ನಮ್ಮ ಹಿಂದೂ ಸಂಸ್ಕೃತಿ, ನಮಗೆ ಬಹುದೊಡ್ಡ ಶಿಕ್ಷಣ ನೀಡಿ ಉತ್ತಮ ಸಂಸ್ಕಾರಗಳನ್ನು ಬಿತ್ತುತ್ತದೆ. ದುರದೃಷ್ಟದಿಂದ ನಾವು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ದುರ್ಲಕ್ಷಿಸಿ ಆತ್ಮಘಾತವನ್ನು ಮಾಡಿಕೊಳ್ಳುತ್ತಿದ್ದೇವೆ. ನಿಜ ನೋಡಿದರೆ ‘ಚರಾಚರದಲ್ಲಿ ಈಶ್ವರನಿದ್ದಾನೆ, ಎಂಬ ಶ್ರದ್ಧೆಯನ್ನು ನಿರ್ಮಿಸುವುದರ ಹಿಂದಿನ ನಮ್ಮ ಸಂಸ್ಕೃತಿಯ ಉದ್ದೇಶವನ್ನು ನಾವು ಗುರುತಿಸಲಿಲ್ಲ. ಇದು ನಮ್ಮ ಬುದ್ಧಿ ಮತ್ತು ದೃಷ್ಟಿಯ ದೋಷವಾಗಿದೆ. ಹೇಗೆ ಭೂಮಿಯು ನಮ್ಮ ತಾಯಿಯಾಗಿದ್ದಾಳೆಯೋ, ಹಾಗೆಯೇ ಸೃಷ್ಟಿಯೂ ನಮ್ಮ ತಾಯಿಯೇ ಆಗಿದೆ. ಮನುಷ್ಯನು ಸೃಷ್ಟಿಯಲ್ಲಿನ ಪ್ರತಿಯೊಂದು ವಿಷಯದ (ವಸ್ತುವಿನ) ಕಡೆಗೆ ಉಪಭೋಗದ ದೃಷ್ಟಿಯಿಂದ ನೋಡಬಾರದೆಂದು, ನಮ್ಮ ಸಂಸ್ಕೃತಿಯು ಅದರಲ್ಲಿ ದೇವರನ್ನು ನೋಡಲು ಕಲಿಸಿದೆ.
೧. ನಿಸರ್ಗದಲ್ಲಿನ ಪ್ರತಿಯೊಂದು ವಿಷಯಕ್ಕೆ ದೇವತ್ವವನ್ನು ಕೊಡುವುದರ ಹಿಂದಿನ ಕಾರ್ಯಕಾರಣಭಾವ
ಮರ, ಭೂಮಿ, ಪರ್ವತ, ವಾಯು, ನದಿ, ಸಾಗರ ಇವುಗಳಲ್ಲಿನ ಮತ್ತು ಭೂಮಿಯ ಕೆಳಗೆ ಅಡಗಿರುವ ಸಂಪತ್ತು ಮಾನವನಿಗೆ ಬಹಳ ಉಪಯುಕ್ತವಾಗಿದೆ; ಆದುದರಿಂದಲೇ ಅವುಗಳ ಪೂಜೆಯನ್ನು ಮಾಡದೇ ನಾವು ಯಾವುದೇ ಕಾರ್ಯವನ್ನು ಆರಂಭಿಸುವುದಿಲ್ಲ. ಈ ಪೂಜೆ ಎಂದರೆ ಕೃತಜ್ಞತೆಯ ಭಾವನೆಯನ್ನು ವ್ಯಕ್ತಪಡಿಸುವುದಾಗಿದೆ. ನೈಸರ್ಗಿಕ ಸಾಧನಸಂಪತ್ತನ್ನು ಸಂಯಮದಿಂದ ಬಳಸಿದರೆ ಮನುಷ್ಯನ ಏಳಿಗೆಯಾಗುವುದು; ಆದರೆ ಅತೀ ಆಸೆಯಿಂದ ನಿಸರ್ಗದ ಸಂಪತ್ತನ್ನು ಮನುಷ್ಯನು ಲೂಟಿ ಮಾಡಿದರೆ, ನಿಸರ್ಗದ ಸಮತೋಲನ ತಪ್ಪುವುದು. ಇದನ್ನು ಗಮನದಲ್ಲಿಟ್ಟುಕೊಂಡೇ ನಮ್ಮ ಸಂಸ್ಕೃತಿಯು ನೈಸರ್ಗಿಕ ಸಂಪತ್ತು ಮತ್ತು ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುವಿಗೆ ದೇವತ್ವವನ್ನು ನೀಡಿದೆ. ಯಾವ ವಸ್ತುಗಳು ನಮಗೆ ಉಪಯುಕ್ತವಾಗಿವೆಯೋ, ಆ ವಸ್ತುಗಳನ್ನು ಕಾಪಾಡುವುದರಲ್ಲಿಯೇ ನಮ್ಮ ಹಿತವಿದೆ. ಇಂತಹ ಶ್ರದ್ಧೆಯನ್ನು ನಿರ್ಮಿಸಲು ‘ಪ್ರಕೃತಿಯಲ್ಲಿನ ಪ್ರತಿಯೊಂದರಲ್ಲಿ ದೇವರ ಅಸ್ತಿತ್ವವಿದೆ, ಎಂದು ನಂಬಲಾಯಿತು. ಇದು ಕೃತಜ್ಞತೆಯ ಭಾವನೆಯೇ ಆಗಿದೆ.
೨. ಜೋಶಿ ಮಠ ಕ್ಷೇತ್ರದ ಭೂಕುಸಿತದ ಬಗ್ಗೆ ಸಮಿತಿಗಳು ನೀಡಿದ ಎಚ್ಚರಿಕೆಯ ಸೂಚನೆ
ಇಂದಿನ ವಿಜ್ಞಾನದ ಆಧುನಿಕ ಕಾಲದಲ್ಲಿ ಸುಖದ ವ್ಯಾಖ್ಯೆ ಬದಲಾಗಿದೆ. ‘ನಮ್ಮ ಮನೆಯಲ್ಲಿ ಎಷ್ಟು ಹೆಚ್ಚು ಉಪಭೋಗದ ಸಾಧನಗಳಿವೆಯೋ, ನಾವು ಅಷ್ಟೇ ಹೆಚ್ಚು ಸುಖಿ, ಎಂಬ ಸುಖದ ವ್ಯಾಖ್ಯೆಯು ಮನುಷ್ಯನನ್ನು ವಿನಾಶದಕಡೆಗೆ ಕರೆದೊಯ್ಯುತ್ತಿದೆ. ಅದರ ದೃಶ್ಯಸ್ವರೂಪವನ್ನು ನಾವು ಅನೇಕ ಬಾರಿ ಅನುಭವಿಸಿದ್ದೇವೆ. ಇತ್ತೀಚೆಗೆ ಸುಮಾರು ೬ ಸಾವಿರ ಅಡಿಗಳ ಎತ್ತರದಲ್ಲಿರುವ ಜೋಶಿ ಮಠ ಕ್ಷೇತ್ರವು ಭೂಕುಸಿತದಿಂದಾಗಿ ಚಿಂತೆಯ ವಿಷಯವಾಗಿದೆ. ಕಳೆದ ಅನೇಕ ವರ್ಷಗಳಿಂದ ಅನೇಕ ತಜ್ಞರ ಸಮಿತಿಗಳು ‘ಇಂತಹ ಆಪತ್ತುಗಳು ಭವಿಷ್ಯದಲ್ಲಿ ಬಂದೆರಗುವವು, ಎಂಬ ಕಲ್ಪನೆಯನ್ನು ನೀಡಿದ್ದವು. ಇದಕ್ಕಾಗಿ ೧೯೭೬ ರಲ್ಲಿ ಮಿಶ್ರಾ ಸಮಿತಿಯನ್ನು ಸ್ಥಾಪಿಸಿಲಾಗಿತ್ತು. ಈ ಸಮಿತಿಯಲ್ಲಿ ಒಟ್ಟು ೧೮ ಮಂದಿ ಸದಸ್ಯರಿದ್ದರು. ಎಮ್.