Canada PM Race : ಖಲಿಸ್ತಾನಿಗಳನ್ನು ಟೀಕಿಸುವ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ, ಕೆನಡಾದ ಪ್ರಧಾನಿ ಎಂದು ದಾವೆ !

ಟೊರೊಂಟೊ (ಕೆನಡಾ) – ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ನಂತರ ಶೀಘ್ರದಲ್ಲೇ ನೂತನ ಪ್ರಧಾನಿಯನ್ನು ನೇಮಿಸಲಾಗುವುದು. ಇದಕ್ಕಾಗಿ ಆಡಳಿತಾರೂಢ ಲಿಬರಲ್ ಪಕ್ಷದಿಂದ ಒಬ್ಬ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ನೂತನ ನಾಯಕರ ಪಟ್ಟಿಯಲ್ಲಿ ಹಲವು ಹೆಸರುಗಳಿವೆ. ಇದರಲ್ಲಿ ಭಾರತೀಯ ಮೂಲದ 3 ಜನರು ಸೇರಿದ್ದಾರೆ. ಈ ಸಂಸದರಲ್ಲಿ ಒಬ್ಬರಾದ ಚಂದ್ರ ಆರ್ಯ ಅವರು ಈಗ ಪ್ರಧಾನ ಮಂತ್ರಿ ಹುದ್ದೆಯ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ.

‘X’ ನಲ್ಲಿ ಪೋಸ್ಟ್ ಮಾಡಿದ ಚಂದ್ರ ಆರ್ಯ ಇವರು, ಅನೇಕ ಕೆನಡಿಯನ್ನರು, ವಿಶೇಷವಾಗಿ ಯುವ ಪೀಳಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದುಡಿಯುವ ಮಧ್ಯಮ ವರ್ಗ ಇಂದು ಕಷ್ಟದಲ್ಲಿದೆ. ಅನೇಕ ಕುಟುಂಬಗಳು ಬಡತನಕ್ಕೆ ಸಿಲುಕುತ್ತಿವೆ. ಕೆನಡಾಕ್ಕೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರದ ನಾಯಕತ್ವದ ಅಗತ್ಯವಿದೆ. ನಮ್ಮ ಆರ್ಥಿಕತೆಯನ್ನು ಬಲಪಡಿಸುವ, ಭರವಸೆಯನ್ನು ಪುನಃಸ್ಥಾಪಿಸುವ ಮತ್ತು ಎಲ್ಲಾ ಕೆನಡಿಯನ್ನರಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವ ನಾಯಕತ್ವ ನಮಗೆ ಬೇಕು. ನಾನು ಈ ಜವಾಬ್ದಾರಿಯನ್ನು ವಹಿಸಿಕೊಂಡು ಕೆನಡಾವನ್ನು ಅದರ ಮುಂದಿನ ಪ್ರಧಾನಿಯಾಗಿ ಮುನ್ನಡೆಸಲು ಎದುರು ನೋಡುತ್ತಿದ್ದೇನೆ’, ಎಂದು ಹೇಳಿದರು.

2006 ರಲ್ಲಿ ಕರ್ನಾಟಕದಿಂದ ಕೆನಡಾಕ್ಕೆ ತೆರಳಿದ ಚಂದ್ರ ಆರ್ಯ, ಮೂಲತಃ ರಾಜ್ಯದ ತುಮಕೂರಿನ ಸಿರಾ ತಾಲೂಕಿನವರು. ಆರ್ಯ ಧಾರವಾಡದ ‘ಕೌಸಾಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್’ನಿಂದ ಎಂಬಿಎ ಮುಗಿಸಿದರು. 2015 ರಲ್ಲಿ ಮೊದಲ ಬಾರಿಗೆ ಫೆಡರಲ್ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದು ಸಂಸತ್ತನ್ನು ತಲುಪಿದರು. ಆರ್ಯ ಅವರು ಖಲಿಸ್ತಾನಿಯರ ಚಟುವಟಿಕೆಗಳನ್ನು ಆಗಾಗ್ಗೆ ಟೀಕಿಸಿದ್ದಾರೆ.