ರಾತ್ರಿ ಮಲಗುವಾಗ ಹೊಕ್ಕಳಿಗೆ ತುಪ್ಪದ ಕೆಲವು ಹನಿಗಳನ್ನು ಹಾಕುವುದರಿಂದಾಗುವ ಲಾಭಗಳು

ತುಪ್ಪವು ಚರ್ಮಕ್ಕಾಗಿ ಬಹಳ ಉಪಯುಕ್ತವಾಗಿದೆ. ಹೊಕ್ಕಳಲ್ಲಿ ಸ್ವಲ್ಪ ತುಪ್ಪವನ್ನು ಹಾಕಿದರೆ ಶರೀರದ ಹೆಚ್ಚುವರಿ ಉಷ್ಣತೆಯು ಹೊರಬರಲು ಸಹಾಯವಾಗುತ್ತದೆ. ಅದರಿಂದ  ಮುಖದ ಮೇಲೆ ಮೊಡವೆಗಳು ಬರುವುದು ಕಡಿಮೆಯಾಗುತ್ತದೆ. ಅನೇಕ ಬಾರಿ ಹುಳಿ ಪದಾರ್ಥಗಳನ್ನು ತಿನ್ನುವುದರಿಂದಲೂ ಈ ತೊಂದರೆ ಆಗುತ್ತದೆ. ಇಂತಹ ಸಮಯದಲ್ಲಿ ತುಪ್ಪವು ಶರೀರದಲ್ಲಿನ ತ್ಯಾಜ್ಯ ಪದಾರ್ಥಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಇದರ ಒಟ್ಟು ಪರಿಣಾಮ ಆರೋಗ್ಯದ ಜೊತೆಗೆ ಚರ್ಮದ ಮೇಲೆಯೂ ಕಂಡುಬರುತ್ತದೆ. ಹೊಕ್ಕಳು ಶರೀರದ ಕೇಂದ್ರಬಿಂದು ಆಗಿರುವುದರಿಂದ ಅಲ್ಲಿ ಇತರ ಅಂಗಗಳನ್ನು ಸಂಪರ್ಕಿಸುವ (ಜೋಡಿಸಿ ಇಡುವ) ಆಕ್ಯುಪ್ರೇಶರನ ಅನೇಕ ಬಿಂದುಗಳು (ಆಕ್ಯುಪ್ರೇಶರ ಪಾಯಿಂಟ್ಸ್‌) ಇರುತ್ತವೆ. ಆದುದರಿಂದ ಹೊಕ್ಕಳಲ್ಲಿ ಕೆಲವು ಹನಿ ತುಪ್ಪ ಹಾಕಿ ಮಸಾಜ್‌ ಮಾಡಿದರೆ ಕೀಲು ನೋವು ಕಡಿಮೆಯಾಗುತ್ತದೆ. ತುಪ್ಪದಿಂದ ಚರ್ಮದಂತೆ ಕೂದಲಿಗೂ ಲಾಭವಾಗಿ ಕೂದಲು ಅಕಾಲದಲ್ಲಿ ಬೆಳ್ಳಗಾಗುವುದು ಅಥವಾ ತುಂಬಾ ಒರಟಾಗುವುದು ಇಂತಹ ಸಮಸ್ಯೆಗಳು ದೂರವಾಗಲು ಸಹಾಯವಾಗುತ್ತದೆ. ಹೊಕ್ಕಳಲ್ಲಿ ತುಪ್ಪವನ್ನು ಬಿಡುವುದರಿಂದ ಹೊಟ್ಟೆನೋವು ಮತ್ತು ಕಿಬ್ಬೊಟ್ಟೆನೋವು ಕಡಿಮೆಯಾಗಲು ಸಹಾಯ ವಾಗುತ್ತದೆ. ಸ್ವಲ್ಪ ಓಂ ಪುಡಿ ಅಥವಾ ಚಿಕ್ಕ ಓಂಕಾಳುಗಳನ್ನು ತುಪ್ಪದಲ್ಲಿ ಬೆರಸಿ ಉಪಯೋಗಿಸಬಹುದು. ಇದರಿಂದ ತ್ವರಿತ ಪರಿಹಾರ ಸಿಗುತ್ತದೆ. ತುಪ್ಪದ ಈ ಉಪಾಯವು ಕಿಬ್ಬೊಟ್ಟೆಯಲ್ಲಿನ ಮುಟ್ಟಿನ ನೋವನ್ನು ನಿವಾರಿಸಲು ರಾಮಬಾಣ ಉಪಾಯವಾಗಿದೆ. ಇದಕ್ಕಾಗಿ ಕೆಲವು ತುಪ್ಪದ ಹನಿಗಳನ್ನು ಹೊಕ್ಕಳಲ್ಲಿ ಹಾಕುವುದರ ಜೊತೆಗೆ ನಿಮ್ಮ ಕಿಬ್ಬೊಟ್ಟೆಗೂ ಹಚ್ಚಿ ಮಸಾಜ್‌ ಮಾಡಬಹುದು. ಅನೇಕ ಬಾರಿ ಸ್ನಾನ ಮಾಡುವಾಗ ಅಥವಾ ಶರೀರವನ್ನು ಸ್ವಚ್ಛ ಮಾಡುವಾಗ ಹೊಕ್ಕಳನ್ನು ನಾವು ದುರ್ಲಕ್ಷಿಸುತ್ತೇವೆ. ಇಂತಹ ಸಮಯದಲ್ಲಿ ತುಪ್ಪದಿಂದ ಮಸಾಜ್‌ ಮಾಡಿದರೆ ಅದರೊಳಗಿನ ಜಿಗುಟಾದ ಕೊಳೆ ಮತ್ತು ಹೊಲಸು ದೂರವಾಗಲು ಸಹಾಯವಾಗುತ್ತದೆ.

– ವೈದ್ಯೆ (ಸೌ.) ಮುಕ್ತಾ ಲೋಟಲಿಕರ (೩೧.೭.೨೦೨೩)