ಬಲಿಪಾಡ್ಯ (ಅಕ್ಟೋಬರ್ ೨೬)

ತಿಥಿ

ಕಾರ್ತಿಕ ಶುಕ್ಲ ಪ್ರತಿಪದಾ

ಇತಿಹಾಸ

ಬಲಿರಾಜನು ಅತ್ಯಂತ ದಾನಶೂರನಾಗಿದ್ದನು. ಬಾಗಿಲಿಗೆ ಬಂದ ಅತಿಥಿಯು ಏನೇ ಬೇಡಿದರೂ ಅದನ್ನು ಅವನಿಗೆ ದಾನವೆಂದು ಕೊಡುತ್ತಿದ್ದನು. ‘ದಾನ ಕೊಡುವುದು’ ಒಂದು ಒಳ್ಳೆಯ ಗುಣವಾಗಿದ್ದರೂ ಗುಣದ ಅತಿರೇಕವು ದೋಷವೇ ಆಗಿದೆ. ಯಾರಿಗೆ ಏನು, ಯಾವಾಗ ಮತ್ತು ಎಲ್ಲಿ ದಾನ ಕೊಡಬೇಕು ಎನ್ನುವುದನ್ನು ಶಾಸ್ತ್ರ ಮತ್ತು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸತ್ಪಾತ್ರರಿಗೆ ದಾನ ಕೊಡಬೇಕು, ಅಪಾತ್ರರಿಗೆ ಕೊಡಬಾರದು. ಅಪಾತ್ರರಿಗೆ ಸಂಪತ್ತನ್ನು ದಾನ ಮಾಡಿದರೆ ಅವರು ಮದೋನ್ಮತ್ತರಾಗಿ ಮನಬಂದಂತೆ ವರ್ತಿಸುತ್ತಾರೆ. ಬಲಿರಾಜನು ಯಾರಿಗಾದರೂ, ಯಾವಾಗ ಬಂದರೂ ಮತ್ತು ಅವರು ಏನು ಕೇಳಿದರೂ ದಾನವೆಂದು ಕೊಡುತ್ತಿದ್ದನು. ಆಗ ಭಗವಾನ ಶ್ರೀವಿಷ್ಣುವು ವಟುವಿನ ಅವತಾರ (ವಾಮನಾವತಾರ) ತಾಳಿದನು. (ವಟುವು ಚಿಕ್ಕವನಾಗಿರುತ್ತಾನೆ ಮತ್ತು ‘ಓಂ ಭವತಿ ಭಿಕ್ಷಾಂ ದೇಹಿ|’ ಅಂದರೆ ‘ಭಿಕ್ಷೆ ಕೊಡಿ’ ಎಂದು ಕೇಳುತ್ತಾನೆ.) ವಾಮನನು ಬಲಿರಾಜನ ಬಳಿ ಹೋಗಿ ಭಿಕ್ಷೆಯನ್ನು ಕೇಳಿದಾಗ, ಬಲಿರಾಜನು ‘ಏನು ಬೇಕು’ ಎಂದು ಕೇಳಿದನು. ಆಗ ವಾಮನನು ತ್ರಿಪಾದ (ಮೂರು ಹೆಜ್ಜೆ) ಭೂಮಿಯನ್ನು ದಾನವಾಗಿ ಕೇಳಿದನು. ‘ವಾಮನನು ಯಾರು ಮತ್ತು ಆ ದಾನದಿಂದ ಏನಾಗಲಿದೆ’ ಎನ್ನುವುದರ ಜ್ಞಾನವಿಲ್ಲದ ಬಲಿರಾಜನು ದಾನಕೊಡಲು ಒಪ್ಪಿಕೊಂಡನು. ವಾಮನನು ವಿರಾಟರೂಪವನ್ನು ತಾಳಿ ಒಂದು ಕಾಲಿನಿಂದ ಸಂಪೂರ್ಣ ಭೂಮಿಯನ್ನು ವ್ಯಾಪಿಸಿದನು. ಎರಡನೆಯ ಕಾಲಿನಿಂದ ಇಡಿ ಅಂತರಿಕ್ಷವನ್ನು ವ್ಯಾಪಿಸಿಕೊಂಡನು ಹಾಗೂ ಅವನು ‘ಮೂರನೆಯ ಕಾಲನ್ನು ಎಲ್ಲಿಡಲಿ?’ ಎಂದು ಬಲಿರಾಜನನ್ನು ಕೇಳಿದನು. ಆಗ ಬಲಿರಾಜನು, ‘ಮೂರನೆಯ ಕಾಲನ್ನು ನನ್ನ ತಲೆಯ ಮೇಲೆ ಇಡಿ’ ಎಂದು ಹೇಳಿದನು. ಆಗ ಮೂರನೆಯ ಪಾದವನ್ನು ಆತನ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುವುದೆಂದು ನಿರ್ಧರಿಸಿ ವಾಮನನು, ‘ನಿನಗೆ ಏನಾದರೂ ವರ ಕೇಳುವುದಿದ್ದರೆ ಕೇಳು (ವರಂ ಬ್ರೂಹಿ)’ ಎಂದನು. ಆಗ ಬಲಿರಾಜನು ‘ಪೃಥ್ವಿಯ ಮೇಲಿನ ನನ್ನ ಎಲ್ಲ ರಾಜ್ಯವು ಮುಕ್ತಾಯವಾಗಲಿದೆ ಮತ್ತು ನೀವು ನನ್ನನ್ನು ಪಾತಾಳಕ್ಕೆ ತಳ್ಳುವವರಿದ್ದೀರಿ. ಆದುದರಿಂದ ಈ ಮೂರು ಪಾದ ಭೂಮಿದಾನದಿಂದ ಘಟಿಸಿದಂತಹ ಪೃಥ್ವಿಯ ರಾಜ್ಯವು ಪ್ರತಿವರ್ಷವೂ ಮೂರು ದಿನಗಳ ಕಾಲವಾದರೂ ನನ್ನ ರಾಜ್ಯವೆಂದು ಗುರುತಿಸಲ್ಪಡಲಿ. ಪ್ರಭೂ, ಯಮನ ಪ್ರೀತ್ಯರ್ಥವಾಗಿ ದೀಪದಾನವನ್ನು ಮಾಡುವವರಿಗೆ ಯಮಯಾತನೆಯಾಗದಿರಲಿ, ಅವರಿಗೆ ಅಪಮೃತ್ಯು ಬರದಿರಲಿ ಮತ್ತು ಅವರ ಮನೆಯಲ್ಲಿ ಲಕ್ಷಿ ಯು ನಿರಂತರವಾಗಿ ವಾಸಿಸಲಿ’ ಎಂದು ವರವನ್ನು ಬೇಡಿದನು. ಆ ಮೂರು ದಿನಗಳೆಂದರೆ ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪ್ರತಿಪದಾ. ಇದಕ್ಕೆ ಬಲಿರಾಜ್ಯವೆನ್ನುತ್ತಾರೆ.