ಸಿ. ಮಿಶ್ರಾ ಇವರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಭಾರತೀಯ ಸೈನ್ಯ, ಇಂಡೊ-ಟಿಬೇಟ್ ಗಡಿ ಭದ್ರತಾ ದಳ, ಕೇದಾರನಾಥ, ಬದ್ರೀನಾಥ ದೇವಸ್ಥಾನ ಮತ್ತು ಸ್ಥಳೀಯ ಆಡಳಿತದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಸಮಿತಿಯು ಸಮೀಕ್ಷೆಯನ್ನು ಮಾಡಿ ಜೋಶಿ ಮಠದ ಟೊಳ್ಳು ಭೂಮಿ, ಅಲಕನಂದಾ ನದಿಯ ಪ್ರವಾಹದಿಂದಾಗುವ ಮಣ್ಣಿನ ಸವೆತವನ್ನು ಎತ್ತಿ ತೋರಿಸಿತ್ತು. ಕೆಲವು ಎಚ್ಚರಿಕೆಯ ಸೂಚನೆಗಳನ್ನು ನೀಡಿತ್ತು; ಆದರೆ ಆ ಸೂಚನೆಗಳ ಕಡೆಗೆ ಗಂಭೀರದಿಂದ ಗಮನಹರಿಸಲಿಲ್ಲ.
೩. ಸೃಷ್ಟಿಯ ಸಮತೋಲನ ತಪ್ಪಿದ್ದರಿಂದ ಮಾನವನಿಗೆ ಭೋಗಿಸಬೇಕಾದ ಪರಿಣಾಮ
ಉಪಭೋಗದ ಅಭ್ಯಾಸವಾಗಿರುವ ಮಾನವನಿಗೆ ಪ್ರಕೃತಿಯ ಹಾನಿಯೇ ತನ್ನ ವಿನಾಶಕ್ಕೆ ಕಾರಣವಾಗಿದೆ ಎಂಬ ಅರಿವು ಉಳಿದಿಲ್ಲ. ‘ನಾವು ಸರ್ವಸಾಮಾನ್ಯ ಮತ್ತು ಸರಳ ಜೀವನವನ್ನು ನಡೆಸಿದರೆ ನಾವು ಶಿಲಾಯುಗದಲ್ಲಿದ್ದೇವೆ, ಎಂದು ಮಾನವನಿಗೆ ಅನಿಸಬಹುದು. ವಾಸ್ತವದಲ್ಲಿ ಆಧುನಿಕ ಕಾಲದಲ್ಲಿಯೂ ಸಂಯಮದಿಂದ ಜೀವನವನ್ನು ನಡೆಸುವುದೇ, ಸುಶಿಕ್ಷಿತ ಮತ್ತು ಸುಸಂಸ್ಕೃತಿಯ ಲಕ್ಷಣವಾಗಿದೆ. ಈ ವಿಷಯವು ಮನುಷ್ಯನ ಗಮನಕ್ಕೆ ಬಂದಿಲ್ಲ. ಸತತವಾಗಿ ಭೋಗವನ್ನು ಭೋಗಿಸುತ್ತಿರುವುದು, ಅದಕ್ಕಾಗಿ ವಿವಿಧ ವಸ್ತುಗಳನ್ನು ನಿರ್ಮಿಸುವುದು, ಅದರ ನಿರ್ಮಿತಿಯ ಬೆಲೆ ಎಂದು ಕೈಯಲ್ಲಿ ಹಣ ಹರಿದಾಡುತ್ತದೆ, ಆ ಹಣದಿಂದ ಉಪಭೋಗಿಸುವಂತಹ ವಸ್ತುಗಳನ್ನೇ ಖರೀದಿಸಲಾಗುತ್ತದೆ. ಆ ವಸ್ತುಗಳೇ ನಮಗೆ ನಿಜವಾದ ಅರ್ಥದಲ್ಲಿ ಸಮಾಧಾನ ಮತ್ತು ಆನಂದ ನೀಡುತ್ತವೆ, ಸುಖವನ್ನು ಪ್ರದಾನಿಸುತ್ತವೆ, ಎಂದು ಮನುಷ್ಯನು ತಿಳಿದುಕೊಂಡಿದ್ದಾನೆ. ಮಾನವನು ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನವನ್ನು ಹೆಚ್ಚೆಚ್ಚು ಬಳಸಿ ತನ್ನ ಸುತ್ತಮುತ್ತಲಿನ ಪರಿಸರವನ್ನು ಸಂಪೂರ್ಣ ಬದಲಾಯಿಸುವ ಮೂಲಕ ಕೃತಕ ಸೌಂದರ್ಯ ವನ್ನು ಸೃಷ್ಟಿಸುತ್ತಿದ್ದಾನೆ. ನೈಸರ್ಗಿಕ ಸೌಂದರ್ಯದ ಕಡೆಗೆ ಅವನು ಬೆನ್ನು ತಿರುಗಿಸಿದ್ದಾನೆ. ಕೃತಕ ಸೌಂದರ್ಯವನ್ನೇ ನೈಸರ್ಗಿಕ ಸೌಂದರ್ಯವೆಂದು ತಪ್ಪು ತಿಳಿಯತೊಡಗಿದ್ದಾನೆ. ಮನುಷ್ಯನನ್ನು ಮಣ್ಣಿಗಿಂತ ಮಣ್ಣಿನ ಕೆಳಗೆ ಸಿಗುವ ಬೆಲೆಬಾಳುವ ಖನಿಜಗಳು ಆಕರ್ಷಿಸತೊಡಗಿದವು. ಇದರಿಂದ ಮಣ್ಣಿಗೆ ಬೆಲೆ ಇಲ್ಲವಾಗಿದೆ.
ಈ ಎಲ್ಲ ಹವ್ಯಾಸಕ್ಕಾಗಿ ಮನುಷ್ಯನು ನಿಸರ್ಗದ ಸಮತೋಲನವನ್ನು ಹೆಚ್ಚೆಚ್ಚು ಕೆಡಿಸಲೆಂದೇ ಪ್ರಯತ್ನಿಸಿದನು. ಇದರ ಪರಿಣಾಮದಿಂದ ವಾಯು, ನೀರು, ಧ್ವನಿ ಮತ್ತು ಭೂಮಿಯ ಜೊತೆಗೆ ಅನೇಕ ಪ್ರದೂಷಣೆಗಳಿಂದ ಮಾನವಿ ಜೀವನ ತೊಂದರೆಗೀಡಾಗಿದೆ. ಭೌತಿಕ ಅಭಿವೃದ್ಧಿಯ ಕಡೆಗೆ ಗಮನಹರಿಸಿದ್ದರಿಂದ ಮನಸ್ಸು, ಬುದ್ಧಿ ಮತ್ತು