ವಾಸ್ತು ಆನಂದದಾಯಕವಾಗಲು ಫ್ಲ್ಯಾಟನಲ್ಲಿ ವಾಸ್ತುಶಾಸ್ತ್ರದ ಉಪಯೋಗ ಹೇಗೆ ಮಾಡಬೇಕು ?

ಪ್ರತಿಯೊಬ್ಬರಿಗೂ ಹೊಸ ಮನೆಕಟ್ಟುವ ಅವಕಾಶ ಸಿಗುವುದಿಲ್ಲ. ಅದರಲ್ಲೂ ಮುಂಬೈ-ಬೆಂಗಳೂರಿನಂತಹ ವ್ಯವಸಾಯಿಕ ನಗರಗಳಲ್ಲಿ ಈಗ ಹೆಚ್ಚು ಪ್ರಮಾಣದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಮತ್ತು ಅವುಗಳಲ್ಲಿ ಚಿಕ್ಕ ಚಿಕ್ಕ ಮನೆಗಳು (ಫ್ಲ್ಯಾಟಗಳು) ಕಂಡುಬರುತ್ತವೆ. ಇಂತಹ ಸಮಯದಲ್ಲಿ ’ಫ್ಲ್ಯಾಟಗಳಲ್ಲಿ ವಾಸ್ತುಶಾಸ್ತ್ರವನ್ನು ಹೇಗೆ ಉಪಯೋಗಿಸಬೇಕು ?’, ಎಂಬುದರ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ. ಸಂಚಿಕೆ ೨೫/೦೩ ರಲ್ಲಿ ಪ್ರಕಟಿಸಿದ ಲೇಖನದ ಮುಂದಿನ ಮತ್ತು ಕೊನೆಯ ಭಾಗವನ್ನು ಕೊಡುತ್ತಿದ್ದೇವೆ.

೭. ಶಾಸ್ತ್ರಕ್ಕನುಸಾರ ಹೇಳಿದ ದಿಕ್ಕು ಖಾಲಿ ಇರಬೇಕು !

ವಾಸ್ತುಶಾಸ್ತ್ರದ ದೃಷ್ಟಿಕೋನದಿಂದ ಯಾವ ದಿಕ್ಕು ಎಲ್ಲಕ್ಕಿಂತ ಒಳ್ಳೆಯದಿರುತ್ತದೆಯೋ, ಆ ಜಾಗವು ಖಾಲಿ ಇರಬೇಕು. ಯಾವುದರಿಂದ ವ್ಯಕ್ತಿಯ ಪ್ರಗತಿ ಹೆಚ್ಚು ಆಗಬಹುದೋ, ಆ ದಿಕ್ಕನ್ನು ’ಇಂಟೀರಿಯರ್ ಡಿಝೈನರ್’ಗಳು ಯಾವಾಗಲೂ ಮುಚ್ಚಿಬಿಡುತ್ತಾರೆ. ಅದರ ಪಕ್ಕದಲ್ಲಿ ಹೆಚ್ಚೆಚ್ಚು ಕಪಾಟುಗಳನ್ನು (ವಾರ್ಡರೊಬ್) ಮಾಡಿಡುತ್ತಾರೆ ಮತ್ತು ಯಾವ ದಿಕ್ಕನ್ನು ಖಾಲಿ ಇಡಬಾರದೋ, ಅದನ್ನೇ ಖಾಲಿ ಇಟ್ಟಿರುತ್ತಾರೆ. ಆದ್ದರಿಂದ ಆ ಮನೆಯಲ್ಲಿ (ಫ್ಲ್ಯಾಟನಲ್ಲಿ) ಅಡಚಣೆ ಮತ್ತು ಕಿರಿಕಿರಿ ತಾನಾಗಿಯೇ ಉದ್ಭವಿಸುತ್ತವೆ. ಅವರಿಗೆ ಈ ಶಾಸ್ತ್ರದ ಅಧ್ಯಯನವಿರುವುದಿಲ್ಲ ಅಥವಾ ಅವರಿಗೆ ಈ ವಿಷಯದ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಹೀಗೆ ಆಗುತ್ತದೆ. ಹಣ ಖರ್ಚು ಮಾಡಿಯೂ ಅದರ ತೊಂದರೆ ಆಗುತ್ತಲೇ ಇರುತ್ತದೆ. ಆದ್ದರಿಂದ ’ಇಂಟೀರಿಯರ್ ಡೆಕೋರೆಶನ್’ ಮಾಡಿ ಕೊಳ್ಳುವ ಮೊದಲೇ ಡೆಕೋರೆಶನ್ ಮಾಡುವ ವ್ಯಕ್ತಿಗೆ, ವಾಸ್ತುಶಾಸ್ತ್ರದ ನಿಯಮಗಳಿಗನುಸಾರ ನಾವು ಫ್ಲ್ಯಾಟ್‌ನ ಇಂಟೀರಿಯರ್ ಡೆಕೋರೆಶನ್ ಮಾಡುವವರಿದ್ದೇವೆ. ನಿಮಗೆ ಅದರ ಬಗ್ಗೆ ತಿಳಿಯದಿದ್ದರೆ, ತಜ್ಞರ ಸಲಹೆ ಪಡೆದು ಅದರಂತೆ ಫ್ಲ್ಯಾಟ್‌ನ ಡೆಕೋರೆಶನ್ ಮಾಡಿರಿ ಎಂದು ಹೇಳಬೇಕು.

೮. ವಾಸ್ತುದೇವತೆ ಮತ್ತು ವಾಸ್ತುಶಾಸ್ತ್ರ

’ಮನೆಯಲ್ಲಿ ಯಾವಾಗಲೂ ಶಾಂತಿ ಇರಬೇಕು, ಸಮೃದ್ಧಿ ಮತ್ತು ಪ್ರಗತಿಯಾಗಬೇಕೆಂದು ವಾಸ್ತುದೇವತೆ ಅಥವಾ ವಾಸ್ತು ಪುರುಷ ಈ ದೇವತೆಯನ್ನು ಸ್ಥಾಪಿಸಲಾಗುತ್ತದೆ. ವಾಸ್ತು ಪುರುಷನನ್ನು ಯಾವಾಗಲೂ ಭೂಮಿಯಲ್ಲಿಯೇ ಹೂಳ ಬೇಕಾಗುತ್ತದೆ ಮತ್ತು ಅವನ ಆ ಸ್ಥಾನವು ಬೇರೆ ಎಲ್ಲಿಯೂ ಇರುವುದಿಲ್ಲ, ಅದು ಆಗ್ನೇಯ ಮೂಲೆಯಲ್ಲಿಯೇ ಇರುತ್ತದೆ. ವಾಸ್ತುಪುರುಷನ ಪ್ರತಿಮೆಯನ್ನು ತಾಮ್ರ ಅಥವಾ ಬಂಗಾರ ದಿಂದ ತಯಾರಿಸಿ ಅದನ್ನು ಯಾವಾಗಲೂ ಮುಖಕೆಳಗೆ ಮಾಡಿಯೇ (ಡಬ್ಬು, ಬೋರಲು) ಇಡಬೇಕಾಗುತ್ತದೆ. ಅವನ ತಲೆಯು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿರಬೇಕು. ಪ್ರತಿಮೆಯನ್ನು ಮಂತ್ರಿಸಿ ಅದರ ಮೇಲೆ ಗಂಧ, ಪುಷ್ಪ, ಜಲ ಮುಂತಾದವುಗಳನ್ನು ಅರ್ಪಿಸಿ ಮಂತ್ರೋಚ್ಚಾರದಿಂದ ವಾಸ್ತುವಿನಲ್ಲಿನ ಚೈತನ್ಯದಲ್ಲಿ ಸಜೀವತೆ ಬರುವಂತೆ ಮಾಡುತ್ತಾರೆ. ಆಗ್ನೇಯ ಮೂಲೆಯಲ್ಲಿ ವಾಸ್ತುನಿಕ್ಷೇಪ ಮಾಡಿದ ನಂತರ ಆ ಜಾಗವನ್ನು ಸಂಪೂರ್ಣ ಮುಚ್ಚಬೇಕಾಗುತ್ತದೆ. ಅದನ್ನು ಮುಂದೆ ಎಂದಿಗೂ ತೆರೆಯಲಿಕ್ಕಿರುವುದಿಲ್ಲ. ಯಾವಾಗಲೂ ಆ ವಾಸ್ತುದೇವತೆಯ ಪಾವಿತ್ರ್ಯವನ್ನು ಕಾಪಾಡಬೇಕು. ಅದರ ಮೇಲೆ ಕಾಲಿಡುವುದು, ಚಪ್ಪಲಿಗಳನ್ನು ಇಡುವುದು ಅಥವಾ ಅದರ ಮೇಲೆ ಕಸಕಡ್ಡಿಗಳನ್ನು ಇಡುವುದು ಹೀಗೆ ಎಂದಿಗೂ ಮಾಡಬಾರದು. ’ವರ್ಷಕ್ಕೊಮ್ಮೆಯಾದರೂ ವಾಸ್ತುದೇವತೆಯ ಪೂಜೆ ಮಾಡಬೇಕು’, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳು ನಡೆದಾಗ ವಾಸ್ತುದೇವತೆಯ ಪೂಜೆ ಮಾಡಿದರೆ ಲಾಭವಾಗುತ್ತದೆ.

