ವಾಷಿಂಗ್ಟನ್ (ಅಮೇರಿಕಾ) – ಗಾಜಾ ಪಟ್ಟಿಯಲ್ಲಿ ಯುದ್ಧವನ್ನು ಕೊನೆಗೊಳಿಸುವ ರಷ್ಯಾದ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತಿರಸ್ಕರಿಸಿದೆ. ಗಾಜಾ ಪಟ್ಟಿಯಲ್ಲಿ ನಾಗರಿಕರ ವಿರುದ್ಧದ ಹಿಂಸಾಚಾರವನ್ನು ಕೊನೆಗೊಳಿಸಬೇಕೆಂದು ನಿರ್ಣಯವು ಕರೆ ನೀಡಿತ್ತು. ಇಸ್ರೇಲಿ ಪ್ರಜೆಗಳ ವಿರುದ್ಧ ಹಮಾಸ್ ನಡೆಸಿದ ದೌರ್ಜನ್ಯವನ್ನು ಉಲ್ಲೇಖಿಸದ ಕಾರಣ ಈ ಪ್ರಸ್ತಾಪವನ್ನು ತಿರಸ್ಕರಿಸಲಾಗಿದೆ. 15 ಸದಸ್ಯರ ಭದ್ರತಾ ಮಂಡಳಿಗೆ ನಿರ್ಣಯವನ್ನು ಅಂಗೀಕರಿಸಲು 9 ಮತಗಳ ಅಗತ್ಯವಿತ್ತು. ಈ ಪ್ರಸ್ತಾವನೆಗೆ ಬೆಂಬಲವಾಗಿ ಕೇವಲ 4 ಮತಗಳು ಬಂದರೆ, ವಿರುದ್ಧವಾಗಿ 4 ಮತಗಳು ಚಲಾವಣೆಯಾದವು. ಇತರ ದೇಶಗಳು ತಟಸ್ಥವಾಗಿದ್ದವು. ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್, ಮೊಜಾಂಬಿಕ್ ಮತ್ತು ಗೈಬೊನ್ ಬೆಂಬಲವಾಗಿ ಮತ ಚಲಾಯಿಸಿದರೆ, ಅಮೇರಿಕಾ, ಬ್ರಿಟನ್, ಫ್ರಾನ್ಸ್ ಮತ್ತು ಜಪಾನ್ ವಿರುದ್ಧವಾಗಿ ಮತ ಚಲಾಯಿಸಿದವು.