‘ರಾಜಾ ಕಾಲಸ್ಯ ಕಾರಣಮ್ |’, ಎಂಬುದನ್ನು ನಾವು ಕೇಳಿದ್ದೇವೆ. ಇದರ ಅರ್ಥ ರಾಜನೇ ಕಾಲಕ್ಕೆ ಕಾರಣನಾಗಿದ್ದಾನೆ. ಉತ್ತಮ ರಾಜ್ಯದ ನಿರ್ಮಿತಿಗೆ ಆದರ್ಶ ರಾಜನಿರುವುದು ಆವಶ್ಯಕವಾಗಿದೆ. ರಾಜ್ಯದಲ್ಲಿ ಪ್ರಕೋಪ(ಅತಿರೇಕ) ಘಟಿಸಿದರೆ ಅದಕ್ಕೆ ರಾಜನೇ ಕಾರಣನಾಗಿರುತ್ತಾನೆ; ಆದರೆ ರಾಜನನ್ನು ಆರಿಸುವವರು ಯಾರು ? ಪ್ರಸ್ತುತ ಬಹುಮತ ಮತ್ತು ಚುನಾವಣೆಯ ಆಧಾರದಲ್ಲಿ ರಾಜನನ್ನು ಚುನಾಯಿಸುವ ಪದ್ಧತಿ ಇದೆ. ಪ್ರಜೆಯಲ್ಲಿನ ಒಬ್ಬನನ್ನು ರಾಜನೆಂದು ಆಯ್ಕೆ ಮಾಡಲಾಗುತ್ತದೆ; ಆದರೆ ಇಂದು ಸಮಾಜದಲ್ಲಿ ನೈತಿಕತೆ ಮತ್ತು ಸಾತ್ತ್ವಿಕತೆಯ ಪ್ರಮಾಣ ಎಷ್ಟೊಂದು ಕುಸಿದಿದೆ ಎಂದರೆ, ಪ್ರಜೆ ಗಳಲ್ಲಿ ಸತ್ಯ-ಅಸತ್ಯ, ಯೋಗ್ಯ-ಅಯೋಗ್ಯ, ಏನು ಮಾಡಬೇಕು ? ಮತ್ತು ಏನು ಮಾಡಬಾರದು ? ಈ ಸಾಮಾನ್ಯಜ್ಞಾನದ ಅಭಾವವಿದೆ. ಆದುದರಿಂದ ಇಂದಿನ ಪ್ರಜೆ ಅಯೋಗ್ಯ ಕೃತಿ, ಅಯೋಗ್ಯ ವಿಚಾರ ಮತ್ತು ಅಯೋಗ್ಯ ನಿರ್ಣಯ ತೆಗೆದು ಕೊಳ್ಳುತ್ತಿದೆ. ಯಾವುದು ಸರಿ ಎಂದು ವಿವೇಚಿಸುವ ಸಾಮರ್ಥ್ಯ ವನ್ನು ಜನರು ಕಳೆದುಕೊಂಡಿದ್ದಾರೆ. ‘ಸಮಾಜ ಮತ್ತು ರಾಷ್ಟ್ರದ ಹಿತಕ್ಕಿಂತ ತಮಗೇನು ಲಾಭವಿದೆ ?’, ಎಂಬ ವಿಚಾರ ಮಾಡುವ ಪ್ರಜೆಯ ರಾಜ್ಯವನ್ನು ಪ್ರಸ್ತುತ ನಾವು ನೋಡುತ್ತಿದ್ದೇವೆ.
‘ಯಥಾ ರಾಜ, ತಥಾ ಪ್ರಜಾ’ ಎಂಬುದನ್ನು ನಾವು ಕೇಳಿದ್ದೇವೆ. ತ್ರೇತಾಯುಗದಲ್ಲಿ ಮಾರ್ಯಾದಾ ಪುರುಷೋತ್ತಮ ಆದರ್ಶ ರಾಜ ಪ್ರಭು ಶ್ರೀರಾಮನು ಸ್ವಂತ ಸುಖಕ್ಕಿಂತ ತನ್ನ ಪ್ರಜೆಯ ಸುಖ, ಶಾಂತಿ, ಸಮಾಧಾನವನ್ನೇ ಕೇಂದ್ರಸ್ಥಾನದಲ್ಲಿಟ್ಟು ರಾಜ್ಯಾಡಳಿತವನ್ನು ನಡೆಸಿದನು. ಆದುದರಿಂದ ಪ್ರಜೆಯು ಸಹ ಪ್ರಾಮಾಣಿಕ, ಸಾತ್ತ್ವಿಕ ಮತ್ತು ನಿಸ್ವಾರ್ಥಿ ಆಗಿದ್ದು ರಾಜನನ್ನು ದೇವರೆಂದು ತಿಳಿದು ರಾಜನ ಆಜ್ಞೆಗಳನ್ನು ಯಥಾವತ್ತಾಗಿ ಪಾಲಿಸುತ್ತಿದ್ದರು. ರಾಜ ಮತ್ತು ಪ್ರಜೆ ಇಬ್ಬರೂ ಏಕರೂಪರಾಗಿದ್ದರು. ಪ್ರಜೆಗೆ ದುಃಖವಾದರೆ, ರಾಜನಿಗೆ ದುಃಖವಾಗುತ್ತಿತ್ತು. ರಾಜನ ದುಃಖದಲ್ಲಿ ಪ್ರಜೆಗಳು ಪಾಲ್ಗೊಳ್ಳುತ್ತಿದ್ದರು.
ಆದರ್ಶ ರಾಜ, ಆದರ್ಶ ಪ್ರಜೆ, ಆದರ್ಶ ರಾಜ್ಯಾಡಳಿತ ಎಂದರೇ ರಾಮರಾಜ್ಯ !
ಪ್ರಜೆಗಳು ಅಥವಾ ರಾಜನು ಅಧರ್ಮಿಯಾದ ರಾಜ್ಯಕ್ಕೆ ಏನೆನ್ನ ಬಹುದು ? ರಾಜ್ಯವು ಅರಾಜಕತೆಯ ತುತ್ತತುದಿಗೆ ಹೋದಾಗ ಕೈಬೆರಳಣಿಕೆಯಷ್ಟು ಸಾತ್ತ್ವಿಕ ಜನರು ಭಗವಂತನಿಗೆ ಶರಣಾಗುತ್ತಾರೆ ಮತ್ತು ಅವನ ಮೇಲೆ ಎಲ್ಲ ಭಾರವನ್ನು ಒಪ್ಪಿಸುತ್ತಾರೆ. ಅವನ ಆಗಮನದ ದಾರಿಯನ್ನು ಕಾಯುತ್ತಾ ಭಗವಂತನ ವಚನದ ಸ್ಮರಣೆ ಮಾಡುತ್ತಾರೆ. ಪ್ರಸ್ತುತ ಇದೇ ಸ್ಥಿತಿ ಇದೆ. ಆದುದರಿಂದ ಭಗವಂತನಿಗೆ ನಾವು ಶರಣಾಗುವುದೊಂದೇ ಮಾರ್ಗ ಉಳಿದಿದೆ.
– ಶ್ರೀ. ಗುರುಪ್ರಸಾದ ಗೌಡ, ಮಂಗಳೂರು (೫.೭.೨೦೨೩)