೧೦ ವರ್ಷಗಳ ನಂತರ ಪ್ರಬಲವಾದ ಪುರಾವೆಗಳ ಅಭಾವದಿಂದಾಗಿ ನಿರಪರಾಧಿ ಎಂದು ಬಿಡುಗಡೆ !

ಗುಜರಾತಿನ ಬೆಸ್ಟ್ ಬೇಕರಿ ಪ್ರಕರಣದ ತೀರ್ಪು

ಗುಜರಾತ – ಇಲ್ಲಿನ ಬೆಸ್ಟ್ ಬೇಕರಿಯ ಪ್ರಕರಣದಲ್ಲಿ ಮುಂಬೈನ ವಿಭಾಗೀಯ ಪೀಠವು ತೀರ್ಪು ನೀಡಿದೆ. ನ್ಯಾಯಾಲಯವು ಹರ್ಷದ ರಾವಜೀಭಾಯಿ ಸೋಲಂಕಿ ಹಾಗೂ ಮಫತ ಮಣಿಲಾಲ ಗೋಹಿಲ ಎಂಬ ಇಬ್ಬರು ಆರೋಪಿಗಳನ್ನು ಪ್ರಬಲವಾದ ಪುರಾವೆಗಳ ಅಭಾವದಿಂದಾಗಿ ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಈ ಇಬ್ಬರೂ ಕಳೆದ ೧೦ ವರ್ಷಗಳಿಂದ ಜೈಲಿನಲ್ಲಿದ್ದರು. ಡಿಸೆಂಬರ್ ೧೩, ೨೦೧೩ ರಲ್ಲಿ ಅವರನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿತ್ತು. ಈ ಪ್ರಕರಣವು ೨೧ ವರ್ಷ ಹಳೆಯದಾಗಿದ್ದು ಗುಜರಾತಿನ ೨೦೦೨ರ ದಂಗೆಗೆ ಸಂಬಂಧಿಸಿದೆ.

ಏನು ಈ ಪ್ರಕರಣ ?

೨೦೦೨ರಲ್ಲಿ ಗೋಧ್ರಾ ಘಟನೆಯ ನಂತರ ಗುಜರಾತಿನಲ್ಲಿ ಸಿಡಿದೆದ್ದ ದಂಗೆಯಲ್ಲಿ ಗುಂಪು ಆಕ್ರಮಣದಲ್ಲಿ ವಡೋದರಾದಲ್ಲಿನ ಬೆಸ್ಟ್ ಬೇಕರಿಯನ್ನು ಸುಟ್ಟುಹಾಕಲಾಗಿತ್ತು. ಇದರಲ್ಲಿ ೧೪ ಜನರು ಸಾವನ್ನಪ್ಪಿದ್ದರು. ಬೇಕರಿಯನ್ನು ಸುಡುವ ಮೊದಲು ಅದನ್ನು ದೋಚಲಾಗಿತ್ತು. ಈ ಪ್ರಕರಣದಲ್ಲಿ ಬೇಕರಿಯ ಮಾಲೀಕನ ಮಗಳಾದ ಝಹಿರಾ ಶೇಖರವರ ದೂರಿನ ಮೇರೆಗೆ ೨೧ ಜನರ ವಿರುದ್ಧ ದೂರನ್ನು ದಾಖಲಿಸಲಾಗಿತ್ತು. ೨೦೦೩ ರಲ್ಲಿ ಶೀಘ್ರಗತಿಯ ನ್ಯಾಯಾಲಯವು ಪುರಾವೆಗಳ ಅಭಾವದಿಂದಾಗಿ ಎಲ್ಲ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿತ್ತು. ಈ ಖಟ್ಲೆಯಲ್ಲಿ ಝಹಿರಾ ಶೇಖಳೊಂದಿಗೆ ಇತರ ಸಾಕ್ಷಿದಾರರನ್ನು ಪಕ್ಷಪಾತಿ ಎಂದು ಘೋಷಿಸಿತ್ತು. ಅನಂತರ ಸತ್ರ ನ್ಯಾಯಾಲಯದ ಈ ತೀರ್ಪನ್ನು ಗುಜರಾತ ಉಚ್ಚ ನ್ಯಾಯಾಲಯವು ಶಾಶ್ವತವಾಗಿಸಿತು. ಸಾಮಾಜಿಕ ಕಾರ್ಯಕರ್ತೆಯಾದ ತೀಸ್ತಾ ಸೆಟಲವಾಡರ ಸಹಾಯದಿಂದ ಝಹಿರಾಳು ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಳು. ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಪುನಃ ಖಟ್ಲೆಯನ್ನು ನಡೆಸಲು ಆದೇಶಿಸುತ್ತ ಪ್ರಕರಣವನ್ನು ಗುಜರಾತಿನ ಹೊರಗೆ ನಡೆಸುವ ಬಗ್ಗೆ ತಿಳಿಸಿತು. ಅನಂತರ ಈ ಪ್ರಕ್ರಣವನ್ನು ಮುಂಬೈಗೆ ವರ್ಗಾಯಿಸಲಾಯಿತು.

ಹರ್ಷದ ರಾವಜೀಭಾಯಿ ಸೋಲಂಕಿ ಹಾಗೂ ಮಫತ ಮಣಿಲಾಲ ಗೋಹಿಲರೊಂದಿಗೆ ಇನ್ನಿಬ್ಬರನ್ನು ತನಿಖಾದಳವು ಅಜಮೇರ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಂಧಿಸಿತ್ತು. ಮುಂಬೈನಲ್ಲಿ ನಡೆಸಲಾದ ಖಟ್ಲೆಯಲ್ಲಿ ಈ ಇಬ್ಬರು ಆರೋಪಿಗಳನ್ನು ಪರಾರಿಯಾಗಿದ್ದಾರೆ ಎಂದು ಘೋಷಿಸಲಾಗಿತ್ತು. ಮುಂಬೈ ನ್ಯಾಯಾಲಯವು ಈ ಪ್ರಕರಣದಲ್ಲಿ ೨೧ರಲ್ಲಿ ೯ ಜನರನ್ನು ಅಪರಾಧಿಗಳೆಂದು ಹೇಳಿ ಜೀವಾವಧಿ ಶೇಕ್ಷೆಯನ್ನು ವಿಧಿಸಿದರೆ ೮ ಆರೋಪಿಗಳನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿತ್ತು. ಈ ತೀರ್ಪು ಬರುವ ಸಮಯಕ್ಕೆ ಬಹಳಷ್ಟು ಆರೋಪಿಗಳು ಸಾವನ್ನಪ್ಪಿದ್ದರು. ೨೦೧೨ರಲ್ಲಿ ಜೀವಾವಧಿಯಾದ ೯ ಜನರಲ್ಲಿ ೫ ಜನರನ್ನು ಬಿಡುಗಡೆಗೊಳಿಸಲಾಯಿತು. ೨೦೧೩ರಲ್ಲಿ ಬಂಧನದಲ್ಲಿದ್ದ ೪ ಜನರಲ್ಲಿ ೨ ಆರೋಪಿಗಳು ಸಾವನ್ನಪ್ಪಿದರು. ಉಳಿದ ಹರ್ಷದ ರಾವಜೀಭಾಯಿ ಸೋಲಂಕಿ ಹಾಗೂ ಮಫತ ಮಣಿಲಾಲ ಗೋಹಿಲರು ಜೈಲಿನಲ್ಲಿಯೇ ಇದ್ದರು. ಈಗ ಅವರ ಬಿಡುಗಡೆಯೂ ಆಯಿತು.