಿಸದಿರುವುದು .
ಆ. ಶರೀರ ಬಸವಳಿದಂತಾಗುವುದು ಅಥವಾ ತಲೆ ಸುತ್ತಿದಂತೆ ಆಗುವುದು, ಕೆಲಸ ಮಾಡದಿದ್ದರೂ ಆಯಾಸವಾಗುವುದು, ತಲೆ ನೋವು.
ಇ. ಪಿತ್ತದಿಂದ ಅಜೀರ್ಣವಾದರೆ ಹೆಚ್ಚು ನೀರಡಿಕೆಯಾಗುವುದು, ಎದೆಉರಿ ಮತ್ತು ಹೊಟ್ಟೆ ಉರಿ, ಹುಳಿ ತೇಗು ಇತ್ಯಾದಿ ಲಕ್ಷಣಗಳು ಕಾಣಿಸುತ್ತದೆ.
ಈ. ಅಜೀರ್ಣದಿಂದ ದೇಹ ಭಾರವಾಗುವುದು, ಬಾಯಿಯಲ್ಲಿ ನೀರೂರುವುದು, ಕಣ್ಣುಗಳ ಸುತ್ತಲೂ ಬಾವು ಬರುವುದು ಇಂತಹ ಲಕ್ಷಣಗಳು ಕಾಣಿಸಬಹುದು.
ಮೇಲಿನ ಲಕ್ಷಣಗಳನ್ನು ಪ್ರತಿಯೊಬ್ಬರು ಒಂದಲ್ಲ ಒಂದು ಸಲ ಅನುಭವಿಸಿರಬೇಕು; ಏಕೆಂದರೆ ನಾಲಿಗೆಯ ಮೇಲೆ ನಿಯಂತ್ರಣವಿಟ್ಟುಕೊಳ್ಳುವ ಜನರು ಸದ್ಯ ಅಪರೂಪಕ್ಕೆ ನೋಡಲು ಸಿಗುತ್ತಾರೆ. ಎಲ್ಲಿಯವರೆಗೆ ಯಾವುದಾದರೂ ಕಾಯಿಲೆಯಾಗುವುದಿಲ್ಲವೋ, ಅಲ್ಲಿಯವರೆಗೆ ನಾವು ಎಚ್ಚರಗೊಳ್ಳುವುದಿಲ್ಲ, ಈಗ ಈ ಪ್ರವೃತ್ತಿ ಹೆಚ್ಚಿಗೆ ನೋಡಲು ಸಿಗುತ್ತದೆ. ‘ಹಸಿವೆ ಇಲ್ಲದಿರುವಾಗ ಇಷ್ಟವಾದ ಪದಾರ್ಥ ಎದುರಿಗೆ ಬಂದರೆ, ಅದನ್ನು ಹೇಗೆ ನಿರಾಕರಿಸುವುದು ? ಈಗ
ಎಲ್ಲರೂ ಒತ್ತಾಯಿಸುತ್ತಿದ್ದಾರೆ, ಆದುದರಿಂದ ತಿನ್ನಲೇಬೇಕು’, ಎಂಬಂತಹ ಅನೇಕ ಕಾರಣಗಳಿಂದ ನಾವು ಅಜೀರ್ಣದಂತಹ ಕಾಯಿಲೆಗಳನ್ನು ಎಳೆದುಕೊಳ್ಳುತ್ತಿರುತ್ತೇವೆ. ಆದುದರಿಂದ ಎಲ್ಲರೂ ಈ ಬಗ್ಗೆ ಗಂಭೀರವಾಗಿ ವಿಚಾರ ಮಾಡುವುದು ಆವಶ್ಯಕವಾಗಿದೆ. ನಾವು ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗುವುದು ಆರೋಗ್ಯದ ಮೊದಲ ಮೆಟ್ಟಿಲಾಗಿದೆ.
