೧. ‘ನ್ಯೂರೋ ವಾರ್‌ಫೇರ್’ ಎಂದರೇನು ?
‘ಚೀನಾವು ಭಾರತ, ಅಮೇರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ವಿರುದ್ಧ ಒಂದು ‘ಮಲ್ಟಿ ಡೊಮೈನ್ ವಾರ್’ (ವಿವಿಧ ಕ್ಷೇತ್ರಗಳಲ್ಲಿನ ಯುದ್ಧ) ಮಾಡುತ್ತಿದೆ. ಇದನ್ನು ‘ಅನಿಯಂತ್ರಿತ ಯುದ್ಧ’ (unrestricted war) ಎಂದೂ ಕರೆಯುತ್ತಾರೆ. ಯಾವುದೇ ಯುದ್ಧ ನಡೆಯದ ಶಾಂತಿಯ ಕಾಲದಲ್ಲಿ ನಮಗೆ ನಮ್ಮ ಪ್ರತಿಸ್ಪರ್ಧಿ ದೇಶಗಳಿಗೆ ‘ನಾವು ಯುದ್ಧದಲ್ಲಿ ಸೋತಿದ್ದೇವೆ. ನಾವು ಚೀನಾದ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಚೀನಾವು ಅತ್ಯಂತ ಶಕ್ತಿಶಾಲಿಯಾಗಿದೆ. ನಾವು ಚೀನಾದ ಮಾತನ್ನು ಕೇಳಬೇಕು’ ಈ ರೀತಿ ಯೋಚಿಸಲು ಅನಿವಾರ್ಯಗೊಳಿಸುವುದು’, ಈ ‘ನ್ಯೂರೋ ವಾರ್‌ಫೇರ್’ ಉದ್ದೇಶವಾಗಿದೆ. ಇದೊಂದು ಮಾನಸಿಕ ಯುದ್ಧವೂ ಹೌದು. ಗಾಲ್ವಾನ್ ಯುದ್ಧದ ಸಮಯದಲ್ಲಿ ಭಾರತವು ಚೀನಾದ ಮಾನಸಿಕ ಯುದ್ಧವನ್ನು ಅನುಭವಿಸಿದೆ. ಆ ಸಮಯದಲ್ಲಿ, ಗಾಲ್ವಾನ್‌ನಲ್ಲಿ ಚೀನಾದ ಬಲಿಷ್ಠ ಶಕ್ತಿಯಿದೆ. ಚೀನಾದ ಬಳಿ ಸಾಕಷ್ಟು ಶಸ್ತ್ರಾಸ್ತ್ರಗಳಿವೆ. ೫೦ ರಿಂದ ೬೦ ಸಾವಿರ ಚೀನಾ ಸೈನಿಕರು ನಮ್ಮ ಗಡಿಗೆ ಬಂದಿದ್ದಾರೆ. ಅವರಲ್ಲಿ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳೂ ಇವೆ. ಚೀನಾವು ಭಾರತಕ್ಕಿಂತ ಶ್ರೇಷ್ಠವಿದೆ’, ಎಂದು ಹೇಳಲಾಗುತ್ತಿತ್ತು; ಆದರೆ ಚೀನಾಗೆ ಪ್ರತ್ಯುತ್ತರ ನೀಡಲು ಭಾರತದ ಸಿದ್ಧತೆ ಇದೆ ಎಂದು ಹೇಳಲಾಗುತ್ತಿರಲಿಲ್ಲ. ಅಂದರೆ, ಈ ಮಾನಸಿಕ ಯುದ್ಧವು ಭಾರತದ ರಾಜಕೀಯ ನಾಯಕತ್ವ ಮತ್ತು ಸೇನೆಯ ಮೇಲೆ ಪರಿಣಾಮ ಬೀರಲಿಲ್ಲ; ಆದರೆ ನಮ್ಮ ಮಾಧ್ಯಮಗಳ ಮೇಲಾಗಿತ್ತು. ಇದರಿಂದಾಗಿ ಮಾಧ್ಯಮಗಳಲ್ಲಿ ‘ಭಾರತಕ್ಕಿಂತ ಚೀನಾ ಶ್ರೇಷ್ಠ’ ಎಂಬಂತಹ ಲೇಖನಗಳು ಮುದ್ರಣಗೊಂಡಿದ್ದವು.
