ಸಾಧಕರೇ, ಸುಖಭೋಗಗಳಲ್ಲಿ ರಮಿಸಿ ಸಾಧನೆಯ ಹಾನಿಯನ್ನು ಮಾಡಬೇಡಿ !

(ಪೂ.) ಶ್ರೀ. ಸಂದೀಪ ಆಳಶಿ,

‘ಕೆಲವು ಸಾಧಕರು ದಿನವಿಡಿ ಸಾಧನೆಯನ್ನು ಮಾಡುತ್ತಾರೆ ಮತ್ತು ರಾತ್ರಿ ಮಲಗುವ ಮೊದಲು  ಮನಸ್ಸು ಮತ್ತು ಬುದ್ಧಿಗೆ ಸ್ವಲ್ಪ ಸುಖದಾಯಕ ಬದಲಾವಣೆ ಸಿಗಬೇಕೆಂದು ಸಂಚಾರವಾಣಿಯಲ್ಲಿ ಮನೋರಂಜನೆಯ ಕಾರ್ಯಕ್ರಮ ನೋಡುತ್ತಾರೆ. ಕೆಲವು ಸಾಧಕರು ನಕಾರಾತ್ಮಕತೆ ಅಥವಾ ನಿರಾಶೆಯನ್ನು ದೂರಗೊಳಿಸಲು ಸಹ ಈ ಮಾರ್ಗವನ್ನು ಅವಲಂಬಿಸುತ್ತಾರೆ. ಕೆಲವು ಸಾಧಕರು ಆಗಾಗ ಭೂತಕಾಲದ ಸುಖದ ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತಾರೆ ಅಥವಾ ಭವಿಷ್ಯದಲ್ಲಿನ ಸುಖಕರ ಕಲ್ಪನೆಗಳ ಮನೋರಾಜ್ಯದಲ್ಲಿ ವಿಹರಿಸುತ್ತಾರೆ. ‘ಭೂತಕಾಲ ಅಥವಾ ಭವಿಷ್ಯಕಾಲದಲ್ಲಿ ರಮಿಸುವುದೆಂದರೆ’ ‘ವರ್ತಮಾನ ಕಾಲದ ಪರಿಸ್ಥಿತಿ ಸ್ವೀಕರಿಸಲು ಬರದಿರುವುದು.’ ಸದ್ಯ ತೀವ್ರ ಆಪತ್ಕಾಲ ನಡೆಯುತ್ತಿರುವುದರಿಂದ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಗಿದ್ದು ಅವು ಸಾಧಕರ ಮನಸ್ಸು ಮತ್ತು ಬುದ್ಧಿಯ ಮೇಲೆ ಆವರಣ ಹಾಕಿ ಮೇಲಿನಂತೆ ಮಾಯೆಯಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿವೆ.

ಸುಖೋಪಭೋಗಗಳಿಂದ ಮನಸ್ಸು ವಿಕಾರಗಳಲ್ಲಿ ಸಿಕ್ಕಿ ಕೊಳ್ಳುತ್ತದೆ, ವೃತ್ತಿ ಬಹಿರ್ಮುಖವಾಗುತ್ತದೆ, ಹಾಗೆಯೇ ದೇಹ, ಮನಸ್ಸು ಮತ್ತು ಬುದ್ಧಿಯ ಮೇಲೆ ರಜ-ತಮದ ಆವರಣ ಬರುತ್ತದೆ. ಇವೆಲ್ಲವುಗಳಿಂದ ಕೆಟ್ಟ ಶಕ್ತಿಗಳ ತೊಂದರೆಯೂ ಹೆಚ್ಚಾಗುತ್ತದೆ. ‘ಈಶ್ವರಪ್ರಾಪ್ತಿ’ಯ ಏಕೈಕ ಉದ್ದೇಶದಿಂದ ಸಾಧಕರು ಸಾಧನೆಯನ್ನು ಆರಂಭಿಸಿದ್ದರಿಂದ ಅವರು ‘ಸುಖೋಪಭೋಗಗಳಲ್ಲಿ ಸುಖಪಡುವುದೆಂದರೆ, ಸಾಧನೆಯ ಮೂಲ ಉದ್ದೇಶದಿಂದ ದೂರ ಹೋಗುವುದಾಗಿದೆ.

‘ಮನಸ್ಸು ಮತ್ತು ಬುದ್ಧಿಗೆ ಸುಖಕರ ಬದಲಾವಣೆ ಸಿಗ ಬೇಕೆಂದು ಮನೋರಂಜನಾ ಕಾರ್ಯಕ್ರಮಗಳನ್ನು ನೋಡುವುದು ಅಥವಾ ಮನೋರಾಜ್ಯದಲ್ಲಿ ವಿಹರಿಸುವುದು’, ಇದರ ಅರ್ಥ ನಮಗೆ ಸಾಧನೆ ಮತ್ತು ಸೇವೆಗಳಿಂದ ಅಷ್ಟೊಂದು ಆನಂದ ಸಿಗುವುದಿಲ್ಲ ಎಂದಾಗುತ್ತದೆ. ಸುಖೋಪಭೋಗಗಳಿಗೆ ಅಧೀನವಾಗಿರುವುದರಿಂದ ನಾವು ನಿಜವಾದ ಆನಂದದಿಂದ ಇನ್ನೂ ದೂರ ಹೋಗುತ್ತೇವೆ. ನಿಜವಾಗಿ ನೋಡಿದರೆ ಸಾಧನೆ ಮತ್ತು ಸೇವೆಗಳಿಂದ ದೊರಕುವ ಆನಂದದಿಂದ ಮನಸ್ಸು ತುಂಬಿ ಹೋದರೆ, ಬಾಹ್ಯ ಸುಖದ ಕಡೆಗೆ ಮನಸ್ಸು ಧಾವಿಸುವುದೇ ಇಲ್ಲ. ಹಾಗಾಗಿ ಸಾಧನೆಯ ಪ್ರಯತ್ನ ಮತ್ತು ನಾವು ಮಾಡುತ್ತಿರುವ ಪ್ರತಿಯೊಂದು ಸೇವೆಯಿಂದ, ತೀರಾ ಶೌಚಾಲಯದ ಸ್ವಚ್ಛತೆ ಮಾಡುವ ಸೇವೆಯಿಂದಲೂ ಆನಂದ ಪಡೆಯಲು ಪ್ರಯತ್ನಿಸಬೇಕು.