೩. ಅಜೀರ್ಣಕ್ಕೆ ಮನೆಮದ್ದು
ಈಗ ನಾವು ಅಜೀರ್ಣಕ್ಕೆ ಮನೆಮದ್ದುಗಳನ್ನು ನೋಡಲಿದ್ದೇವೆ. ಈ ಚಿಕಿತ್ಸೆಯನ್ನು ತಿಳಿದುಕೊಳ್ಳುವ ಮೊದಲು ಒಂದು ಮಹತ್ವದ ಅಂಶವೆಂದರೆ, ‘ಈಗ ಅಜೀರ್ಣಕ್ಕೆ ಪರಿಹಾರ ಸಿಕ್ಕಿದೆ, ಹಾಗಾಗಿ ಏನುಬೇಕಾದರೂ ತಿನ್ನಬಹುದು ಮತ್ತು ಈ ಚಿಕಿತ್ಸೆಯನ್ನು ಮಾಡಿದರೆ, ಅಜೀರ್ಣವಾಗುವುದಿಲ್ಲ’, ಎಂದು ಅರ್ಥೈಸಬಾರದು.ಕೆಲವೊಮ್ಮೆ ನಿಯಮ ಪಾಲಿಸದೇ ಅಜೀರ್ಣವಾದರೆ, ನಾವು ಈ ಉಪಾಯಗಳನ್ನು ಮಾಡ ಬಹುದು. ಅಜೀರ್ಣ ಆಗಲೇಬಾರದು ಎಂಬುದರತ್ತ ಎಲ್ಲರ ಗಮನವಿರಬೇಕು. ಹಾಗೆಯೇ ಅಜೀರ್ಣದಂತಹ ಕಾಯಿಲೆ ದೀರ್ಘ ಕಾಲದ ವರೆಗೆ ಮುಂದುವರಿದರೆ, ವೈದ್ಯರ ಸಲಹೆಯಂತೆ ಯೋಗ್ಯ ಔಷಧೋಪಚಾರಗಳನ್ನು ಮಾಡಿಸಿಕೊಳ್ಳಬೇಕು. ಆಗ ಮನೆಮದ್ದುಗಳಲ್ಲಿ ಸಮಯ ಕಳೆಯಬಾರದು.
ಅ. ‘ಲಂಘನ’ ಅಂದರೆ ಉಪವಾಸ, ಇದು ಅಜೀರ್ಣಕ್ಕೆ ಮೊದಲ ಮತ್ತು ರಾಮಬಾಣ ಉಪಾಯವಾಗಿದೆ. ಸರಿಯಾಗಿ ಹಸಿವೆ ಆಗುವವರೆಗೆ ಏನನ್ನೂ ತಿನ್ನಬಾರದು. ನೀರಡಿಕೆಯಾದರೆ ನಡುನಡುವೆ ಕೇವಲ ಉಗುರುಬೆಚ್ಚಗಿನ ನೀರು ಕುಡಿಯಬೇಕು.
ಆ. ಅತಿಯಾಗಿ ನೀರು ಕುಡಿಯುವುದನ್ನು ತಪ್ಪಿಸಬೇಕು. ನೀರಡಿಕೆಯಾದರೆ ಗಟಗಟ ನೀರು ಕುಡಿಯದೇ ಒಂದೊಂದೇ ಗುಟುಕು ನೀರು ಕುಡಿಯಬೇಕು.
ಇ. ಇಂಗು ಮತ್ತು ಬೆಳ್ಳುಳ್ಳಿ ಹಾಕಿದ ಮಜ್ಜಿಗೆ ಕುಡಿಯಬೇಕು.
ಈ. ಪುದೀನಾದ ಚಟ್ನಿಯನ್ನು ತಿನ್ನಬೇಕು.
ಉ. ಉಪ್ಪಿನ ಬದಲಿಗೆ ಸೈಂದವಲವಣ ಅಥವಾ ಕಪ್ಪು ಉಪ್ಪು ಬಳಸಬೇಕು.
ಊ. ಫ್ಲವರ್, ಬಟಾಟೆ, ಗೆಣಸುಗಳಂತಹ ತರಕಾರಿಗಳನ್ನು ಬಳಸಬಾರದು. ತುಪ್ಪರೀಕಾಯಿ ಪಲ್ಯ ಅಥವಾ ಸಬ್ಬಸಗಿ ಸೊಪ್ಪಿನ ಪಲ್ಯವನ್ನು ತಿನ್ನಬೇಕು.
ಎ. ಕಡಲೆ, ಬಟಾಣಿ, ಅವರೆ, ಮಡಕೀ, ಕಾಬುಲ್ ಕಡಲೆ ಇವುಗಳಂತಹ ದ್ವಿದಳಧಾನ್ಯಗಳನ್ನು ತಿನ್ನಲೇಬಾರದು. ಅದರ ಬದಲು ಹೆಸರುಬೇಳೆಯ ಕಟ್ಟು ಅಥವಾ ಕಾಯಿಪಲ್ಲೆಗಳ ಸೂಪ್ ಕುಡಿಯಬೇಕು.
ಏ. ಹಸಿವೆ ಆಗದಿದ್ದರೆ ಕಿತ್ತಳೆ, ಮೊಸಂಬಿ, ಪಪ್ಪಾಯಿ, ದಾಳಿಂಬೆ ಈ ಹಣ್ಣುಗಳನ್ನು ತಿನ್ನಬೇಕು.
ಐ. ಪರಾಠಾ, ನಾನ್(ಮೈದಾದಿಂದ ತಯಾರಿಸಿದ ರೊಟ್ಟಿ), ಎಣ್ಣೆ ಸವರಿ ಮಡಚಿ ಮಾಡಿದ ಚಪಾತಿಯ ಬದಲು (ಇವು ಜೀರ್ಣಕ್ಕೆ ಜಡವಾಗಿರುತ್ತವೆ) ಅಕ್ಕಿಯ ಅಥವಾ ಜೋಳದ ರೊಟ್ಟಿಯನ್ನು ಸೇವಿಸಬೇಕು.
ಒ. ಬಾಯಿಗೆ ರುಚಿ ಇಲ್ಲದಿದ್ದರೆ ಅಮಸೋಲ್(ಪುನರ್‌ಪುಳಿ) ಸಾರು ಮತ್ತು ಅನ್ನವನ್ನು ಸೇವಿಸಬೇಕು.
ಓ. ಹೊಟ್ಟೆಯಲ್ಲಿನ ಗ್ಯಾಸ್(ವಾಯು) ಕಡಿಮೆ ಮಾಡಲು ಊಟದ ನಂತರ ನೆಲ್ಲಿಕಾಯಿ ಮತ್ತು ಶುಂಠಿ ಇವುಗಳ ಪುಡಿಯ ಮಿಶ್ರಣವನ್ನು ಚಿಟಿಕೆಯಷ್ಟು ತೆಗೆದುಕೊಳ್ಳಬೇಕು.
ಔ. ಕೆಲವರಿಗೆ ಹೆಚ್ಚು ಹಸಿವೆಯೇ ಆಗುವುದಿಲ್ಲ. ಅದಕ್ಕಾಗಿ ಅವರು ರಾಮನವಮಿಯ ಪ್ರಸಾದವೆಂದು ತಯಾರಿಸುವಂತಹ ಶುಂಠಿಯ ವಡೆಗಳನ್ನು ಅರ್ಧ ಚಮಚದಷ್ಟು ದಿನದಲ್ಲಿ ೩ ಸಲ ೪ ರಿಂದ ೫ ದಿನ ತೆಗೆದುಕೊಳ್ಳಬೇಕು.
ಅಂ. ಹೊಟ್ಟೆಯಲ್ಲಿನ ವಾಯುವಿನಿಂದಾಗಿ ಹೊಟ್ಟೆ ನೋಯುತ್ತಿದ್ದರೆ ಅರ್ಧ ಚಮಚ ಅಜ್ವಾನ ಮತ್ತು ಚಿಟಿಕೆಯಷ್ಟು ಉಪ್ಪನ್ನು ಒಂದು ಕಪ್‌ನಷ್ಟು ಬೆಚ್ಚಗಿನ ನೀರಿನ ಜೊತೆಗೆ ತೆಗೆದುಕೊಳ್ಳಬೇಕು.
ಅಃ. ಬಾಯಿಗೆ ರುಚಿ ಇಲ್ಲದಿರುವಾಗ ಹಸಿಶುಂಠಿಯ ಚಿಕ್ಕ ತುಂಡುಗಳು, ನಿಂಬೆಹಣ್ಣಿನ ರಸ, ಸೈಂದವಉಪ್ಪು ಮತ್ತು ಕಪ್ಪು ಉಪ್ಪು ಇವುಗಳನ್ನು ಸೇರಿಸಿ ಗಾಜಿನ ಬಾಟಲಿಯಲ್ಲಿ ತುಂಬಿಡಬೇಕು. ದಿನವಿಡಿ ನಡುನಡುವೆ ೨-೩ ಸಲ ಇದನ್ನು ನೆಕ್ಕಬೇಕು. ಇದರಿಂದ ಹಸಿವಾಗುತ್ತದೆ ಮತ್ತು ಆಹಾರವು ಜೀರ್ಣವಾಗುತ್ತದೆ.
– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ. (೪.೬.೨೦೨೩)