ವಿವಾಹ ನಿಶ್ಚಯಿಸುವಾಗ ವಧು-ವರರ ಜಾತಕ ಹೊಂದಾಣಿಕೆಯಾಗುವುದರ ಮಹತ್ವ

ಹಿಂದೂ ಧರ್ಮದಲ್ಲಿ ಹೇಳಿರುವ ೧೬ ಸಂಸ್ಕಾರಗಳಲ್ಲಿ ‘ವಿವಾಹ ಸಂಸ್ಕಾರವು ಮಹತ್ವದ್ದಾಗಿದೆ. ವಿವಾಹ ನಿಶ್ಚಯಿಸುವಾಗ ವಧು-ವರರ ಜಾತಕದ ಹೊಂದಾಣಿಕೆ ಮಾಡುವ ಪದ್ಧತಿಯು ಭಾರತದಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ವಿವಾಹದ ಉದ್ದೇಶ ಹಾಗೂ ಅದಕ್ಕೆ ಸಂಬಂಧಿಸಿದ ವಧು-ವರರ ಜಾತಕಗಳನ್ನು ಹೊಂದಿಸುವುದರ ಮಹತ್ವವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಶ್ರೀ. ರಾಜ ಕರ್ವೆ

೧. ವಿವಾಹದ ಉದ್ದೇಶ (ವೈದಿಕ ದೃಷ್ಟಿಕೋನ)

‘ಪುರುಷ ಮತ್ತು ಪ್ರಕೃತಿ ಇವುಗಳ ಸಂಯೋಗದಿಂದ ವಿಶ್ವದ ನಿರ್ಮಿತಿ ಆಯಿತು. ವೈದಿಕ ಪರಿಭಾಷೆಯಲ್ಲಿ ಪುರುಷನಿಗೆ ‘ಅಗ್ನಿ ಹಾಗೂ ಪ್ರಕೃತಿಗೆ ‘ಸೋಮ ಎಂದು ಹೇಳಲಾಗಿದೆ. ಒಬ್ಬನೇ ಪುರುಷ ಅಥವಾ ಒಬ್ಬಳೇ ಸ್ತ್ರೀ ಎಂದರೆ ‘ಅರ್ಧೇಂದ್ರ ಅಂದರೆ ಅಪೂರ್ಣವಾಗಿದ್ದಾರೆ. ಪುರುಷರೂಪಿ ಅಗ್ನಿ ಹಾಗೂ ಸ್ತ್ರೀರೂಪಿ ಸೋಮ ಇವರ ಐಕ್ಯದಿಂದ ಜೀವನಕ್ಕೆ ಪೂರ್ಣತ್ವ ಬರುತ್ತದೆ.

ವಿವಾಹಬದ್ಧ ಆಗಿರುವ ಪುರುಷ ಮತ್ತು ಸ್ತ್ರೀ ಇವರು ‘ಧರ್ಮಪಾಲನೆ ಮಾಡಲು ಪರಸ್ಪರ ಪೂರಕ ಹಾಗೂ ಸಹಾಯಕರಾಗುತ್ತಾರೆ. ಧರ್ಮಪಾಲನೆಯನ್ನು ಮಾಡುವುದರಿಂದ ಮನುಷ್ಯನಿಗೆ ಐಹಿಕ ಹಾಗೂ ಆಧ್ಯಾತ್ಮಿಕ ಉನ್ನತಿ ಸಾಧ್ಯವಾಗುತ್ತದೆ. ವಿವಾಹಸಂಸ್ಕಾರವು ಗೃಹಸ್ಥಾಶ್ರಮದ ಆರಂಭದ ಬಿಂದು ಆಗಿದೆ. ಗೃಹಸ್ಥಾಶ್ರಮದಲ್ಲಿದ್ದು ದಂಪತಿಗಳಿಗೆ ಯಜ್ಞ, ಪೂಜೆ ಇತ್ಯಾದಿ ಕೃತಿಗಳನ್ನು ಮಾಡಿ ‘ದೇವಋಣ, ಸಂತರಿಗೆ ಅರ್ಪಣೆ ಯನ್ನು ಮಾಡಿ ‘ಪಿತೃಋಣ ಮತ್ತು ಅತಿಥಿಗಳ ಸೇವೆಯನ್ನು ಮಾಡಿ ‘ಸಮಾಜಋಣವನ್ನು ತೀರಿಸಲು ಬರುತ್ತದೆ. ವಿವಾಹ ಸಂಸ್ಕಾರದಿಂದ ಕುಟುಂಬವ್ಯವಸ್ಥೆ ರಕ್ಷಿಸಲ್ಪಟ್ಟು ಆ ಮೂಲಕ ಸಮಾಜ ಮತ್ತು ರಾಷ್ಟ್ರದ ವ್ಯವಸ್ಥೆಯು ಉತ್ತಮವಾಗಿರುತ್ತದೆ.