ಈಗ ಚೀನಾವು ಹೊಸ ಯುದ್ಧವನ್ನು ಆರಂಭಿಸಿದೆ. ಇದು ‘ನ್ಯೂರೋಲಾಜಿಕಲ್ ವೆಪನ್ಸ್’ಗಳ (ವ್ಯಕ್ತಿಗಳ ಮೆದುಳಿನ ಮೇಲೆ ಪ್ರಯೋಗ ನಡೆಸಿ ಸೂಕ್ಷ್ಮ ಕಿರಣಗಳ ಮೂಲಕ ಅವರ ವಿಚಾರಸರಣಿಯನ್ನು ಬದಲಾಯಿಸುವುದು) ಸಹಾಯದಿಂದ ಜಗತ್ತಿನ ಅಥವಾ ಭಾರತದ ವಿರುದ್ಧ ಹೋರಾಡುವ ಯುದ್ಧವಾಗಿದೆ. ವಿಜ್ಞಾನಿಗಳು ವ್ಯಕ್ತಿಯ ವಿಚಾರಗಳನ್ನು ಬದಲಾಯಿಸಲು ಅವರ ಮೆದುಳಿನ ಮೇಲೆ ಪ್ರಯೋಗ ಮಾಡುತ್ತಾರೆ. ಅಂತೆಯೇ, ವ್ಯಕ್ತಿಯ ಮೆದುಳಿನ ಮೇಲೆ ಪರಿಣಾಮ ಬೀರುವ ಬೆಳಕಿನ ಸೂಕ್ಷ್ಮ ಕಿರಣಗಳನ್ನು (ಲೈಟ್ ರೇಡಿಯೆಶನ್ಸ್) ಬಿಡಲಾಗುತ್ತವೆ. ಆ ಮಾಧ್ಯಮದ ಮೂಲಕ ಸಂಬಂಧಪಟ್ಟ ವ್ಯಕ್ತಿಯ ವಿಚಾರಗಳನ್ನು ಬದಲಾಯಿಸಲಾಗುತ್ತದೆ. ಇದಕ್ಕಾಗಿ ವ್ಯಕ್ತಿಯ ಸಂಪರ್ಕಕ್ಕೆ ಬರುವ ಅಗತ್ಯವಿಲ್ಲ. ಅಂತಹ ಕೆಲವು ಶಸ್ತ್ರಾಸ್ತ್ರಗಳನ್ನು ಚೀನಾ ಅಭಿವೃದ್ಧಿಪಡಿಸಿದೆ. ಇವುಗಳನ್ನು ‘ನ್ಯೂರೋ ವೆಪನ್ಸ್’ (ಮೆದುಳಿಗೆ ವಿರುದ್ಧವಾಗಿ ಬಳಸುವ ಆಯುಧಗಳು) ಎಂದು ಕರೆಯಲಾಗುತ್ತದೆ.
