‘ಕೆನಡಾದಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಮುಚ್ಚಿರಿ !'(ಅಂತೆ) – ಕೆನಡಾದಲ್ಲಿ ಖಲಿಸ್ತಾನಿಗಳ ಬೇಡಿಕೆ

ಒಟ್ಟಾವಾ (ಕೆನಡಾ) – ‘ಸಿಖ್ ಫಾರ್ ಜಸ್ಟೀಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದ್ದಾನೆ. ಜಿ-20 ಶೃಂಗಸಭೆಯಲ್ಲಿ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವಮಾನಿಸಿದ್ದಾರೆ ಎಂದು ಪನ್ನು ಆರೋಪಿಸಿದ್ದಾನೆ. ಭಾರತವು ರಾಯಭಾರ ಕಚೇರಿಯನ್ನು ಮುಚ್ಚದಿದ್ದರೆ, ಜಸ್ಟಿನ್ ಟ್ರುಡೊ ಅವರಿಗೆ ಮಾಡಿರುವ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

‘ಜಿ-20’ ಶೃಂಗಸಭೆಯಲ್ಲಿ ಭಾರತ ಮತ್ತು ಇತರ ದೇಶಗಳು ಟ್ರುಡೊ ಅವರನ್ನು ಅವಮಾನಿಸಿದ್ದಾರೆಂದು ಕೆನಡಾ ಮಾಧ್ಯಮಗಳ ಆರೋಪ

‘ಜಿ 20’ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಭಾರತ ಮತ್ತು ಇತರ ದೇಶಗಳು ಪ್ರಾಮುಖ್ಯತೆ ನೀಡಿಲ್ಲ ಮತ್ತು ಅವರ ಅಪಮಾನ ಮಾಡಿದರು ಎಂದು ಕೆನಡಾದ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಆರೋಪ ಮಾಡಿವೆ. ಕೆನಡಾದ ಒಂದು ವಾರ್ತಾಪತ್ರಿಕೆಯಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ಟ್ರುಡೋ ಅವರು ‘ಜಿ-20’ ನಾಯಕರಿಗಾಗಿ ಆಯೋಜಿಸಿದ್ದ ಔತಣಕೂಟಕ್ಕೂ ಹಾಜರಾಗಿರಲಿಲ್ಲ ಎಂದು ದಾವೆ ಮಾಡಿದೆ. ಇದರ ಹಿಂದಿನ ಕಾರಣವನ್ನು ಕೆನಡಾದ ಪ್ರಧಾನಮಂತ್ರಿ ಕಾರ್ಯಾಲಯ ನೀಡಿಲ್ಲ. ಮತ್ತೊಂದೆಡೆ, ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ, ಕೆನಡಾದಲ್ಲಿ ಹೆಚ್ಚುತ್ತಿರುವ ಖಲಿಸ್ತಾನಿ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿಯವರು ಟ್ರುಡೊ ಅವರನ್ನು ಕೋರಿದ್ದರು.

ಸಂಪಾದಕೀಯ ನಿಲುವು

ಇಂತಹ ಬೇಡಿಕೆಗಳಿಗೆ ಯಾರಾದರೂ ಸೊಪ್ಪು ಹಾಕುತ್ತಾರೆಯೇ ? ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಈ ಖಲಿಸ್ತಾನಿಗಳ ವಿರುದ್ಧ ಕ್ರಮ ಕೈಕೊಂಡು ‘ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದು ತೋರಿಸಬೇಕು !