ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ‘ಎನ್.ಐ.ಎ.’ಗೆ !

ಬೆಂಗಳೂರು : ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಜುಲೈ ೨೯ ರಂದು ಸಂಜೆ ಮಾಧ್ಯಮಗಳಿಗೆ ತಿಳಿಸಿದರು. ಕೊಲೆ ಪ್ರಕರಣದಲ್ಲಿ ಸಂಘಟಿತ ಅಪರಾಧ ಮತ್ತು ಅಂತರರಾಜ್ಯ ಸಂಪರ್ಕಗಳಿರುವ ಕಾರಣ ಪ್ರಕರಣವನ್ನು ‘ಎನ್.ಐ.ಎ.’ಗೆ ಹಸ್ತಾಂತರಿಸಲಾಗುವುದು ಎಂದು ಸಿ.ಎಂ. ಬೊಮ್ಮಾಯಿ ಹೇಳಿದ್ದಾರೆ.

ಉತ್ತರ ಪ್ರದೇಶಕ್ಕಿಂತ ೫ ಹೆಜ್ಜೆ ಮುಂದೆ ಹೋಗಿ ಎನ್ಕೌಂಟರ್ ಮಾಡುವ ! – ಡಾ. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವರು

ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಂಧಿಸಲಾಗುವುದು; ಆದರೆ ಇಂತಹ ಘಟನೆ ಮರುಕಳಿಸದಿರಲಿ ಎಂಬುವುದೇ ನಮ್ಮ (ಭಾಜಪ) ಕಾರ್ಯಕರ್ತರ ಇಚ್ಛೆಯಾಗಿದೆ. ಕಾರ್ಯಕರ್ತರ ಆಶಯದಂತೆ ಕ್ರಮ ಕೈಗೊಳ್ಳಲಾಗುವುದು. ನಾವು ಉತ್ತರ ಪ್ರದೇಶಕ್ಕಿಂತ ೫ ಹೆಜ್ಜೆ ಮುಂದೆ ಇರುತ್ತೇವೆ, ಹಂತಕರನ್ನು ಎನ್ಕೌಂಟರ್ ಮಾಡಲೂ ಸಿದ್ದರಾಗಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಅಗತ್ಯಬಿದ್ದರೆ ಉತ್ತರ ಪ್ರದೇಶದ ‘ಯೋಗಿ ಮಾದರಿ’ಯನ್ನು ಕರ್ನಾಟಕದಲ್ಲಿ ಅಳವಡಿಸುತ್ತೇವೆ ! – ಮುಖ್ಯಮಂತ್ರಿ ಬೊಮ್ಮಾಯಿ

(‘ಯೋಗಿ ಮಾದರಿ’ ಎಂದರೆ ಅಪರಾಧಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸ್ ಮತ್ತು ಆಡಳಿತದಿಂದ ಜಾರಿಗೊಳಿಸಿದ ಕಠಿಣ ಕ್ರಮದ ನೀತಿ)

ಪ್ರವೀಣ ನೆಟ್ಟಾರು ಹತ್ಯೆ ಬಳಿಕ ಭಾಜಪದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ರಮ ಮತ್ತು ನಿಲುವಿನಿಂದ ಅವರಿಗೆ ತೃಪ್ತಿ ಇಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರು, ‘ಅಗತ್ಯಬಿದ್ದರೆ ಕರ್ನಾಟಕದಲ್ಲೂ ‘ಯೋಗಿ ಮಾದರಿ’ ಜಾರಿಗೆ ತರುತ್ತೇವೆ. ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಒಂದು ವೇಳೆ ನಮಗೆ ಇನ್ನೂ ಕಠಿಣವಾಗಬೇಕಿದ್ದರೆ ನಮ್ಮ ಹೆಜ್ಜೆಗಳು ಕುಂದುವುದಿಲ್ಲ’, ಎಂದು ಹೇಳಿದ್ದಾರೆ. ಇದರಿಂದಾಗಿ ಈಗ ‘ಉತ್ತರ ಪ್ರದೇಶದಂತೆ ಕರ್ನಾಟಕದಲ್ಲಿಯೂ ‘ಬುಲ್ಡೋಜರ್’ ಕಾರ್ಯಾಚರಣೆ ನಡೆಯಲಿದೆಯೇ?’, ಎಂಬ ಪ್ರಶ್ನೆ ಎದ್ದಿದೆ. ಉತ್ತರ ಪ್ರದೇಶದಲ್ಲಿ, ಗಲಭೆ ಅಥವಾ ಇತರ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮನೆಗಳು ಅಥವಾ ಅಂಗಡಿಗಳು ಅನಧಿಕೃತವೆಂದು ಕಂಡುಬಂದರೆ ಅವುಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ ಆಗಬೇಕು ಎಂಬ ನಿರೀಕ್ಷೆಯನ್ನು ಜನ ವ್ಯಕ್ತಪಡಿಸುತ್ತಿದ್ದಾರೆ.

೧. ಕರ್ನಾಟಕದ ಭಾಜಪ ಶಾಸಕರೂ, ಸಂಸದರೂ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.

೨. ಭಾಜಪದ ಕಾರ್ಯಕರ್ತರು ಉತ್ತರ ಪ್ರದೇಶದ ‘ಬುಲ್ಡೋಜರ್’ನ ರಾಜಕೀಯದಿಂದ ತುಂಬಾ ಪ್ರಭಾವಿತರಾಗಿದ್ದಾರೆ.

೩. ಯೋಗಿ ಆದಿತ್ಯನಾಥ್ ಅವರ ಕಟ್ಟುನಿಟ್ಟಿನ ಆಡಳಿತದಿಂದಾಗಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ‘ಯೋಗಿ ಮಾದರಿ’ ಜಾರಿಗೆ ತರಬೇಕು ಎಂದು ಭಾಜಪ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.