ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳು ಮುಗಿಯುವ ಯಾವುದೇ ;ಲಕ್ಷಣಗಳು ಕಾಣಿಸುತ್ತಿಲ್ಲ. ಯಾವ ಸರಕಾರ ಬಂದರೂ ಮಹಿಳೆಯರ ಮೇಲಿನ ಅತ್ಯಾಚಾರಗಳ ಘಟನೆಗಳು ದಿನೇದಿನೇ ಹೆಚ್ಚಾಗುತ್ತಿವೆ. ಆಗಸ್ಟ್‌ನಲ್ಲಿ ಗೋವಾ ರಾಜ್ಯದಲ್ಲಿ 6 ಅತ್ಯಾಚಾರ ಪ್ರಕರಣಗಳು ನಡೆದಿವೆ. ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ 12 ದೂರುಗಳು ಬಂದಿವೆ. ಗೋವಾದಲ್ಲಿ ಹೆಚ್ಚುತ್ತಿರುವ ಅತ್ಯಾಚಾರದ ಘಟನೆಗಳನ್ನು ತಡೆಗಟ್ಟಲು ಅಲ್ಲಿಯ ಸಾಮಾಜಿಕ ಕಾರ್ಯಕರ್ತೆ ತಾರಾ ಕೆರಕರ್ ರಾಜ್ಯದಲ್ಲಿ ವೇಶ್ಯಾವಾಟಿಕೆಯನ್ನು ಪ್ರಾರಂಭಿಸಬೇಕೆಂದು ಬೇಡಿಕೆಯನ್ನಿಟ್ಟಿದ್ದಾರೆ. ತಾರಾ ಕೇರಕರ್ ಅವರ ಹೇಳಿಕೆಯಂತೆ ಮಾಡುವುದಾದರೆ, ಇನ್ನು ಮುಂದೆ ಪ್ರತಿ ಹಳ್ಳಿಯಲ್ಲಿ ಗ್ರಂಥಾಲಯ ಮತ್ತು ವ್ಯಾಯಾಮಶಾಲೆಗಳ ಜೊತೆಗೆ ವೇಶ್ಯಾಗೃಹವನ್ನು ಪ್ರಾರಂಭಿಸಬೇಕಾಗುವುದು. ಅಂದರೆ, ಯಾರದಾದರೂ ಕಾಮನೆಗಳು ಉದ್ರೇಕಗೊಂಡರೆ, ಕಾಮನೆಗಳ ತೃಪ್ತಿಗಾಗಿ ಗ್ರಾಮಗಳಲ್ಲಿರುವ ವೇಶ್ಯಾಗೃಹಕ್ಕೆ ಹೋಗಬಹುದು. ಇದರಿಂದ ಮುಂದಿನ ಪೀಳಿಗೆಗೂ ವೇಶ್ಯಾಗೃಹಗಳ ಪರಿಚಯವಾಗುತ್ತದೆ. ತಾರಾ ಕೆರಕರ್ ಅವರಿಗೆ ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ನಿಲ್ಲಿಸಲಿಕ್ಕಿದೆಯೋ ಅಥವಾ ಭಾರತವನ್ನು ಅಧೋಗತಿಗೆ ತಳ್ಳಲಿಕ್ಕಿದೆ? ಪ್ರಸ್ತುತ, ದೇಶದಲ್ಲಿ ಎಷ್ಟು ವೇಶ್ಯಾವಾಟಿಕೆಗಳಿವೆ ಮತ್ತು ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ಎಷ್ಟರಮಟ್ಟಿಗೆ ನಿಂತಿದೆ? ಇದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ತಾರಾ ಕೆರಕರ್ ಈ ಉಪಾಯಯೋಜನೆಗಳ ಸುತ್ತಲೂ ಸುತ್ತುತ್ತಿದ್ದಾರೆ; ಆದರೆ ಯಾವುದರಿಂದ ಇವುಗಳನ್ನು ನಿಲ್ಲಿಸಬಹುದೋ, ಆ ಭಾರತೀಯ ಸಂಸ್ಕೃತಿಯ ವರೆಗೆ ಅವರ ಬುದ್ಧಿ ತಲುಪದಿರುವುದು ಚಿಂತಾಜನಕವಾಗಿದೆ. ಇದು ಸಂಪೂರ್ಣ ಸಮಾಜ ವ್ಯವಸ್ಥೆಯ ಸಮಸ್ಯೆಯಾಗಿದೆ.
ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಸರಕಾರ ತನ್ನದೇ ಆದ ಅಬಕಾರಿ ಇಲಾಖೆಯನ್ನು ಆರಂಭಿಸಿತು. ಇದರಿಂದ ಅಕ್ರಮ ಮದ್ಯ ಮಾರಾಟವನ್ನು ಸರಕಾರವೇ ಅಧಿಕೃತಗೊಳಿಸಿತು. ಇದರಿಂದ ಸರಕಾರದ ಖಜಾನೆಗೆ ಹಣ ಆದಾಯವಾಗಿ ಬರಲಾರಂಭಿಸಿತು. ಮುಂದೆ ‘ಈ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು’ ಎಂದು ಮದ್ಯ ಮಾರಾಟವನ್ನು ಸಮರ್ಥಿಸಲು ಮತ್ತಷ್ಟು ಕಾರಣಗಳನ್ನು ಸೇರಿಸಲಾಯಿತು. ಸದ್ಯ ಅಕ್ರಮ ಮದ್ಯ ಮಾರಾಟ ತಡೆಯಲು ಆರಂಭಿಸಿರುವ ಈ ಇಲಾಖೆಯು ಮದ್ಯ ಮಾರಾಟದಿಂದಲೇ ಸರಕಾರದ ಖಜಾನೆಯನ್ನು ತುಂಬಿಸುವ ಕಾರ್ಯವನ್ನು ಪ್ರಾರಂಭಿಸಿದೆ. ಮನೆ ಎಷ್ಟೇ ಗಟ್ಟಿಯಾಗಿದ್ದರೂ, ಸಂಸ್ಕಾರಗಳಿಂದ ಮಾತ್ರ ಅದು ಮನೆಯೆನಿಸುತ್ತದೆ. ಆದುದರಿಂದ ಎಷ್ಟು ರಸ್ತೆಗಳನ್ನು ಮಾಡಲಾಗಿದೆ? ಎಷ್ಟು ಕೈಗಾರಿಕೆಗಳು ಬಂದವು? ಎನ್ನುವುದಕ್ಕಿಂತ ಮನುಷ್ಯ ಎಷ್ಟು ಸುಸಂಸ್ಕೃತನಾದನು? ಇದಕ್ಕನುಸಾರ ಅಭಿವೃದ್ಧಿಯನ್ನು ಅಳೆಯಬೇಕು. ಸದ್ಯದ ಸ್ಥಿತಿಯಲ್ಲಿ ಅಭಿವೃದ್ಧಿ ಇದೆ; ಆದರೆ ಯಾವುದೇ ನೈತಿಕತೆ ಉಳಿದಿಲ್ಲ. ಮಹಿಳೆಯರ ಮೇಲಾಗುವ ಅತ್ಯಾಚಾರಗಳನ್ನು ತಡೆಯಲು ವೇಶ್ಯಾಗೃಹಗಳನ್ನು ತೆರೆಯುವ ಉಪಾಯ ಯೋಜನೆಯೆಂದರೆ ಅಕ್ರಮ ಮದ್ಯ ಮಾರಾಟ ತಡೆಯಲು ಬಾರ್‌ಗಳಿಗೆ ಪರವಾನಗಿ ನೀಡುವಂತೆಯೇ ಆಗಿದೆ. ಪ್ರಸ್ತುತ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಇದೇ ರೀತಿಯ ಮೇಲ್ನೋಟದ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಿಂದ ಸಮಾಜಕ್ಕೆ ನೈತಿಕ ಶಿಕ್ಷಣದ ನಿರ್ದೇಶನವನ್ನು ನೀಡಲಾಗುತ್ತಿಲ್ಲ ಮತ್ತು ಸರಕಾರದ ಮಟ್ಟದಲ್ಲಿಯೂ ಸುಸಂಸ್ಕಾರಕ್ಕಾಗಿ ಪ್ರಯತ್ನಗಳು ನಡೆಯುತ್ತಿಲ್ಲ.
ಅತ್ಯಾಚಾರಿಗಳಿಗೆ ಕಾನೂನಿನಿಂದ ಬುದ್ಧಿ ಬಂದಿದೆಯೇನು ?
