ಗೋಧಿಯ ಪ್ರಮುಖ ರಫ್ತುದಾರನಾಗಿರುವ ಉಕ್ರೇನ್ ಬಂದರಿನ ಮೇಲೆ ನಡೆದ ದಾಳಿಯಿಂದಾಗಿ, ಗೋಧಿಯ ಬೆಲೆ ಶೇ. 4 ರಷ್ಟು ಹೆಚ್ಚಳ !
ಕೀವ್ (ಉಕ್ರೇನ್) – ಉಕ್ರೇನ್‌ನ ಡ್ಯಾನ್ಯೂಬ್ ನದಿಯ `ಇಜ್ಮೇಲ್‘ ಬಂದರಿನ ಮೇಲೆ ರಷ್ಯಾ ದಾಳಿ ನಡೆಸಿದೆ. ಇಲ್ಲಿರುವ ಧಾನ್ಯದ ಒಂದು ಕಣಜವನ್ನು ನಷ್ಟಗೊಳಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ಧಾನ್ಯದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ, ಅಮೇರಿಕಾದಲ್ಲಿ ಗೋಧಿಯ ಬೆಲೆ ಶೇ. 4 ರಷ್ಟು ಹೆಚ್ಚಾಗಿದೆ. ಉಕ್ರೇನ್ ಪ್ರಪಂಚದಾದ್ಯಂತ ಅನೇಕ ದೇಶಗಳಿಗೆ ಧಾನ್ಯವನ್ನು ರಫ್ತು ಮಾಡುತ್ತದೆ. ಉಕ್ರೇನ್ ದೇಶದ ಧಾನ್ಯವು ಲಕ್ಷಾಂತರ ಜನರ ಹೊಟ್ಟೆ ತುಂಬಿಸುತ್ತದೆ.
ಒಡೆಸಾ ಪ್ರದೇಶದಲ್ಲಿರುವ ಈ ಬಂದರಿನಿಂದ ದೊಡ್ಡ ಪ್ರಮಾಣದಲ್ಲಿ ಧಾನ್ಯ ರಫ್ತು ಮಾಡುವುದರಿಂದ ರಷ್ಯಾ ಅದರ ಮೇಲೆಯೇ ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ. ಕಳೆದ ತಿಂಗಳು ರಷ್ಯಾ ಧಾನ್ಯವನ್ನು ರಫ್ತು ಮಾಡುವ ಉಕ್ರೇನ್‌ನ ಕಪ್ಪು ಸಮುದ್ರದ ಮಾರ್ಗದ ಮೇಲೆಯೇ ದಾಳಿ ನಡೆಸಿ ಅದನ್ನು ಬಂದ್ ಮಾಡಿತ್ತು. ತದನಂತರ ಧಾನ್ಯ ರಫ್ತಿಗೆ ಡಾನ್ಯೂಬ್ ನದಿಯ ಮಾರ್ಗ ಪ್ರಮುಖ ಪರ್ಯಾಯ ಮಾರ್ಗವಾಗಿತ್ತು. ಈಗ ಅದರ ಮೇಲೂ ದಾಳಿ ನಡೆದಿದೆ.
ಉಕ್ರೇನಿನ ಅಧ್ಯಕ್ಷ ವ್ಲೊಡಿಮಿರ್ ಝೆಲೆನ್ಸ್ಕಿಇವರು ಮಾತನಾಡುತ್ತಾ, “ದುರದೃಷ್ಟವಶಾತ್, ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ” ರಷ್ಯಾದ ಭಯೋತ್ಪಾದಕರು ನಮ್ಮ ಬಂದರುಗಳು, ಧಾನ್ಯ ಮತ್ತು ಜಾಗತಿಕ ಆಹಾರ ಭದ್ರತೆಯ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದರು.