ಭಾರತದ ಐತಿಹಾಸಿಕ ತೈಲಸಮೃದ್ಧಿ ಮತ್ತು ಆಕ್ರಮಣಕಾರಿ ಮುತ್ಸದ್ದಿತನ !

ಡಾ. ಶೈಲೇಂದ್ರ ದೇವಳಾಣಕರ

ರಷ್ಯಾ ಮತ್ತು ಯುಕ್ರೇನ್ ಯುದ್ಧಕ್ಕೆ ಈಗ ೧ ವರ್ಷ ಪೂರ್ಣವಾಯಿತು. ವಾಸ್ತವದಲ್ಲಿ ಈ ಯುದ್ಧ ಪ್ರಾರಂಭವಾದಾಗ ‘ಈ ಯುದ್ಧ ೩-೪ ದಿನಗಳಲ್ಲಿ ಮುಗಿಯಬಹುದು ಮತ್ತು ಬಲಿಷ್ಠ ಯುದ್ಧ ಸಾಮರ್ಥ್ಯವಿರುವ ರಷ್ಯಾದ ಮುಂದೆ ಯುಕ್ರೇನ್ ಉಳಿಯಲಾರದು’, ಎಂಬ ‘ಅಂದಾಜನ್ನು ಅನೇಕ ಅಧ್ಯಯನಕಾರರು ಮಾಡಿದ್ದರು, ಆದರೆ ಹಾಗಾಗಲಿಲ್ಲ. ತದ್ವಿರುದ್ಧ ಇತ್ತೀಚೆಗಷ್ಟೆ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್ ಇವರು ಎಲ್ಲರಿಗೆ ಆಶ್ಚರ್ಯಕರ ಆಘಾತವನ್ನು ನೀಡುತ್ತಾ ಯುಕ್ರೇನ್‌ಗೆ ಭೇಟಿ ನೀಡಿದುದರಿಂದ ಈ ಯುದ್ಧ ಇನ್ನೂ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಇನ್ನೊಂದೆಡೆ ಬಾಯಡೇನ್ ಇವರ ಪ್ರವಾಸದ ನಂತರ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತಿನ್ ಇವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಒಂದುವರೆ ಗಂಟೆಯ ಭಾಷಣದಲ್ಲಿ ‘ಯಾವುದೇ ಪರಿಸ್ಥಿತಿಯಲ್ಲಿ ಈ ಯುದ್ಧ ದಿಂದ ಹಿಂದೆ ಸರಿಯುವುದಿಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಅವರ ಭಾಷಣದಲ್ಲಿ ೫ ಬಾರಿ ಅಣ್ವಸ್ತ್ರದ ಉಲ್ಲೇಖ ವಾಗಿರುವುದರಿಂದ ಚಿಂತೆ ಇನ್ನು ಹೆಚ್ಚಾಗಿದೆ. ಮೂರನೇಯದಾಗಿ ಚೀನಾ ಕೂಡ ರಷ್ಯಾಕ್ಕೆ ಶಸ್ತ್ರಾಸ್ತ್ರಗಳ ಸಹಾಯ ಮಾಡುವ ಸಂಕೇತವನ್ನು ನೀಡಿದೆ. ಇವೆಲ್ಲವು ಗಳಿಂದ ಈ ಯುದ್ಧದಿಂದ ಭವಿಷ್ಯದಲ್ಲಿ ನಿರ್ಧಿಷ್ಟವಾಗಿ ಏನು ಆಗಲಿದೆ ? ಇದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕದ ವಾತಾವರಣ ಮೂಡಿದೆ ಜಾಗತಿಕ ಅರ್ಥವ್ಯವಸ್ಥೆ ಮತ್ತು ಅನೇಕ ಚಿಕ್ಕ ದೇಶಗಳ ಮೇಲೆ ಈ ಯುದ್ಧದಿಂದ ದೊಡ್ಡ ಪ್ರಮಾಣದಲ್ಲಿ ನಕಾರಾತ್ಮಕ ಪರಿಣಾಮವಾಗುತ್ತಿದೆ. ಎರಡು ದೇಶಗಳ ನಡುವೆ ಈ ಯುದ್ಧ ಇದ್ದರೂ, ಜಾಗತಿಕೀಕರಣದ ನಂತರದ ಕಾಲದಲ್ಲಿ ರಾಷ್ಟ್ರಗಳ ಪರಸ್ಪರರಲ್ಲಿನ ಆರ್ಥಿಕ ಪರಾವಲಂಬನೆ ಹೆಚ್ಚಾಗಿದೆ. ಆದ್ದರಿಂದ ಏಷ್ಯಾ-ಆಫ್ರಿಕಾ ಖಂಡಗಳಲ್ಲಿನ ದೇಶಗಳಿಗೂ ಪ್ರತ್ಯಕ್ಷ-ಪರೋಕ್ಷ ರೀತಿಯಲ್ಲಿ ಈ ಯುದ್ಧದ ಬಿಸಿ ತಗಲುತ್ತಿದೆ. ತೈಲದ ಅರ್ಥಕಾರಣದ ಮೇಲೆ ಇದರಿಂದ ಅತೀ ಹೆಚ್ಚು ಪರಿಣಾಮ ವಾಗುತ್ತಿದ್ದು ಅದು ಅತ್ಯಂತ ಅಪಾಯಕಾರಿ ಆಗಿದೆ.

