ಗೋಧ್ರಾ ಹತ್ಯಾಕಾಂಡ ಪ್ರಕರಣ: ಸರ್ವೋಚ್ಚ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮುಸ್ಲಿಮರ ಜಾಮೀನು ಅರ್ಜಿ ತಿರಸ್ಕೃತ !

ನವ ದೆಹಲಿ – ಫೆಬ್ರವರಿ 27, 2002 ರಂದು ಗುಜರಾತ್‌ನ ಗೋಧ್ರಾದಲ್ಲಿನ ಸಾಬರಮತಿ ಎಕ್ಸ್‌ಪ್ರೆಸ್ ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶೌಕತ್ ಯೂಸುಫ್, ಬಿಲಾಲ್ ಅಬ್ದುಲ್ಲಾ ಮತ್ತು ಸಿದ್ದಿಕಿ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದು ಅತ್ಯಂತ ಗಂಭೀರವಾದ ಪ್ರಕರಣವಾಗಿದೆ ಎಂದು ತಿಳಿಸಿ ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಸಾಬರಮತಿ ಎಕ್ಸ್‌ಪ್ರೆಸ್ ಬೋಗಿಗಳಿಗೆ ಬೆಂಕಿ ಹಚ್ಚಿದ ನಂತರ ಗುಜರಾತ್‌ನ ಅನೇಕ ಸ್ಥಳಗಳಲ್ಲಿ ಗಲಭೆ ಭುಗಿಲೆದ್ದಿತ್ತು.

ಫೆಬ್ರವರಿ 27, 2002 ರಂದು, ಮುಸ್ಲಿಮರ ಗುಂಪು ಅಯೋಧ್ಯೆಯಿಂದ ಬರುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ನ ಬೋಗಿಯನ್ನು ಜ್ವಲನಶೀಲ ಪದಾರ್ಥವನ್ನು ಎಸೆದು ಸುಟ್ಟು ಹಾಕಿತ್ತು. ಕರಸೇವಕರಿಂದ ತುಂಬಿದ್ದ ಈ ಬೋಗಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 59 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ವಿಶೇಷ ನ್ಯಾಯಾಲಯವು ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಗುಜರಾತ್ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ತದನಂತರ ಅಪರಾಧಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇನ್ನೂ ಬಾಕಿ ಇದೆ. ಈ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸೂಕ್ತ ನ್ಯಾಯಪೀಠದ ಮುಂದೆ ಇಡಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಏಪ್ರಿಲ್ 21, 2023 ರಂದು, ಸರ್ವೋಚ್ಚ ನ್ಯಾಯಾಲಯವು ಇದೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ 8 ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿತ್ತು.