ವಿಚಾರ ಇವುಗಳ ಅಭಿವೃದ್ಧಿ ನಿಂತುಹೋಗಿದೆ. ನಿಸರ್ಗದಲ್ಲಿನ ಸಂಪತ್ತುಗಳು ತಯಾರಾಗಲು ಕೋಟಿ ಗಟ್ಟಲೆ ವರ್ಷಗಳು ಬೇಕಾಗುತ್ತವೆ. ಮಾನವನು ತನ್ನ ಹವ್ಯಾಸದಿಂದಾಗಿ ನಿಸರ್ಗದಲ್ಲಿನ ಸಂಪತ್ತನ್ನು ಎರಡೂ ಕೈಗಳಿಂದ ದೋಚಿದನು. ಇದರ ಪರಿಣಾಮದಿಂದ ನೈಸರ್ಗಿಕ ಸಂಪತ್ತಿನ ಸಂಗ್ರಹ ಕಡಿಮೆಯಾಗುತ್ತಾ ಹೋಯಿತು. ಮನುಷ್ಯನು ಕಾಡುಗಳನ್ನು ನಾಶ ಮಾಡಿದನು. ಈಗಂತೂ ಬೆಳೆಗಳನ್ನು ಬೆಳೆಯುವ ಹೊಲಗಳೂ ನಾಶವಾಗುತ್ತಿವೆ. ಕಾರ್ಖಾನೆಗಳಲ್ಲಿನ ಅಶುದ್ಧ ನೀರನ್ನು ಹಳ್ಳ, ನದಿ, ಸಮುದ್ರ ಮುಂತಾದವುಗಳಲ್ಲಿ ಬಿಡಲಾಗುತ್ತದೆ. ವೈಜ್ಞಾನಿಕ ಪ್ರಗತಿಯಿಂದ ಮಾನವನಿಗೆ ಭೌತಿಕ ಸುಖಸೌಲಭ್ಯಗಳು ಪ್ರಾಪ್ತವಾದವು; ಆದರೆ ಆರೋಗ್ಯವು ಕೆಟ್ಟಿತು. ಪೌಷ್ಟಿಕ ಆಹಾರದ ಕೊರತೆ ನಿರ್ಮಾಣವಾಯಿತು ಮತ್ತು ಒಂದು ದುಷ್ಟಚಕ್ರದಲ್ಲಿ ಮಾನವನ ಜೀವನ ಸಿಕ್ಕು ಅದು ನುಚ್ಚುನೂರಾಯಿತು.
೪. ಮಾನವನು ನಿರ್ಮಿಸಿದ ಇಲೆಕ್ಟ್ರಾನಿಕ್ ತ್ಯಾಜ್ಯದ ದೊಡ್ಡ ಸಮಸ್ಯೆ
ಇಲೆಕ್ಟ್ರಾನಿಕ್ ಉಪಕರಣಗಳಿಂದ ನಿರ್ಮಾಣವಾದ ತ್ಯಾಜ್ಯ ವನ್ನು (ಕಸವನ್ನು) ವಿಘಟನಗೊಳಿಸಲು ನಿಸರ್ಗದ ಸಹಾಯ ಸಿಗುವುದಿಲ್ಲ. ನೈಸರ್ಗಿಕ ವಸ್ತುಗಳ ವಿಘಟನೆ ಪ್ರಕೃತಿಯಲ್ಲಿ ಸುಲಭವಾಗಿ ಆಗುತ್ತದೆ. ಆದರೆ ಮಾನವ ನಿರ್ಮಿತ ಕೃತಕ ವಸ್ತುಗಳ ವಿಘಟನೆನ್ನು ಮಾಡುವ ಕ್ಷಮತೆ ನಿಸರ್ಗಕ್ಕಿಲ್ಲ. ಇದರ ಪರಿಣಾಮದಿಂದ ಈ ಇಲೆಕ್ಟ್ರಾನಿಕ್ ತ್ಯಾಜ್ಯ ಒಂದು ದೊಡ್ಡ ಸಮಸ್ಯೆಯಾಗಿದೆ.
