ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಅನೇಕರ ಸಾವು !

ಪಂಜಾಬನ್ನು ಸಂಪರ್ಕಿಸುವ ರೇಲ್ವೆ ಸೇತುವೆ ಕುಸಿಯಿತು

ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಳೆದ ೨೪ ಗಂಟೆಗಳಲ್ಲಿ ಚಂಬಾ ಜಿಲ್ಲೆಯ ಭಟಿಯಾದಲ್ಲಿ ೩ ಮತ್ತು ಮಂಡಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಕಾಂಗಡಾ ಜಿಲ್ಲೆಯ ಶಾಹಪೂರದಲ್ಲಿ ಮನೆ ಕುಸಿದಿದ್ದರಿಂದ ೯ ವರ್ಷದ ಬಾಲಕಿ ಮರಣ ಹೊಂದಿದಳು. ಚಂಬಾ ಮತ್ತು ಮಂಡಿ ಜಿಲ್ಲೆಯಲ್ಲಿ ೧೫ ಕ್ಕಿಂತ ಅಧಿಕ ಜನರು ಕಾಣೆಯಾಗಿದ್ದಾರೆ. ಹಮೀರಪೂರದಲ್ಲಿ ೧೦ ರಿಂದ ೧೨ ಮನೆಗಳು ನದಿಯಲ್ಲಿ ಮುಳುಗಿದೆ. ಇಲ್ಲಿಯ ೧೯ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇನ್ನೊಂದೆಡೆ ಕಾಂಗಡಾದಲ್ಲಿ ಭಾರಿ ಮಳೆಯಿಂದ ಚಕ್ಕಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಪಂಜಾಬ ಮತ್ತು ಹಿಮಾಚಲ ಪ್ರದೇಶವನ್ನು ಸಂಪರ್ಕಿಸುವ ರೇಲ್ವೆ ಸೇತುವೆ ಕೊಚ್ಚಿ ಹೋಗಿದೆ. ಜಿಲ್ಲಾಡಳಿತವು ವಾರದ ಹಿಂದೆ ಈ ಸೇತುವೆ ಸುರಕ್ಷಿತವಾಗಿಲ್ಲವೆಂದು ಘೋಷಿಸಿತ್ತು. ಇದರಿಂದ ಅದರ ಮೇಲೆ ರೈಲು ಸಂಚಾರವನ್ನು ನಿಷೇಧಿಸಲಾಗಿತ್ತು. ಮಂಡಿಯ ಗೋಹರದಲ್ಲಿ ಗುಡ್ಡ ಕುಸಿದಿದ್ದರಿಂದ ಕಾಶನ ಪಂಚಾಯತಿಯ ಜಡೊನಾ ಗ್ರಾಮದ ಒಂದೇ ಕುಟುಂಬದ ೮ ಜನ ಸದಸ್ಯರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಈ ಸ್ಥಳದಲ್ಲಿ ಸಮರೋಪಾದಿಯಲ್ಲಿ ಸಹಾಯಕಾರ್ಯವನ್ನು ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಭಾರಿ ಮಳೆಯಿಂದ ೧ ಸಾವಿರ ೧೩೫ ಕೋಟಿ ರೂಪಾಯಿಗಳ ಸರಕಾರಿ ಮತ್ತು ಖಾಸಗಿ ಸಂಪತ್ತು ಹಾನಿಯಾಗಿದೆ.


ಹವಾಮಾನ ಖಾತೆಯ ಮಾಹಿತಿಯನುಸಾರ ಮುಂದಿನ ೯೬ ಗಂಟೆಗಳಲ್ಲಿ ಭಾರಿ ಮಳೆ ಬೀಳುವುದೆಂದು ಅಂದಾಜು ಮಾಡಲಾಗಿದೆ. ಮಂಡಿ ಜಿಲ್ಲೆಯ ಜಿಲ್ಲಾಡಳಿತವು ಭಾರಿ ಮಳೆಯ ಕಾರಣದಿಂದ ಶಾಲೆಗಳಿಗೆ ರಜೆ ಘೋಷಿಸಿದೆ. ಚಂಬಾ ಮತ್ತು ಕುಲ್ಲೂ ಇಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಾಖಂಡದಲ್ಲಿಯೂ ಭಾರಿ ಮಳೆಯಿಂದ ಭಾರೀ ಪ್ರಮಾಣದಲ್ಲಿ ಆರ್ಥಿಕ ಮತ್ತು ಜೀವಹಾನಿಯಾಗಿದೆ.