ಅಯೋಗ್ಯ ಘಟನೆಗಳನ್ನು ನೈತಿಕತೆಯಿಂದ ತಡೆಯಬಹುದು ಮತ್ತು ಅದನ್ನು ತಡೆಯುವ ಮತ್ತೊಂದು ಮಾರ್ಗವೆಂದರೆ ‘ಶಿಕ್ಷೆಯ ಭಯ’! ನೈತಿಕತೆಯಿಲ್ಲದಿರುವವರನ್ನು ಸರಿದಾರಿಗೆ ತರಲು ಶಿಕ್ಷೆಯ ಮಾರ್ಗವನ್ನೇ ಅವಲಂಬಿಸಬೇಕಾಗುತ್ತದೆ. ಶಿಕ್ಷೆಯ ಭಯವೇ ಅಪರಾಧಿಯನ್ನು ತಡೆಯುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಕಠಿಣ ಕಾನೂನುಗಳಿರಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯು ‘ಶಕ್ತಿ’ ಕಾಯಿದೆಯನ್ನು ಅಂಗೀಕರಿಸಿತು. ಆದರೆ ಈ ಕಾಯಿದೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಲಿಲ್ಲ ಮತ್ತು ಅನುಮೋದನೆ ನೀಡುವ ಸಾಧ್ಯತೆಯಿಲ್ಲ. ತಮಿಳುನಾಡು ರಾಜ್ಯ ಕೂಡ ಇದೇ ರೀತಿಯ ‘ದಿಶಾ ಎಂಬ ಕಾನೂನನ್ನು ಕೆಲವು ವರ್ಷಗಳ ಹಿಂದೆ ಕೇಂದ್ರ ಸರಕಾರಕ್ಕೆ ಅನುಮೋದನೆಗಾಗಿ ಕಳುಹಿಸಿತ್ತು. ಅದಕ್ಕೂ ಕೇಂದ್ರ ಸರಕಾರ ಒಪ್ಪಿಗೆ ನೀಡಿಲ್ಲ. ಇದಕ್ಕೆ ಕಾರಣವೇನೆಂದರೆ, ಈ ಕಾಯಿದೆಗಳ ಪ್ರಕಾರ, ಅತ್ಯಾಚಾರದ ಘಟನೆಯ ತನಿಖೆಯನ್ನು 3 ವಾರಗಳಲ್ಲಿ ಪೂರ್ಣಗೊಳಿಸಿ, ಮತ್ತು ಅಪರಾಧಿಯನ್ನು ಗಲ್ಲಿಗೇರಿಸಲು ಅವಕಾಶವಿದೆ; ಆದರೆ ಈ ಕಾಯಿದೆಯನುಸಾರ ಕ್ರಮ ಕೈಗೊಳ್ಳುವ ಸಾಮರ್ಥ್ಯ ಪೊಲೀಸರಿಗಾಗಲಿ, ಆಡಳಿತಕ್ಕಾಗಲಿ ಇಲ್ಲ. ಅದೇ ರೀತಿ ಇಷ್ಟು ವೇಗವಾಗಿ ತೀರ್ಪು ನೀಡುವಷ್ಟು, ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಮರ್ಥವಾಗಿಲ್ಲ. ಮೂಲದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಮಹಾರಾಷ್ಟ್ರದಲ್ಲಿ 130ಕ್ಕೂ ಹೆಚ್ಚು ಶೀಘ್ರಗತಿಯ ನ್ಯಾಯಾಲಯಗಳಿವೆ.; ಆದರೆ ಈ ನ್ಯಾಯಾಲಯಗಳಲ್ಲಿಯೂ ಪ್ರಕರಣಗಳವಿಚಾರಣೆ ವಿಳಂಬವಾಗುತ್ತಿದೆ. ಹಾಗಾಗಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಭಯ ಉಳಿದಿಲ್ಲ. ಅತ್ಯಾಚಾರದ ಪ್ರಕರಣಗಳಲ್ಲಿ, ‘ಪೋಕ್ಸೊ’ ರೀತಿಯ ಕಾನೂನು ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದೆ; ಆದರೆ ಕಳೆದ ಕೆಲವು ವರ್ಷಗಳಿಂದ ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತಿವೆ. ಆದ್ದರಿಂದ, ಅತ್ಯಾಚಾರಿಗಳಿಗೆ ಶಿಕ್ಷೆ ಮತ್ತು ಕಾನೂನಿನ ದುರುಪಯೋಗ ಈ ಎರಡೂ ಬದಿಯಿಂದ ವಿಚಾರ ಮಾಡುವುದು ಆವಶ್ಯಕವಾಗಿದೆ.
