ಅಯೋಧ್ಯೆಯನ್ನು ವಿಶ್ವದ ಅತಿದೊಡ್ಡ ಧಾರ್ಮಿಕ ಯಾತ್ರಾ ಕೇಂದ್ರವನ್ನಾಗಿ ಮಾಡಲು 32 ಸಾವಿರ ಕೋಟಿ ರೂಪಾಯಿಗಳ ಯೋಜನೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಪ್ರಸ್ತುತ ಅಯೋಧ್ಯೆಯಲ್ಲಿ 32 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ನಿರ್ಮಿಸಲಾಗುತ್ತಿದೆ. ಸರಕಾರ ಅಯೋಧ್ಯೆಯನ್ನು ವಿಶ್ವದ ಅತಿದೊಡ್ಡ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಸಭೆ ನಡೆಸಿದ್ದರು. ಇದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಯ ಆಯುಕ್ತರು ಮತ್ತು ಕಲೆಕ್ಟರ್ ಉಪಸ್ಥಿತರಿದ್ದರು.

320 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ !

ಅಯೋಧ್ಯೆಯಲ್ಲಿ ‘ಮರ್ಯಾದಾ ಪುರುಷೋತ್ತಮ ಶ್ರೀರಾಮ’ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಇದಕ್ಕಾಗಿ 320 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ಈ ವಿಮಾನ ನಿಲ್ದಾಣವನ್ನು 2 ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಶ್ರೀರಾಮ ಮಂದಿರವನ್ನು ವಿಮಾನ ನಿಲ್ದಾಣದಿಂದ 15 ನಿಮಿಷಗಳಲ್ಲಿ ತಲುಪಬಹುದು. ಅಲ್ಲದೆ, ಅಯೋಧ್ಯೆಯಲ್ಲಿ 219 ಕೋಟಿ ರೂಪಾಯಿ ವೆಚ್ಚದಲ್ಲಿ 9 ಎಕರೆ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಖಾಸಗಿ ವಾಹನಗಳ ಮೂಲಕ ಅಯೋಧ್ಯೆಗೆ ಬರುವ ಜನರು ಜನ್ಮಭೂಮಿಗೆ ಒಂದರಿಂದ ಒಂದೂವರೆ ಕಿ.ಮೀ ಮೊದಲು ತಮ್ಮ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಾರೆ. ಬಳಿಕ ಇ-ರಿಕ್ಷಾದಿಂದ ದೇವಸ್ಥಾನಕ್ಕೆ ಹೋಗಬಹುದು.

ಅಯೋಧ್ಯೆ ಜಂಕ್ಷನ್‌ಗೆ 230 ಕೋಟಿ ರೂಪಾಯಿ ಖರ್ಚು !

ಅಯೋಧ್ಯೆ ಜಂಕ್ಷನ್‌ಗೆ (ರಸ್ತೆಗಳು ಅಥವಾ ರೈಲು ಮಾರ್ಗಗಳು ಸೇರಿವ ಸ್ಥಳ) 230 ಕೋಟಿ ವೆಚ್ಚ ಮಾಡಲಾಗುತ್ತಿದೆ. ಹೊಸ ನಿಲ್ದಾಣವನ್ನು ಭವ್ಯವಾಗಿ ನಿರ್ಮಿಸಲಾಗುತ್ತಿದೆ. ಸುಮಾರು 10 ಸಾವಿರ ಚದರ ಮೀಟರ್ ನಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಇದು 125 ಕೊಠಡಿಗಳು, ಹಾಸ್ಟೆಲ್ ಮತ್ತು 24 ಕೋಚ್‌ಗಳ 3 ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದೆ. ರೈಲಿನ ಮೂಲಕ ಶ್ರೀರಾಮ ಮಂದಿರವನ್ನು ತಲುಪಲು 3 ಮಾರ್ಗಗಳಿವೆ. ಕಾಶಿಯಿಂದ ಬಂದರೆ ಅಯೋಧ್ಯೆ ಜಂಕ್ಷನ್ ನಲ್ಲಿ ಇಳಿಯಬೇಕು. ಲಕ್ಷ್ಮಣಪುರಿಯಿಂದ ಬರುವುದಾದರೆ ಅಯೋಧ್ಯೆ ಕ್ಯಾಂಟ್‌ನಲ್ಲಿ ಇಳಿಯಬೇಕು ಮತ್ತು ಗೋರಖ್‌ಪುರದಿಂದ ಬಂದರೆ ರಾಮಘಾಟ್ ನಿಲ್ದಾಣದಲ್ಲಿ ಇಳಿಯಬೇಕು. ರಾಮಮಂದಿರವು ಅಯೋಧ್ಯೆ ಜಂಕ್ಷನ್‌ನಿಂದ ಕೇವಲ 800 ಮೀಟರ್‌ಗಳು, ಅಯೋಧ್ಯೆ ಕ್ಯಾಂಟ್‌ನಿಂದ 9 ಕಿಮೀ ಮತ್ತು ರಾಮಘಾಟ್‌ನಿಂದ 3 ಕಿಮೀ ದೂರದಲ್ಲಿದೆ.

