ಉತ್ತರಾಖಂಡದ ಪಾಠ !

ಕಳೆದ ಕೆಲವು ದಿನಗಳಿಂದ ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡನೆಗಾಂವ್‌ ನಡುವಿನ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರು ಹೊರಬರುವ ಮಾರ್ಗದಲ್ಲಿದ್ದಾರೆ. ಈ ಕಾರ್ಮಿಕರು ಯಾವಾಗ ಹೊರಗೆ ಬರುತ್ತಾರೆ ಎಂಬುದರತ್ತ ಪ್ರಧಾನಿ ಸಹಿತ ಇಡೀ ದೇಶದ ಗಮನವಿದೆ. ಆದುದರಿಂದ ಕಾರ್ಮಿಕರ ಬಿಡುಗಡೆಯ ಆನಂದ ಪ್ರತಿಯೊಬ್ಬ ಭಾರತೀಯನಿಗೆ ಇದ್ದೇ ಇದೆ; ಆದರೆ ಇಂತಹ ದುರ್ಘಟನೆಗಳು ಮೇಲಿಂದ ಮೇಲೆ ಘಟಿಸುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಉಪಾಯಯೋಜನೆಯು ಅಷ್ಟೇ ಆವಶ್ಯಕ ವಾಗಿದೆ. ಇದರಲ್ಲಿ ಗಮನಕ್ಕೆ ಬಂದ ಮುಖ್ಯ ವಿಷಯವೆಂದರೆ, ಈ ಕೆಲಸವನ್ನು ಮಾಡುವ ಕಾಮಗಾರಿ ಸಂಸ್ಥೆಯು ರಕ್ಷಣೆಯ ದೃಷ್ಟಿಯಿಂದ ಅತ್ಯಾವಶ್ಯಕವಾಗಿರುವ ‘ತುರ್ತು ವ್ಯವಸ್ಥೆ’ಯನ್ನು ಒಂದು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ತೆಗೆದುಹಾಕಿತು. ವಾಸ್ತವದಲ್ಲಿ ಒಮ್ಮೆ ‘ತುರ್ತು ವ್ಯವಸ್ಥೆ’ ಸಕ್ರಿಯಗೊಂಡರೆ ಸುರಂಗ ಪೂರ್ಣಗೊಳ್ಳುವವರೆಗೆ ಅದನ್ನು ನಿರ್ವಹಿಸುವುದು ಅತ್ಯಾವಶ್ಯಕವಾಗಿರುತ್ತದೆ; ಆದರೆ ಅದನ್ನು ಇದ್ದಕ್ಕಿದ್ದಂತೆಯೇ ಏಕೆ ತೆಗೆದು ಹಾಕಲಾಯಿತು ? ಇದರ ಉತ್ತರ ಕಾಮಗಾರಿ ಸಂಸ್ಥೆಯ ಬಳಿ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ೧೬ ನವೆಂಬರ್‌ ರಂದು ಘಟನಾಸ್ಥಳಕ್ಕೆ ತಲುಪಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ವಿ.ಕೆ. ಸಿಂಹ ಇವರೂ ‘ಈ ಸುರಂಗದಲ್ಲಿ ತುರ್ತು ನಿರ್ಗಮನವಿದ್ದರೆ, ಸಿಕ್ಕಿಬಿದ್ದ ಕಾರ್ಮಿಕರು ಸುಲಭವಾಗಿ ಹೊರಬರಬಹುದಿತ್ತು’, ಎಂದು ಹೇಳಿದ್ದಾರೆ. ಅಂದರೆ ದುರ್ಘಟನೆಯಾದ ನಂತರ ‘ಒಂದು ವೇಳೆ ಹೀಗಾಗಿದ್ದರೆ, ಹೀಗಾಗಬಹುದಿತ್ತು’, ಎಂದು ಹೇಳುವುದಕ್ಕೆ ಅರ್ಥವಿಲ್ಲ. ಭಾರತದಂತಹ ದೇಶದಲ್ಲಿ ಜನಸಾಮಾನ್ಯನ ಜೀವಕ್ಕೆ ಹೆಚ್ಚುಕಡಿಮೆ ಬೆಲೆಯೇ ಇಲ್ಲ. ಯಾವುದೇ ಭದ್ರತಾ ವ್ಯವಸ್ಥೆ ಇದ್ದರೂ ಅದೆಲ್ಲವೂ ಜನಪ್ರತಿನಿಧಿಗಳಿಗೆ, ಉನ್ನತ ಹುದ್ದೆಯಲ್ಲಿರುವವರಿಗೆ, ಶ್ರೀಮಂತರಿಗೆ ಮಾತ್ರ ಇರುತ್ತದೆ ! ಆದುದರಿಂದ ಇಲ್ಲಿಯೂ ಕಂಪನಿಯು ಕೆಲಸ ಆರಂಭಿಸಿದ ನಂತರ ತುರ್ತು ವ್ಯವಸ್ಥೆಯನ್ನು ಮಾಡಲೇ ಇಲ್ಲ. ಆಘಾತಕಾರಿ ವಿಷಯವೆಂದರೆ ಸುರಂಗಕ್ಕಾಗಿ ರಚಿಸಲಾದ ನೀಲನಕ್ಷೆಯಲ್ಲಿ ಈ ಆಪತ್ಕಾಲೀನ ಮಾರ್ಗವನ್ನು ತೋರಿಸ ಲಾಗಿದೆ; ಆದರೆ ವಾಸ್ತವದಲ್ಲಿ ಅದು ಇಲ್ಲ. ಅಂದರೆ ಕಾಮ ಗಾರಿ ಸಂಸ್ಥೆಯು ಯಾವ ರೀತಿ ಸರಕಾರದ ಕಣ್ಣುಗಳಿಗೆ ಮಣ್ಣೆರೆಚುತ್ತದೆ, ಎಂಬುದು ಗಮನಕ್ಕೆ ಬರುತ್ತದೆ. ಈ ನಡುವೆ ಮಹಾರಾಷ್ಟ್ರದಲ್ಲಿಯೂ ಆಸ್ಪತ್ರೆಯಲ್ಲಿ ಬೆಂಕಿ ಹತ್ತಿಕೊಂಡು ರೋಗಿಗಳು ಸಾವಿಗೀಡಾದ ಘಟನೆಗಳು ವರದಿಯಾಗಿತ್ತು. ಇದರಲ್ಲಿಯೂ ಕಾಗದದ ಮೇಲೆ ಅನೇಕ ಪರಿಹಾರಯೋಜನೆ ಗಳಿದ್ದವು; ಆದರೆ ವಾಸ್ತವದಲ್ಲಿ ಅಲ್ಲಿ ಏನೂ ಇರಲಿಲ್ಲ. ಅದರೊಂದಿಗೆ ತುರ್ತು ಕ್ರಮಗಳಿಗಾಗಿ ಈ ಸಂಸ್ಥೆಯ ಕಡೆಗೆ ಬೇರೆ ಯಾವುದೇ ವ್ಯವಸ್ಥೆ ಇರಲಿಲ್ಲ.

