‘ಇಂಡಿಯಾ’ ಮತ್ತು ‘ಭಾರತ’ ನಡುವೆ ವ್ಯತ್ಯಾಸ ಮಾಡುವುದಿಲ್ಲ ! – ಎನ್.ಸಿ.ಇ.ಆರ್.ಟಿ.

ಹೊಸ ಪಠ್ಯಕ್ರಮ ಮತ್ತು ಪುಸ್ತಕಗಳನ್ನು ತಯಾರಿಸುವ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಈ ಬಗ್ಗೆ ಈಗ ಮಾತನಾಡುವುದು ಬಹಳ ಅವಸರದ್ದಾಗಿದೆಯೆಂದು ಸ್ಪಷ್ಟೀಕರಣ

ನವ ದೆಹಲಿ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌.ಸಿ.ಇ.ಆರ್‌.ಟಿ.) ಇಂಡಿಯಾ’ ಮತ್ತು `ಭಾರತ’ ಇವುಗಳ ನಡುವೆ ವ್ಯತ್ಯಾಸ ಮಾಡುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಸಂಸತ್ತಿಗೆ ಮಾಹಿತಿ ನೀಡಿದೆ. ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಇವರು ರಾಜ್ಯಸಭೆಯಲ್ಲಿ ಮಾತನಾಡಿ, `ನಮ್ಮ ದೇಶ ವಸಾಹತುಶಾಹಿ ಮನಃಸ್ಥಿತಿಯಿಂದ ಹೊರಬರುತ್ತಿದೆ. ನಾವು ಭಾರತೀಯ ಭಾಷೆಯ ಪದಗಳ ಬಳಕೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ.” ಎಂದು ಹೇಳಿದರು. ವಿಶೇಷವೆಂದರೆ, ಎನ್‌.ಸಿ.ಇ.ಆರ್‌.ಟಿ. ಸಮಿತಿಯು ಈ ವರ್ಷದ ಅಕ್ಟೋಬರ್‌ನಲ್ಲಿ ಪುಸ್ತಕಗಳಿಂದ ‘ಇಂಡಿಯಾ’ ಪದವನ್ನು ತೆಗೆದು ಹಾಕಲು ಶಿಫಾರಸು ಮಾಡಿತ್ತು. `ಸಮಿತಿಯ ಶಿಫಾರಸಿನ ಕುರಿತು ಇನ್ನೂ ವರೆಗೆ ಯಾವುದೇ ನಿರ್ಧಾರ ಕೈಗೊಂಡಿರುವುದಿಲ್ಲ. ಹೊಸ ಪಠ್ಯಕ್ರಮ ಮತ್ತು ಪುಸ್ತಕಗಳನ್ನು ತಯಾರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ವಿಷಯದ ಬಗ್ಗೆ ಈಗಲೇ ಮಾತನಾಡಲು ಬಹಳ ಅವಸರವಾಗುತ್ತದೆ’ ಎಂದು ಎನ್.ಸಿ.ಇ. ಆರ್.ಟಿ. ಹೇಳಿದೆ.

1. ಎನ್.ಸಿ.ಇ.ಆರ್.ಟಿ. ಯು ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಪಠ್ಯಕ್ರಮವನ್ನು ಪರಿಷ್ಕರಿಸಲು 19 ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯೇ ದೇಶದ ಹೆಸರನ್ನು `ಇಂಡಿಯಾ’ ಬದಲಾಗಿ ‘ಭಾರತ’ ಎಂದು ಬರೆಯಲು ಸೂಚಿಸಿತ್ತು. ಹಾಗೆಯೇ ಪಠ್ಯಕ್ರಮದಿಂದ ಪ್ರಾಚೀನ ಇತಿಹಾಸವನ್ನು ಪಠ್ಯಕ್ರಮದಿಂದ ತೆಗೆದುಹಾಕಿ, ಶಾಸ್ತ್ರೀಯ ಇತಿಹಾಸ ಮತ್ತು ಹಿಂದೂ ಯೋಧರ ವಿಜಯದ ಕಥೆಗಳನ್ನು ಸೇರಿಸಲು ಶಿಫಾರಸ್ಸು ಕೂಡ ಮಾಡಿತ್ತು.

2. ಈ ಸಮಿತಿಯ ಅಧ್ಯಕ್ಷ ಸಿ.ಐ. ಇಸಾಕ ಇವರು ಮಾತನಾಡಿ, ಭಾರತದ ಉಲ್ಲೇಖವು 7 ಸಾವಿರ ವರ್ಷಗಳಷ್ಟು ಹಳೆಯದಾದ ವಿಷ್ಣು ಪುರಾಣದಂತಹ ಗ್ರಂಥಗಳಲ್ಲಿದೆ. 1757ರಲ್ಲಿ ನಡೆದ ಪ್ಲಾಸಿ ಕದನದ ನಂತರ ‘ಇಂಡಿಯಾ’ ಈ ಹೆಸರು ಸಾಮಾನ್ಯವಾಗಿ ಬಳಸಲು ಪ್ರಾರಂಭಿಸಲಾಯಿತು. ಇಂತಹ ಪರಿಸ್ಥಿತಿಯಲ್ಲಿ ದೇಶಕ್ಕೆ ‘ಭಾರತ’ ಎಂಬ ಹೆಸರನ್ನೇ ಬಳಸಬೇಕು. ಬ್ರಿಟಿಷರು ಭಾರತೀಯ ಇತಿಹಾಸದ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಎಂದು ವಿಂಗಡಿಸಿದರು. ಪ್ರಾಚೀನ ಇತಿಹಾಸದಲ್ಲಿ, ದೇಶವು ಕತ್ತಲೆಯಲ್ಲಿತ್ತು, ಅದರಲ್ಲಿ ವೈಜ್ಞಾನಿಕ ಅರಿವು ಇರಲಿಲ್ಲ ಎಂದು ಹೇಳುತ್ತದೆ. ಮಕ್ಕಳಿಗೆ ಮಧ್ಯಕಾಲೀನ ಮತ್ತು ಆಧುನಿಕ ಇತಿಹಾಸದ ಜೊತೆಗೆ ಶಾಸ್ತ್ರೀಯ ಇತಿಹಾಸವನ್ನು ಕೂಡ ಕಲಿಸಬೇಕು ಎಂದು ಹೇಳಿದರು.