PM Modi Statement : ತಮಿಳು ಭಾಷೆಯ ಬಗ್ಗೆ ಅಭಿಮಾನ ಪಡುವವರು ಕನಿಷ್ಠ ತಮ್ಮ ಸಹಿಯನ್ನಾದರೂ ತಮಿಳು ಭಾಷೆಯಲ್ಲಿ ಮಾಡಬೇಕು! – ಪ್ರಧಾನಿ ಮೋದಿ

ತಮಿಳು ಭಾಷೆ ಮತ್ತು ಪರಂಪರೆ ಜಗತ್ತಿನಾದ್ಯಂತ ತಲುಪಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಸಹ ಅವರು ಹೇಳಿದರು!

ರಾಮೇಶ್ವರಂ (ತಮಿಳುನಾಡು) – ತಮಿಳು ಭಾಷೆ ಮತ್ತು ಪರಂಪರೆ ಜಗತ್ತಿನಾದ್ಯಂತ ತಲುಪಲು ಕೇಂದ್ರ ಸರಕಾರವು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದರು. ರಾಮೇಶ್ವರಂನಲ್ಲಿ ಏಷ್ಯಾದ ಮೊದಲ ‘ವರ್ಟಿಕಲ್ ಲಿಫ್ಟ್’ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು. ಅವರು ಮಾತು ಮುಂದುವರೆಸಿ, ‘‘ನನಗೆ ಕೆಲವೊಮ್ಮೆ ಬಹಳ ಆಶ್ಚರ್ಯವಾಗುತ್ತದೆ. ನನಗೆ ತಮಿಳುನಾಡಿನ ಕೆಲವು ನಾಯಕರಿಂದ ಪತ್ರಗಳು ಬರುತ್ತವೆ; ಆದರೆ ಅವುಗಳಲ್ಲಿ ಒಂದರಲ್ಲೂ ತಮಿಳು ಭಾಷೆಯಲ್ಲಿ ಸಹಿ ಇರುವುದಿಲ್ಲ. ತಮಿಳು ಭಾಷೆಯ ಬಗ್ಗೆ ಅಭಿಮಾನ ಇರುವವರು ಕನಿಷ್ಠ ತಮ್ಮ ಸಹಿಯನ್ನಾದರೂ ತಮಿಳು ಭಾಷೆಯಲ್ಲಿ ಮಾಡಬೇಕು. ಕಳೆದ ೧೦ ವರ್ಷಗಳಲ್ಲಿ ತಮಿಳುನಾಡಿಗೆ ನೀಡಲಾಗುತ್ತಿರುವ ಅನುದಾನದಲ್ಲಿ ಮೂರು ಪಟ್ಟು ಹೆಚ್ಚಳ ಮಾಡಿದ್ದರೂ ಅವರ ಅಳಲು ಇನ್ನೂ ನಿಂತಿಲ್ಲ.’’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ತಮಿಳುನಾಡು ಮತ್ತು ಕೇಂದ್ರ ಸರಕಾರದ ನಡುವೆ ನೇರ ಮುಖಾಮುಖಿ ಏರ್ಪಟ್ಟಿದೆ. ಈ ಹೊಸ ಶಿಕ್ಷಣ ನೀತಿಯ ಮೂರು ಭಾಷಾ ಸೂತ್ರವನ್ನು ತಮಿಳುನಾಡು ತೀವ್ರವಾಗಿ ವಿರೋಧಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ಶಾಲಾ ಶಿಕ್ಷಣದಲ್ಲಿ ಮೂರು ಭಾಷೆಗಳನ್ನು ಕಲಿಯುವ ಬಗ್ಗೆ ಉಲ್ಲೇಖಿಸಲಾಗಿದೆ. ಅದರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯವಾಗಿರಬೇಕು ಎಂದು ಸಹ ನಮೂದಿಸಲಾಗಿದೆ. ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ.

ಸಂಪಾದಕೀಯ ನಿಲುವು

  • ತಮಿಳು ಭಾಷೆಯಷ್ಟೇ ಅಲ್ಲ, ಪ್ರತಿಯೊಂದು ಭಾರತೀಯ ಭಾಷೆಯ ಬಗ್ಗೆ ಅಭಿಮಾನ ಇರುವವರು ತಮ್ಮ ಸಹಿಯನ್ನು ಮಾತೃಭಾಷೆಯಲ್ಲಿ ಮಾಡಬೇಕು; ಆದರೆ ಹೀಗಾಗುತ್ತಿರುವುದು ಕಾಣಿಸುತ್ತಿಲ್ಲ, ಇದು ವಿಷಾದನೀಯ ಸಂಗತಿ!
  • ಕೇಂದ್ರ ಸರಕಾರವು ಪ್ರತಿಯೊಂದು ಭಾರತೀಯ ಭಾಷೆ ಮತ್ತು ಅದರ ಪರಂಪರೆಯನ್ನು ಜಗತ್ತಿನಾದ್ಯಂತ ತಲುಪಿಸಲು ಪ್ರಯತ್ನಿಸಬೇಕು ಎಂದು ಭಾರತೀಯರು ಬಯಸುತ್ತಾರೆ!