ಹಿಂದೂ ಜನಜಾಗೃತಿ ಸಮಿತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಮನವಿ
ಬೆಂಗಳೂರು : ‘ರಾಮನ ಅವತಾರ’ ಎಂಬ ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಕೋಟ್ಯಾಂತರ ಹಿಂದೂಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಮರ್ಯಾದ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಚಾರಿತ್ರ್ಯಕ್ಕೆ ಕಳಂಕ ಬರುವಂತೆ ಚಿತ್ರಿಸಿದ್ದಾರೆ. ರಾಮನ ಅವತಾರ ರಘುಕುಲ ಸೋಮನ ಅವತಾರ ಎಂದು ಉಲ್ಲೇಖಿಸಿ ಚಿತ್ರದ ನಾಯಕ ಮಧ್ಯ ಸೇವಿಸುವುದು, ದುಶ್ಚಟಗಳಿಗೆ ದಾಸನಾಗಿರುವುದನ್ನು ತೋರಿಸಲಾಗಿದೆ. ಈ ರೀತಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ದೃಶ್ಯಗಳನ್ನು ತೆಗೆದು ಹಾಕಬೇಕು ಮತ್ತು ಬೇಷರತ್ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದೆ ಕಾನೂನು ಕ್ರಮ ಜರುಗಿಸಲು ಮುಂದಾಗುತ್ತೇವೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಮನವಿ ನೀಡಲಾಯಿತು ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ, ಹಿಂದೂ ಬ್ರಹ್ಮಚಾರಿ ಸಂಘದ ಶ್ರೀ. ಗಿರೀಶ್ ಕುಮಾರ್ ಬಿ, ನ್ಯಾಯವಾದಿ ಸುನೀಲ್ ಹೆಳವಾರ್, ವಕೀಲೆ ಸ್ವರಾಗ್ನೀ ಮೂರ್ತಿ, ಶ್ರೀ. ಮಂಜುನಾಥ್ ರಾವ್, ಶ್ರೀ. ಪುರುಷೋತ್ತಮ, ಶ್ರೀ. ನರಸಿಂಹ ಮತ್ತಿತರ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಿನಿಮಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗಿದೆ. ಇದು ಭಾರತೀಯ ದಂಡ ಸಂಹಿತೆ 295, 298 ಮತ್ತು 295 ಎ ಪ್ರಕಾರ ಗಂಭೀರ ಅಪರಾಧವಾಗಿದೆ. ಅದಲ್ಲದೇ ಸಿನಿಮಾಟೋಗ್ರಾಫ್ ಆಕ್ಟ್ 1952 ನ ಕಲಂ 5ಬಿ ಪ್ರಕಾರ ಇದು ಸೆನ್ಸಾರ್ ಮಂಡಳಿ ನಿಯಮದ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕಳೆದ ಸೋಮವಾರ, ಏಪ್ರಿಲ್ 17 ರಂದು ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷರಿಗೂ ಮನವಿ ಮಾಡಿದ್ದರು. ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶ್ರೀ. ಬಿ.ಎಂ ಹರೀಶ್ ಇವರನ್ನು ಭೇಟಿ ಮಾಡಿ ಇಂತಹ ಅಹಿತಕರ ಘಟನೆಗಳು ಮುಂದುವರೆಯದಂತೆ ಎಚ್ಚರವಹಿಸಿ, ಚಲನಚಿತ್ರ ನಿರ್ಮಾಪಕರು ಮತ್ತು ನಿದೇರ್ಶಕರು, ತಂತ್ರಜ್ಞರಿಗೆ ಮತ್ತು ಈ ಚಿತ್ರದಲ್ಲಿ ಅಭಿನಯಿಸಿರುವ ನಟ, ನಟಿಯರಿಗೆ ಇನ್ನು ಮುಂದೆ ಈ ರೀತಿಯ ಆಕ್ಷೇಪಾರ್ಹ ದೃಶ್ಯಗಳು ಕಂಡುಬಾರದಂತೆ ಸೂಚನೆ ನೀಡಬೇಕು, ಯಾವುದೇ ಕಾರಣಕ್ಕೂ ಸಹ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಪಡೆಯಲು ಮಂಡಳಿಯಿಂದ ಯಾವುದೇ ರೀತಿಯ ಶಿಪಾರಸ್ಸು ನೀಡಬಾರದೆಂದು ಆಗ್ರಹಿಸಿ ಮನವಿ ನೀಡಿದ್ದಾರೆ.