೨. ‘ನ್ಯೂರೋ ವಾರ್‌ಫೇರ್’ನ ಉದ್ದೇಶ ಮತ್ತು ಪರಿಣಾಮಗಳು ಚೀನಾದ ‘ಪೀಪಲ್ಸ್ ಲಿಬರೇಶನ್ ಆರ್ಮಿ’ ಇಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಯಾವುದೇ ಪ್ರಮುಖ ವ್ಯಕ್ತಿಯ ಮೆದುಳಿನ ಮೇಲೆ ಪರಿಣಾಮ ಬೀರಲು ಈ ಆಯುಧಗಳನ್ನು ಬಳಸಬಹುದು. ಚೀನಾವು ಎದುರಾಳಿ ರಾಷ್ಟ್ರಗಳ ರಾಜಕೀಯ ನಾಯಕರು, ಅಧಿಕಾರಿಗಳು, ಸೇನಾ ಮುಖ್ಯಸ್ಥರು ಮುಂತಾದ ಪ್ರಮುಖರ ವಿರುದ್ಧ ಈ ಅಸ್ತ್ರಗಳನ್ನು ಬಳಸ ಬಹುದು. ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿದರೆ, ಅವರು ಚೀನಾದೊಂದಿಗೆ ಹೋರಾಡಲು ಹೆದರುತ್ತಾರೆ ಮತ್ತು ಯುದ್ಧದ ಮೊದಲೇ ಚೀನಾವು ಯುದ್ಧವನ್ನು ಗೆಲ್ಲಬಹುದು. ಈ ಶಸ್ತ್ರಾಸ್ತ್ರಗಳನ್ನು ಅಲ್ಪಾವಧಿಗೆ ಬಳಸಬಹುದು. ಯಾವ ಮೆದುಳಿನ ಮೇಲೆ ಈ ಆಯುಧವನ್ನು ಬಳಸುವರೋ ಅವರ ಮೆದುಳಿನ ಮೇಲೆ ಪರಿಣಾಮವಾಗುತ್ತದೆ. ವಿಶಿಷ್ಟ ಗನ್‌ನ ಮೂಲಕ ವ್ಯಕ್ತಿಯ ಮೆದುಳಿಗೆ ಕಿರಣವನ್ನು ಹಾಯಿಸಿದರೆ, ಅದು ಅವರ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಚೀನಾದ ಕಮ್ಯುನಿಸ್ಟ್ ಪಕ್ಷ ಮತ್ತು ಚೀನಾದ ಸೇನೆ ಈ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇದರ ಬಗ್ಗೆ ೧೨ ಪುಟಗಳ ವರದಿಯನ್ನು ಇತ್ತೀಚೆಗೆ ಸಿದ್ಧಪಡಿಸಲಾಗಿದೆ. ‘ಎನ್ಯುಮರೇಟಿಂಗ್ ಟಾರ್ಗೆಟಿಂಗ್ ಅಂಡ್ ಕೊಲ್ಯಾಪ್ಸಿಂಗ್ ಚೈನೀಸ್ ಕಮ್ಯುನಿಸ್ಟ್ ಪಾರ್ಟಿ’ಯ ‘ನ್ಯೂರೋಸ್ಟ್ರೈಕ್ ಪ್ರೋಗ್ರಾಂ’ ಎಂಬ ಮೆದುಳಿನ ವಿರೋಧಿ ಅಸ್ತ್ರವು ಕೆಲವು ಉದ್ದೇಶಗಳನ್ನು ಹೊಂದಿದೆ. ಅದು ಶತ್ರುರಾಷ್ಟ್ರದ ಜನರ ಮನಸ್ಸಿನ ಶಕ್ತಿಯ ಮೇಲೆ ಪರಿಣಾಮ ಬೀರುವುದು, ಅವರಿಗೆ ‘ತಮ್ಮ ಸರಕಾರ ಅಸಮರ್ಥವಾಗಿದೆ, ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಅದು ಸೋಲಲಿದೆ’ ಎಂದು ಅನಿಸಬೇಕು. ಈ ಅಸ್ತ್ರದ ಮೂಲಕ, ದೇಶದ ಹೋರಾಟದ ಶಕ್ತಿಯನ್ನು ಕುಗ್ಗಿಸಲಾಗುತ್ತದೆ. ಒಂದು