೯. ಹೊಸ ಮನೆಯಲ್ಲೂ (ಫ್ಲ್ಯಾಟ) ವಾಸ್ತುಪೂಜೆ ಆಗಬೇಕು !

’ಸ್ವತಂತ್ರ ಕಟ್ಟಡ, ಬಂಗಲೆ ಕಟ್ಟಿದಾಗಲೇ ವಾಸ್ತುಪೂಜೆ ಮಾಡಬೇಕು’, ಎಂಬ ಕಲ್ಪನೆ ಯೋಗ್ಯವಾಗಿಲ್ಲ. ಹೊಸ ಫ್ಲ್ಯಾಟ್ ನಲ್ಲಿಯೂ ವಾಸ್ತುಪೂಜೆಯನ್ನು ಮಾಡಬೇಕು; ಏಕೆಂದರೆ ನಮ್ಮ ಫ್ಲ್ಯಾಟ್ ಇದೇ ನಮ್ಮ ವಾಸ್ತು (ಮನೆ) ಆಗಿರುತ್ತದೆ.

೧೦. ವಾಸ್ತುಪೂಜೆಯ ಜಾಗವನ್ನು ಸರಿ ಮಾಡಿಡಬೇಕು !

ಫ್ಲ್ಯಾಟನ ಕೋಣೆಯಲ್ಲಿನ ಆಗ್ನೇಯ ಮೂಲೆಯಲ್ಲಿ ಒಂದು ೬ ಇಂಚು ಘಿ ೬ ಇಂಚು ಉದ್ದ-ಅಗಲದಷ್ಟು ಟೈಲ್ಸ್ನ್ನು (ನೆಲಹಾಸು) ತೆಗೆದು ೪ ಇಂಚು ತಗ್ಗುತೋಡಿ ಅದರ ನಾಲ್ಕುಬದಿಗಳಲ್ಲಿ ಸಿಮೆಂಟಿನಿಂದ ಗಿಲಾಯಿ ಮಾಡಿಸಿಕೊಳ್ಳಬೇಕು. ನಂತರ ವಾಸ್ತುನಿಕ್ಷೇಪ ಮಾಡುವ ಬ್ರಾಹ್ಮಣರು ಹೇಳಿದಂತೆ ಮಾಡಿ ಪೂಜೆಯಾದ ನಂತರ ಅದರ ಮೇಲೆ ಪುನಃ ಟೈಲ್ಸ್ನ್ನು (ನೆಲಹಾಸನ್ನು) ಗಟ್ಟಿಯಾಗಿ ಕೂರಿಸಬೇಕು. ಇದು ಅತ್ಯಂತ ಸಹಜ ಮತ್ತು ಸುಲಭ ವಿಷಯವಾಗಿದೆ. ಅದರಿಂದ ನಿಜವಾಗಿಯೂ ವಾಸ್ತುಪೂಜೆ ಮತ್ತು ವಾಸ್ತುನಿಕ್ಷೇಪವಾಗುತ್ತದೆ. ಪ್ರತಿಯೊಬ್ಬರಿಗೂ ಹೀಗೆ ಮಾಡಲು ಸಾಧ್ಯವಾಗುತ್ತದೆ. ವಾಸ್ತುಪೂಜೆಯ (ವಾಸ್ತುಶಾಂತಿಯ) ದಿನ ಹೀಗೆ ಸ್ಥಳವನ್ನು ಸಿದ್ಧಪಡಿಸುವುದು ಕಠಿಣವಾಗುತ್ತದೆ, ಸಮಯ ಸಿಗುವುದಿಲ್ಲ. ತಗ್ಗನ್ನು ತಯಾರಿಸಲು ಸಮಯ ತಗಲುತ್ತದೆ. ಆದ್ದರಿಂದ ವಾಸ್ತುಪೂಜೆಯ ಹಿಂದಿನ ದಿನವೇ ಈ ಜಾಗವನ್ನು ತಯಾರಿಸಿಡಬೇಕು, ಇದರಿಂದ ಮರುದಿನ ಬ್ರಾಹ್ಮಣರಿಗೂ ತೊಂದರೆಯಾಗುವುದಿಲ್ಲ.