೨. ವಿವಾಹವನ್ನು ನಿಶ್ಚಯಿಸುವಾಗ ಯಾವ ವಿಷಯಗಳ ಬಗ್ಗೆ ವಿಚಾರ ಮಾಡುವುದು  ಆವಶ್ಯಕವಾಗಿದೆ ?

ವಿವಾಹವನ್ನು ನಿಶ್ಚಯಿಸುವಾಗ ವಧು-ವರರ ಕುಲ (ಮನೆತನ), ವಿದ್ಯೆ (ಬುದ್ಧಿಮತ್ತೆ ಮತ್ತು ಶಿಕ್ಷಣ), ವಯಸ್ಸು, ಶೀಲ (ಪ್ರಕೃತಿ ಮತ್ತು ಸ್ವಭಾವ), ಧನ (ಸಂಪಾದನೆ ಮಾಡುವ ಕ್ಷಮತೆ), ರೂಪ (ಶಾರೀರಿಕ ಸ್ಥಿತಿ) ಹಾಗೂ ವಾಸಸ್ಥಳದ ಸ್ಥಿತಿಯ ಬಗ್ಗೆ ವಿಚಾರ ಮಾಡಬೇಕು. ಈ ವಿಷಯದಲ್ಲಿ ಕೆಲವು ವಿವೇಚನೆಗಳನ್ನು ಮುಂದೆ ನೀಡಲಾಗಿದೆ.

ಅ. ವರ ಮತ್ತು ವಧು ಸಮಾನ ಕುಲದವರಾಗಿದ್ದರೆ ಎರಡೂ ಮನೆತನಗಳ ಕುಲಾಚಾರ, ರೂಢಿ-ಪರಂಪರೆಗಳು, ಕುಟುಂಬ ದವರ ಮಾನಸಿಕತೆ, ಕುಟುಂಬದವರ ವೈಚಾರಿಕ ಮಟ್ಟ ಇತ್ಯಾದಿ ಗಳಲ್ಲಿ ಸಮಾನತೆ ಇರುವುದರಿಂದ ದಂಪತಿಗಳಿಗೆ ಪರಸ್ಪರರೊಂದಿಗೆ ಹಾಗೂ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸುಲಭವಾಗುತ್ತದೆ.

ಆ. ಹುಡುಗನಿಗೆ ೨೫ ರಿಂದ ೩೦ ಹಾಗೂ ಹುಡುಗಿಗೆ ೨೦ ರಿಂದ ೨೫ ಈ ವಯಸ್ಸು ವಿವಾಹಕ್ಕೆ ಯೋಗ್ಯವಾಗಿದೆ ಎಂದು ತಿಳಿಯಲಾಗುತ್ತದೆ.

ಇ. ‘ಹುಡುಗ ಮತ್ತು ಹುಡುಗಿ ಇವರ ಪ್ರಕೃತಿ ಹಾಗೂ ಸ್ವಭಾವ ಪರಸ್ಪರರೊಂದಿಗೆ ಎಷ್ಟು ಪ್ರಮಾಣದಲ್ಲಿ ಹೊಂದಾಣಿಕೆಯಾಗುತ್ತದೆ ?, ಎಂಬುದನ್ನು ತಿಳಿದುಕೊಳ್ಳಲು ಜ್ಯೋತಿಷ್ಯಶಾಸ್ತ್ರದ ಸಹಾಯವನ್ನು ಪಡೆಯಲಾಗುತ್ತದೆ.

ಈ. ಪತಿ-ಪತ್ನಿಯ ಗುಣ, ಕರ್ಮ ಹಾಗೂ ಸ್ವಭಾವ ಒಂದೇ ಆಗಿದ್ದರೆ ಅವರಿಂದ ಉತ್ಪನ್ನವಾಗುವ ಸಂತಾನವೂ ಅವರಿಗಿಂತ ಹೆಚ್ಚು ಶ್ರೇಷ್ಠಗುಣಗಳಿಂದ ಸಂಪನ್ನವಾಗಿರುತ್ತದೆ.

೩. ವಧು-ವರರ ಜಾತಕ ಹೊಂದಾಣಿಕೆಯಾಗುವುದರ ಉದ್ದೇಶ

‘ವರ ಮತ್ತು ವಧು ಇವರ ಪ್ರಕೃತಿ ಹಾಗೂ ಸ್ವಭಾವ ಪರಸ್ಪರರಿಗೆ ಪೂರಕವಾಗಿರಬೇಕು, ಇದು ಜಾತಕಗಳನ್ನು ಹೊಂದಾಣಿಕೆ ಮಾಡುವುದರ ಹಿಂದಿನ ಉದ್ದೇಶವಾಗಿರುತ್ತದೆ. ಇಂತಹ ದಂಪತಿಗಳು ಜೀವನದಲ್ಲಿನ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸಬಹುದು. ವ್ಯಕ್ತಿಯ ಪ್ರಕೃತಿ ಹಾಗೂ ಸ್ವಭಾವವು ಜಾತಕದಿಂದ ಚೆನ್ನಾಗಿ ತಿಳಿಯುತ್ತದೆ. ಆದ್ದರಿಂದ

ವಿವಾಹವನ್ನು ನಿಶ್ಚಯಿಸುವಾಗ ವಧು-ವರರ ಜಾತಕಗಳನ್ನು ಹೊಂದಾಣಿಕೆ ಮಾಡುವ ಪದ್ಧತಿ ಭಾರತದಲ್ಲಿ ಮೊದಲಿನಿಂದಲೇ ನಡೆದು ಬಂದಿದೆ. ಜಾತಕಗಳನ್ನು ಹೊಂದಿಸುವಾಗ ಜಾತಕ ಗಳಲ್ಲಿನ ಮುಂದಿನ ಘಟಕಗಳ ವಿಚಾರವನ್ನು ಮಾಡಲಾಗುತ್ತದೆ.

೩ ಅ. ಲಗ್ನರಾಶಿ : ಜಾತಕದ ಮೊದಲ ಸ್ಥಾನದಲ್ಲಿರುವ ರಾಶಿಗೆ ‘ಲಗ್ನರಾಶಿ ಎಂದು ಹೇಳುತ್ತಾರೆ. ಲಗ್ನರಾಶಿಯಿಂದ ವ್ಯಕ್ತಿಯ ಶಾರೀರಿಕ ಪ್ರಕೃತಿ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರ ಇತ್ಯಾದಿ ವಿಷಯಗಳ ಬೋಧವಾಗುತ್ತದೆ. ವರ ಮತ್ತು ವಧುವಿನ ಲಗ್ನರಾಶಿ ಪರಸ್ಪರರ ಶುಭಯೋಗದಲ್ಲಿದ್ದರೆ ಅವರ ವ್ಯಕ್ತಿತ್ವ ಪರಸ್ಪರರಿಗೆ ಪೂರಕವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ೧೨ ರಾಶಿಗಳನ್ನು ಪೃಥ್ವಿ, ಆಪ, ತೇಜ ಹಾಗೂ ವಾಯು ಈ ೪ ತತ್ತ್ವಗಳಲ್ಲಿ ವಿಭಜಿಸಲಾಗಿದೆ. ಅವುಗಳಲ್ಲಿ ಪೃಥ್ವಿ ಮತ್ತು ಆಪ ಈ ತತ್ತ್ವಗಳ ರಾಶಿ ಪರಸ್ಪರರ ಶುಭಯೋಗದಲ್ಲಿ ಬರುತ್ತವೆ, ಹಾಗೆಯೇ ತೇಜ ಮತ್ತು ವಾಯು ಈ ತತ್ತ್ವಗಳ ರಾಶಿಗಳು ಪರಸ್ಪರರ ಶುಭಯೋಗದಲ್ಲಿ ಬರುತ್ತವೆ ಅಂದರೆ ಪರಸ್ಪರರಿಗೆ ಪೂರಕವಾಗಿರುತ್ತವೆ.

೩ ಆ. ಜನ್ಮರಾಶಿ : ಜಾತಕದಲ್ಲಿ ಚಂದ್ರ ಯಾವ ರಾಶಿಯಲ್ಲಿರುತ್ತಾನೆಯೋ, ಆ ರಾಶಿಯು ವ್ಯಕ್ತಿಯ ‘ಜನ್ಮರಾಶಿ ಆಗಿರುತ್ತದೆ. ಚಂದ್ರ ಮನಸ್ಸಿನ ಕಾರಕ ಆಗಿರುವುದರಿಂದ ಜನ್ಮರಾಶಿಯಿಂದ ವ್ಯಕ್ತಿಯ ಇಷ್ಟಾ-ನಿಷ್ಟ, ಸ್ವಭಾವ-ವೈಶಿಷ್ಟ್ಯಗಳು, ಭಾವನಾಪ್ರಧಾನತೆ, ಮಾನಸಿಕಧಾರಣೆ ಇತ್ಯಾದಿ ವಿಷಯಗಳ ಬೋಧವಾಗುತ್ತದೆ. ವರ ಮತ್ತು ವಧುವಿನ ಜನ್ಮರಾಶಿ ಪರಸ್ಪರರ ಶುಭಯೋಗದಲ್ಲಿದ್ದರೆ ಅವರ ಸ್ವಭಾವ ಪರಸ್ಪರರಿಗೆ ಅನುಕೂಲವಾಗಿರುತ್ತದೆ. ವಧು-ವರರ ಜನ್ಮರಾಶಿ ಮತ್ತು ಜನ್ಮನಕ್ಷತ್ರ ಇವುಗಳ ಪರಸ್ಪರ ಪೂರಕತೆಯನ್ನು ತಿಳಿಯಲು ‘ಗುಣಮೇಲನ ಮಾಡುವ (೩೬ ಗುಣಗಳನ್ನು ಹೊಂದಾಣಿಕೆ ಮಾಡುವ) ಪದ್ಧತಿ ಭಾರತ ದಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಆದುದರಿಂದ ಗುಣಮೇಲನದ ಜೊತೆಗೆ ಜಾತಕದಲ್ಲಿನ ಇತರ ಘಟಕಗಳ ವಿಚಾರವನ್ನೂ ಮಾಡುವುದು ಆವಶ್ಯಕವಾಗಿರುತ್ತದೆ.

೩ ಇ. ಗ್ರಹಸ್ಥಿತಿ : ವರ ಮತ್ತು ವಧುವಿನ ಜಾತಕಗಳಲ್ಲಿನ ಗ್ರಹಸ್ಥಿತಿಯ ಅಭ್ಯಾಸ ಮಾಡಿ ಅವರ ಆರೋಗ್ಯ, ಆರ್ಥಿಕ ಸ್ಥಿತಿ, ಗೃಹಸೌಖ್ಯ, ಸಂತತಿಸೌಖ್ಯ ಇತ್ಯಾದಿ ವಿಷಯಗಳ ವಿಚಾರ ಮಾಡಿ ‘ವೈವಾಹಿಕ ಜೀವನ ಎಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಬಹುದು ?, ಎಂಬುದರ ವಿಚಾರ ಮಾಡಲಾಗುತ್ತದೆ.

೪. ವಿವಾಹ ಪ್ರಾರಬ್ಧಾಧೀನವಾಗಿದೆ ಹೀಗಿರುವಾಗ, ಜಾತಕಗಳನ್ನು ನೋಡುವ ಅವಶ್ಯಕತೆ ಏನು ?

ಹಿಂದೂ ಧರ್ಮದಲ್ಲಿನ ತತ್ತ್ವಜ್ಞಾನಕ್ಕನುಸಾರ ವ್ಯಕ್ತಿಯ ಜನ್ಮ, ವಿವಾಹ ಹಾಗೂ ಮೃತ್ಯು ಇವು ಪ್ರಾರಬ್ಧಕ್ಕನುಸಾರ ಆಗುತ್ತವೆ. ಹೀಗಿರುವಾಗ ‘ವಿವಾಹದ ವಿಷಯದಲ್ಲಿ ಜಾತಕಗಳನ್ನು ನೋಡುವುದರ ಅವಶ್ಯಕತೆಯೇನಿದೆ ?, ಎನ್ನುವ ಪ್ರಶ್ನೆ ಯಾರದಾದರೂ ಮನಸ್ಸಿನಲ್ಲಿ ಬರಬಹುದು. ಸದ್ಯದ ಕಾಲಾನುಸಾರ ಮಾನವನ ಪ್ರಾರಬ್ಧ ಶೇ. ೬೫ ರಷ್ಟಿದ್ದು ಕ್ರಿಯಾಮಾಣ ಕರ್ಮ ಶೇ. ೩೫ ರಷ್ಟಿದೆ. ವಿವಾಹ ಪ್ರಾರಬ್ಧಕ್ಕನುಸಾರ ಇದ್ದರೂ ‘ಯೋಗ್ಯ ಸಂಗಾತಿ ಸಿಗಲು ಪ್ರಯತ್ನ ಮಾಡುವುದು ನಮ್ಮ ಕ್ರಿಯಾಮಾಣ ಕರ್ಮವಾಗಿದೆ. ಹೇಗೆ ಮನುಷ್ಯ ನಿರೋಗಿಯಾಗಿರಬೇಕೆಂದು ಆಯುರ್ವೇದದಲ್ಲಿ ವ್ಯಾಯಾಮ, ಯೋಗ್ಯ ಆಹಾರ-ವಿಹಾರ ಇತ್ಯಾದಿಗಳ ಪಾಲನೆಯನ್ನು ಮಾಡಲು ಹೇಳಲಾಗಿದೆಯೋ, ಅದೇ ರೀತಿ ವೈವಾಹಿಕ ಜೀವನ ಸುಖಕರ ಆಗಿರಬೇಕೆಂದು ಸುಯೋಗ್ಯ ಸಂಗಾತಿಯನ್ನು ಪಡೆಯಲು ಜ್ಯೋತಿಷ್ಯಶಾಸ್ತ್ರದಲ್ಲಿ ಜಾತಕಗಳ ಹೊಂದಾಣಿಕೆಯನ್ನು ಮಾಡಲು ಹೇಳಲಾಗಿದೆ.

ಬುದ್ಧಿಗೆ ತಿಳಿಯಲು ಕಠಿಣವಾಗಿರುವ ಕೆಲವು ವಿಷಯಗಳು, ಉದಾ. ವ್ಯಕ್ತಿಯ ಪ್ರಾರಬ್ಧದ ತೀವ್ರತೆ, ವ್ಯಕ್ತಿಗಿರುವ ಸೂಕ್ಷ್ಮದಲ್ಲಿನ ಅನಿಷ್ಟ ಶಕ್ತಿಗಳ ತೊಂದರೆ ಇತ್ಯಾದಿಗಳ ಬೋಧವು ಜಾತಕದಿಂದ ಆಗುತ್ತದೆ. ಜಾತಕಗಳನ್ನು ನೋಡುವುದರಿಂದ ವ್ಯಕ್ತಿಗೆ ತನ್ನ ಸಂಗಾತಿಯ ಪ್ರಕೃತಿಯು ತಿಳಿದು ಅವನಿಗೆ / ಅವಳಿಗೆ ತನ್ನ ಜೊತೆಗಾರನನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ.