ಈಗಂತೂ ನಾವು ಬಾಹ್ಯಾಕಾಶವನ್ನು ಪ್ರವೇಶಿಸಿದ್ದೇವೆ. ಈ ಪರಾಕ್ರಮವು ಈಗ ನಮಗೆ ಆತ್ಮಘಾತಕವಾಗುತ್ತಿದೆ. ಯಾವಾಗ ನಾವು ಬಾಹ್ಯಾಕಾಶಕ್ಕೆ ಹೋಗುತ್ತೇವೆಯೋ, ಆಗ ವಿವಿಧ ರೀತಿಯ ತ್ಯಾಜ್ಯವನ್ನು ನಾವು ಬಾಹ್ಯಾಕಾಶದಲ್ಲಿ ಬಿಡುತ್ತೇವೆ. ಬಾಹ್ಯಾಕಾಶದಲ್ಲಿನ ವಾತಾವರಣವು ನಿಯಂತ್ರಣದ ಆಚೆಗೆ ಹೋಯಿತೆಂದರೆ ಅದರ ಪರಿಣಾಮ ಪರಿಸರದ ಸಮತೋಲನದ ಮೇಲೆ ಆಗುತ್ತದೆ. ‘ಬಾಹ್ಯಾಕಾಶದಲ್ಲಿ ಹಾರಾಡುವ ತ್ಯಾಜ್ಯದಿಂದಾಗಿ ಸಮುದ್ರದಲ್ಲಿನ ಜೀವಗಳಿಗೆ ಹಾನಿಯಾಗಬಹುದು. ಇಂತಹ ಈ ಇಲೆಕ್ಟ್ರಾನಿಕ್-ತ್ಯಾಜ್ಯದಿಂದ ಜೀವಕ್ಕೆ ಅಪಾಯವಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಇ-ತ್ಯಾಜ್ಯವು ಅಜೈವಿಕ ಘಟಕಗಳಿಂದ ತಯಾರಾಗುತ್ತದೆ. ಇದರ ಉದಾಹರಣೆಯನ್ನು ಹೇಳಬೇಕೆಂದರೆ ಪಾದರಸ, ಕ್ಯಾಡ್ಮಿಯಮ್, ಬೆರಿಲಿಯಮ್, ಸೀಸದಂತಹ ಧಾತುಗಳು ಪರಿಸರ ಮಾಲಿನ್ಯಕ್ಕೆ ಸಹಾಯ ಮಾಡುತ್ತವೆ. ಈ ಲೋಹಗಳಿಂದ ನಿರ್ಮಾಣವಾದ ಉತ್ಪಾದನೆಗಳು ಮಾನವ ಮತ್ತು ಪ್ರಾಣಿಗಳ ಸಂಪರ್ಕಕ್ಕೆ ಬಂದಾಗ ಆ ಜೀವಗಳಿಗೆ ವಿವಿಧ ರೀತಿಯ ರೋಗಗಳಾಗುವ ಸಾಧ್ಯತೆ ಇರುತ್ತದೆ. ವಸ್ತುಗಳು ಜೀರ್ಣವಾಗದಿರಲು ಅವುಗಳ ಮೇಲೆ ಸಂರಕ್ಷಕ ಕವಚವನ್ನು ನಿರ್ಮಿಸಲಾಗುತ್ತದೆ. ಇದರಿಂದಾಗಿ ಆ ವಸ್ತು ಹಾಳಾಗಲು ಅಥವಾ ಅವು ವಿಘಟನೆಯಾಗಲು ಬಹಳ ಸಮಯ ಬೇಕಾಗುತ್ತದೆ.
೧೯೭೦ ರ ದಶಕದಲ್ಲಿ ‘ನಾಸಾ ಈ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ ಸಲಹೆಗಾರರಾದ ಡೊನಾಲ್ಡ್ ಜೆ ಕೆಸಲರ ಇವರು ಒಂದು ಸಿದ್ಧಾಂತವನ್ನು ಮಂಡಿಸಿದ್ದರು. ಆ ಸಿದ್ಧಾಂತಕ್ಕನುಸಾರ ‘ಬಾಹ್ಯಾಕಾಶದಲ್ಲಿನ ತ್ಯಾಜ್ಯದ (ಕಸ) ಪ್ರಮಾಣ ನಿಧಾನವಾಗಿ ಹೆಚ್ಚಾಗುತ್ತಾ ಹೋಗುವುದು ಮತ್ತು ಉಪಗ್ರಹದಂತಹ ವಸ್ತುಗಳು ಈ ತ್ಯಾಜ್ಯಕ್ಕೆ ಅಪ್ಪಳಿಸುವವು ಮತ್ತು ಅದರಿಂದ ಹೆಚ್ಚು ತ್ಯಾಜ್ಯ (ಕಸ) ನಿರ್ಮಾಣವಾಗುವುದು. ಇದರ ಅರ್ಥ ಮಾನವನು ಪೃಥ್ವಿಯ ಹೊರಗೆ ಹೋಗಿ ತನ್ನ ಪ್ರಗತಿಯನ್ನು ಸಿದ್ಧಪಡಿಸಿದ್ದರೂ, ಇದರಿಂದ ಅವನೇ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳನ್ನು ನಿರ್ಮಿಸಿದ್ದಾನೆ.
೫. ನಿಸರ್ಗಕ್ಕೆ ಹಾನಿಯಾಗದಂತೆ ಪ್ರಯತ್ನಿಸುವುದು ಆವಶ್ಯಕ !
ಸದ್ಯ ನಮ್ಮ ಪೃಥ್ವಿಯ ಮೇಲಿನ ತಾಪಮಾನವು ಹೆಚ್ಚಾಗುತ್ತಾ ಹೋಗುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದರ ಪರಿಣಾಮದಿಂದ ಹಿಮನದಿಗಳು ಕರಗತೊಡಗಿವೆ. ಜಗತ್ತಿನ ವಿವಿಧ ಭಾಗಗಳಲ್ಲಿನ ತಾಪಮಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗುತ್ತಿರುವುದು ಕಂಡು ಬರುತ್ತಿದೆ. ಋತುಮಾನ ಗಳಲ್ಲಾಗುವ ಈ ಬದಲಾವಣೆಯು ಪೃಥ್ವಿಯಲ್ಲಿನ ಸಂಪೂರ್ಣ ಜೀವಸೃಷ್ಟಿಗೆ ಹಾನಿಕಾರಕವಾಗಿದೆ. ಇದರ ಅನುಭವ ನಮಗೆ ಸದ್ಯದ ಕಾಲದಲ್ಲಿ ಮೇಲಿಂದ ಮೇಲೆ ಬರುತ್ತಿದೆ. ಇದಕ್ಕೆ ಒಂದೇ ಒಂದು ಉಪಾಯವೆಂದರೆ ನಾವು ಈಗಲೇ ನಮ್ಮ ಮನಸ್ಸನ್ನು ನಿಗ್ರಹಿಸಿ ಈಗಲಾದರೂ ಪರಿಸರಕ್ಕೆ, ಪರ್ಯಾಯದಿಂದ ನಿಸರ್ಗಕ್ಕೆ ಹಾನಿಯಾಗದಂತೆ ಮತ್ತು ಪ್ರತಿಯೊಂದು ಜೀವದ ವಾಸಸ್ಥಳವು ಹೆಚ್ಚೆಚ್ಚು ಸುರಕ್ಷಿತ ಮತ್ತು ಜೀವನವನ್ನು ನಡೆಸಲು ಯೋಗ್ಯವಾಗಿರುವಂತೆ ಕಾಳಜಿಯನ್ನು ವಹಿಸಬೇಕು. ಅದಕ್ಕಾಗಿ ಸೃಷ್ಟಿಯು ನಮ್ಮ ಮಾತೆಯಾಗಿದ್ದು ಅವಳ ಕಡೆಗೆ ಉಪಭೋಗದ ದೃಷ್ಟಿಯಿಂದ ನೋಡಬಾರದು, ಎಂಬ ನಮ್ಮ ಸಂಸ್ಕೃತಿಯ ಶಿಕ್ಷಣವೇ ನಮ್ಮನ್ನು ರಕ್ಷಿಸಬಹುದು, ಇಲ್ಲವಾದರೆ ಇಡೀ ಜಗತ್ತೇ ಜೋಶಿಮಠದಂತೆ ಅಸಹಾಯಕವಾಗಿ ಬೇಗನೆ ವಿನಾಶದ ಕಂದಕದಲ್ಲಿ ಕುಸಿಯಬಹುದು.
– ಶ್ರೀ. ದುರ್ಗೇಶ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು, ಡೊಂಬಿವಲಿ. (೨೫.೧.೨೦೨೩)