ಎರಡನೇಯ ದಿನವೂ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ಸೀಮಾ ಹೈದರ ಮತ್ತು ಸಚಿನ ಇವರ ವಿಚಾರಣೆ

ಸೀಮಾ ಹೈದರ ಮತ್ತು ಸಚಿನ

ನೋಯ್ದಾ/ಗಾಝಿಯಾಬಾದ (ಉತ್ತರಪ್ರದೇಶ) – ಪಾಕಿಸ್ತಾನದಿಂದ ಬಂದಿರುವ ಸೀಮಾ ಹೈದರ ಮತ್ತು ಅವಳ ನೋಯ್ಡಾದ ಪ್ರಿಯಕರ ಸಚಿನ ಅವರನ್ನು ಜುಲೈ 17 ರಂದು ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ವಿಚಾರಣೆಗಾಗಿ ಅವರ ಕಚೇರಿಗೆ ಕರೆದೊಯ್ದ ಬಳಿಕ ಸುಮಾರು 8 ಗಂಟೆ ಅವರ ವಿಚಾರಣೆ ನಡೆಸಿದರು. ಹಾಗೆಯೇ ಎರಡನೇ ದಿನವೂ ವಿಚಾರಣೆ ಮುಂದುವರಿದಿತ್ತು. ಸೀಮಾ ಹೈದರ ಇವರ ಚಿಕ್ಕಪ್ಪ ಮತ್ತು ಸಹೋದರ ಪಾಕಿಸ್ತಾನಿ ಸೈನ್ಯದಲ್ಲಿದ್ದಾರೆ. ಉಗ್ರ ನಿಗ್ರಹ ದಳದ ಅಧಿಕಾರಿಗಳು ಅವರ ವಿಷಯದಲ್ಲಿ ಸೀಮಾ ಬಳಿ ವಿಚಾರಣೆ ಮಾಡಿದರು. ಇದಲ್ಲದೇ ಅವಳಿಗೆ ಪಾಕಿಸ್ತಾನದಿಂದ ದುಬೈ, ಅಲ್ಲಿಂದ ನೇಪಾಳ ಮತ್ತು ದೆಹಲಿಗೆ ಬರಲು ಯಾರು ಸಹಾಯ ಮಾಡಿದರು ? ಅವಳ ಬಳಿಯಿದ್ದ 4 ಮೊಬೈಲ್ ಎಲ್ಲಿವೆ ? ಮುಂತಾದವುಗಳ ಮಾಹಿತಿಯನ್ನು ಕೇಳಲಾಯಿತು. ಇನ್ನೊಂದೆಡೆ ಮುಂಬಯಿ ಪೊಲೀಸರಿಗೆ `ಸೀಮಾಳನ್ನು ಪಾಕಿಸ್ತಾನಕ್ಕೆ ಮರಳಿ ಕಳುಹಿಸಿರಿ ಇಲ್ಲವಾದರೆ 26/11 ರಂತಹ ದಾಳಿ ನಡೆಸುವುದಾಗಿ ಬೆದರಿಕೆಗಳು ಬಂದ ನಂತರ ಸೀಮಾ ವಾಸಿಸುತ್ತಿರುವ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

1. ಗುಪ್ತಚರ ಇಲಾಖೆಯು ಗಡಿಭದ್ರತಾ ಪಡೆಗಳಿಂದ ಸೀಮಾ ಭಾರತದಲ್ಲಿ ಪ್ರವೇಶಿಸಿರುವ ಬಗ್ಗೆ ಮಾಹಿತಿಯನ್ನು ಕೇಳಿದೆ. ಸೀಮಾ ನೇಪಾಳದಿಂದ ಬಿಹಾರದ ಸೀತಾಮಡಿ ಜಿಲ್ಲೆಯನ್ನು ದಾಟಿ ಭಾರತಕ್ಕೆ ಬಂದಳು, ಈ ಗಡಿಯಲ್ಲಿ ಗಡಿ ಭದ್ರತಾ ಪಡೆ ನೇಮಿಸಲಾಗಿದೆ. `ಸೀಮಾ ಹೈದರ ಮತ್ತು ಅವಳ 4 ಮಕ್ಕಳು ಪ್ರವಾಸಿ ವೀಸಾದಡಿಯಲ್ಲಿ ನೇಪಾಳದಿಂದ ಭಾರತದ ಗಡಿಯನ್ನು ದಾಟಿ ಭಾರತವನ್ನು ಹೇಗೆ ಪ್ರವೇಶಿಸಿದ್ದಾಳೆ ? ಎಲ್ಲಿ ತಪ್ಪಾಯಿತು? ಇದು ತಪ್ಪೋ ಅಥವಾ ಷಡ್ಯಂತ್ರವೋ ? ಎನ್ನುವ ಮಾಹತಿಯನ್ನು ಕೋರಲಾಗಿದೆ. ಈ ಸಂಪೂರ್ಣ ಪ್ರಕರಣದ ತನಿಖೆಗಾಗಿ ಗುಪ್ತಚರ ಇಲಾಖೆಯ ಒಂದು ತಂಡ ನೇಪಾಳಕ್ಕೂ ಹೋಗಲಿದೆ. ಸೀಮಾಳಿಗೆ ನೇಪಾಳ ಗಡಿಯನ್ನು ದಾಟಲು ಯಾರೋ ಸಹಾಯ ಮಾಡಿದ್ದಾರೆ ಎಂದು ಇಲಾಖೆ ಶಂಕಿಸಿದೆ. ಸೀಮಾಳನ್ನು ಭಾರತಕ್ಕೆ ಕರೆತಂದ ವ್ಯಕ್ತಿಯು ಪ್ರಭಾವಿಯಾಗಿದ್ದಿರಬೇಕೆಂದು ಸಂಶಯವೂ ವ್ಯಕ್ತವಾಗಿದೆ.

2. ಸೀಮಾ ಹೈದರ ಪಾಕಿಸ್ತಾನದ ಗೂಢಚಾರಣಿಯಾಗಿದ್ದಾಳೆಂದು ತನಿಖೆಯಿಂದ ಸಾಬೀತಾದರೆ ಆಕೆ ಹಾಗೂ ಸಚಿನ್ ಇಬ್ಬರನ್ನೂ ಬಂಧಿಸುವ ಸಾಧ್ಯತೆಯಿದೆ. ಆಕೆ ಗೂಢಚಾರಣಿ ಇಲ್ಲದಿದ್ದರೆ ಆಕೆಯನ್ನು ಪಾಕಿಸ್ತಾನಕ್ಕೆ ಕಳುಹಿಸಬಹುದು. ಆಕೆಗೆ ಪಾಕಿಸ್ತಾನದಲ್ಲಿ ಜೀವ ಬೆದರಿಕೆ ಇರುವ ಕಾರಣ, ಅವಳು ಭಾರತದ ಬಳಿ ಆಶ್ರಯವನ್ನೂ ಕೋರಬಹುದು. ಇಂತಹ ಸಮಯದಲ್ಲಿ ಸರಕಾರಕ್ಕೆ ನಿರ್ಣಯವನ್ನು ತೆಗೆದುಕೊಳ್ಳಬೇಕಾಗುವುದು.