ನಾವು ಸೇವಿಸುವ ಆಹಾರದಲ್ಲಿ ಏನೆಲ್ಲವನ್ನು ಹಾಕಿರುತ್ತಾರೆಯೋ, ಅವುಗಳಲ್ಲಿ ಪ್ರತಿಯೊಂದರಲ್ಲಿ ಏನಾದರೊಂದು ಔಷಧೀಯ ಗುಣ ನಿಶ್ಚಿತವಾಗಿ ಇರುತ್ತದೆ; ಆದುದರಿಂದ ನಮ್ಮ ಭಾರತೀಯ ಪಾಕ ಕಲೆಯು (ಅಡುಗೆ) ಆರೋಗ್ಯದ ದೃಷ್ಟಿ ಯಿಂದ ಸರ್ವಶ್ರೇಷ್ಠವಾಗಿದೆ. ಈ ಘಟಕಗಳು ಯಾವುವು ? ಮತ್ತು ಔಷಧಿಯಂತೆ ಅವುಗಳನ್ನು ಹೇಗೆ ಉಪಯೋಗಿಸಬೇಕು ? ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. ಈ ಮಾಹಿತಿಯನ್ನು ನಾವು ಸಣ್ಣಪುಟ್ಟ ಆರೋಗ್ಯದ ತೊಂದರೆಗಳಿಗಾಗಿ ಮನೆಯಲ್ಲಿಯೇ ಸುಲಭವಾಗಿ ಉಪಚಾರ ಮಾಡಲು ಉಪಯೋಗಿಸಬಹುದು. ಉದಾಹರಣೆಗೆ ಹೇಳುವುದಾದರೆ ರಾತ್ರಿ ಓರ್ವ ಅನಾರೋಗ್ಯ ಪೀಡಿತ ಮಹಿಳೆಯಿಂದ ನನಗೆ ದೂರವಾಣಿಕರೆ ಬಂದಿತು, “ನನಗೆ ನಾಳೆ ಉಪನ್ಯಾಸ ಕೊಡಬೇಕಾಗಿದೆ; ಆದರೆ ಸತತವಾಗಿ ಕೆಮ್ಮು ಬರುತ್ತಿದೆ. ಏನು ಮಾಡಲಿ ? ನಾನು ಅವರಿಗೆ ಒಂದು ಔಷಧಿಯನ್ನು ಹೇಳಿದೆ; ಆದರೆ ತಡರಾತ್ರಿ ಆ ಔಷದಿಯು ಸಿಗುವುದು ಅಸಾಧ್ಯವಾಗಿತ್ತು. ಆಗ ಲವಂಗವನ್ನು ಸಣ್ಣಗೆ ಕುಟ್ಟಿ ಜೇನುತುಪ್ಪ ಸೇರಿಸಿ ಅದನ್ನು ಸೇವಿಸುವಂತೆ ಅವರಿಗೆ ಹೇಳಿದೆ; ಅವರ ಕೆಮ್ಮು ಕಡಿಮೆಯಾಗಿ ಅವರಿಗೆ ಉಪನ್ಯಾಸ ಮಾಡಲು ಸಾಧ್ಯವಾಯಿತು. ಗಂಟಲು ನೋವಿದ್ದರೆ ಅರಿಶಿಣ-ಹಾಲು ಕುಡಿಯುವುದು, ಶೀತವಾಗಿದ್ದರೆ ಬಜೆಯ ಲೇಪವನ್ನು ಹಣೆಗೆ ಹಚ್ಚುವುದು, ಇಂತಹ ಮನೆಮದ್ದುಗಳನ್ನು ತಾವು ಕೇಳಿರಬಹುದು ಅಥವಾ ಓದಿರಬಹುದು. ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಮದ್ದನ್ನು ಮಾಡಬಹುದು; ಆದರೆ ಎಲ್ಲರೂ ಗಮನಿಸಬೇಕಾದ ಒಂದು ಅಂಶವೆಂದರೆ, ಓರ್ವ ವ್ಯಕ್ತಿಗೆ ಗಂಭೀರ ಅನಾರೋಗ್ಯವಿದ್ದರೆ ಅವನು ಸಂಪೂರ್ಣ ಮನೆಮದ್ದಿನ ಮೇಲೆ ಅವಲಂಬಿಸಿರುವುದು ಅಯೋಗ್ಯವಾಗಿದೆ. ಈ ಉಪಚಾರಗಳು ಪ್ರಾಥಮಿಕ ಸ್ವರೂಪದ್ದಾಗಿವೆ. ಈ ಮಾಹಿತಿಯನ್ನು ರೋಗ ನಿವಾರಣೆಗಾಗಿ ನಿರ್ಮೂಲನೆಗಾಗಿ ತಾರತಮ್ಯದಿಂದ ಉಪಯೋಗಿಸಬೇಕು. ಆಪತ್ಕಾಲದ ದೃಷ್ಟಿಯಿಂದ ಸಾಧಕರಿಗೆ ಈ ಮಾಹಿತಿ ಉಪಯೋಗವಾಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.
ನಾವು ಸಂಚಿಕೆ ಕ್ರಮಾಂಕ ೨೪/೩೦ರಲ್ಲಿ ನೀಡಿದ ಲೇಖನದಲ್ಲಿ ಓದಿದುದೇನೆಂದರೆ, ವಾತ, ಪಿತ್ತ, ಮತ್ತು ಕಫ ಇವುಗಳಿಗೆಲ್ಲ ವಿಶಿಷ್ಟ ಗುಣಧರ್ಮಗಳಿವೆ. ಅವುಗಳಿಗೆ ಸಮಾನವಾದ ಗುಣವು ಯಾವ ಪದಾರ್ಥಗಳಲ್ಲಿ (ವಸ್ತು) ಇರುತ್ತದೆಯೋ, ಆ ಪದಾರ್ಥವು ಆ ದೋಷವನ್ನು ಹೆಚ್ಚಿಸುತ್ತದೆ, ಉದಾ. ವಾತವು ಶೀತಗುಣದ್ದಾಗಿದೆ (ತಂಪು), ತಣ್ಣನೆಯ ಹವೆಯ ಸಂಪರ್ಕದಲ್ಲಿ ಸತತವಾಗಿ ಇದ್ದರೆ ಶರೀರದಲ್ಲಿ ವಾತ ಹೆಚ್ಚಾಗಿ ಅದು ನೋವು ಉತ್ಪನ್ನ ಮಾಡುತ್ತದೆ. ಅದಕ್ಕೆ ಮಾಲಿಶು ಮಾಡುವುದು ಮತ್ತು ಶಾಖ ಕೊಡುವುದು ಮುಂತಾದ ಉಪಚಾರಗಳನ್ನು ಮಾಡುವುದರಿಂದ ಉಲ್ಬಣವಾಗಿರುವ ದೋಷಗಳು ಕಡಿಮೆಯಾಗಿ ನೋವೂ ಕಡಿಮೆ ಯಾಗುತ್ತದೆ. ಅಂದರೆ ಹೆಚ್ಚಾದ ದೋಷಗಳು ವಿರುದ್ಧಗುಣದ ಉಪಚಾರದಿಂದ ಕಡಿಮೆಯಾಗುತ್ತವೆ. ಪ್ರತಿಯೊಂದು ಪದಾರ್ಥವು ಯಾವ ಗುಣಧರ್ಮದ್ದಾಗಿದೆ ? ಶರೀರದಲ್ಲಿ ನಿಖರವಾಗಿ ಇದು ಯಾವ ದೋಷದ ಮೇಲೆ ಕಾರ್ಯ ಮಾಡುತ್ತದೆ ? ಇದೆಲ್ಲವನ್ನು ಬಹಳ ವಿಸ್ತಾರವಾಗಿ ಹೇಳಬೇಕಾಗುತ್ತದೆ ಹಾಗು ಅರ್ಥವಾಗಲು ಸಹ ಕಷ್ಟವಿದೆ. ಆದುದರಿಂದ ಆ ಪದಾರ್ಥವು ಯಾವ ಅನಾರೋಗ್ಯಕ್ಕೆ ಉಪಯುಕ್ತವಾಗಿವೆ ? ಇಷ್ಟನ್ನೇ ನಾವು ಇಲ್ಲಿ ತಿಳಿದುಕೊಳ್ಳುವವರಿದ್ದೇವೆ.