೧. ಅಮೇರಿಕಾದ ಫತ್ವಾವನ್ನು ಕಡೆಗಣಿಸಿ ಭಾರತವು ಹೆಚ್ಚಿಸಿದ ತೈಲ ವ್ಯಾಪಾರ

ಕಚ್ಚಾ ತೈಲದ ಜಾಗತಿಕ ಮಾರುಕಟ್ಟೆಯಲ್ಲಿ ರಷ್ಯಾವು ದೊಡ್ಡ ಸ್ಥಾನವನ್ನು ಹೊಂದಿದೆ. ರಷ್ಯಾ ದೊಡ್ಡ ತೈಲ ಉತ್ಪಾದಕ ಮತ್ತು ರಫ್ತುದಾರ ದೇಶವೆಂದು ಅನೇಕ ವರ್ಷಗಳಿಂದ ತೈಲದ ಅರ್ಥಕಾರಣದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ; ಆದರೆ ಯುಕ್ರೇನ್‌ನೊಂದಿಗೆ ಯುದ್ಧ ಆರಂಭವಾದ ನಂತರ ಅಮೇರಿಕಾ ರಷ್ಯಾದ ಮೇಲೆ ೫ ಸಾವಿರಕ್ಕಿಂತಲೂ ಹೆಚ್ಚು ಆರ್ಥಿಕ ನಿರ್ಬಂಧಗಳನ್ನು ಹೇರಿದೆ. ಅದಕ್ಕನುಸಾರ ‘ರಷ್ಯಾದಿಂದ ಯಾವುದೇ ದೇಶ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳ ಬಾರದು’, ಎಂದು ಅಮೇರಿಕಾ ಒಂದು ರೀತಿಯಲ್ಲಿ ಫತ್ವಾವನ್ನೆ ಹೊರಡಿಸಿದೆ. ಇದಕ್ಕಾಗಿ ಅಮೇರಿಕಾ ತನ್ನ ಒತ್ತಡ ತಂತ್ರವನ್ನು ಅವಲಂಬಿಸಲು ಆರಂಭಿಸಿದೆ. ಅದಕ್ಕೆ ಯಾರೂ ವಿರೋಧ ಮಾಡಿಲ್ಲ. ವಿಶೇಷವೆಂದರೆ ರಷ್ಯಾ ಯುರೋಪ್ ದೇಶಗಳಿಗೆ ಅತೀ ಹೆಚ್ಚು ತೈಲ ಮತ್ತು ನೈಸರ್ಗಿಕ ವಾಯುವಿನ ಪೂರೈಕೆ ಮಾಡುವ ಎಲ್ಲಕ್ಕಿಂತ ದೊಡ್ಡ ಏಕೈಕ ದೇಶವಾಗಿದ್ದರೂ ಅವರು ಈ ಒತ್ತಡ ತಂತ್ರವನ್ನು ವಿರೋಧಿಸಿಲ್ಲ. ಜಾಗತಿಕ ಸಮುದಾಯದಲ್ಲಿ ಕೇವಲ ಎರಡು ದೇಶಗಳು ಈ ಫತ್ವಾವನ್ನು ಕಡೆಗಣಿಸಿವೆ. ಈ ಎರಡು ದೇಶಗಳೆಂದರೆ ಭಾರತ ಮತ್ತು ಚೀನಾ.