ತಪ್ಪು ತಂತ್ರಗಳ ಬಳಕೆ ?

ವರ್ಷದ ಯಾವುದೇ ಸಮಯದಲ್ಲಿ ‘ಚಾರಧಾಮ’ ತಲುಪಲು ರಸ್ತೆಗಳ ಅಗಲೀಕರಣಕ್ಕಾಗಿ ಬಳಸುವ ತಂತ್ರವೇ ಉತ್ತರಾಖಂಡದ ದುರಂತಕ್ಕೆ ಆಮಂತ್ರಣವೆಂದು ಕೆಲವು ತಜ್ಞರು ಹೇಳಿದ್ದಾರೆ. ಅಯೋಗ್ಯ ಪದ್ಧತಿಯಲ್ಲಿ ಗುಡ್ಡಗಳನ್ನು ಅಗೆಯುವುದು, ಹಾಗೆಯೇ ಇತರ ತಪ್ಪುಗಳಿಂದ ಬಂಡೆಗಳು ಕುಸಿಯುವಂತಹ ಅನಾಹುತ ತಪ್ಪಿದ್ದಲ್ಲ, ಎಂದು ಹೇಳಿದ್ದಾರೆ. ಖ್ಯಾತ ಪರಿಸರತಜ್ಞ ರವಿ ಚೋಪ್ರಾ ಇವರು, ರಸ್ತೆ-ಕಾಮಗಾರಿಯನ್ನು ಮಾಡುವಾಗ ಪರಿಸರದ ಬಗ್ಗೆ ಯೋಗ್ಯ ಕಾಳಜಿ ತೆಗೆದುಕೊಳ್ಳದಿದ್ದರೆ ಸಿಲ್ಕ್ಯಾಯಾದಂತಹ ಘಟನೆಗಳು ಈ ಮುಂದೆಯೂ ಸಂಭವಿಸಲಿವೆ ಎಂದು ಹೇಳಿದ್ದಾರೆ.

ಕಠಿಣ ಕ್ರಮಕೈಗೊಳ್ಳುವುದು ಅಪೇಕ್ಷಿತವಿದೆ !

ಇಲ್ಲಿ ನವಯುಗ ಕಂಪನಿಯ ಅಜಾಗರೂಕತೆಯು ಕಂಡು ಬರುತ್ತದೆ. ಈ ಕಂಪನಿಯು ಇಂದಿಗೂ ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಕೆಲಸ ಮಾಡದಿರುವ ಬಗ್ಗೆ ಒಂದೇ ಒಂದು ಮಾತನ್ನೂ ಹೇಳಿಲ್ಲ. ಆದುದರಿಂದ ಈ ಕಂಪನಿಯ ಮೇಲೆ ಸರಕಾರವು ಕಠಿಣ ಕ್ರಮಕೈಗೊಳ್ಳುವುದು ಅಪೇಕ್ಷಿತವಿದೆ. ಈ ರೀತಿ ಆದರೆ ಮಾತ್ರ ಇತರ ಸ್ಥಳಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಇದೊಂದು ಪಾಠವಾಗುವುದು. ಇದರೊಂದಿಗೆ ಮುಂದಿನ ಕಾಮಗಾರಿಗಳಿಗೆ ಸರಕಾರದ ಮಟ್ಟದಲ್ಲಿ ದೃಢ ನೀತಿಯನ್ನು ರೂಪಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಹೀಗಾದರೆ ಮಾತ್ರ ಇಂತಹ ಘಟನೆಗಳಿಂದ ನಾವು ಏನಾದರೂ ಕಲಿತೆವು, ಎಂದು ಹೇಳಬಹುದು !