 ಮಹತ್ವ

ಇದು ಮೂರೂವರೆ ಮುಹೂರ್ತಗಳಲ್ಲಿನ ಅರ್ಧ ಮುಹೂರ್ತವಾಗಿದೆ. ಇದನ್ನು ‘ವಿಕ್ರಮ ಸಂವತ್ಸರ’ ಕಾಲಗಣನೆಯ ವರ್ಷಾರಂಭದ ದಿನವೆಂದು ಆಚರಿಸಲಾಗುತ್ತದೆ.

ಹಬ್ಬವನ್ನು ಆಚರಿಸುವ ಪದ್ಧತಿ

ಅ. ಬಲಿಪಾಡ್ಯದಂದು ನೆಲದ ಮೇಲೆ ೫ ಬಣ್ಣಗಳ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರ ಪೂಜೆಯನ್ನು ಮಾಡುತ್ತಾರೆ. ನಂತರ ಬಲಿಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ. ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿಯನ್ನು ಬೆಳಗುತ್ತಾರೆ. ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡುತ್ತಾರೆ. ಈ ದಿನ ಪಕ್ವಾನ್ನದ ಭೋಜನ ಮಾಡುತ್ತಾರೆ.

ಆ. ‘ಬಲಿರಾಜ್ಯದಲ್ಲಿ ಶಾಸ್ತ್ರದಲ್ಲಿ ಹೇಳಿದ ನಿಷಿದ್ಧ ಕರ್ಮಗಳನ್ನು ಬಿಟ್ಟು ಜನರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಬೇಕೆಂದು’ ಧರ್ಮಶಾಸ್ತ್ರವು ಹೇಳುತ್ತದೆ. ಅಭಕ್ಷ್ಯಭಕ್ಷಣ, ಅಪೇಯಪಾನ ಮತ್ತು ಅಗಮ್ಯಾಗಮನ ಇವು ನಿಷಿದ್ಧ ಕರ್ಮಗಳಾಗಿವೆ; ಶಾಸ್ತ್ರದ ಸಮ್ಮತಿ ಇರುವುದರಿಂದ ಜನರು ಪರಂಪರೆಯಂತೆ ವಿನೋದವಿಲಾಸ ಮಾಡುತ್ತಾರೆ.

ಇ. ಈ ದಿನ ಜನರು ಹೊಸ ಬಟ್ಟೆಬರೆಗಳನ್ನು ಧರಿಸಿ ಇಡೀ ದಿನವನ್ನು ಆನಂದದಲ್ಲಿ ಕಳೆಯುತ್ತಾರೆ. ಈ ದಿನ ಗೋವರ್ಧನ ಪೂಜೆಯನ್ನು ಮಾಡುವ ಪದ್ಧತಿಯಿದೆ. ಇದಕ್ಕಾಗಿ ಸೆಗಣಿಯ ಪರ್ವತವನ್ನು ಮಾಡಿ ಅದರ ಮೇಲೆ ಗರಿಕೆ ಮತ್ತು ಹೂವುಗಳನ್ನು ಚುಚ್ಚುತ್ತಾರೆ. ಕೃಷ್ಣ, ಇಂದ್ರ, ಹಸು ಮತ್ತು ಕರುಗಳ ಚಿತ್ರ ಅಥವಾ ಮೂರ್ತಿಗಳನ್ನು ಜೊತೆಗಿಟ್ಟು, ಅವುಗಳನ್ನು ಪೂಜಿಸಿ ಮೆರವಣಿಗೆ ಮಾಡುತ್ತಾರೆ.

