ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಣಯಕ್ಕೆ ಖಂಡನೆ !

ಬೆಂಗಳೂರು : ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಹೋಗುವ ವಿಚಾರದಲ್ಲಿ ಈ ಹಿಂದೆ ಸಾಕಷ್ಟು ಗಲಾಟೆಗಳು ನಡೆದಿವೆ. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ ತಿಂಗಳು ಅಕ್ಟೋಬರ್ ೨೮ ಮತ್ತು ಅಕ್ಟೋಬರ್ ೨೯ ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ಪರೀಕ್ಷೆಗಳು ನಡೆಯಲಿರುವ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಅಭ್ಯರ್ಥಿಗಳು ಹಾಜರಾಗಬಹುದು ಎಂಬ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಣಯಕ್ಕೆ ಇಂದು ಫ್ರೀಡಂ ಪಾರ್ಕ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್, ರಾಷ್ಟ್ರ ಧರ್ಮ ಮಾಧ್ಯಮದ ಶ್ರೀ.ಸಂತೋಷ್ ಕೆಂಚಂಬಾ ಹಾಗೂ ಶ್ರೀ. ರಾಘವೇಂದ್ರ, ಹಿಂದುತ್ವನಿಷ್ಠರಾದ ಶ್ರೀ. ವಿಶ್ವೇಶ್ವರಯ್ಯ ಸೇರಿದಂತೆ ಹಲವು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಹಿಜಾಬ್ ವಿಚಾರ ಭಾರೀ ಸಂಘರ್ಷಕ್ಕೆ ಕಾರಣವಾಗಿತ್ತು. ಮಾನ್ಯ ಉಚ್ಚ ನ್ಯಾಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ಕಾಲೇಜುಗಳಲ್ಲಿ ಅಲ್ಲಿನ ಸಮವಸ್ತ್ರ ಬಳಕೆ ಮಾಡಲು ಹೇಳಿ ಹಿಜಾಬ್‌ಗೆ ನಿರ್ಬಂಧ ಹೇರಿತ್ತು. ಆದರೆ ಇದೀಗ ಕೆಇಎ ವಿವಿಧ ಮಂಡಳಿಗಳ ಹುದ್ದೆ ಪರೀಕ್ಷೆಗೆ ಹಿಜಾಬ್ ಧರಿಸಲು ಅವಕಾಶ ನೀಡುವ ಮೂಲಕ ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿಗೆ ಅಗೌರವ ತೋರಿಸುವ ಮೂಲಕ ಅಪಮಾನ ಮಾಡಿದೆ. ಇದರ ಮೂಲಕ ರಾಜ್ಯ ಸರಕಾರ ಅಲ್ಪಸಖ್ಯಾತರ ಓಲೈಕೆ ಮಾಡುತ್ತಿದೆಯಾ ಎಂದು ಮೇಲ್ನೋಟಕ್ಕೆ ಗಮನಕ್ಕೆ ಬರುತ್ತದೆ. ನಿಷೇಧಿತ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾದ ಪಿಎಫ್‌ಐನ ಅಂಗ ಸಂಸ್ಥೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಭಾರತದಲ್ಲಿ ಇಸ್ಲಾಮಿಕ್ ಡ್ರೆಸ್ ಕೋಡ್ ತರಲು ಉಡುಪಿಯ ಶಾಲಾ-ಕಾಲೇಜುಗಳಲ್ಲಿ ಪ್ರಾರಂಭ ಮಾಡಿತ್ತು. ಇಂದು ಒಲೈಕೆಯ ಸರಕಾರವು ಕರ್ನಾಟಕ ಉಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು ನೀಡಿದ ಆದೇಶವನ್ನು ಉಲ್ಲಂಘನೆ ಮಾಡಿ ಮತಾಂಧ ಸಂಘಟನೆಗಳ ಬೇಡಿಕೆಗಳಿಗೆ ಮಣಿಯುತ್ತಿದೆ ಎಂದು ಅನಿಸುತ್ತಿದೆ, ರಾಜ್ಯ ಸರಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ನಿರ್ಣಯವನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ಶ್ರೀ. ಸಂತೋಷ್ ಕೆಂಚಾಂಬ ಮಾತನಾಡಿ, ಪ್ರಸ್ತುತ ಹಿಜಾಬ್ ವಿಷಯಕ್ಕೆ ಸಂಬಂಧಪಟ್ಟಂತೆ ಮಾನ್ಯ ಉಚ್ಚ ನ್ಯಾಯಾಲಯವು ಕೂಲಂಕುಷವಾಗಿ ಅಧ್ಯಯನವನ್ನು ಮಾಡಿ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಬರಲು ಅವಕಾಶ ಇಲ್ಲ ಎನ್ನುವ ತೀರ್ಪು ನೀಡಿದ್ದರೂ ರಾಜ್ಯ ಸರಕಾರ ಈ ರೀತಿ ಅನುಮತಿ ನೀಡಿ ಧರ್ಮದ ಭಾವನೆಗೆ ಧಕ್ಕೆ ತರುವಂತಹ ಮತ್ತು ಸಂಘರ್ಷ ನಿರ್ಮಾಣ ಮಾಡುವ ಪ್ರಯತ್ನ ಆಗುತ್ತಿದ್ದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಸಹ ಗಂಭೀರ ಪರಿಣಾಮ ಬೀರುತ್ತದೆ‘ ಎಂದು ಎಚ್ಚರಿಸಿದರು.