೧೧. ಪುರೋಹಿತರು ಪೂಜೆಯನ್ನು ಮಾಡುವ ಯಜಮಾನನಿಗೆ ಪೂಜೆಯ ಎಲ್ಲ ಮಾಹಿತಿ ಕೊಡಬೇಕು

ಯಾವಾಗ ನಾವು ಪುರೋಹಿತರಿಗೆ ವಾಸ್ತುಪೂಜೆಯ (ವಾಸ್ತು-ಶಾಂತಿ) ಸಂದರ್ಭದಲ್ಲಿ ಹೇಳುತ್ತೇವೆಯೋ, ಆಗ ಅವರು ’ಯಜಮಾನನಿಗೆ ಈ ರೀತಿ ತಗ್ಗು ತೋಡಿ ಇಡ ಬೇಕು’, ಎಂದು ಹೇಳುವುದು ಅವರ ಕರ್ತವ್ಯವಾಗಿದೆ. ನಮ್ಮ ಅನುಭವ ಹೇಗಿದೆ ಎಂದರೆ, ಹೀಗೆ ಯಾರೂ ಹೇಳುವುದಿಲ್ಲ ಮತ್ತು ನಂತರ ವಾಸ್ತುನಿಕ್ಷೇಪ ಆಗುವುದೇ ಇಲ್ಲ. ’ವಾಸ್ತುಪೂಜೆ ಮಾಡಿದೆವು’, ಎಂದು ಕೇವಲ ಮಾನಸಿಕ ಸಮಾಧಾನ ಸಿಗುತ್ತದೆ. ಇದರಿಂದ ಯಾವುದೇ ಲಾಭ ವಾಗುವುದಿಲ್ಲ; ಆದರೆ ತೊಂದರೆ ಮಾತ್ರ ಖಂಡಿತವಾಗಿಯೂ ಆಗುತ್ತದೆ. ಅದಕ್ಕಿಂತ ಯಾವುದಾದರು ವ್ಯಕ್ತಿ ವಾಸ್ತುಪೂಜೆ ಯನ್ನು ಮಾಡದಿದ್ದರೂ ನಡೆದಿತು; ಆದರೆ ’ವಾಸ್ತು ಪ್ರತಿಮೆಯನ್ನು ಮಂತ್ರಿಸಿದ ನಂತರ ಪ್ರತಿಮೆಯಲ್ಲಿ ಚೈತನ್ಯ ಮತ್ತು ಸಜೀವತೆಯನ್ನು ತುಂಬಿದ ನಂತರ ಅದನ್ನು ನಿಕ್ಷೇಪ (ಹೂಳುವುದು) ಮಾಡದೇ ತೆರೆದಿಡುವುದು’, ಇದು ನಿಷಿದ್ಧ ವಾಗಿದೆ. ಅದು ತೊಂದರೆದಾಯಕವಾಗುತ್ತದೆ.

