Death Drone Operation : ಮಹಾಕುಂಭ ಪ್ರದೇಶದಲ್ಲಿ ‘ಡೆಥ್ ಡ್ರೋನ್’ ಕಾರ್ಯಾಚರಣೆ !

ಪ್ರಯಾಗರಾಜ, ಜನವರಿ 9 (ಸುದ್ದಿ) – ಮಹಾಕುಂಭ ಕ್ಷೇತ್ರದಲ್ಲಿ ಭದ್ರತಾ ವ್ಯವಸ್ಥೆಯ ದೃಷ್ಟಿಯಿಂದ ಪೊಲೀಸ್ ಆಡಳಿತವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು ಈಗ ‘ಡೆಥ್ ಡ್ರೋನ್‌’ಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಜನವರಿ 9 ರಂದು ಇದನ್ನು ತ್ರಿವೇಣಿ ಸಂಗಮದಲ್ಲಿ ಪೊಲೀಸರು ಪರೀಕ್ಷಾರ್ಥ ಹಾರಾಟ ನಡೆಸಿದರು. ಒಟ್ಟು 5 ‘ಡೆಥ್ ಡ್ರೋನ್’ ವ್ಯವಸ್ಥೆಯನ್ನು ಕಾರ್ಯಾಚರಣೆಗೊಳಿಸುವುದಾಗಿ ಪೊಲೀಸರು ಮಾಹಿತಿ ನೀಡಿದರು. ಪ್ರತಿಯೊಂದು ಡ್ರೋನ್ 6 ಕಿ.ಮೀ ವ್ಯಾಪ್ತಿಯಲ್ಲಿ ಭದ್ರತಾವ್ಯವಸ್ಥೆಯನ್ನು ನೋಡಿಕೊಳ್ಳಲು ಸಾಧ್ಯವಾಗುತ್ತದೆ. 20 ದಿನಗಳ ಹಿಂದೆಯೇ ಕುಂಭ ಕ್ಷೇತ್ರದಲ್ಲಿ ‘ಎಂಟಿ-ಡ್ರೋನ್’ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಅನುಮತಿಯಿಲ್ಲದೆ ಹಾರಿಸಲಾದ ಡ್ರೋನ್‌ಗಳನ್ನು ಈ ವ್ಯವಸ್ಥೆಯಿಂದ ಹೊಡೆದುರುಳಿಸಲಾಗುವುದು ಮತ್ತು ಇದುವರೆಗೆ ಅಂತಹ 2 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.

ಈ ಡ್ರೋನ್ ವ್ಯವಸ್ಥೆ ಹೇಗಿದೆ?

ಸಧ್ಯದ ‘ಡೆಥ್ ಡ್ರೋನ್’ 6 ಕಿಲೋಮೀಟರ್ ವರೆಗಿನ ಪ್ರದೇಶದ ಮೇಲೆ ನಿಗಾವಸುತ್ತದೆ. ಇದರ ಮೂಲಕ, ಡ್ರೋನ್‌ನ ಕಾರ್ಯಾಚರಣೆ ವ್ಯಾಪ್ತಿಯಲ್ಲಿ 6 ಕಿ.ಮೀ ಪ್ರದೇಶದೊಳಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಮುಖದ ನೊಂದಣಿಯನ್ನು ದಾಖಲಿಸುತ್ತದೆ. ಈ ಮುಖವನ್ನು ನೋಂದಾಯಿಸಿದ ನಂತರ, ಅದರ ಮಾಹಿತಿಯನ್ನು ಸಂಬಂಧಿತ ಪೊಲೀಸ್ ಸಂಸ್ಥೆಗೆ ರವಾನಿಸಲಾಗುತ್ತದೆ. ಈ ಡ್ರೋನ್‌ಗಳನ್ನು ಪ್ರತಿಯೊಂದು ವಲಯದಲ್ಲಿನ ಸಿಸಿಟಿವಿ ಕ್ಯಾಮೆರಾಗಳಿಗೆ ಜೋಡಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಕಂಡುಬಂದರೆ, ಮಾಹಿತಿಯನ್ನು ಈ ವ್ಯವಸ್ಥೆಗೆ ಕಳುಹಿಸಲಾಗುತ್ತದೆ ಮತ್ತು ಆ ವ್ಯಕ್ತಿಯು ಕುಂಭ ಕ್ಷೇತ್ರದ ಎಲ್ಲೇ ಇದ್ದರೂ ಅವನ ಮೇಲೆ ನಿಗಾ ಇಡಲಾಗುತ್ತದೆ ಮತ್ತು ಯಾವುದೇ ಕುಕೃತ್ಯಗಳು ನಡೆಯುತ್ತಿದ್ದರೆ, ಪೊಲೀಸರು ಅವನನ್ನು ಪತ್ತೆಹಚ್ಚಿ ಅವನ ಅಥವಾ ಅವಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಲ್ಲಿ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದರ ಮೂಲಕ, ಕುಂಭ ಕ್ಷೇತ್ರಕ್ಕೆ ಬರುವ ಜನರ  ಸಂಖ್ಯೆಯನ್ನು ಕೂಡ (ಒಟ್ಟು ಸಂಖ್ಯೆ) ದಾಖಲಿಸಲಾಗುತ್ತದೆ.