ಇದರಲ್ಲಿ ಭಾರತದ ಪಾತ್ರಕ್ಕೆ ಹೆಚ್ಚಿನ ಮಹತ್ವವಿದೆ; ಏಕೆಂದರೆ ಚೀನಾ ಮೊದಲಿನಿಂದಲೂ ಅಮೇರಿಕಾದ ಇಂತಹ ನಿರ್ಬಂಧಗಳಿಗೆ ಕಸದ ಬುಟ್ಟಿಯನ್ನು ತೋರಿಸುತ್ತಾ ಬಂದಿದೆ. ಭಾರತ ಮಾತ್ರ ರಷ್ಯಾಗೆ ಆಧಾರ ನೀಡಿದ್ದಷ್ಟೆ ಅಲ್ಲ, ಅದಕ್ಕೂ ಮುಂದೆ ಹೋಗಿ ರಷ್ಯಾದೊಂದಿಗಿರುವ ತೈಲದ ವ್ಯಾಪಾರವನ್ನು ಹೆಚ್ಚಿಸಿದೆ. ಇದಕ್ಕೆ ಭಾರತ ‘ನಮ್ಮ ವಿದೇಶಾಂಗನೀತಿಯು ನಮ್ಮ ರಾಷ್ಟ್ರೀಯ ಹಿತಸಂಬಂಧವನ್ನು ಆಧರಿಸಿದೆ. ಭಾರತೀಯರ ಅಪೇಕ್ಷೆ ಮತ್ತು ಅವರ ಹಿತಸಂಬಂಧವು ನಮಗೆ ಸರ್ವೋಚ್ಚ ವಾಗಿವೆ’, ಎಂದು ಅಮೇರಿಕಾ ಸಹಿತ ಅನೇಕ ದೇಶಗಳಿಗೆ ಮೊದಲ ಬಾರಿಗೆ ಗದರಿಸಿ ಹೇಳಿದೆ. ‘ರಷ್ಯಾ-ಯುಕ್ರೇನ್ ಯುದ್ಧವು ಯುರೋಪ್‌ನ ಸಮಸ್ಯೆಯಾಗಿದ್ದು ಅದು ಜಾಗತಿಕ ಯುದ್ಧವಲ್ಲ. ಆದುದರಿಂದ ನಮ್ಮ ಹಿತಸಂಬಂಧದ ದೃಷ್ಟಿಯಿಂದ ಮಹತ್ವದ ನಿಲುವನ್ನು ನಾವು ಅವಲಂಬಿಸುತ್ತಿರುವೆವು’, ಎಂದು ಭಾರತದಿಂದ ಸ್ಪಷ್ಟಪಡಿಸಲಾಗಿದೆ.

೨. ತೈಲದ ಆರ್ಥಿಕಸ್ಥಿತಿ ಕೆಡಬಾರದೆಂದು ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲ ಆಮದು ಮಾಡುವುದು

ಯಾವಾಗ ಅಮೇರಿಕಾ ಮತ್ತು ಯುರೋಪ್ ದೇಶಗಳು ರಷ್ಯಾದ ತೈಲ ರಫ್ತಿಗೆ ನಿರ್ಬಂಧ ಹೇರಿದವೋ, ಆಗ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಪೂರೈಕೆಯಲ್ಲಿ ಅವ್ಯವಸ್ಥೆ ಉದ್ಭವಿಸಿ ಇಂಧನದ ಬೆಲೆ ಗಗನಕ್ಕೇರುವ ಭಯವಿತ್ತು. ಅದರಿಂದ ಅರಬ ದೇಶಗಳಿಗೆ ಬಹಳಷ್ಟು ಲಾಭವಾಗ ಬಹುದಾಗಿತ್ತು; ಏಕೆಂದರೆ ಅಮೇರಿಕಾದ ತೈಲವು ಸಾರಿಗೆಯ ದೃಷ್ಟಿಯಿಂದ ತುಂಬಾ ದುಬಾರಿಯಾಗಿದೆ. ಆದ್ದರಿಂದ ಅರಬ ದೇಶಗಳು ಇದರ ಲಾಭ ಪಡೆದು ತೈಲದ ಬೆಲೆಯನ್ನು ಏರಿಸಿ ಲಾಭಗಳಿಸಬಹುದು ಎಂಬ ಚಿಂತೆಯಿತ್ತು. ‘ರಷ್ಯಾದ ತೈಲವನ್ನೂ ತೆಗೆದುಕೊಳ್ಳಬಾರದು ಮತ್ತು ತೈಲದ ಆರ್ಥಿಕ ಸ್ಥಿತಿಯೂ ಕೆಡಬಾರದು; ಇದೊಂದು ದೊಡ್ಡ ಅಡಚಣೆಯಾಗಿತ್ತು. ಈ ಅಡಚಣೆಯನ್ನು ನಿವಾರಿಸುವುದರಲ್ಲಿ ಭಾರತ ಆಶ್ಚರ್ಯಕರ ಕಾರ್ಯವನ್ನು ಮಾಡಿತು. ಭಾರತವು  ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಲು ಆರಂಭಿಸಿತು.

೩. ಭಾರತ-ರಷ್ಯಾ ತೈಲ ಮುತ್ಸದ್ದಿತನ

ರಷ್ಯಾ ಭಾರತದ ಹಳೆಯ ತೈಲ ಪೂರೈಕೆಯ ದೇಶವಾಗಿದೆ. ಯುಕ್ರೇನ್‌ನ ವಿರುದ್ಧ ಯುದ್ಧ ಸಾರಿದಾಗ ರಷ್ಯಾ ಭಾರತದ ೧೨ ನೇ ಕ್ರಮಾಂಕದ ತೈಲ ಪೂರೈಕೆಯ ದೇಶವಾಗಿತ್ತು; ಆದರೆ ಜೂನ್ ೨೦೨೨ ರಲ್ಲಿ ಅದು ಮೊದಲ ಕ್ರಮಾಂಕದ ತೈಲ ಪೂರೈಕೆಯ ದೇಶವಾಯಿತು. ಈಗಲೂ ರಷ್ಯಾ ಭಾರತದ ಮೊದಲ ೫ ತೈಲ ಪೂರೈಕೆದಾರ ದೇಶಗಳ ಪೈಕಿ ಒಂದಾಗಿದೆ. ಭಾರತ ಇಷ್ಟರವರೆಗೆ ೨೦ ಅಬ್ಜ ಡಾಲರ್ಸ್‌ಗಳ (೧ ಸಾವಿರದ ೬೩೪ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ) ತೈಲವನ್ನು ಖರೀದಿಸಿದೆ, ಇದು ಇಂದಿನವರೆಗಿನ ಗರಿಷ್ಠ ತೈಲ ಖರೀದಿ ಆಗಿದೆ. ರಷ್ಯಾದಿಂದ ಭಾರತದಲ್ಲಿನ ‘ರಿಲಾಯನ್ಸ್’ ಮತ್ತು ‘ನಾಯರಾ’ ಈ ಎರಡು ಖಾಸಗಿ ಕಂಪನಿಗಳು ತೈಲ ಖರೀದಿಸುತ್ತಿವೆ. ಈ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲನ್ನು ಖರೀದಿಸಿ ಅದರ ಶುದ್ಧೀಕರಣ ಮಾಡಿ ಅಮೇರಿಕಾ ಮತ್ತು ಯುರೋಪ್‌ಗಳಿಗೆ ರಫ್ತು ಮಾಡುತ್ತಿವೆ.

೪. ಇತಿಹಾಸದಲ್ಲಿ ಮೊದಲ ಬಾರಿ ಭಾರತ ತೈಲ ರಫ್ತುದಾರ ದೇಶವಾಯಿತು !

