ಆರೋಪಿಯ ವಿರುದ್ದ ದಾಖಲಿಸಿರುವ ಎಫ್.ಐ.ಆರ್. ರದ್ದುಗೊಳಿಸುವಂತೆ ಅಲಹಾಬಾದ ಉಚ್ಚ ನ್ಯಾಯಾಲಯದಿಂದ ನಿರಾಕರಣೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿದ ಪ್ರಕರಣ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ

ಪ್ರಯಾಗ (ಉತ್ತರಪ್ರದೇಶ) – ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಆಧ್ಯಾತ್ಮಿಕ ಮುಖಂಡ ಧೀರೆಂಧ್ರಕೃಷ್ಣ ಶಾಸ್ತ್ರಿಯವರ ವಿರುದ್ಧ ಫೇಸಬುಕ್ ನಲ್ಲಿ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿರುವ ವ್ಯಕ್ತಿಯ ವಿರುದ್ಧ ದಾಖಲಿಸಲಾಗಿರುವ ಎಫ್.ಐ.ಆರ್. ರದ್ದುಗೊಳಿಸಲು ಅಲಹಾಬಾದ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಭೀಮ ಆರ್ಮಿಯ ಸದಸ್ಯನಾಗಿರುವ ಅರ್ಜಿದಾರ ದೀಪಕನು ಭಾರತೀಯ ದಂಡ ಸಂಹಿತೆಯ ಕಲಂ 505(2) (ಸಾರ್ವಜನಿಕ ಅನುಚಿತ ವರ್ತನೆ)ಯ ಅಡಿಯಲ್ಲಿ ದಾಖಲಿಸಲಾಗಿರುವ ದಾವೆಯನ್ನು ರದ್ದುಗೊಳಿಸಲು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದನು. ಅರ್ಜಿದಾರ ದೀಪಕನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಶಾಸ್ತ್ರಿಯವರ ವಿರುದ್ಧ ಫೇಸಬುಕ್ ನಲ್ಲಿ ನಿಂದನೀಯ ಶಬ್ದಗಳನ್ನು ಉಪಯೋಗಿಸಿದ್ದಾನೆಂದು ಆರೋಪಿಸಿ ವಿಜಯಕುಮಾರ ಗೌತಮನು ದೂರನ್ನು ದಾಖಲಿಸಿದ್ದನು.

ಉಚ್ಚ ನ್ಯಾಯಾಲಯವು ದೀಪಕನ ಅರ್ಜಿಯನ್ನು ತಿರಸ್ಕರಿಸುತ್ತಾ, `ಎಫ್.ಐ.ಆರ್. ವರದಿಯಿಂದ ಯಾವುದೇ ಅಪರಾಧ ನಡೆದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಎಫ್.ಐ.ಆರ್. ವರದಿಯನ್ನು ರದ್ದುಗೊಳಿಸುವುದು ಅಥವಾ ಅರ್ಜಿದಾರನ ಬಂಧನವನ್ನು ಸ್ಥಗಿತಗೊಳಿಸುವಂತಹ ಯಾವುದೇ ಕಾರಣ ಕಂಡು ಬರುತ್ತಿಲ್ಲ’ ಎಂದು ಹೇಳಿದರು.