ಗುರುತುಪತ್ರ ಇಲ್ಲದೆ ೨000 ರೂಪಾಯಿ ನೋಟುಗಳ ಬದಲಾವಣೆಯನ್ನು ವಿರೋಧಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ

ನವ ದೆಹಲಿ – 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದ್ದು ಅವುಗಳನ್ನು ಬ್ಯಾಂಕ್‌ಗಳಿಂದ ಬದಲಾಯಿಸಿ ಪಡೆದುಕೊಳ್ಳಲು ಸೂಚಿಸಿದೆ. ನೋಟುಗಳ ಬದಲಾವಣೆಗೆ ಯಾವುದೇ ಗುರುತು ಪತ್ರ ಅಥವಾ ಯಾವುದೇ ಅರ್ಜಿ ತುಂಬಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಈ ನಿರ್ಧಾರದ ವಿರುದ್ಧ ಭಾಜಪದ ಮುಖಂಡ ಹಾಗೂ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಶ್ರೀ. ಉಪಾಧ್ಯಾಯ ಇವರು ಅರ್ಜಿಯಲ್ಲಿ, ರಿಸರ್ವ್ ಬ್ಯಾಂಕ್ ನ ಈ ನಿರ್ಧಾರವು ಸ್ವೇಚ್ಛೆ, ತರ್ಕರಹಿತ ಮತ್ತು ಸಂವಿಧಾನದ 14 ನೇ ವಿಧಿಯ(ಕಲಂ) ಉಲ್ಲಂಘನೆಯಾಗಿದೆ. ಈ ರೀತಿಯ ನಿರ್ಧಾರದಿಂದ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ಮಾವೋವಾದಿಗಳು, ಮಾದಕವಸ್ತು ಕಳ್ಳಸಾಗಣೆದಾರರು, ಮಾಫಿಯಾ, ಭ್ರಷ್ಟರು ಮುಂತಾದವರು ಇದರ ಲಾಭ ಪಡೆದು ಕಪ್ಪುಹಣವನ್ನು ಬಿಳಿಯಾಗಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಈ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಇದರಿಂದ ಕಪ್ಪುಹಣವನ್ನು ನಿಯಂತ್ರಿಸಬಹುದು. ದೇಶದಲ್ಲಿ ಈಗ ಪ್ರತಿಯೊಬ್ಬ ವ್ಯಕ್ತಿಯ ಬಳಿ ಬ್ಯಾಂಕ್ ಖಾತೆ ಇದೆ. ಹೀಗಿರುವಾಗ ರಿಸರ್ವ್ ಬ್ಯಾಂಕ್ ಗುರುತುಪತ್ರವಿಲ್ಲದೆ ನೋಟುಗಳ ಬದಲಾವಣೆಯನ್ನು ಏಕೆ ಅನುಮತಿಸುತ್ತಿದೆ? ಎಂದು ವಿಚಾರಿಸಲಾಗಿದೆ.