ಮನಸ್ಸು ಮತ್ತು ಬುದ್ಧಿಗೆ ಬದಲಾವಣೆ ಬೇಕೆನಿಸಿದಾಗ, ಸಂತರ ಭಜನೆಗಳಲ್ಲಿ ಮನಸ್ಸನ್ನು ತೊಡಗಿಸುವುದು, ನಾಮಜಪ ವನ್ನು ಏಕಾಗ್ರತೆಯಿಂದ ಮಾಡಿ ಆನಂದ ಪಡೆಯಲು ಪ್ರಯತ್ನಿಸುವುದು, ಚಿಕ್ಕಪುಟ್ಟ ಭಾವಪ್ರಯೋಗ (ಉದಾ. ‘ಗುರುಗಳ ಕೈ ನನ್ನ ತಲೆಯ ಮೇಲಿದೆ’, ಎಂಬ ಭಾವವನ್ನಿಟ್ಟುಕೊಳ್ಳುವುದು) ಗಳನ್ನು ಮಾಡುವುದು ಇವುಗಳಂತಹ ಕೃತಿಗಳನ್ನು ಮಾಡಿ ಭಗವಂತನ ಅನುಸಂಧಾನದಲ್ಲಿರಲು ಪ್ರಯತ್ನಿಸಬೇಕು. ಈ ಪ್ರಯತ್ನಗಳನ್ನು ಸಾಧಿಸಲು ಅವಶ್ಯಕತೆಗನುಸಾರ ಮನಸ್ಸಿಗೆ ಸ್ವಯಂಸೂಚನೆಗಳನ್ನೂ ಕೊಡಬೇಕು. ಆಧ್ಯಾತ್ಮಿಕ ತೊಂದರೆಗಳಿಂದ ಮನಸ್ಸು ಮಾಯೆಯ ಕಡೆಗೆ ಹೋಗುತ್ತಿದ್ದರೆ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಬೇಕು ಅಥವಾ ಮಾಡುತ್ತಿರುವ ಉಪಾಯಗಳನ್ನು ಹೆಚ್ಚಿಸಬೇಕು.

ಅನೇಕ ಜನ್ಮಗಳ ಸಂಸ್ಕಾರಗಳಿಂದ ಮನಸ್ಸು ಮಾಯೆಯ ವಿಷಯಗಳಲ್ಲಿ ಸುಖ ಹುಡುಕಲು ಪ್ರಯತ್ನಿಸುತ್ತಿರುತ್ತದೆ. ನಾವು ಮನಸ್ಸನ್ನು ಪ್ರಯತ್ನಪೂರ್ವಕ ಭಗವಂತನನ ಅನುಸಂಧಾನದಲ್ಲಿರಿಸಿದರೆ, ನಿಧಾನವಾಗಿ ಮನಸ್ಸಿಗೆ ಆ ಪ್ರಯತ್ನಗಳಿಂದ ಆನಂದವನ್ನು ಪಡೆಯುವ ಅಭ್ಯಾಸವಾಗುತ್ತದೆ. ಒಮ್ಮೆ ಹೀಗಾದರೆ, ಮನಸ್ಸು ಮಾಯೆಯಲ್ಲಿನ ಸುಖಗಳ ಕಡೆಗೆ ಹೊರಳುವುದಿಲ್ಲ.

ಸಾಧಕರೇ, ದಿನವಿಡಿ ಸಾಧನೆಯ ಪ್ರಯತ್ನಗಳಿಂದ ದೊರಕಿದ ಚೈತನ್ಯವನ್ನು ಮೇಲಿನ ರೀತಿಯಲ್ಲಿ ಮಾಯೆಯಲ್ಲಿನ ವಿಷಯಗಳಲ್ಲಿ ಖರ್ಚು ಮಾಡಿದರೆ ನಮ್ಮ ಸಾಧನೆಯಲ್ಲಿನ ಪ್ರಗತಿ  ಹೇಗೆ ಆಗುವುದು ? ಆದುದರಿಂದ ಸುಖೋಪಭೋಗಗಳಲ್ಲಿ ಸುಖಪಡಲು ಪ್ರಯತ್ನಿಸಬೇಡಿ ! ಅದರ ಬದಲು ಸಾಧನೆಯನ್ನು ಹೆಚ್ಚಿಸಿ ಆನಂದವನ್ನು ಪಡೆಯಿರಿ ! ನಮಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಂತಹ ‘ಮೋಕ್ಷ ಗುರುಗಳು ಲಭಿಸಿದ್ದಾರೆ, ಇದರ ಲಾಭ ಪಡೆದು ಇದೇ ಜನ್ಮದಲ್ಲಿ ಮೋಕ್ಷಪ್ರಾಪ್ತಿ ಮಾಡಿಕೊಳ್ಳಿ !

– (ಪೂ.) ಸಂದೀಪ ಆಳಶಿ (೬.೩.೨೦೨೩)

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.