ಇನ್ನು ಪ್ರತಿಯೊಂದು ಟ್ರಕ್‌ನಲ್ಲಿ ಹವಾನಿಯಂತ್ರಿತ ಯಂತ್ರ ಇರುವುದು ಕಡ್ಡಾಯವಾಗಲಿದೆ !

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ ಗಡಕರಿ ಇವರ ಘೋಷಣೆ

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ ಗಡಕರಿ

ನವ ದೆಹಲಿ – ಈಗ ದೇಶದ ಪ್ರತಿಯೊಂದು ಟ್ರಕ್‌ನ ಚಾಲಕರ ಕ್ಯಾಬಿನಲ್ಲಿ ಎಸಿ, ಎಂದರೆ ಹವಾನಿಯಂತ್ರಿತ ಯಂತ್ರ ಅಳವಡಿಸುವುದು ಕಡ್ಡಾಯ ಮಾಡಲಾಗಿದೆ. ೨೦೨೫ ರಿಂದ ಈ ನಿರ್ಣಯ ಜಾರಿ ಮಾಡಲಾಗುವುದು, ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವರಾದ ನಿತಿನ್ ಗಡಕರಿ ಇವರು ಘೋಷಿಸಿದರು. ಗಡಕರಿ ಇವರು ಈ ನಿಯಮ ಜಾರಿಗೊಳಿಸುವ ಪ್ರಸ್ತಾವನೆಗೆ ಸಹಿ ಮಾಡಿದ್ದಾರೆ. ಕಠಿಣ ಪರಿಸ್ಥಿತಿ ಮತ್ತು ರಸ್ತೆಯ ಅವಸ್ಥೆಗಳಿಂದಾಗಿ ಗಂಟೆಗಟ್ಟಲೆ ಟ್ರಕ್ ಚಲಾಯಿಸುವ ಚಾಲಕರು ದಣಿಯುತ್ತಾರೆ. ಇದೇ ಕಾರಣದಿಂದ ಅನೇಕ ದುರ್ಘಟನೆಗಳೂ ಆಗುತ್ತವೆ; ಹಾಗಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಗಡಕರಿಯವರು ಹೇಳಿದರು.

ಗಡಕರಿ ಮಾತು ಮುಂದುವರಿಸಿ, ‘ನಮ್ಮ ದೇಶದಲ್ಲಿ ಕೆಲವು ಚಾಲಕರು ೧೨ ರಿಂದ ೧೪ ಗಂಟೆ ವಾಹನ ಓಡಿಸುತ್ತಾರೆ. ಇತರ ದೇಶಗಳಲ್ಲಿ ಬಸ್ ಮತ್ತು ಟ್ರಕ್ ಚಾಲಕರಿಗೆ ಕೆಲಸದ ಗಂಟೆ ನಿಶ್ಚಿತಗೊಳಿಸಲಾಗಿದೆ. ನಮ್ಮ ದೇಶದಲ್ಲಿನ ಚಾಲಕರು ೪೩ ರಿಂದ ೪೭ ಸೆಲ್ಸಿಯಸ್ ತಾಪಮಾನದಲ್ಲಿ ಕೂಡ ವಾಹನ ಓಡಿಸುತ್ತಾರೆ, ಇದರಿಂದ ನಾವು ನಮ್ಮಲ್ಲಿನ ಚಾಲಕರ ಪರಿಸ್ಥಿತಿಯ ಅಂದಾಜು ಮಾಡಬಹುದು, ಎಂದರು.

ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ವಾಹನ ಉದ್ಯಮಕ್ಕೆ ಈ ನಿಯಮದ ಪ್ರಕಾರ ಬದಲಾವಣೆ ಮಾಡುವುದಕ್ಕಾಗಿ ೧೮ ತಿಂಗಳ ಸಮಯದ ಅವಶ್ಯಕತೆ ಇದೆ. ರಸ್ತೆ ಮತ್ತು ಸಂಚಾರ ಸಚಿವಾಲಯದಿಂದ ಮೊದಲ ಬಾರಿಗೆ ೨೦೧೬ ರಲ್ಲಿ ಈ ಕುರಿತಾದ ಪ್ರಸ್ತಾವನೆ ಮಂಡಿಸಿತ್ತು.