ಫ್ರಾನ್ಸ್ ನ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಶೇಷ ಅತಿಥಿ !

ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ನವ ದೆಹಲಿ – ಫ್ರಾನ್ಸ್‌ನ ರಾಷ್ಟ್ರೀಯ ದಿನದಂದು, ಅಂದರೆ ಜುಲೈ ೧೪, ೨೦೨೩ ರಂದು ರಾಜಧಾನಿ ಪ್ಯಾರಿಸ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರತಿ ವರ್ಷ ಜುಲೈ ೧೪ ರಂದು ಫ್ರಾನ್ಸ್‌ನಲ್ಲಿ ‘ಬಾಸ್ಟಿಲ್ ಡೇ ಪರೇಡ್’ ಅನ್ನು ಆಯೋಜಿಸಲಾಗುತ್ತದೆ. ಈ ಪರೇಡ್‌ನಲ್ಲಿ ಫ್ರೆಂಚ್ ಸೇನೆಯೊಂದಿಗೆ ಭಾರತೀಯ ಸಶಸ್ತ್ರ ಪಡೆಗಳ ಒಂದು ಗುಂಪು ಭಾಗವಹಿಸಲಿದೆ. ಈ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.

ಫ್ರಾನ್ಸ್‌ನ ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಸಂತೋಷವನ್ನು ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಅವರು, ‘ಜುಲೈ ೧೪ ರ ಕಾರ್ಯಕ್ರಮಕ್ಕಾಗಿ ನಿಮ್ಮನ್ನು ಪ್ಯಾರಿಸ್‌ಗೆ ಸ್ವಾಗತಿಸಲು ನಾನು ತುಂಬಾ ಸಂತೋಷಪಡುತ್ತೇನೆ ಎಂದು ಬರೆದಿದ್ದಾರೆ. ಮ್ಯಾಕ್ರನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ‘ಧನ್ಯವಾದ ಸ್ನೇಹಿತ’ ಎಂದು ಹೇಳಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯವು, ಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ ೨೫ ವರ್ಷಗಳು ಪೂರ್ಣಗೊಂಡಿದ್ದರಿಂದ ಪ್ರಧಾನಿಯವರ ಭೇಟಿಗೆ ವಿಶೇಷ ಮಹತ್ವವಿದೆ ಎಂದು ಹೇಳಿದೆ. ಪ್ರಧಾನಿ ಮೋದಿಯವರ ಭೇಟಿಯು ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಹೊಸ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ನಿರ್ಧರಿಸುವ ಮೂಲಕ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ. ಜುಲೈ ೧೪, ೧೭೮೯ ರಂದು, ಫ್ರಾನ್ಸ್ನ ಜನರು ರಾಜಪ್ರಭುತ್ವಕ್ಕೆ ಸೇರಿದ ಬಾಸ್ಟಿಲ್ ಮೇಲೆ ದಾಳಿ ಮಾಡಿದ್ದರು. ಇದರ ನಂತರ, ಫ್ರೆಂಚ್ ಕ್ರಾಂತಿ ಪ್ರಾರಂಭವಾಯಿತು. ಈ ಘಟನೆಯನ್ನು ಫ್ರಾನ್ಸ್ ಇತಿಹಾಸದಲ್ಲಿ ಬಹಳ ಮುಖ್ಯವಾದ ಘಟನೆ ಎಂದು ಪರಿಗಣಿಸಲಾಗಿದೆ. ಫ್ರಾನ್ಸ್ ಈ ಘಟನೆಯನ್ನು ತನ್ನ ‘ರಾಷ್ಟ್ರೀಯ ದಿನ’ ಎಂದು ಆಚರಿಸುತ್ತದೆ.