ಪ್ರತಿಯೊಬ್ಬ ಗೃಹಿಣಿಯು ಮಸಾಲೆ ಡಬ್ಬಿಯನ್ನು ಅಡುಗೆಮನೆ ಯಲ್ಲಿ ಇಡುತ್ತಾಳೆ. ಒಗ್ಗರಣೆಗೆ ಬೇಕಾಗುವ ಜೀರಿಗೆ, ಸಾಸಿವೆ, ಅರಿಶಿಣ, ಇಂಗು ಹೀಗೆ ಎಲ್ಲ ವಸ್ತುಗಳು ಒಟ್ಟಿಗೆ ಈ ಡಬ್ಬಿಯಲ್ಲಿ ಇರುತ್ತವೆ. ಅವುಗಳ ಔಷಧಿ (ಗುಣಗಳನ್ನು) ಉಪಯೋಗವನ್ನು ನಾವು ಇಂದು ತಿಳಿದುಕೊಳ್ಳೋಣ.
ಸಾಸಿವೆ
ಅ. ಸಾಸಿವೆಯು ಉಷ್ಣಗುಣದ್ದಾಗಿದೆ. ಆದುದರಿಂದ ಯಾವುದೇ ಅಂಗದಲ್ಲಿ ನೋವು ಬಂದರೆ ಸಾಸಿವೆಯ ಎಣ್ಣೆಯಿಂದ ನೋವು ಕಡಿಮೆಯಾಗುತ್ತದೆ.
ಆ. ಕಫ ಪ್ರಕೃತಿಯ ವ್ಯಕ್ತಿಯು ಶಕ್ತಿ ಹೆಚ್ಚಿಸಬೇಕಾದರೆ ಸಾಸಿವೆಯ ಎಣ್ಣೆಯನ್ನು ಮೈಗೆ ತಿಕ್ಕಿಕೊಳ್ಳಬೇಕು.
ಇ. ಹಲ್ಲು ಹುಳುಕಿನಿಂದ ಹಲ್ಲು ನೋಯುತ್ತಿದ್ದರೆ, ಸಾಸಿವೆಯನ್ನು ನಯವಾಗಿ ಪುಡಿ ಮಾಡಿ ಒಂದು ಲೋಟ ನೀರಿನಲ್ಲಿ ಕಾಲು ಚಮಚ ಸಾಸಿವೆಯ ಪುಡಿ ಸೇರಿಸಿ ಕುದಿಸಬೇಕು ಮತ್ತು ಅರ್ಧ ಲೋಟ ನೀರು ಆಗುವ ತನಕ ಕುದಿಸಬೇಕು. ಈ ನೀರು ಉಗುರುಬೆಚ್ಚಗೆ ಆದ ಮೇಲೆ ಅದರಿಂದ ಬಾಯಿ ಮುಕ್ಕಳಿಸಬೇಕು. ಇದರಿಂದ ನೋವು ಕಡಿಮೆಯಾಗಿ ಆರಾಮ ಅನಿಸುತ್ತದೆ. (ಹಲ್ಲು ಹುಳುಕಾದರೆ ದಂತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಅವಶ್ಯವಾಗಿದೆ.)
ಈ. ಸಾಸಿವೆಯನ್ನು ಹೆಚ್ಚು ಬಳಸುವುದರಿಂದ ಪಿತ್ತದ ರೋಗಗಳು ಆಗುತ್ತವೆ; ಆದರೆ ಸರಿಯಾದ ಅಳತೆಯಲ್ಲಿ ತಿಂದರೆ ಅದು ಜಠರಾಗ್ನಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. (ಆದುದರಿಂದ ಒಗ್ಗರಣೆ ಮಾಡುವಾಗ ನಾವು ಅದನ್ನು ಸರಿಯಾದ ಅಳತೆಯಲ್ಲೇ ಬಳಸಲಾಗುತ್ತದೆ.)