೧೨. ಪುರೋಹಿತರು ಯಜಮಾನನಿಗೆ ಎಂದಿಗೂ ಶಾಸ್ತ್ರದ ವಿರುದ್ಧ ಕೃತಿ ಮಾಡಲು ಹೇಳಬಾರದು !

ಅತ್ಯಂತ ದುರ್ದೈವದ ಮತ್ತು ಚಿಂತೆಯ ವಿಷಯವೆಂದರೆ, ’ಇಂದಿನ ಬ್ರಾಹ್ಮಣವರ್ಗ, ಅಂದರೆ ಪುರೋಹಿತರು ಈ ವಾಸ್ತುನಿಕ್ಷೇಪದ ಕಡೆಗೆ ಸ್ವಲ್ಪವೂ ಗಮನ ಕೊಡುವುದಿಲ್ಲ. ಅನೇಕ ಬಾರಿ ವಾಸ್ತು ಮುಹೂರ್ತ ಇಲ್ಲದಿರುವಾಗಲೂ ಅವರಿಗೆ ಯಾವ ದಿನ ಸಮಯ ಸಿಗುತ್ತದೆಯೋ ಆ ದಿನವೇ ವಾಸ್ತುಪೂಜೆಯನ್ನು ಮಾಡಿ ಮುಗಿಸುತ್ತಾರೆ. ವಾಸ್ತುಪೂಜೆಯ ಮುಹೂರ್ತಗಳನ್ನು ಪ್ರತಿಯೊಂದು ಪಂಚಾಂಗದಲ್ಲಿ ಸ್ಪಷ್ಟವಾಗಿ ಕೊಟ್ಟಿರುತ್ತಾರೆ, ಆ ದಿನವೇ ವಾಸ್ತುಪೂಜೆಯನ್ನು ಮಾಡಬೇಕು. ಇದರ ಹೊರತು ಈ ಲೇಖನದಲ್ಲಿ ಹೇಳಿಂದತೆಯೇ ವಾಸ್ತುನಿಕ್ಷೇಪವೂ ಆಗಬೇಕು’, ಇದೂ ಸಹ ಸ್ಪಷ್ಟ ಮತ್ತು ಸತ್ಯವಾಗಿದೆ; ಆದರೆ ಅನೇಕ ಸ್ಥಳಗಳಲ್ಲಿ ವಾಸ್ತುಪ್ರತಿಮೆಯನ್ನು ದೇವರಕೋಣೆಯಲ್ಲಿ ಡಬ್ಬಿಯಲ್ಲಿ ಮುಚ್ಚಿಡಲು ಹೇಳುತ್ತಾರೆ ಅಥವಾ ದೇವರ ಕೋಣೆಯಲ್ಲಿ ಬೋರಲು ಮಾಡಿ ಇಡಲು ಹೇಳುತ್ತಾರೆ. ಇದು ಅತ್ಯಂತ ಅಯೋಗ್ಯವಾದುದಾಗಿದೆ ಮತ್ತು ತಪ್ಪಾಗಿದೆ. ಪುರೋಹಿತರು ಈ ರೀತಿ ಯಾವಾಗ ಹೇಳುತ್ತಾರೆಯೋ, ಆಗ ಅವರಿಗೆ ಅದರ ಕೆಟ್ಟ ಫಲವನ್ನು ಅನುಭವಿಸಲೇ ಬೇಕಾಗುತ್ತದೆ; ಆದರೆ ಬಡಪಾಯಿ ಯಜಮಾನನಿಗೂ ಅದರ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಯಜಮಾನರು ’ಪುರೋಹಿತರು ಹೇಳಿದ್ದೆಲ್ಲ ಸತ್ಯವೆಂದು ತಿಳಿಯುತ್ತಾರೆ.

೧೩. ಹೂತಿರುವ ವಾಸ್ತುಪ್ರತಿಮೆಯನ್ನು ಸರಿಸಬೇಡಿ !

ಯಾವುದೇ ಹಳೆಯ ಗ್ರಂಥದಲ್ಲಿ ವಾಸ್ತುಪ್ರತಿಮೆಯನ್ನು ಡಬ್ಬಿಯಲ್ಲಿ ಅಥವಾ ತೆರೆದಿಡಲು ಹೇಳಿಲ್ಲ. ಹೂತಿರುವ ವಾಸ್ತುಪ್ರತಿಮೆಯನ್ನು ಎಂದಿಗೂ ಸರಿಸಬಾರದು ಅಥವಾ ತೆಗೆಯಬಾರದು. ಡಬ್ಬಿಯಲ್ಲಿಟ್ಟ ವಾಸ್ತುಪ್ರತಿಮೆಯನ್ನು ಪ್ರತಿದಿನ ಸರಿಸಲಾಗುತ್ತದೆ. ಇಷ್ಟೇ ಅಲ್ಲ, ದೇವರಕೋಣೆಯ ದಿಕ್ಕು ತಪ್ಪಾಗಿದ್ದರೆ, ಅದನ್ನು ಯೋಗ್ಯ ದಿಕ್ಕಿನಲ್ಲಿಡುವಾಗ ಡಬ್ಬಿಯಲ್ಲಿನ ವಾಸ್ತುಪ್ರತಿಮೆಯನ್ನು ಪುನಃ ದಿಕ್ಕಿಗನುಸಾರ ಸಹಜವಾಗಿ ಸರಿಸಲಾಗುತ್ತದೆ. ಇದರ ಅರ್ಥ ಇದು ಎಲ್ಲ ರೀತಿಯಿಂದ ತಪ್ಪಾಗಿದೆ.
ಒಬ್ಬ ವ್ಯಕ್ತಿಗೆ ಪುರೋಹಿತರು, ”ನಿಮ್ಮಿಂದ ನಿಯಮಗಳನ್ನು ಪಾಲಿಸುವುದು ಇತ್ಯಾದಿಗಳು ಏನು ಸಾಧ್ಯವಾಗ ಲಾರದು ನಂತರ ವಾಸ್ತುಪ್ರತಿಮೆಯ ಕೋಪಕ್ಕೆ ಒಳಗಾಗುತ್ತೀರಿ ಇದರಿಂದ ತುಂಬಾ ತೊಂದರೆಯಾಗುವುದು. ನನ್ನ ಬಳಿ ಕಾಳಜಿಯಿಂದ ಇಡುತ್ತೇನೆ; ಆದ್ದರಿಂದ ನಾನೇ ವಾಸ್ತುಪ್ರತಿಮೆ ಯನ್ನು (ಚಿನ್ನದಿಂದ ಮಾಡಿಸಿಕೊಂಡಿರುವ) ನನ್ನ ಮನೆಗೆ ತೆಗೆದುಕೊಂಡು ಹೋಗುತ್ತೇನೆ” ಎಂದು ಹೇಳಿದರು. ಇಂತಹ ನಿಂದನೀಯ ಕೆಲಸವನ್ನು ಯಾರೂ ಮಾಡಬೇಡಿ. ’ಭಿಕ್ಷುಕ ಮತ್ತು ಗುರುಜಿ ಇವರ ಬಗ್ಗೆ ಗೌರವವನ್ನು ಹೇಗೆ ಹೆಚ್ಚಿಸುವುದು ? ಅವರೊಂದಿಗೆ ಘನತೆಯಿಂದ ಹೇಗೆ ನಡೆದುಕೊಳ್ಳಬಹುದು ?’, ಇದರ ಬಗ್ಗೆ ಎಚ್ಚರಿಕೆ ವಹಿಸಿರಿ. ಈಶ್ವರನು ನಿಮಗೂ ತುಂಬ ತುಂಬ ಕೊಡುವನು. (ಮುಕ್ತಾಯ) – ಶ್ರೀ. ಅರವಿಂದ ವಝೆ (ಆಧಾರ : ಆಧ್ಯಾತ್ಮಿಕ ’ಓಂ ಚೈತನ್ಯ’ ಡಿಸೆಂಬರ್ ೨೦೦೧)

ಇದರ ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿರಿ – https://sanatanprabhat.org/kannada/99648.html