ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕನ ಬಂಧನ

  • ಬಾಲಕಿಯನ್ನು ಗರ್ಭಪಾತ ಮಾಡಿಸಿಕೊಳ್ಳಲು ಒತ್ತಡ ಹೇರಿದ್ದ ಆರೋಪಿಯ ಪತ್ನಿಯನ್ನೂ ಬಂಧಿಸಲಾಗಿದೆ

  • ಸಂತ್ರಸ್ತೆ ಆರೋಪಿಯ ನಿಧನ ಹೊಂದಿದ ಸ್ನೇಹಿತನ ಮಗಳು !

ನವ ದೆಹಲಿ – ದೆಹಲಿ ಸರಕಾರದ ಆಡಳಿತದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪಸಂಚಾಲಕ ಹುದ್ದೆಯಲ್ಲಿರುವ ಅಧಿಕಾರಿಯು ತನ್ನ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿ ಅವಳನ್ನು ಗರ್ಭಿಣಿಗೊಳಿಸಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆತನ ಪತ್ನಿಯನ್ನೂ ಬಂಧಿಸಲಾಗಿದೆ. ದೆಹಲಿ ಸರಕಾರ ಸದರಿ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. ಸಂತ್ರಸ್ತ ಬಾಲಕಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು; ಆದರೆ ಆತನನ್ನು ಬಂಧಿಸಿರಲಿಲ್ಲ. ಇದರಿಂದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಇವರು ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ಈ ಪ್ರಕರಣದಲ್ಲಿ ಕ್ರಮ ಕೈಕೊಳ್ಳುವಂತೆ ಆದೇಶಿಸಿದ್ದರು. ತದನಂತರ ಪೊಲೀಸರು ಆರೋಪಿ ಅಧಿಕಾರಿಯನ್ನು ಬಂಧಿಸಿದರು. (ಈ ರೀತಿಯ ಆದೇಶವನ್ನು ಏಕೆ ನೀಡಬೇಕಾಗುತ್ತದೆ ? ಪೊಲೀಸರಿಗೆ ತಮ್ಮ ಕರ್ತವ್ಯದ ಬಗ್ಗೆ ಅರಿವು ಇರುವುದಿಲ್ಲವೇ? – ಸಂಪಾದಕರು)

ಸಂತ್ರಸ್ಥೆ ಬಾಲಕಿಯು ಈ ಅಧಿಕಾರಿಯ ಸ್ನೇಹಿತನ ಮಗಳಾಗಿದ್ದಳು. ಸ್ನೇಹಿತನ ನಿಧನದ ಬಳಿಕ, ಅಧಿಕಾರಿಯು ಅವಳನ್ನು ತನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ದನು. ನವೆಂಬರ್ 2020 ರಿಂದ ಜನವರಿ 2021 ರ ಕಾಲಾವಧಿಯಲ್ಲಿ ಈ ಅಧಿಕಾರಿಯು ಅವಳ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದನು. ಇದರಿಂದ ಆ ಹುಡುಗಿ ಗರ್ಭಿಣಿಯಾಗಿದ್ದಳು. ಈ ಅಧಿಕಾರಿಯ ಪತ್ನಿಯು ಹುಡುಗಿಗೆ ಗರ್ಭಪಾತ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಳು. (ಇಂತಹ ಸ್ತ್ರೀಯರು ಸ್ತ್ರೀಜಾತಿಗೆ ಕಳಂಕವಾಗಿದ್ದಾರೆ ! – ಸಂಪಾದಕರು)

ಸಂಪಾದಕೀಯ ನಿಲುವು

ಇಂತಹ ನಂಬಿಕೆದ್ರೋಹಿಗೆ ಮತ್ತು ಸಂಬಂಧಗಳಿಗೆ ಮಸಿ ಬಳಿಯುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !