ನರ್ಸರಿಗಳಿಂದ ತಂದಿರುವ ಸಸಿಗಳ ಕೃಷಿ

ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ

ಸಂಚಿಕೆ ೨೪/೦೩ ರ ಸಂಚಿಕೆಯಲ್ಲಿ ಗಿಡಗಳಿಗೆ ಅತಿ ನೀರು ಹಾಕದಿರುವ ಬಗ್ಗೆ ತಿಳಿದುಕೊಂಡೆವು ಈ ವಾರದ ಲೇಖನದಲ್ಲಿ ‘ನರ್ಸರಿಗಳಿಂದ (ಸಸ್ಯಶಾಲೆಗಳಿಂದ) ತಂದಿರುವ ಸಸಿಗಳನ್ನು ಮನೆಗಳ ಕೈದೋಟದಲ್ಲಿ ಹೇಗೆ ನೆಡಬೇಕು ? ಎಂಬುದನ್ನು ನೋಡೋಣ. ಈ ಲೇಖನವನ್ನು ಓದಿ ತಾವು ಸ್ವತಃ ಅನುಭವವನ್ನು ಪಡೆಯಲು ಪ್ರತ್ಯಕ್ಷ ಕೃಷಿಯನ್ನು ಮಾಡಿರಿ !

೧. ನರ್ಸರಿಗಳಿಂದ ಸಸಿಗಳನ್ನು ತಂದರೆ ಆಗುವ ಲಾಭ

ನರ್ಸರಿಗಳಲ್ಲಿ ಹಣ್ಣುಗಳ, ಹಾಗೆಯೇ ಹೂವುಗಳ ಕಸಿ ಮಾಡಿದ ಗಿಡಗಳು ಸಿಗುತ್ತವೆ. ಬೀಜಗಳಿಂದ ಬೆಳೆಸಿದ ಕೆಲವು ಹಣ್ಣುಗಳ ಗಿಡಗಳಿಗೆ ಫಲ ಬರಲು ಬಹಳ ಹೆಚ್ಚು ಕಾಲಾವಧಿ ಬೇಕಾಗುತ್ತದೆ; ಆದರೆ ಕಸಿ ಮಾಡಿದ ಗಿಡಗಳು ೨ – ೩ ವರ್ಷಗಳಲ್ಲಿ ಫಲ ನೀಡುತ್ತವೆ.

ಕೆಲವು ನರ್ಸರಿಗಳಲ್ಲಿ ಹಣ್ಣುಗಳ, ಹೂವುಗಳ ಗಿಡಗಳಂತೆ ಬದನೆಕಾಯಿ, ಮೆಣಸಿನಕಾಯಿ, ಟೊಮೇಟೊ, ಕ್ಯಾಬೇಜ್, ಹೂಕೋಸು (ಫ್ಲಾವರ್), ಇಂತಹ ತರಕಾರಿಗಳ ಬೀಜಗಳಿಂದ ತಯಾರಿಸಿದ ಸಸಿಗಳೂ ಮಾರಾಟಕ್ಕೆ ಸಿಗುತ್ತವೆ. ಇಂತಹ ಸಿದ್ಧವಿರುವ ಸಸಿಗಳು ಸಿಕ್ಕರೆ ಸಸಿಗಳನ್ನು ತಯಾರಿಸಲು ಬೇಕಾದ ನಮ್ಮ ಶ್ರಮ ಉಳಿಯುತ್ತದೆ ಮತ್ತು ನಮಗೆ ನೇರವಾಗಿ ಸಸಿಗಳನ್ನೇ ನೆಡಲು ಸಾಧ್ಯವಾಗುತ್ತದೆ.

ನಮ್ಮ ಮೇಲ್ಛಾವಣಿಯಲ್ಲಿ (ಟೆರೇಸ್‌ನಲ್ಲಿ) ದೊಡ್ಡ ಕುಂಡ, ಡ್ರಮ್ ಅಥವಾ ಪಾತಿಗಳಲ್ಲಿ (ಮಡಿಗಳಲ್ಲಿ) ಹಣ್ಣುಗಳ ಗಿಡಗಳನ್ನು ಬೆಳೆಸಲು ಬರುತ್ತದೆ. (ಛಾಯಾಚಿತ್ರಗಳನ್ನು ನೋಡಿರಿ.) ಪಾತಿಗಳಲ್ಲಿ (ಮಣ್ಣಿನ ಸುತ್ತಲೂ ಇಟ್ಟಿಗೆಗಳನ್ನಿಟ್ಟು ತಯಾರಿಸಿದ ಜಾಗದಲ್ಲಿ) ಹಣ್ಣಿನ ಗಿಡಗಳನ್ನು ಬೆಳೆಸುವುದಿದ್ದರೆ ಅವುಗಳನ್ನು ಯಾವಾಗಲೂ ಪಾತಿಯ ಮಧ್ಯಭಾಗದಲ್ಲಿ ನೆಡಬೇಕು. ಇದರಿಂದ ಹಣ್ಣಿನ ಗಿಡಗಳ ಬೇರುಗಳಿಗೆ ಹರಡಲು ಸಾಕಷ್ಟು ಜಾಗ ಸಿಗುತ್ತದೆ.