ದೇಶದ ಶಕ್ತಿಯು ತನ್ನ ಸೈನ್ಯದ ಬೆಂಬಲಕ್ಕಿದ್ದರೆ, ಆ ಸೈನ್ಯವು ಇನ್ನೂ ಉತ್ತಮವಾಗಿ ಹೋರಾಡಬಹುದು. ಇದಕ್ಕೆ ವಿರುದ್ಧವಾಗಿ, ಸಾರ್ವಜನಿಕರು ಸೇನೆಯ ಕೆಲಸಕ್ಕೆ ಅಡ್ಡಿಪಡಿಸಿದರೆ, ಯುದ್ಧದ ಪರಿಸ್ಥಿತಿಯ ಮೇಲೆ ಅಪಾರ ಪ್ರತಿಕೂಲ ಪರಿಣಾಮವಾಗುತ್ತದೆ. ಇದರಿಂದಾಗಿ ಇಂತಹ ಅಸ್ತ್ರಗಳ ಮೂಲಕ ‘ನಮ್ಮ ಸರಕಾರ ನಿಷ್ಕ್ರಿಯವಾಗಿದೆ, ಚೀನಾ ವೇಗವಾಗಿ ಮುನ್ನಡೆಯುತ್ತಿದೆ’ ಎಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ರಾಜಕೀಯ ನಾಯಕರು, ಅಧಿಕಾರಶಾಹಿ, ಉನ್ನತ ಸೈನ್ಯಾಧಿಕಾರಿಗಳನ್ನು ಮಾನಸಿಕವಾಗಿ ನಿರುತ್ಸಾಹಗೊಳಿಸುವುದು ಮತ್ತು ಯುದ್ಧವು ಪ್ರಾರಂಭವಾಗುವ ಮೊದಲೇ ಯುದ್ಧದಲ್ಲಿ ಸೋಲಾಗಲಿದೆ ಎಂದು ಒಪ್ಪುವಂತೆ ಮಾಡುವುದೇ ‘ನ್ಯೂರೋ ವಾರ್‌ಫೇರ್’ನ ಉದ್ದೇಶವಾಗಿದೆ.
೩. ಚೀನಾ ಯಾರ ವಿರುದ್ಧ ‘ನ್ಯೂರೋ ವೆಪನ್ಸ್’ಗಳನ್ನು ಬಳಸಬಹುದು ? ‘ನ್ಯೂರೊ ವೆಪನ್ಸ್’ ಬಗ್ಗೆ ‘ವಾಷಿಂಗ್ಟನ್ ಪೋಸ್ಟ್’ ಮತ್ತು ಇತರ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಅದು ಸಾರ್ವಜನಿಕ ಪ್ರದೇಶಗಳಲ್ಲಿ ಲಭ್ಯವಿದೆ. ಈ ವಿಚಾರದಲ್ಲಿ ಚೀನಾ ಎಲ್ಲರಿಗಿಂತ ಮುಂದಿದೆ ಎನ್ನಲಾಗುತ್ತಿದೆ. ಚೀನಾವು ಈ ಅಸ್ತ್ರವನ್ನು ಟಿಬೆಟ, ಉಘೂರ್ ಮುಸಲ್ಮಾನ, ಮಂಗೋಲಿಯನ್ನರಂತಹ ಆಂತರಿಕ ಶತ್ರುಗಳ ವಿರುದ್ಧ ಬಳಸಬಹುದು. ಚೀನಾದ ೫ ಕೋಟಿಗೂ ಹೆಚ್ಚು ನಾಗರಿಕರು ದೇಶದ ಹೊರಗೆ ವಾಸಿಸುತ್ತಿದ್ದಾರೆ. ಅವರು ಚೀನಾ ವಿರೋಧಿ ಕೆಲಸ ಮಾಡುತ್ತಿದ್ದರೆ, ಅವರ ವಿರುದ್ಧವೂ ಈ ಅಸ್ತ್ರ ಪ್ರಯೋಗಿಸಬಹುದು. ಅಮೇರಿಕಾವು ಚೀನಾದ ಮೊದಲ ಶತ್ರು ಆಗಿದೆ. ಹಾಗಾಗಿ ಅದರ ವಿರುದ್ಧ ಈ ಅಸ್ತ್ರ ಪ್ರಯೋಗಿಸಬಹುದು. ಅದರ ನಂತರ, ತೈವಾನ್, ಹಾಗೆಯೇ ದಕ್ಷಿಣ ಏಷ್ಯಾದ ಕೊರಿಯಾ ಮತ್ತು ಜಪಾನ್ ಕೂಡ ಚೀನಾದ ಶತ್ರುಗಳಾಗಿವೆ. ಆದ್ದರಿಂದ, ಚೀನಾ ಆ ದೇಶಗಳ ಆಡಳಿತಗಾರರು ಮತ್ತು ಜನರ ವಿರುದ್ಧ ಈ ಅಸ್ತ್ರವನ್ನು ಬಳಸಬಹುದು.