ಉ. ಶೀತಪ್ರದೇಶದಲ್ಲಿ ಜನರು (ಉತ್ತರ ಭಾರತದಲ್ಲಿ) ಸಾಸಿವೆ ಯನ್ನು ಹೇರಳವಾಗಿ ಬಳಸುತ್ತಾರೆ. (‘ಸರಸೋ ಕಾ ಸಾಗ’, ಸಾಸಿವೆ ಎಣ್ಣೆ ಹಾಕಿ ಮಾಡಿದ ಉಪ್ಪಿನಕಾಯಿ ಇತ್ಯಾದಿ). ಅದಕ್ಕೆ ಕಾರಣ ಮೇಲೆ ಹೇಳಿದ ಸಾಸಿವೆಯ ಗುಣಧರ್ಮವು ತಮ್ಮ ಗಮನಕ್ಕೆ ಬಂದಿರಬಹುದು; ಆದರೆ ಉಷ್ಣ ಪ್ರದೇಶದಲ್ಲಿರುವ ಜನರು ‘ಸರಸೋ ಕಾ ಸಾಗ’ ಅಥವಾ ಸಾಸಿವೆಯಿಂದಾದ ಉಪ್ಪಿನಕಾಯಿಗಳನ್ನು ತಿಂದರೆ ತೊಂದರೆಯಾಗುತ್ತದೆ. ಇದರಿಂದ ಆಯಾ ಪ್ರದೇಶಕ್ಕೆ ತಕ್ಕಂತೆ ಏನು ತಿನ್ನಬೇಕು ? ಇದು ತಮ್ಮ ಅರಿವಿಗೆ ಬರಬಹುದು.
ಜೀರಿಗೆ
ಅ. ಬಾಯಿಹುಣ್ಣು ಆದಾಗ ಜೀರಿಗೆಯನ್ನು ಜಗಿದು ತಿನ್ನಬೇಕು. ಜೀರಿಗೆಯಲ್ಲಿರುವ ಎಣ್ಣೆಯು ಬಾಯಿಹುಣ್ಣನ್ನು ಕಡಿಮೆ ಮಾಡುತ್ತದೆ; ಆದರೆ ಪದೇಪದೇ ಬಾಯಿಹುಣ್ಣು ಆಗುತ್ತಿದ್ದರೆ, ವೈದ್ಯಕೀಯ ಸಲಹೆ ಪಡೆಯುವುದು ಆವಶ್ಯಕ.
ಆ. ಹಸಿವಾಗದಿರುವುದು, ಹೊಟ್ಟೆ ಉಬ್ಬುವುದು, ಬಾಯಿರುಚಿ ಇಲ್ಲದಿರುವುದು, ಪದೇಪದೇ ಅಜೀರ್ಣವಾಗುವುದು ಇದಕ್ಕೆಲ್ಲ ಸರಳ ಉಪಾಯವೆಂದರೆ ಊಟದ ನಂತರ ಕಾಲು ಚಮಚ ಜೀರಿಗೆಯನ್ನು ಜಗಿದು ತಿನ್ನಬೇಕು. ನಂತರ ಬೆಚ್ಚನೆಯ ನೀರು ಕುಡಿಯಬೇಕು.
ಇ. ಬಾಣಂತಿಗೆ ಕಾಲು ಚಮಚ ಜೀರಿಗೆಯ ಚೂರ್ಣ ಮತ್ತು ಅರ್ಧ ಚಮಚ ಬೆಲ್ಲ ಹೀಗೆ ಪ್ರತಿದಿನ ತಿನ್ನಲು ಕೊಟ್ಟರೆ ಹಾಲಿನ ಪ್ರಮಾಣವು ಹೆಚ್ಚುತ್ತದೆ.
ಈ. ವಾಂತಿಯಾಗುತ್ತಿದ್ದರೆ ಕಾಲು ಚಮಚ ಜೀರಿಗೆ ಚೂರ್ಣ ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸಿದರೆ ಆರಾಮ ಅನಿಸುತ್ತದೆ.
ಇಂಗು
ಅ. ಇಂಗು ಇದು ಒಂದು ಗಿಡದ ಅಂಟು ಆಗಿದೆ. ಇಂಗು ಉಷ್ಣ ಗುಣಧರ್ಮದ್ದಾಗಿದೆ. ಸಣ್ಣ ಮಕ್ಕಳ ಹೊಟ್ಟೆ ಉಬ್ಬಿದರೆ ಅದರ ಮೇಲೆ ಇಂಗಿನ ಲೇಪವನ್ನು ಹಚ್ಚಿದರೆ ಆರಾಮವಾಗುತ್ತದೆ.
ಆ. ಅಜೀರ್ಣ (ಅಪಚನ) ವಾದರೆ ಒಂದು ಚಮಚ ತುಪ್ಪದ ಜೊತೆಗೆ ಒಂದು ಚಿಟಿಕಿ ಇಂಗನ್ನು ತಿನ್ನಬೇಕು.
ಇ. ಗಾಯ ವಾಸಿಯಾಗದಿದ್ದರೆ ಬೇವಿನ ಎಲೆಗಳು ಮತ್ತು ಇಂಗು ಈ ಮಿಶ್ರಣವನ್ನು (ಚಟ್ನಿ ಹಾಗೆ) ನುಣ್ಣಗೆ ಮಾಡಿ ಗಾಯದ ಮೇಲೆ ಹಚ್ಚಿದರೆ ಗಾಯ ವಾಸಿಯಾಗುತ್ತದೆ.
ಈ. ಹೊಟ್ಟೆ ತೊಳೆಸುವುದು, ವಾಂತಿಯಾಗುವುದು, ದೀರ್ಘ ಕಾಲ ಹೊಟ್ಟೆ ನೋವು ಬರುವುದು, ಹೀಗೆ ಆಗುತ್ತಿದ್ದರೆ ಇಂಗು, ಸೈಂಧವ, ಮತ್ತು ಜೀರಿಗೆ ಪುಡಿ ಪ್ರತಿಯೊಂದನ್ನು ಒಂದು ಚಿಟಿಕೆಯಷ್ಟು ತೆಗೆದುಕೊಂಡು ಅದನ್ನು ಒಂದು ಚಮಚ ತುಪ್ಪ ಮತ್ತು ಅರ್ಧ ಚಮಚ ಜೇನುತುಪ್ಪದೊಂದಿಗೆ ತೆಗೆದುಕೊಳ್ಳಬೇಕು.
ಉ. ಇಂಗು ಉಷ್ಣಗುಣಧರ್ಮದ್ದಾಗಿದೆ, ಹಾಗಾಗಿ ಪಿತ್ತ ಪ್ರಕೃತಿಯ ವ್ಯಕ್ತಿ, ಮೈಗ್ರೇನ (ತಲೆನೋವಿನ ಒಂದು ಪ್ರಕಾರ), ಹಾಗೂ ಯಕೃತ್ತಿನ ರೋಗವಿರುವ ವ್ಯಕ್ತಿಯು ಅದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಬಳಸಬೇಕು.
ಅರಿಶಿಣ
ಅ. ಅರಿಶಿಣದ ಔಷಧೀಯ ಉಪಯೋಗವು ನಮಗೆಲ್ಲರಿಗೂ ಗೊತ್ತಿರುತ್ತದೆ. ಅರಿಶಿಣವನ್ನು ಬಹುಗುಣಿ ಎಂದು ಮತ್ತು ವಿವಿಧ ವ್ಯಾಧಿಗಳಿಗೆ ಔಷಧಿ ಎಂದು ಬಳಸುತ್ತಾರೆ. ಅರಿಶಿಣದ ಗುಣ ಧರ್ಮವು ಉಷ್ಣವಾಗಿದ್ದರೂ, ಅದರಿಂದ ಪಿತ್ತವು ಹೆಚ್ಚುವುದಿಲ್ಲ.