ಕೆಲವು ದಿನಗಳ ಹಿಂದೆ, ಖ್ಯಾತ ನಟಿ ನೀನಾ ಗುಪ್ತಾ ಅವರು ತಮ್ಮ ಮಗಳು ಮಸಾಬಾ ಗುಪ್ತಾ ಅವರ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸುತ್ತಾ, ಮಸಾಬಾಗೆ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ವಾಸಿಸಲು ಅನುಮತಿ ನೀಡಿದ್ದರೆ, ಅವಳಿಗೆ ವಿಚ್ಛೇದನದ ಸಮಯ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ. ತಾಯಿಯಾಗಿ, ಮಗಳ ವಿಚ್ಛೇದನವಾಗಬಾರದು ಎಂದು ಯೋಚಿಸುವುದು ಸ್ವಾಭಾವಿಕವಾಗಿದೆ; ಆದರೆ ‘ಲಿವ್ ಇನ್ ರಿಲೇಶನ್ ಶಿಪ್’ ನಿಂದ ವಿಚ್ಛೇದನ ನಿಲ್ಲುತ್ತದೆ ಎಂದು ಹೇಳುವುದು ಮೂರ್ಖತನವೇ ಆಗಿದೆ. ಇದಕ್ಕೆ ತದ್ವಿರುದ್ಧವಾಗಿ, ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ವಾಸಿಸುತ್ತಿದ್ದ ಅನೇಕ ಸಂಗಾತಿಗಳು ಬೇರ್ಪಟ್ಟಿದ್ದಾರೆ ಮತ್ತು ಅದರಲ್ಲಿ ಚಲನಚಿತ್ರರಂಗದ ನಟ-ನಟಿಯರೂ ಸೇರಿದ್ದಾರೆ. ಚಲನಚಿತ್ರಸೃಷ್ಟಿಯಲ್ಲಿಯೂ ಆಧುನಿಕತೆಯ ಹೆಸರಿನಲ್ಲಿ ಪಾಶ್ಚಿಮಾತ್ಯರನ್ನು ಅಂಧಾನುಕರಣೆ ಮಾಡಲಾಗುತ್ತಿದೆ. ಚಲನಚಿತ್ರಗಳಲ್ಲಿಯೂ ಸಹ ಇದೇ ರೀತಿಯ ಕಥಾವಸ್ತುವನ್ನು ತೋರಿಸಲಾಗುತ್ತದೆ ಮತ್ತು ಆಧುನಿಕತೆಯ ಹೆಸರಿನಲ್ಲಿ ಯುವ ಪೀಳಿಗೆಯು ಅದನ್ನು ವೇಗವಾಗಿ ಅಂಧಾನುಕರಣೆ ಮಾಡುತ್ತವೆ. ಈ ಹಿಂದೆ ಅಪರಿಚಿತರಿಂದ ಅತ್ಯಾಚಾರ ಮತ್ತು ದೌರ್ಜನ್ಯಗಳು ನಡೆಯುವ ಪ್ರಮಾಣ ಅಧಿಕವಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಕನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಅಜ್ಜ ಮೊಮ್ಮಗಳ ಮೇಲೆ, ಸಹೋದರ ಸಹೋದರಿಯ ಮೇಲೆ , ಇಷ್ಟೇ ಏಕೆ, ತನ್ನ ಮಗಳ ಮೇಲೆಯೇ ತಂದೆ ಅತ್ಯಾಚಾರ ನಡೆಸಿರುವ ಘಟನೆ ಘಟಿಸುವವರೆಗೆ ಭಾರತದ ನೈತಿಕತೆ ಕುಸಿದಿದೆ.
ಆದ್ದರಿಂದ, ಈ ಸಮಸ್ಯೆಗಳು ಕೇವಲ ಕಾನೂನಿನ ಬಲದಿಂದ ಪರಿಹಾರವಾಗುವುದಿಲ್ಲ. ಭಾರತದಲ್ಲಿ ಅನೈತಿಕತೆ ಎಷ್ಟು ವೇಗವಾಗಿ ಹರಡುತ್ತಿದೆಯೋ, ಅದನ್ನು ತಡೆಯಲು, ಭಾವಿ ಪೀಳಿಗೆಗೆ ನೈತಿಕ ಶಿಕ್ಷಣವನ್ನು ನೀಡುವುದು ಇದೇ ಅದರ ಮೇಲಿನ ರಾಮಬಾಣ ಪರಿಹಾರವಾಗಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಮ್ಯುನಿಸಂನ ಪ್ರಭಾವವಿದ್ದ ಕಾರಣ, ಭಾರತದ ಶಿಕ್ಷಣ ಪದ್ಧತಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಸೇರಿಸಲಿಲ್ಲ. ಈಗ ಕೇಂದ್ರ ಸರಕಾರ ಪ್ರಕಟಿಸಿರುವ ಹೊಸ ಶಿಕ್ಷಣ ನೀತಿಯಿಂದ ಈ ನೈತಿಕ ಮೌಲ್ಯಗಳ ಶಿಕ್ಷಣ ಆರಂಭಿಸಿದರೆ ಅದು ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿತವಾಗಿಯೂ ತಡೆಯಬಹುದು. ಎಷ್ಟು ರಸ್ತೆಗಳಾದವು? ಎಷ್ಟು ಕೈಗಾರಿಕೆಗಳು ಬಂದವು? ಇದಕ್ಕಿಂತ ಮನುಷ್ಯ ಎಷ್ಟು ಸುಸಂಸ್ಕೃತನಾಗಿದ್ದಾನೆ? ಇದಕ್ಕನುಸಾರವಾಗಿ ಅಭಿವೃದ್ಧಿಯನ್ನು ಅಳೆಯಬೇಕು.