ಬಂಗಾಳದಲ್ಲಿ ‘ಡೇಟಿಂಗ್’ ಸೇವೆ ನೀಡುವ ಹೆಸರಿನಲ್ಲಿ ವಂಚನೆ, 16 ಜನರ ಬಂಧನ !

(‘ಡೇಟಿಂಗ್’ ಎಂದರೆ ಆಸಕ್ತ ವ್ಯಕ್ತಿಯೊಂದಿಗೆ ಅರ್ಥಮಾಡಿಕೊಳ್ಳಲು ಅವರೊಂದಿಗೆ ಸಮಯ ಕಳೆಯುವುದು)

ಕೋಲಕಾತಾ (ಬಂಗಾಳ) – ‘ಡೇಟಿಂಗ್’ ಸೇವೆಗಳನ್ನು ಒದಗಿಸುವ ನೆಪದಲ್ಲಿ ನಕಲಿ ‘ಕಾಲ್ ಸೆಂಟರ್’ಗಳನ್ನು ನಡೆಸುತ್ತಿದ್ದ 16 ಜನರನ್ನು ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ 10 ಯುವತಿಯರು ಮತ್ತು 6 ಪುರುಷರು ಸೇರಿದ್ದಾರೆ. ಮಹಿಳೆಯರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದ್ದು, ಪುರುಷರನ್ನು ಆಗಸ್ಟ್ 8 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಆದೇಶ ನೀಡಿದೆ.

(ಸೌಜನ್ಯ – Halaat-e-Bengal)

ಪೊಲೀಸರಿಗೆ ದೊರಕಿರುವ ಮಾಹಿತಿಯನುಸಾರ ಜಾಧವಪುರ ವಿಭಾಗದ ಪೊದ್ದರ್‌ನಗರದ ಕಟ್ಟಡವೊಂದರಲ್ಲಿನ ಫ್ಲಾಟ್‌ ಮೇಲೆ ದಾಳಿ ನಡೆಸಿದರು. ಇಲ್ಲಿಂದ 4 ಯುವತಿಯರು ಹಾಗೂ 1 ಯುವಕನನ್ನು ಬಂಧಿಸಲಾಯಿತು. ಈ ಆರೋಪಿಗಳು ಮೊಬೈಲ್ ಮೂಲಕ `ಡೇಟಿಂಗ್’ ಸಂಕೇತಸ್ಥಳದ ಉದ್ಯೋಗಿಗಳೆಂದು ಹೇಳಿಕೊಂಡು ಜನರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದರು. ಸಂದೇಶಕ್ಕೆ ಯಾರಿಂದಲಾದರೂ ಪ್ರತಿಕ್ರಿಯೆ ಬಂದ ನಂತರ ಅವರನ್ನು ಸಂಕೇತಸ್ಥಳದ ಮೇಲೆ ನೋಂದಣಿ ಮಾಡುವ ಹೆಸರಿನಲ್ಲಿ ಅವರಿಂದ ಹಣ ವಸೂಲಿ ಮಾಡುತ್ತಿದ್ದರು. ಆರೋಪಿಗಳು ಸಂಬಂಧಪಟ್ಟವರಿಗೆ ವಿವಿಧ ಸಂಕೇತಸ್ಥಳಗಳ ಮೂಲಕ ಯುವತಿಯರ ಚಿತ್ರಗಳನ್ನು ಕಳುಹಿಸುತ್ತಿದ್ದರು. ಇದರಲ್ಲಿ ಅವರು ಆಯ್ಕೆ ಮಾಡಿಕೊಂಡ ಯುವತಿಯರು ಅವರಿಗೆ ಮನರಂಜನೆ ನೀಡುತ್ತಾರೆ ಎಂದು ಹೇಳುತ್ತಿದ್ದರು. ತದನಂತರ ಅವರು ಸಂಬಂಧಪಟ್ಟವರಿಂದ ಗೌಪ್ಯತೆಯ ಶುಲ್ಕ, ಉಪಹಾರ ಗೃಹದಲ್ಲಿ ತಂಗಲು ನೋಂದಣಿ ಇತ್ಯಾದಿ ಹೆಸರಿನಲ್ಲಿ 5 ರಿಂದ 15 ಸಾವಿರ ರೂಪಾಯಿ ಸುಲಿಗೆ ಮಾಡುತ್ತಿದ್ದರು. ಹಣ ಪಡೆದ ನಂತರ ಆರೋಪಿಗಳು ಸಂಬಂಧಪಟ್ಟವರಿಗೆ ಯಾವುದೇ ಸೇವೆ ನೀಡುತ್ತಿರಲಿಲ್ಲ.