ಭಾರತವನ್ನು ಜಗತ್ತಿನ ಅತೀ ದೊಡ್ಡ ‘ತೈಲ ಆಮದು ಮಾಡುವ ದೇಶ’ವೆಂದು ಗುರುತಿಸಲಾಗುತ್ತದೆ. ಭಾರತ ತನ್ನ ಒಟ್ಟು ಅವಶ್ಯಕತೆಯ ಶೇ. ೭೫ ರಷ್ಟು ತೈಲನ್ನು ಆಮದು ಮಾಡಿ ಕೊಳ್ಳುತ್ತದೆ; ಆದರೆ ಒಂದು ವರ್ಷದಿಂದ ‘ಭಾರತ ಜಗತ್ತಿನ ಒಂದು ದೊಡ್ಡ ತೈಲ ರಫ್ತು ಮಾಡುವ ದೇಶವಾಗಿದೆ’, ಎಂದು ಹೇಳಿದರೆ ಅದರ ಬಗ್ಗೆ ಯಾರಿಗೂ ವಿಶ್ವಾಸ ಅನಿಸಲಿಕ್ಕಿಲ್ಲ; ಆದರೆ ಇಂದು ಭಾರತ ಜಗತ್ತಿನ ಪ್ರಮುಖ ತೈಲ ರಫ್ತ್ತುದಾರ ದೇಶವಾಗಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸಿ ಶುದ್ಧೀಕರಣ ಮಾಡಿದ ಈ ತೈಲಕ್ಕೆ ಅಮೇರಿಕಾ ಮತ್ತು ಯುರೋಪ್ ದೇಶಗಳೆ ಆತಿದೊಡ್ಡ ಗ್ರಾಹಕರಾಗಿವೆ. ಜನವರಿ ೨೦೨೩ ರಲ್ಲಿ ಭಾರತವು ಅಮೇರಿಕಾಕ್ಕೆ ಪ್ರತಿದಿನ ೮೯ ಸಾವಿರ ಬ್ಯಾರೆಲ್ಸ್ (೧ ಕೋಟಿ ೪೧ ಸಾವಿರಕ್ಕಿಂತಲೂ ಹೆಚ್ಚು ಲೀಟರ್ ತೈಲ)ಗಳಷ್ಟು ದೊಡ್ಡ ಪ್ರಮಾಣದಲ್ಲಿ ತೈಲವನ್ನು ಪೂರೈಸಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಈ ಘಟನೆ ಘಟಿಸಿದೆ. ಇದರಿಂದ ಅಂತರರಾಷ್ಟ್ರೀಯ ರಾಜಕಾರಣದ ಆಯಾಮ ಹೇಗೆ ಬದಲಾಗುತ್ತದೆ, ಎಂಬುದು ತಿಳಿಯುತ್ತದೆ. ಅದೇ ರೀತಿ ಭಾರತದಿಂದ ನಾವು ಖರೀದಿಸುವ ತೈಲ ರಷ್ಯಾದ್ದೇ ಆಗಿದೆ, ಎಂಬುದು ಅಮೇರಿಕಾ ಮತ್ತು ಯುರೋಪ್ ದೇಶಗಳಿಗೆ ಗೊತ್ತಿದೆ; ಆದರೆ ಹಠಮಾರಿತನದಿಂದಾಗಿ ಅವರಿಗೆ ಅದನ್ನು ಭಾರತದಿಂದ ಖರೀದಿಸಬೇಕಾಗುತ್ತಿದೆ. ಇದಕ್ಕೆ ಕೇವಲ ‘ದಡ್ಡತನ’ ಎನ್ನಬೇಕಾಗುವುದು. ಆದರೆ ಭಾರತಕ್ಕೆ ಈ ದಡ್ಡತನ ಲಾಭದಾಯಕವಾಗಿದೆ

೫. ಭಾರತದ ಚಾಣಾಕ್ಷ ಮುತ್ಸದ್ದಿತನ

ಯುರೋಪ್ ದೇಶಗಳು ಮತ್ತು ಅಮೇರಿಕಾ ರಷ್ಯಾದ ಮೇಲೆ ನಿರ್ಬಂಧ ಹೇರಿದ ನಂತರ ಈ ದೇಶಗಳು ಭಾರತ ರಷ್ಯಾದಿಂದ ಆಮದು ಮಾಡುವ ತೈಲವನ್ನು ನಿಲ್ಲಿಸಬೇಕೆಂದು ಒತ್ತಡ ಹೇರುತ್ತಿವೆ. ಹೀಗಿದ್ದರೂ ಭಾರತ ರಷ್ಯಾದಿಂದ ತೈಲ ಆಮದು ಮಾಡುತ್ತಿದೆ. ಭಾರತ ಈ ತೈಲಕ್ಕಾಗಿ ರಷ್ಯಾಕ್ಕೆ ನೀಡುವ, ಹಣವನ್ನು ಯುಕ್ರೇನ್‌ನ ಮೇಲಿನ ಆಕ್ರಮಣಗಳಿಗಾಗಿ ಉಪಯೋಗಿಸಲಾಗುತ್ತಿದೆ. ಆದ್ದರಿಂದ ಭಾರತ ಖರೀದಿಸುವ ತೈಲದ ಮೇಲೆ ಯುಕ್ರೇನ್‌ನ ಜನರ ರಕ್ತವಿದೆ, ಎಂದು ಇದರ ಬಗ್ಗೆ ಆರೋಪಿಸಲಾಗುತ್ತದೆ. ಹೀಗಿದ್ದರೂ ‘ಓ.ಎನ್.ಜಿ.ಸಿ.’ (ಆಯಿಲ್ ಎಂಡ್ ನ್ಯಾಚ್ಯುರಲ್ ಗ್ಯಾಸ್ ಕಾರ್ಪೋರೇಶನ್), ‘ಬಿ.ಪಿ.ಸಿ.ಎಲ್.’ (ಭಾರತ ಪೆಟ್ರೋಲಿಯಮ್ ಕಾರ್ಪೋರೇಶನ್ ಲಿಮಿಟೆಡ್), ‘ಇಂಡಿಯನ್ ಆಯಿಲ್, ‘ಎಚ್.ಪಿ.ಸಿ.ಎಲ್.’ (ಹಿಂದೂಸ್ಥಾನ ಪೆಟ್ರೋಲಿಯಮ್ ಕಾರ್ಪೋರೇಶನ್ ಲಿಮಿಟೆಡ್) ನಂತಹ ಸಾರ್ವಜನಿಕ ಕ್ಷೇತ್ರದಲ್ಲಿನ ಭಾರತೀಯ ತೈಲ ಕಂಪನಿಗಳು ಈ ತೈಲವನ್ನು ಆಮದು ಮಾಡಿಕೊಳ್ಳುವುದಿಲ್ಲ. ‘ನಾಯರಾ’ ಕಂಪನಿಯ ವಿಚಾರ ಮಾಡಿದರೆ, ಅದರಲ್ಲಿ ಶೇ. ೪೭ ರಷ್ಟು ಪಾಲು (ಶೇರ‍್ಸ್) ರಷ್ಯಾದ್ದಾಗಿವೆ. ಆದ್ದರಿಂದ ಭಾರತದ ಮೇಲೆ ಹೀಗೆ ಆರೋಪ ಮಾಡಲು ಬರುವುದಿಲ್ಲ. ತದ್ವಿರುದ್ಧ ‘ಈ ಕಂಪನಿಗಳಿಂದ ಹೆಚ್ಚು ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳಬಾರದೆಂದು ಖಾಸಗಿ ಕಂಪನಿಗಳ ಮೇಲೆ ತೆರಿಗೆ ಹೇರಲಾಗುತ್ತಿದೆ’ ಎಂದು ಭಾರತ ಯುಕ್ತಿವಾದ ಮಾಡಬಹುದು. ಒಟ್ಟಾರೆ ಭಾರತ ‘ವಿನವಿನ’ (ವಿಜಯದ) ಪರಿಸ್ಥಿತಿ ಯಲ್ಲಿದೆ. ಇದರಿಂದ ಭಾರತದ ‘ಸ್ಮಾರ್ಟ್ ಡಿಪ್ಲೋಮಸಿ’ ಕಂಡು ಬರುತ್ತದೆ.

ಲೇಖಕರು : ಡಾ. ಶೈಲೇಂದ್ರ ದೇವಳಾಣಕರ್, ವಿದೇಶನೀತಿ ವಿಶ್ಲೇಷಕರು (ಆಧಾರ : ಸಾಪ್ತಾಹಿಕ ‘ವಿವೇಕ’, ೨೭.೨.೨೦೨೩)