೪. ಭಾರತದ ವಿರುದ್ಧ ‘ನ್ಯೂರೋ ವಾರ್ ಫೇರ್’ನ ಬಳಕೆ ಮತ್ತು ಪರಿಣಾಮ ಭಾರತ ಬಹಳ ದೊಡ್ಡ ದೇಶ ವಾಗಿದೆ. ಭಾರತದ ಗಡಿಗಳು ಬಹಳ ದೊಡ್ಡದಾಗಿವೆ, ಜನಸಂಖ್ಯೆಯು ಅಪಾರ ಸಂಖ್ಯೆಯಲ್ಲಿದೆ ಮತ್ತು ಭಾರತೀಯ ಸೇನೆಯು ತುಂಬಾ ಸಮರ್ಥವಾಗಿದೆ. ಆದ್ದರಿಂದ ಭಾರತವನ್ನು ಎಲ್ಲಾ ಕಡೆಯಿಂದ ಸುತ್ತುವರಿಯುವ ಶಕ್ತಿ ಚೀನಾಕ್ಕಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಚೀನಾ ಭಾರತದ ವಿರುದ್ಧ ‘ನ್ಯೂರೋ ವಾರ್‌ಫೇರ್’ ನಡೆಸಬಹುದು. ‘ನ್ಯೂರೋ ವೆಪನ್’ಗಳ ಮೂಲಕ ‘ಅಮೇರಿಕಾದ ಸ್ನೇಹ ಬೆಳೆಸುವುದರಿಂದ ಭಾರತಕ್ಕೆ ಏನೂ ಲಾಭವಾಗುವುದಿಲ್ಲ; ಏಕೆಂದರೆ ಅಮೇರಿಕಾ ತನ್ನ ಹಿತಾಸಕ್ತಿಗಳನ್ನು ಮಾತ್ರ ನೋಡಿಕೊಳ್ಳುತ್ತದೆ’ ಎಂಬ ವಿಚಾರಗಳು ಭಾರತೀಯರ ಮನಸ್ಸಿನಲ್ಲಿ ಮೂಡಿಸುವ ಸಾಧ್ಯತೆಯಿದೆ. ಇದು ಸ್ವಲ್ಪ ಮಟ್ಟಿಗೆ ನಿಜ ವಾಗಿದ್ದರೂ, ಭಾರತವು ಅಮೇರಿಕಾ ಜೊತೆ ಸ್ನೇಹ ಮಾಡಿದ್ದ ರಿಂದ ಸಾಕಷ್ಟು ಲಾಭವನ್ನು ಹೊಂದಿದೆ ಮತ್ತು ಚೀನಾವು ಇದರಲ್ಲಿ ಯಶಸ್ವಿಯಾಗಲಿಲ್ಲ. ಅಸ್ತ್ರದ ಮೂಲಕ ಭಾರತದ ಆರ್ಥಿಕ ಪ್ರಗತಿಯನ್ನು ತಡೆಯುವುದು, ಚೀನಾದ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ, ಭಾರತೀಯ ಮಾಹಿತಿ ತಂತ್ರಜ್ಞಾನದ ವಿರುದ್ಧ ಚೀನಾ ಈ ಅಸ್ತ್ರ ವನ್ನು ಬಳಸಬಹುದು. ಹೆಚ್ಚಿನ ಮೊಬೈಲ್ ಫೋನ್ ಸೆಟ್‌ಗಳಲ್ಲಿ ‘ಜಿಪಿಎಸ್’ ವ್ಯವಸ್ಥೆ ಇರುತ್ತವೆ. ಈ ವ್ಯವಸ್ಥೆಯಿಂದಾಗಿ ನಾವು ಎಲ್ಲಿ ಬೇಕಾದರೂ ಸುಲಭವಾಗಿ ಪ್ರಯಾಣಿಸಬಹುದು. ಭಾರತದ ವ್ಯವಸ್ಥೆಯನ್ನು ‘ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸೆಟಲೈಟ್ ವ್ಯವಸ್ಥೆ’ ಎಂದು ಕರೆಯಲಾಗುತ್ತದೆ. ಇದನ್ನು ಭಾರತೀಯ ಸೇನೆಯು ಬಳಸುತ್ತದೆ. ಅಲ್ಲದೆ ಇದನ್ನು ಭಾರತದ ಹೊರಗೆ ೧,೫೦೦ ಕಿ.