20 ಪಂಚತಾರಾ ಹೋಟೆಲ್‌ಗಳ ನಿರ್ಮಾಣ !

ಅಯೋಧ್ಯೆಯಲ್ಲಿ 20 ಪಂಚತಾರಾ ಹೋಟೆಲ್‌ಗಳನ್ನು ನಿರ್ಮಿಸಲಾಗುವುದು. ಇದರಲ್ಲಿ ತಾಜ್ ಹೋಟೆಲ್ ಸೇರಿದಂತೆ ಹಲವಾರು ದೊಡ್ಡ ಸಂಘಟಿತ ಸಂಸ್ಥೆಗಳನ್ನು ಒಳಗೊಂಡಿದೆ. ಅಲ್ಲದೆ, ‘ವಿವಾಂತಾ’ 100 ಕೊಠಡಿ ಮತ್ತು ‘ಜಿಂಜರ್’ 120 ಕೊಠಡಿಗಳ ಹೋಟೆಲ್‌ಗಳನ್ನು ತೆರೆಯಲಿದೆ. ‘ರಾಡಿಸನ್’ ಮತ್ತು ‘ಓಯೋ ಗ್ರೂಪ್’ ಕೂಡ ಐಷಾರಾಮಿ ಹೋಟೆಲ್‌ಗಳನ್ನು ನಿರ್ಮಿಸುವ ಸಿದ್ಧತೆಯಲ್ಲಿದೆ.

(ಸೌಜನ್ಯ – Punjab Kesari UP)

ಪ್ರತಿ ವರ್ಷ 12 ಕೋಟಿ ಭಕ್ತರ ಆಗಮನ !

ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾದ ನಂತರ ಅಯೋಧ್ಯೆಗೆ ಬರುವ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆ ದ್ವಿಗುಣಗೊಂಡಿದೆ. ಇದರಿಂದಾಗಿ ಶ್ರೀರಾಮ ಮಂದಿರ ನಿರ್ಮಾಣದ ನಂತರ ಇಲ್ಲಿಗೆ ಪ್ರತಿ ತಿಂಗಳು 1 ಕೋಟಿ ಅಂದರೆ ವರ್ಷಕ್ಕೆ 12 ಕೋಟಿ ಭಕ್ತರು ಆಗಮಿಸುತ್ತಾರೆ ಎಂಬ ನಂಬಿಕೆಯನ್ನು ಇಲ್ಲಿನ ಸರಕಾರಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಯೋಧ್ಯೆಯನ್ನು ಕೇವಲ ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಪಡಿಸದೇ ಅದನ್ನು ಹಿಂದೂ ಧರ್ಮವನ್ನು ಕಲಿಯುವ ವಿಶ್ವದರ್ಜೆಯ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಬೇಕು ! ಇದರಿಂದಲೇ ಹಿಂದೂ ಧರ್ಮ ಮತ್ತು ಅದರ ಧಾರ್ಮಿಕ ಸಂಪ್ರದಾಯಗಳನ್ನು ಸಂರಕ್ಷಣೆ ಮತ್ತು ಉತ್ತೇಜಿಸಬಹುದು !