ಕರಣಿ ಸೇನೆಯ ಅಧ್ಯಕ್ಷ ಗೊಗಾಮೆಡಿ ಹತ್ಯೆಯಲ್ಲಿ ಭಾರತೀಯ ಸೈನಿಕನ ಕೈವಾಡ !


ಜೈಪುರ (ರಾಜಸ್ಥಾನ) – ಇಲ್ಲಿ ರಾಷ್ಟ್ರೀಯ ಶ್ರೀ ರಜಪೂತ ಕರಣಿ ಸೇನೆಯ ಅಧ್ಯಕ್ಷ ಸುಖದೇವ ಸಿಂಗ ಗೊಗಾಮೆಡಿ ಇವರ ಹತ್ಯೆಯ 2 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಅವರನ್ನು ಬಂಧಿಸಲು ಪೊಲೀಸರು ಉತ್ತರ ಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶಕ್ಕೆ ತೆರಳಿದ್ದಾರೆ. ಈ ಇಬ್ಬರಲ್ಲಿ ಒಬ್ಬನಾದ ನಿಖಿಲ್ ಫೌಜಿ ಭಾರತೀಯ ಸೇನೆಯ ಯೋಧ ಎಂಬುದು ಬಹಿರಂಗವಾಗಿದೆ. ಅವನು ಹರಿಯಾಣಾದ ನಿವಾಸಿಯಾಗಿದ್ದು, ರಜೆ ಪಡೆದು ಮನೆಗೆ ಬಂದಿದ್ದಾಗ, ಈ ಹತ್ಯೆಯನ್ನು ಮಾಡಿದ್ದಾನೆ. ಆರೋಪಿಗಳು ಗೋಗಾಮೆಡಿಯ ಬಳಿ ಕರೆದುಕೊಂಡು ಹೋಗಿದ್ದ ಸ್ನೇಹಿತನನ್ನು ಕೂಡ ಹತ್ಯೆ ಮಾಡಿದ್ದಾರೆ !

ಗೋಗಾಮೆಡಿಯನ್ನು ಹತ್ಯೆ ಮಾಡಿದ ಹಂತಕರು ಜೈಪುರದ ಬಟ್ಟೆ ವ್ಯಾಪಾರಿ ನವೀನ ಶೇಖಾವತನೊಂದಿಗೆ ಅವನ ಚಿಕ್ಕಮ್ಮನ ಮಗನ ವಿವಾಹ ಪತ್ರಿಕೆ ಕೊಡುವ ನೆಪದಲ್ಲಿ ಗೋಗಾಮೆಡಿಯವರ ಮನೆಗೆ ಹೋಗಿದ್ದರು. ನವೀನ ಶೇಖಾವತ ಕರಣಿ ಸೇನೆಯ ಸದಸ್ಯನಾಗಿದ್ದನು. ಆರೋಪಿಗಳಿಬ್ಬರೂ ಮಿತ್ರರೆಂದು ನವೀನನೊಂದಿಗೆ ಹೋಗಿದ್ದರು. ಆರೋಪಿಗಳಿಬ್ಬರೂ ಗೋಗಾಮೆಡಿಯವರ ಮೇಲೆ ಗುಂಡು ಹಾರಿಸಿದ ಬಳಿಕ ಅವರು ನವೀನನ್ನು ಕೂಡ ಹತ್ಯೆ ಮಾಡಿದರು. ಅವರು ನವೀನನ್ನು ಏಕೆ ಹತ್ಯೆ ಮಾಡಿದರು ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಂಜಾಬ ಪೊಲೀಸರು ರಾಜಸ್ಥಾನ ಪೊಲೀಸರಿಗೆ ದಾಳಿಯ ಸಂಚಿನ ಮಾಹಿತಿಯನ್ನು 8 ತಿಂಗಳ ಹಿಂದೆಯೇ ನೀಡಿದ್ದರು !

ವಿಶೇಷವೆಂದರೆ ಪಂಜಾಬ ಪೊಲೀಸರು ಗೊಗಾಮೆಡಿಯವರ ಮೇಲೆ ದಾಳಿ ನಡೆಸಲಿರುವ ಸಂಚಿನ ಮಾಹಿತಿಯನ್ನು 8 ತಿಂಗಳ ಹಿಂದೆಯೇ ರಾಜಸ್ಥಾನ ಪೊಲೀಸರಿಗೆ ನೀಡಿದ್ದರು. ತದನಂತರವೂ ಗೋಗಾಮೆಡಿಯವರಿಗೆ ಪೊಲೀಸರು ಭದ್ರತೆಯನ್ನು ಒದಗಿಸಿರಲಿಲ್ಲ. (ಇದಕ್ಕೆ ಕಾರಣರಾಗಿರುವ ಪೊಲೀಸರ ಮೇಲೆ ಸರಕಾರವು ಕಠಿಣ ಕ್ರಮ ಕೈಕೊಳ್ಳಬೇಕು – ಸಂಪಾದಕರು)

ಅನೇಕ ಸ್ಥಳಗಳಲ್ಲಿ ಪ್ರತಿಭಟನೆಗಳು !

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಷ್ಟ್ರೀಯ ಶ್ರೀ ರಜಪೂತ ಕರಣಿ ಸೇನೆಯು ಡಿಸೆಂಬರ್ 6 ರಂದು ‘ರಾಜಸ್ಥಾನ ಬಂದ್’ ಘೋಷಿಸಿತ್ತು. ಇದಕ್ಕೆ ಜೈಪುರದ ವ್ಯಾಪಾರ ಸಂಘವು ಬೆಂಬಲಿಸಿದೆ. ಇದರೊಂದಿಗೆ ಜೈಸಲ್ಮೇರ್ ಮತ್ತು ಬಾರಮೇರನಲ್ಲಿಯೂ ಬಂದ್ ಘೋಷಿಸಲಾಗಿತ್ತು. ಅನೇಕ ಸ್ಥಳಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಾ, ಬಂದ್ ನಡೆಸಲಾಯಿತು.