ಆ. ಶೀತ, ಕೆಮ್ಮು, ಗಂಟಲು ನೋವಿದ್ದರೆ ಕಾಲು ಚಮಚ ಅರಿಶಿಣದ ಚೂರ್ಣವನ್ನು ಜೇನುತುಪ್ಪದೊಂದಿಗೆ ನೆಕ್ಕ ಬೇಕು. ಹಾಗೂ ಹಾಲಿಗೂ ಅರಿಶಿಣ ಸೇರಿಸಿ ಕುಡಿಯಬಹುದು.
ಇ. ಬಾಯಿಹುಣ್ಣಾದರೆ ಅರಿಶಿಣದ ಕಷಾಯದಿಂದ ಬಾಯಿ ಮುಕ್ಕಳಿಸಬೇಕು. ಇದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ, ಹಾಗೂ ಬಾಯಿಯ ದುರ್ಗಂಧವೂ ಕಡಿಮೆಯಾಗುತ್ತದೆ.
ಈ. ಮೈಗೆ ಕೆರೆತ ಬಂದಾಗ ಅಥವಾ ಚರ್ಮರೋಗ ಆದಾಗ ಅರಿಶಿಣ ಮತ್ತು ಬೇವು ಸೊಪ್ಪಿನ ಮಿಶ್ರಣವನ್ನು (ಚಟ್ನಿ ಹಾಗೆ) ಮಾಡಿ ಆ ಲೇಪವನ್ನು ಹಚ್ಚಿದರೆ ಆರಾಮವೆನಿಸುತ್ತದೆ.
ಉ. ಪೆಟ್ಟು ಬಿದ್ದ ಜಾಗದಲ್ಲಿ ಅರಿಶಿಣದ ಲೇಪವನ್ನು ಹಚ್ಚಬೇಕು. ಕಾಲು ಚಮಚ ಅರಿಶಿಣ ಮತ್ತು ಅರ್ಧ ಚಮಚ ಬೆಲ್ಲದ ಮಿಶ್ರಣವನ್ನು ತಿನ್ನಬೇಕು.
ಊ. ಮೂಲವ್ಯಾಧಿ ಆದಾಗ ಆಕಳ ತುಪ್ಪದಲ್ಲಿ ಅರಿಶಿಣದ ಕೊಂಬನ್ನು ಅರೆದು ಮೊಳಕೆಗಳಿಗೆ ಹಚ್ಚಬೇಕು.
ಎ. ಅರಿಶಿಣದಿಂದ ಚರ್ಮದ ಬಣ್ಣವು ಸುಧಾರಿಸುತ್ತದೆ. ಆದುದರಿಂದ ಉಟಣೆಗಳಲ್ಲಿ ಮತ್ತು ಮುಲಾಮುಗಳಲ್ಲಿ ಅರಿಶಿಣವನ್ನು ಬಳಸುತ್ತಾರೆ. ಕಡಲೆ ಹಿಟ್ಟಿಗೆ ಒಂದು ಚಿಟಿಕೆ ಅರಿಶಿಣ ಹಾಕಿ ಅವೆರಡನ್ನೂ ಹಾಲಿನಲ್ಲಿ ಬೆರಿಸಿ ಆ ಲೇಪವನ್ನು ಮುಖಕ್ಕೆ ಹಚ್ಚಿಕೊಂಡರೆ ಚರ್ಮದ ಕಾಂತಿಯು ಹೆಚ್ಚಾಗುತ್ತದೆ.
ಏ. ಕಾಲು ಉಳುಕಿ ಬಾವು ಬಂದರೆ ಅರಿಶಿಣದ ಕೊಂಬನ್ನು ನೀರಿನಲ್ಲಿ ಅರೆದು ಬಿಸಿ ಮಾಡಿ ಬಾವು ಬಂದಿರುವಲ್ಲಿ ಅದನ್ನು ಹಚ್ಚಬೇಕು. (ಮುಂದುವರಿಯುವುದು)
– ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪೂನಾ. (೧೦.೭.೨೦೨೩)