೫. ಸನಾತನ ಧರ್ಮವು ಮಾನವನಿಗೆ ನಿಸರ್ಗಕ್ಕೆ ಅನುಕೂಲಕರವಾಗಿರುವ, ಆದರ್ಶ ಜೀವನವನ್ನು ನಡೆಸಲು ಕಲಿಸಿದೆ

ಪಾಶ್ಚಾತ್ಯರ ಜೀವನಶೈಲಿಯ ಪ್ರಭಾವದಿಂದ ಭಾರತದಲ್ಲಿನ ವಿವಾಹವ್ಯವಸ್ಥೆ ಮತ್ತು ಕುಟುಂಬವ್ಯವಸ್ಥೆಯ ಮೇಲೆ ದೊಡ್ಡ ದುಷ್ಪರಿಣಾಮವಾಗಿದೆ. ಭಾರತದಲ್ಲಿ ವಿವಾಹವಿಚ್ಛೇದನಗಳ ಪ್ರಮಾಣ ವೇಗವಾಗಿ ಹೆಚ್ಚುತ್ತಿವೆ. ದೊಡ್ಡ ನಗರಗಳಲ್ಲಿ ಮತ್ತು ಸುಶಿಕ್ಷಿತ ಜನರಲ್ಲಿ ಇದು ಹೆಚ್ಚು ಪ್ರಮಾಣದಲ್ಲಿದೆ. ವಿವಾಹ ವಿಚ್ಛೇದನದಿಂದಾಗುವ ದುಷ್ಪರಿಣಾಮಗಳು ಭಯಾನಕವಾಗಿವೆ. ಪಾಶ್ಚಾತ್ಯ ವಿಚಾರಶೈಲಿಯು ಮುಖ್ಯವಾಗಿ ಭೋಗವಾದವನ್ನು ಆಧರಿಸಿದೆ. ಅದರಿಂದ ಅಲ್ಲಿನ ಜನರಿಗೆ ಸ್ವಚ್ಛಂದತೆಯ ಜೀವನ ನಡೆಸುವ ಆಸಕ್ತಿಯಿದೆ. ಆದರೆ ಈಶ್ವರನು ನಿರ್ಮಾಣ ಮಾಡಿದ ವಿಶ್ವವು ಸ್ವಚ್ಛಂದತೆಯಿಂದ್ದಲ್ಲ, ಅದು ನಿಶ್ಚಿತ ನಿಯಮಗಳ ಮೇಲೆ ನಡೆಯುತ್ತದೆ. ಸನಾತನ ಧರ್ಮವು ಮಾನವನಿಗೆ ನಿಸರ್ಗಕ್ಕೆ ಅನುಕೂಲಕರವಾದ ಆದರ್ಶ ಜೀವನವನ್ನು ನಡೆಸುವ ನಿಯಮಗಳನ್ನು ಹಾಕಿಕೊಟ್ಟಿದೆ. ವಿವಾಹದಲ್ಲಿ ಸ್ವೇಚ್ಛೆಯಿಂದ ಸಂಗಾತಿ ಯನ್ನು ಆರಿಸದೆ ಕುಲ, ಶೀಲ, ವಯಸ್ಸು ಇತ್ಯಾದಿ ವಿಷಯಗಳ ವಿಚಾರ ಮಾಡಿದರೆ ವೈವಾಹಿಕ ಜೀವನ ಯಶಸ್ವಿಯಾಗುವ ಪ್ರಮಾಣ ತುಂಬಾ ಹೆಚ್ಚಾಗುವುದು.

– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೧೦.೨೦೨೨)