|
ಬೆಂಗಳೂರು – ಬೆಳಗಾವಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳನ್ನು ಥಳಿಸಿ ನಂತರ ಅವಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಲಾಯಿತು. ಕರ್ನಾಟಕ ಉಚ್ಚನ್ಯಾಯಾಲಯವು ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ದಾಖಲಿಸಿಕೊಂಡು ನಡೆಸಿದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಕರ್ನಾಟಕ ಸರ್ಕಾರ ಮತ್ತು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿತು. ಇಂತಹ ಘಟನೆಗಳು ಮಹಾಭಾರತದಲ್ಲಿಯೂ ನಡೆದಿರಲಿಲ್ಲ. ದ್ರೌಪದಿಗಾಗಿ ಭಗವಾನ ಶ್ರೀಕೃಷ್ಣ ಧಾವಿಸಿ ಬಂದಿದ್ದನು: ಆದರೆ ಸಧ್ಯದ ಆಧುನಿಕ ಯುಗದಲ್ಲಿ ಅವಳ ಸಹಾಯಕ್ಕಾಗಿ ಯಾರೂ ಧಾವಿಸಿ ಬಂದಿಲ್ಲ. ದುರದೃಷ್ಟವಶಾತ್ ಈ ಜಗತ್ತು ದುರ್ಯೋಧನ ಮತ್ತು ದುಶ್ಶಾಸನರದ್ದಾಗಿದೆ. ಆ ಮಹಿಳೆಗೆ ಆ ರಾಕ್ಷಸರ ಕರುಣೆಯ ಮೇಲೆ ಬಿಡಲಾಗಿತ್ತು. ಆ ಮಹಿಳೆಗೆ ಇದೆಲ್ಲದರಿಂದ ಎಂತಹ ಆಘಾತವಾಗಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಆರೋಪಿಗಳನ್ನು ಮನುಷ್ಯರು ಎಂದು ಕರೆಯಲು ಕೂಡ ನಮಗೆ ನಾಚಿಕೆಯಾಗುತ್ತಿದೆ. ಯಾರಾದರೂ ಇಷ್ಟು ಕ್ರೂರಿಯಾಗಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯನ್ನು ನ್ಯಾಯಾಲಯವು ಕೇಳಿತು.
ನ್ಯಾಯಾಲಯವು ಈ ಸಮಯದಲ್ಲಿ ` ಪೊಲೀಸರು ಘಟನಾ ಸ್ಥಳಕ್ಕೆ ತಲುಪಲು 2 ಗಂಟೆ ಏಕೆ ಬೇಕಾಯಿತು? ಇಷ್ಟು ಕೀಳಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವಾಗ ಪೊಲೀಸರು ಎಲ್ಲಿದ್ದರು?’ ಎನ್ನುವಂತಹ ಪ್ರಶ್ನೆಗಳನ್ನು ಕೇಳಿ, ಈ ಸಂದರ್ಭದಲ್ಲಿ ನೇರವಾಗಿ ಪೊಲೀಸ ಆಯುಕ್ತರನ್ನು ನ್ಯಾಯಾಲಯದ ಎದುರಿಗೆ ಈ ಘಟನೆಯ ಸವಿಸ್ತಾನ ವರದಿಯನ್ನು ಹಾಜರು ಪಡಿಸುವಂತೆ ಆದೇಶ ನೀಡಿದೆ. ಹಾಗೆಯೇ ಈ ಪ್ರಕರಣವನ್ನು ಅತ್ಯಂತ ಕಠಿಣವಾಗಿ ನಿಭಾಯಿಸಲಾಗುವುದು’ ಎಂದು ನ್ಯಾಯಾಲಯವು ಸರಕಾರ ಮತ್ತು ಆರೋಪಿಗಳಿಗೆ ಹೇಳಿದೆ.
ಏನಿದು ಪ್ರಕರಣ ?
ಬೆಳಗಾವಿಯಲ್ಲಿ ಡಿಸೆಂಬರ್ 11 ರಂದು, ಓರ್ವ ಯುವತಿ ತನ್ನ ನಿಶ್ಚಿತಾರ್ಥದ ದಿನದಂದು, ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಯುವತಿಯ ಮನೆಯವರು ಇದರಿಂದ ಕೋಪಗೊಂಡು ನೇರವಾಗಿ ಆ ಯುವಕನ ಮನೆಗೆ ಧಾವಿಸಿದರು. ಆ ಹುಡುಗನ ತಾಯಿಯನ್ನು ಅತ್ಯಂತ ಕ್ರೂರವಾಗಿ ಥಳಿಸಿದರು, ಹಾಗೆಯೇ ಆ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಒಂದು ವಿದ್ಯುತ್ ಕಂಬಕ್ಕೆ 2 ಗಂಟೆಗಳ ಕಾಲ ಕಟ್ಟಿಹಾಕಿದ್ದರು.
ಸಂಪಾದಕೀಯ ನಿಲುವುಈ ಪ್ರಪಂಚದ ದುರ್ಯೋಧನ ಮತ್ತು ದುಶ್ಶಾಸನರಿಗೆ ಪಾಠ ಕಲಿಸಲು ಜನರು ಭಗವಾನ ಶ್ರೀ ಕೃಷ್ಣನ ಭಕ್ತಿ ಮಾಡುವುದು ಆವಶ್ಯಕವಾಗಿದೆ. ದ್ರೌಪದಿಯು ಭಗವಾನ ಶ್ರೀಕೃಷ್ಣನನ್ನು ಆರ್ತತೆಯಿಂದ ಕೂಗಿ ಕರೆದಾಗ ಭಗವಂತನು ಅವಳನ್ನು ರಕ್ಷಿಸಿದನು. ಇಂದು ಕೂಡ ಭಗವಂತನು ಭಕ್ತರನ್ನು ರಕ್ಷಿಸಲು ಓಡಿ ಬರಬಹುದು, ಇದಕ್ಕಾಗಿ ಆ ರೀತಿ ಭಕ್ತಿಯನ್ನು ಮಾಡುವುದು ಮತ್ತು ಅವನನ್ನು ಆರ್ತತೆಯಿಂದ ಕೂಗಿ ಕರೆಯುವುದು ಆವಶ್ಯಕವಾಗಿದೆ. ಇಂತಹ ಗಂಭೀರ ಘಟನೆ ನಡೆಯುತ್ತಿರುವಾಗ 2 ಗಂಟೆಗಳ ನಂತರ ಘಟನಾಸ್ಥಳವನ್ನು ತಲುಪುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. |