|
ನವದೆಹಲಿ – ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯವು ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೇಸಿಗೆಯ ಹಿನ್ನೆಲೆಯಲ್ಲಿ ಸೂಚನೆಯನ್ನು ಹೊರಡಿಸಿದೆ. ದೇಶದಲ್ಲಿ ಇದೇ ಮೊದಲಬಾರಿ ಆರೋಗ್ಯ ಸಚಿವಾಲಯವು ಈ ರೀತಿಯ ಸೂಚನೆಯನ್ನು ಜಾರಿಗೊಳಿಸಿದೆ. ಆರೋಗ್ಯ ಇಲಾಖೆಯ ಸಚಿವರು ರಾಜ್ಯಗಳ ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿರುವ ಪತ್ರದಲ್ಲಿ, ದೇಶದಲ್ಲಿ ಕೆಲವು ಪ್ರದೇಶಗಳ ತಾಪಮಾನ ಹೆಚ್ಚಳವಾಗುತ್ತಿದೆ. ಸರಕಾರ ‘ರಾಷ್ಟ್ರೀಯ ಹವಾಮಾನ ಬದಲಾವಣೆ ಅಭಿಯಾನ’ದ ಅಡಿಯಲ್ಲಿ ಈ ಸಂದರ್ಭದ ಮಾಹಿತಿಯನ್ನು ಕಲೆ ಹಾಕುತ್ತಿದೆ. ಇದರಿಂದ ರಾಜ್ಯಗಳು ಈ ಮಾಹಿತಿಯನ್ನು ಆರೋಗ್ಯ ಸಚಿವಾಲಯಕ್ಕೆ ಕಳುಹಿಸಬೇಕು. ಮಾರ್ಚ 1, 2023 ರಿಂದ ಬಿಸಿಲಿನಿಂದ ಎದುರಾಗುವ ಕಾಯಿಲೆಗಳು, ಉಷ್ಣಾಘಾತ ಮುಂತಾದವುಗಳಿಂದಾಗುವ ಸಾವುಗಳ ಲೆಕ್ಕ ಇಡಬೇಕು. ಆಸ್ಪತ್ರೆಗಳಲ್ಲಿಯೂ ಕೂಡ ಬಿಸಿಲಿನಿಂದ ಎದುರಾಗುವ ಕಾಯಿಲೆಗಳ ಮೇಲಿನ ಔಷಧಿಗಳ ಸಂಗ್ರಹ ಇಟ್ಟುಕೊಳ್ಳಬೇಕು. ಸರಕಾರವು ನಾಗರಿಕರಿಗೆ ಬಿಸಿಲಿನ ಸಂದರ್ಭದಲ್ಲಿ ಸೂಚನೆಯನ್ನು ನೀಡಬೇಕು. ಇದರಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆಯ ವರೆಗೆ ಆವಶ್ಯಕತೆಯಿಲ್ಲದೇ ಹೊರಗೆ ಬರಬಾರದೆಂದು ತಿಳಿಸಬೇಕು. ಇದರೊಂದಿಗೆ 102 ಮತ್ತು 108 ಈ ಎರಡು ಹೆಲ್ಪ ಲೈನ್ ಸಂಖ್ಯೆಗಳನ್ನು ಪ್ರಸಾರ ಮಾಡಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಜನರು ಈ ಸಂಖ್ಯೆಗೆ ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ.