ಕಾಮಾಖ್ಯಾ ದೇವಸ್ಥಾನದ ನಿರ್ವಹಣೆಯನ್ನು ಸರಕಾರವಲ್ಲ, ದೇವಾಲಯದ ಅರ್ಚಕರೇ ನೋಡುವರು ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪು !

ಗೌಹಾಟಿ (ಅಸ್ಸಾಂ) – ಭಾರತದ ಪ್ರಸಿದ್ಧ ತೀರ್ಥಸ್ಥಳಗಳಲ್ಲಿ ಒಂದಾದ ಅಸ್ಸಾಂನಲ್ಲಿರುವ ಕಾಮಾಖ್ಯಾ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕಾಮಾಖ್ಯಾ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಗುವಾಹಟಿ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿದ ಸರ್ವೋಚ್ಚ ನ್ಯಾಯಾಲಯವು, ದೇವಾಲಯದ ವ್ಯವಸ್ಥಾಪನೆಯನ್ನು ಸರಕಾರವಲ್ಲ, ದೇವಾಲಯದ ಅರ್ಚಕರು ನೋಡಿಕೊಳ್ಳುತ್ತಾರೆ ಎಂದು ಹೇಳಿದೆ.

(ಸೌಜನ್ಯ – Dinar Info)

೧. ೨೦೧೭ ರಲ್ಲಿ ಗುವಾಹಟಿ ಉಚ್ಚ ನ್ಯಾಯಾಲಯವು ಒಂದು ಆದೇಶವನ್ನು ಹೊರಡಿಸುತ್ತಾ, ‘ದೇವಸ್ಥಾನಕ್ಕೆ ಭಕ್ತರು ಅರ್ಪಿಸುವ ಹಣವನ್ನು ಜಿಲ್ಲಾ ಉಪಾಯುಕ್ತರಲ್ಲಿ ಜಮೆಯಾಗುವುದು. ಈ ಹಣವನ್ನು ದೇವಸ್ಥಾನದ ಒಟ್ಟಾರೆ ದುರಸ್ತಿ ಮತ್ತು ನಿರ್ವಹಣೆಗೆ ಬಳಸಲಾಗುವುದು.’ ಇದಕ್ಕಾಗಿ ಬ್ಯಾಂಕ್‌ ಖಾತೆ ತೆರೆಯುವಂತೆಯೂ ನ್ಯಾಯಾಲಯ ಹೇಳಿತ್ತು.

೨. ಈ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ಸರ್ವೋಚ್ಚ ನ್ಯಾಯಾಲಯ ಮೇಲಿನ ತೀರ್ಪು ನೀಡಿದೆ. ಇದರಿಂದಾಗಿ ಈಗ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ‘ಡೊಲೊಯಿ ಸಮಾಜ’ ಎಂದು ಕರೆಯಲ್ಪಡುವ ದೇವಸ್ಥಾನದ ಪ್ರಧಾನ ಅರ್ಚಕರೇ ನೋಡುವಂತಾಗಿದೆ.

೩. ಈ ನಿರ್ಧಾರಕ್ಕಾಗಿ ನ್ಯಾಯಾಲಯವು ಅಸ್ಸಾಂ ಸರಕಾರದ ಪ್ರತಿಜ್ಞಾಪತ್ರದ ಮುಖ್ಯ ಆಧಾರವನ್ನು ತೆಗೆದುಕೊಂಡಿತು. ಸರಕಾರವು ನ್ಯಾಯಾಲಯಕ್ಕೆ, ಸ್ಥಳೀಯ ಆಡಳಿತದ ನೆರವಿನಿಂದ ಡೋಲೋಯಿ ಸಮುದಾಯದವರು ದೇವಸ್ಥಾನವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿತ್ತು. ಈ ವ್ಯವಸ್ಥೆ ಮುಂದುವರಿಯಬಹುದು. ‘ಪ್ರಧಾನಮಂತ್ರಿ ಡಿವೈನ್‌ ಯೋಜನೆ’ಯಡಿ ಕಾಮಾಖ್ಯಾ ದೇವಸ್ಥಾನವನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿತು. ಬಳಿಕ ಸರ್ವೋಚ್ಚ ನ್ಯಾಯಾಲಯವು ಗುವಾಹಟಿ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತು.

ಸಂಪಾದಕೀಯ ನಿಲುವು

  • ಸರ್ವೋಚ್ಚ ನ್ಯಾಯಾಲಯದ ಈ ಸ್ವಾಗತಾರ್ಹ ತೀರ್ಪಿನ ಆಧಾರದಲ್ಲಿ ದೇಶಾದ್ಯಂತ ಇರುವ ಹಿಂದೂಗಳ ದೇವಾಲಯಗಳ ನಿರ್ವಹಣೆಯನ್ನು ಭಕ್ತರ ಕೈಗೆ ಒಪ್ಪಿಸುವ ಪ್ರಯತ್ನ ನಡೆಯಬೇಕಿದೆ ! ಇದಕ್ಕಾಗಿ ಹಿಂದುತ್ವನಿಷ್ಠ ಸಂಘಟನೆಗಳು ಈಗಲೇ ಟೊಂಕಕಟ್ಟಿ ನಿಲ್ಲಬೇಕು !
  • ಈಗ ಕೇಂದ್ರದ ಭಾಜಪ ಸರಕಾರವೇ ದೇಶದಾದ್ಯಂತ ಸರಕಾರಿಕರಣಗೊಂಡಿರುವ ಸಹಸ್ರಾರು ದೇವಾಲಯಗಳನ್ನು ಭಕ್ತರ ಕೈಗೆ ಒಪ್ಪಿಸಲು ಮುಂದಾಗಬೇಕು ಎಂದು ಹಿಂದೂಗಳಿಗೆ ಅನಿಸುತ್ತಿದೆ !