ಮೀ ವರೆಗೆ ಬಳಸಬಹುದು. ಹಾಗಾಗಿ ಈ ವ್ಯವಸ್ಥೆಯನ್ನು ನಿಲ್ಲಿಸಿದರೆ ಭಾರತದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಇದರಿಂದಾಗಿ ಮುಂದಿನ ಅವಧಿಯಲ್ಲಿ ಚೀನಾ ಇಂತಹ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ. ಹೋರಾಡದೆ ಹೇಗೆ ನಾವು ಬಲಿಷ್ಠರಾಗಿದ್ದೇವೆ ಎಂದು ತೋರಿಸಲು ಚೀನಾ ಬಯಸುತ್ತದೆ. ಚೀನಾ ಇಂತಹ ಶಸ್ತ್ರಾಸ್ತ್ರ ಗಳನ್ನು ಬಳಸುತ್ತಿದೆ ಮತ್ತು ಬಳಸುವುದನ್ನು ಮುಂದುವರಿಸುತ್ತದೆ. ಇದರಿಂದಾಗಿ ಭಾರತವೂ ಇದಕ್ಕೆ ಪ್ರತ್ಯುತ್ತರ ನೀಡಲು ‘ನ್ಯೂರೋ ವಾರ್‌ಫೇರ್’ ಮಾಡಬೇಕೇ ? ಎಂಬ ಪ್ರಶ್ನೆ ಉದ್ಭವಿಸಬಹುದು. ಖಂಡಿತವಾಗಿಯೂ ಭಾರತವು ಈ ಯುದ್ಧವನ್ನು ಎದುರಿಸಲು ಶಕ್ತವಾಗಿರಬೇಕು. ಆ ಸಾಮರ್ಥ್ಯವನ್ನು ನಿರ್ಮಿಸಲು ಸಮಯ ತಗಲುವುದು; ಆದರೆ ಅದನ್ನು ಹೆಚ್ಚಿಸುತ್ತಲೇ ಇರಬೇಕು. ಚೀನಾವು ಭಾರತದ ವಿರುದ್ಧ ವಿವಿಧ ಅಸ್ತ್ರಗಳನ್ನು ಬಳಸಿದಂತೆ ಭಾರತವೂ ಅದರ ವಿರುದ್ಧ ಈ ಅಸ್ತ್ರಗಳನ್ನು ಬಳಸಬೇಕು. ಇದು ಈ ವಿಷಯದಲ್ಲಿ ನಮ್ಮ ಸಿದ್ಧತೆಯು ಸಹ ಗಮನಕ್ಕೆ ಬರಲಿದೆ. ಚೀನಾಗೆ ಪ್ರತ್ಯುತ್ತರದ ಭಾಷೆ ಅರ್ಥವಾಗುತ್ತದೆ. ಹೀಗಾಗಿ ಚೀನಾದ ಅಸ್ತ್ರಗಳಿಗೆ ಪ್ರತ್ಯುತ್ತರ ನೀಡಲು ಭಾರತವೂ ಇದೇ ರೀತಿಯ ಅಸ್ತ್ರಗಳನ್ನು ಸಿದ್ಧಪಡಿಸಬೇಕು.’
– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.