೨. ಕೃಷಿಗಾಗಿ ಹಣ್ಣಿನ ಗಿಡಗಳ ಆಯ್ಕೆ

ಡ್ರಮ್‍ನಲ್ಲಿ ನೆಡಲಾದ ಬಾಳೆಯ ಗಿಡಗಳು

ಮೇಲ್ಛಾವಣಿಯಲ್ಲಿ (ಟೆರೇಸಿನಲ್ಲಿ) ಅಥವಾ ಮನೆಯ ಸುತ್ತಲೂ ಗಿಡಗಳನ್ನು ಬೆಳೆಸುವಾಗ ಹಲಸು, ನೇರಳೆ, ಗೋಡಂಬಿ, ದೇಶಿ ಮಾವು, ಎತ್ತರವಾಗಿ ಬೆಳೆಯುವ ತೆಂಗಿನ ಗಿಡಗಳಂತಹ ಗಿಡಗಳನ್ನು ನೆಡಬಾರದು. ಕಸಿ ಮಾಡಿದ ಮಾವು (ದೇಶಿ), ಸೀತಾಫಲ, ಪೇರಳೆ, ಚಿಕ್ಕು, ದಾಳಿಂಬೆ, ಅಂಜೂರ, ಪಪ್ಪಾಯಿ, ನಿಂಬೆ, ಬಾಳೆ ಇಂತಹ ಹಣ್ಣುಗಳ ಗಿಡಗಳನ್ನು ಮೇಲ್ಛಾವಣಿಯಲ್ಲಿ(ಟೇಸ್‌ಸಿನಲ್ಲಿ) ನೆಡಲು ಬರುತ್ತದೆ. ಈ ಗಿಡಗಳ ರೆಂಬೆಗಳನ್ನು ನಿಯಮಿತವಾಗಿ ಕತ್ತರಿಸಿ ಗಿಡಗಳ ಆಕಾರವನ್ನು ಕಡಿಮೆ ಮಾಡಬೇಕು. ಇದರಿಂದ ಮೇಲ್ಛಾವಣಿಯಲ್ಲಿ ಅವುಗಳೆಡೆಗೆ ಗಮನ ಕೊಡಲು ಸುಲಭವಾಗುತ್ತದೆ. ಕಿಟಕಿಗಳಲ್ಲಿ ಕುಂಡಗಳನ್ನಿಟ್ಟು ಅವುಗಳಲ್ಲಿ ಹಣ್ಣುಗಳ ಗಿಡಗಳನ್ನು ನೆಡುವುದಿದ್ದರೆ ನಿಂಬೆ, ಅಂಜೂರ, ದಾಳಿಂಬೆ ಇಂತಹ ಮಧ್ಯಮ ಆಕಾರದ ಗಿಡಗಳನ್ನು ಆರಿಸಬೇಕು.

೨ ಇಟ್ಟಿಗೆಗಳ ಎತ್ತರದ ಪಾತಿಯಲ್ಲಿ ನೆಟ್ಟ ಪಪ್ಪಾಯಿ ಗಿಡ

೩. ನರ್ಸರಿಗಳಿಂದ ತಂದ ಸಸಿಗಳನ್ನು ನೆಡುವ ಪದ್ಧತಿ

ನರ್ಸರಿಗಳಿಂದ ಸಸಿಗಳನ್ನು ತಂದನಂತರ ತಕ್ಷಣವೇ ಅವುಗಳನ್ನು ಚೀಲದಿಂದ ತೆಗೆದು ಕುಂಡಗಳಲ್ಲಿ ನೆಡಬಾರದು. ಆ ಸಸಿಗಳಿಗೆ ನಮ್ಮ ತೋಟದ ವಾತಾವರಣ ಹೊಂದಿಕೆಯಾಗಬೇಕೆಂದು ೨-೩ ದಿನ ಹಾಗೆಯೇ ಚೀಲದಲ್ಲಿಯೇ ಇಡಬೇಕು. ಈ ಕಾಲಾವಧಿಯಲ್ಲಿ ಆ ಸಸಿಗಳಿಗೆ ಪ್ರತಿದಿನ ನೀರು ಹಾಕಬೇಕು. ಸಸಿಗಳನ್ನು ತಂದ ಕೂಡಲೇ ನೆಟ್ಟರೆ, ಕೆಲವೊಮ್ಮೆ ಬೇರುಗಳಿಗೆ ಹಾನಿಯಾಗಿ ಅಥವಾ ಅಕಸ್ಮಾತ್ ವಾತಾವರಣಲ್ಲಾದ ಬದಲಾವಣೆಯಿಂದ ಸಸಿಗಳು ಒಣಗುವ ಸಾಧ್ಯತೆ ಇರುತ್ತದೆ.

ನರ್ಸರಿಯಲ್ಲಿನ ಸಸಿಗಳನ್ನು ಬೆಳಗ್ಗೆ ಬೇಗ ಅಥವಾ ಸಾಯಂಕಾಲ ಬಿಸಿಲು ಕಡಿಮೆಯಾದ ಮೇಲೆ ಕುಂಡಗಳಲ್ಲಿ ಅಥವಾ ಪಾತಿಗಳಲ್ಲಿ ನೆಡಬೇಕು. ಸಸಿಗಳ ಬೇರುಗಳಿಗೆ ಬಿಸಿಲಿನಿಂದ ಹಾನಿಯಾಗುವ ಸಾಧ್ಯತೆ ಇರುವುದರಿಂದ ಬಿಸಿಲಿನ ಸಮಯವನ್ನು ತಪ್ಪಿಸಬೇಕು. ಸಸಿಗಳನ್ನು ನೆಡುವ ಮೊದಲು ಅವುಗಳ ಮೇಲೆ ‘ಬೀಜಾಮೃತ’ದ ಸಂಸ್ಕಾರವನ್ನು ಅವಶ್ಯ ಮಾಡಬೇಕು. ‘ಬೀಜಾಮೃತ’ವೆಂದರೆ ದೇಶಿ ಹಸುವಿನ ಸೆಗಣಿ, ಗೋಮೂತ್ರ, ಸುಣ್ಣ ಇತ್ಯಾದಿಗಳನ್ನು ಬಳಸಿ ಮಾಡಲಾದ ನೈಸರ್ಗಿಕ ಮಿಶ್ರಣ. ಇದರ ಬಳಕೆಯಿಂದ ಬುರಸುಜನ್ಯ ರೋಗಗಳಿಂದ ಸಸಿಗಳ ರಕ್ಷಣೆಯಾಗುತ್ತದೆ. ಬೀಜಾಮೃತದ ಬಗೆಗಿನ ವಿವರವಾದ ಮಾಹಿತಿ (ವಿಡಿಯೋ) ಸನಾತನದ ಜಾಲತಾಣದಲ್ಲಿ ಲಭ್ಯವಿದೆ. ಇದರ ಲಿಂಕ್‌ನ್ನು ಕೊನೆಯಲ್ಲಿ ಕೊಡಲಾಗಿದೆ.

೪. ಹಣ್ಣಿನ ಗಿಡಗಳ ವಿಷಯದಲ್ಲಿ ವಸಹಿಸಬೇಕಾದ ಕಾಳಜಿ

ಹಣ್ಣಿನ ಗಿಡಗಳ ವಿಷಯದಲ್ಲಿಯೂ ನೈಸರ್ಗಿಕ ಪದ್ಧತಿಯಿಂದ ಕೃಷಿ ಮಾಡುವಾಗ ಆಚ್ಛಾದನೆಯನ್ನು ಮಾಡಬೇಕು (ಗಿಡಗಳ ಸುತ್ತಮುತ್ತಲಿನ ಮಣ್ಣನ್ನು ಒಣಗಿದ ಎಲೆ-ಕಸಕಡ್ಡಿಗಳಿಂದ ಮುಚ್ಚಬೇಕು), ಹಾಗೆಯೇ ಅವಶ್ಯವಿದ್ದಷ್ಟೇ ನೀರನ್ನು ಹಾಕಬೇಕು.

೪ ಅ. ಜೀವಾಮೃತವನ್ನು ಕೊಡುವುದು : ಗಿಡಕ್ಕೆ ೧೫ ದಿನಗಳಿಗೊಮ್ಮೆ ೧೦ ಪಟ್ಟು ನೀರಿನಲ್ಲಿ ತೆಳುವು ಮಾಡಿದ ಜೀವಾಮೃತವನ್ನು ಕೊಡಬೇಕು. ಈ ಜೀವಾಮೃತವನ್ನು ನೇರವಾಗಿ ಗಿಡದ ಬುಡದಲ್ಲಿ ಹಾಕದೇ ಸ್ವಲ್ಪ ದೂರದಲ್ಲಿ (ಗಿಡಗಳ ಎಲೆಗಳು ಎಷ್ಟು ಅಂತರದಲ್ಲಿ ಹರಡಿರುವವೋ ಅಷ್ಟು ಅಂತರದಲ್ಲಿ) ನೀಡಬೇಕು. ಜೀವಾಮೃತವನ್ನು ಬೆಳಗ್ಗೆ ಬೇಗನೆ ಅಥವಾ ಸಾಯಂಕಾಲ ಹಾಕಬೇಕು. ಜೀವಾಮೃತವನ್ನು ಬಿಸಿಲಿರುವ ಸಮಯದಲ್ಲಿ ಹಾಕಬಾರದು. ಮಣ್ಣು ಹಸಿ (ತೇವಾಂಶ) ಇರುವಾಗಲೇ ಜೀವಾಮೃತವನ್ನು ಕೊಡಬೇಕು. ಮಣ್ಣು ಹಸಿ ಇಲ್ಲದಿದ್ದರೆ ಗಿಡಕ್ಕೆ ಮೊದಲು ಸ್ವಲ್ಪ ನೀರು ಹಾಕಿ ನಂತರ ಜೀವಾಮೃತವನ್ನು ಹಾಕಬೇಕು. ಹಣ್ಣಿನ ಗಿಡಗಳಿಗೆ ಜೀವಾಮೃತವನ್ನು ಕೊಡುವ ಪ್ರಮಾಣ ಮುಂದಿನಂತಿರಬೇಕು.

೪ ಆ. ಜೀವಾಮೃತವನ್ನು ಸಿಂಪಡಿಸುವುದು : ಪ್ರತಿ ಹುಣ್ಣಿಮೆಗೆ (ಮತ್ತು ಸಾಧ್ಯವಿದ್ದರೆ ಅಮಾವಾಸ್ಯೆಗೂ) ಜೀವಾಮೃತ ಮತ್ತು ಹುಳಿ ಮಜ್ಜಿಗೆಯ ಮಿಶ್ರಣವನ್ನು ಸಿಂಪಡಿಸಬೇಕು. ಇದಕ್ಕೆ ನೀರು ಹಾಕದಿರುವ ಜೀವಾಮೃತವನ್ನು ಸೋಸಿಕೊಳ್ಳಬೇಕು, ಈ ಸೋಸಿದ ಜೀವಾಮೃತ ೭೫ ಮಿ.ಲೀ., ಹುಳಿ ಮಜ್ಜಿಗೆ ೨೫ ಮಿ.ಲೀ. ಮತ್ತು ನೀರು ೧ ಲೀಟರ್ ಈ ಪ್ರಮಾಣದಲ್ಲಿ ಸ್ಪ್ರೆಯರ್ ಅಥವಾ ಸ್ಪ್ರೆ ಬಾಟಲಿಯಲ್ಲಿ ತೆಗೆದುಕೊಂಡು ಸಿಂಪಡಿಸಬೇಕು. ಹೀಗೆ ಈ ಮಿಶ್ರಣವನ್ನು ಎಲ್ಲ ಹಣ್ಣಿನ ಗಿಡಗಳು, ತರಕಾರಿ, ಹಾಗೆಯೇ ಹೂವುಗಳ ಗಿಡಗಳ ಮೇಲೆಯೂ ಸಿಂಪಡಿಸಬೇಕು. ಜೀವಾಮೃತವನ್ನು ಸಿಂಪಡಿಸುವುದರಿಂದ ಗಿಡಗಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಾತಾವರಣದಲ್ಲಿನ ಬದಲಾವಣೆ ಮತ್ತು ವಿಷಾಣುಜನ್ಯ ರೋಗಳಿಂದ ಫಸಲುಗಳ ರಕ್ಷಣೆಯಾಗುತ್ತದೆ.

ಸೌ. ರಾಘವಿ ಮಯೂರೇಶ ಕೊನೇಕರ, ಢವಳಿ, ಫೋಂಡಾ, ಗೋವಾ.

ಸವಿಸ್ತಾರವಾದ ಮಾಹಿತಿಗಾಗಿ ‘ಸನಾತನ ಸಂಸ್ಥೆ’ಯ ಜಾಲತಾಣದ ಸಂಪರ್ಕಕೊಂಡಿ ಅಥವಾ QR code: https://www.sanatan.org/kannada//94049.html ಅನ್ನು ಸಂಪರ್ಕಿಸಿ