ಭಾವಾರ್ಥ : ಈಶ್ವರೀ ಕಾರ್ಯವೆಂದು ಜನತೆಯ ಸೇವೆಯನ್ನು ಮಾಡುತ್ತಾ ದೇವತ್ವಕ್ಕೆ ತಲುಪಿದ ಬಲಿಯನ್ನು ನೆನಪಿಸಿಕೊಳ್ಳುವುದು!

ಬಲಿಪಾಡ್ಯದಂದು ಬಲಿಯ ಪೂಜೆಯನ್ನು ಮಾಡುತ್ತಾರೆ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮತಾಳಿದ್ದರೂ ಅವನ ಪುಣ್ಯದಿಂದಾಗಿ ಅವನ ಮೇಲೆ ವಾಮನದೇವರ ಕೃಪೆಯಾಯಿತು. ಅವನು ಈಶ್ವರೀ ಕಾರ್ಯವೆಂದು ಜನರ ಸೇವೆಯನ್ನು ಮಾಡಿದನು. ಅವನು ಸಾತ್ತ್ವಿಕ ವೃತ್ತಿಯ ಮತ್ತು ದಾನಿರಾಜನಾಗಿದ್ದನು. ಪ್ರತಿಯೊಬ್ಬ ಮನುಷ್ಯನು ಪ್ರಾರಂಭದಲ್ಲಿ ಅಜ್ಞಾನಿಯಾಗಿರುವುದರಿಂದ ಅವನಿಂದ ಅಯೋಗ್ಯ ಕೃತಿಗಳು ಘಟಿಸುತ್ತಿರುತ್ತವೆ. ಆದರೆ ಜ್ಞಾನ ಮತ್ತು ಈಶ್ವರೀಕೃಪೆಯಿಂದ ಅವನು ದೇವತ್ವವನ್ನು ಪ್ರಾಪ್ತಮಾಡಿ ಕೊಳ್ಳಬಹುದು ಎಂಬುದು ಈ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಇಂತಹ ನಿರ್ಭಯತೆಯಿಂದ ಸತ್ಯಕರ್ಮವನ್ನು ಮಾಡಿದರೆ ಅವನಿಗೆ ಮೃತ್ಯುವಿನ ಭಯವೇ ಇರುವುದಿಲ್ಲ. ಯಮನೂ ಕೂಡಾ ಅವನ ಮಿತ್ರ ಅಥವಾ ಬಂಧುವಾಗುತ್ತಾನೆ.

ಭಗವಂತನು ವಾಮನ ಅವತಾರದಲ್ಲಿ ‘ಭಗವಂತನು ಸರ್ವಸ್ವವನ್ನು ಅರ್ಪಿಸುವವನ ದಾಸನಾಗುವ ತಯಾರಿಯನ್ನೂ ಇಟ್ಟುಕೊಂಡಿರುತ್ತಾನೆ’ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಬಲಿಯು ವಾಸ್ತವದಲ್ಲಿ ಅಸುರರ ಕುಲದವನಾಗಿದ್ದರೂ ಅವನ ಉದಾರ ತತ್ತ್ವದಿಂದಾಗಿ ಮತ್ತು ಅವನು ಭಗವಂತನಿಗೆ ಶರಣಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನ ಮಾಡಿ ಅವನ ಜೀವನಕ್ಕೆ ಹೊಸ ಸ್ವರೂಪವನ್ನು ನೀಡಿದನು ಮತ್ತು ಅವನ ಉದ್ಧಾರವನ್ನು ಮಾಡಿದನು. ಅವನ ರಾಜ್ಯದಲ್ಲಿದ್ದ ಅಸುರವೃತ್ತಿಗೆ ಪೋಷಕವಾಗಿರುವ ಭೋಗಮಯ ವಿಚಾರಗಳನ್ನು ತೆಗೆದುಹಾಕಿ, ಅಲ್ಲಿ ತ್ಯಾಗಭಾವನೆಯನ್ನು ಅಂಕುರಿಸಿ, ಜನತೆಗೆ ದೈವೀವಿಚಾರಗಳನ್ನು ನೀಡಿ ಸುಖ ಮತ್ತು ಸಮೃದ್ಧಿಯ ಜೀವನವನ್ನು ಪ್ರದಾನಿಸಿದನು.’

– ಪ.ಪೂ.ಪರಶರಾಮ ಮಾಧವ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.