೧. ಊಟದಲ್ಲಿ ಉಪ್ಪಿನಕಾಯಿಯ ಮಹತ್ವ !
ಬಾಲ್ಯಾವಸ್ಥೆಯು ಮನುಷ್ಯನ ಆಯುಷ್ಯದಲ್ಲಿನ ಎಲ್ಲಕ್ಕಿಂತ ‘ಶ್ರೀಮಂತ’ ವಯಸ್ಸಾಗಿರುತ್ತದೆ. ಈ ವಯಸ್ಸಿನಲ್ಲಿ ನೆನಪುಗಳು ಅತ್ಯಂತ ರಮ್ಯ ಮತ್ತು ವಿನೋದಿ ಆಗಿರುತ್ತವೆ. ಎಲ್ಲರ ಜೀವನದಲ್ಲಿರುವ ಇಂತಹುದೇ ಒಂದು ಸವಿ ನೆನಪೆಂದರೆ ‘ಉಪ್ಪಿನಕಾಯಿ’.
ನಮ್ಮ ಪೀಳಿಗೆಯ ಉಪ್ಪಿನಕಾಯಿಗೆ ಸಂಬಂಧಿಸಿದ ನೆನಪು ಸ್ವಲ್ಪ ಬೇರೆಯಾಗಿದೆ. ಊಟ ಮಾಡುವಾಗ ನಾವು ತಟ್ಟೆಯಲ್ಲಿ (ಎಲೆಯಲ್ಲಿ) ಉಪ್ಪಿನಕಾಯಿಯ ಹೋಳನ್ನು (ವಿಶೇಷವಾಗಿ ಮಾವಿನಮಿಡಿಯನ್ನು) ತಪ್ಪದೇ ಕೇಳಿ ತೆಗೆದುಕೊಳ್ಳುತ್ತಿದ್ದೆವು. ನಮ್ಮ ತಟ್ಟೆಯಲ್ಲಿ ಎಲ್ಲರ ತಟ್ಟೆಗಳಲ್ಲಿ ಇರುವುದಕ್ಕಿಂತ ದೊಡ್ಡ ಉಪ್ಪಿನಕಾಯಿ ಹೋಳು ಇದೆಯಲ್ಲ? ಎಂದು ನೋಡುತ್ತಿದ್ದೆವು. ಊಟ ಮಾಡುವಾಗ ಅದರ ರಸವನ್ನು ಚಪ್ಪರಿಸುತ್ತಿದ್ದೆವು ಮತ್ತು ಹೋಳನ್ನು ಮಾತ್ರ ಕೊನೆಯ ವರೆಗೆ ಹಾಗೆಯೇ ಇಡುತ್ತಿದ್ದೆವು. ಊಟವಾದ ಮೇಲೆ ಆ ಹೋಳನ್ನು ಬಾಯಿಯಲ್ಲಿಟ್ಟುಕೊಂಡು ಬಹಳಷ್ಟು ಸಮಯದವರೆಗೆ ಚೀಪುತ್ತಿದ್ದೆವು. ಯಾರ ಹೋಳು ಎಷ್ಟು ಸಮಯದ ವರೆಗೆ ಬಾಯಿಯಲ್ಲಿ ಉಳಿಯುತ್ತದೆ? ಎಂಬ ಸ್ಪರ್ಧೆ ಇರುತ್ತಿತ್ತು. ಉಪ್ಪಿನಲ್ಲಿ ಮುಳುಗಿದ ಹೋಳಿನ ಸ್ವರ್ಗದ ಆ ರುಚಿ ನೆನಪಾದ ಕೂಡಲೇ ಇಂದಿಗೂ ಬಾಯಲ್ಲಿ ನೀರು ಬರುತ್ತದೆ.
ನಮ್ಮ ಬಾಲ್ಯದಲ್ಲಿ ಲಿಮಲೇಟಿನ ಹುಳಿ-ಸಿಹಿ ಪೆಪ್ಪರಮಿಂಟ್‌ಗಳು ಸಿಗುತ್ತಿದ್ದವು. ನಮಗೆ ಅವುಗಳನ್ನು ಯಾವಾಗಲಾದರೊಮ್ಮೆ ಯಾರಾದರೂ ಕೊಡುತ್ತಿದ್ದರು. ಆ ಪೆಪ್ಪರಮಿಂಟ್‌ನ್ನೂ ಸಹ ಚೀಪುತ್ತಾ ಚೀಪುತ್ತಾ, ಅದರ ಆಸ್ವಾದವನ್ನು ತೆಗೆದುಕೊಳ್ಳುತ್ತಾ ತಿನ್ನುತ್ತಿದ್ದೆವು. ಇಂದಿನ ಮಕ್ಕಳು ಚ್ಯೂಯಿಂಗಮ್ ಬಿಟ್ಟರೆ ಇಂತಹ ಚೀಪುವ ಪದಾರ್ಥಗಳನ್ನು ತಿನ್ನುವುದು ಕಾಣಿಸುವುದಿಲ್ಲ. ಮುಖ್ಯವೆಂದರೆ ಬಹಳಷ್ಟು ಜನರ ಹಲ್ಲುಗಳು ಎಷ್ಟು ಸಂವೇದನಾ ಶೀಲ(ಸೆನ್ಸಿಟಿವ್) ಆಗಿರುತ್ತವೆ ಎಂದರೆ, ಅವರಿಗೆ ಈ ಹುಳಿ ಪದಾರ್ಥಗಳನ್ನು ತಿನ್ನಲು ಸಾಧ್ಯವಾಗುವುದೇ ಇಲ್ಲ. ಆದುದರಿಂದ ಇಂತಹ ಪದಾರ್ಥಗಳು ಇಂದಿನ ಊಟದಿಂದ ಹೊರಗೆ ಹೋಗುತ್ತಿವೆ.
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರವಿಧಮ್ ||
– ಶ್ರೀಮದ್ಭಾಗವದ್ಗೀತಾ, ಅಧ್ಯಾಯ ೧೫, ಶ್ಲೋಕ ೧೪
ಅರ್ಥ : ನಾನೇ ಎಲ್ಲ ಪ್ರಾಣಿಗಳ ಶರೀರದಲ್ಲಿರುವ ಪ್ರಾಣ ಮತ್ತು ಅಪಾನ ಇವುಗಳಿಂದ ಯುಕ್ತವಾಗಿರುವ ವೈಶ್ವಾನರ ಅಗ್ನಿರೂಪವಾಗಿ ನಾಲ್ಕು ಪ್ರಕಾರದ ಅನ್ನವನ್ನು ಜೀರ್ಣಿಸುತ್ತೇನೆ. ಆದುದರಿಂದ ‘ಅನ್ನದ ನಾಲ್ಕು ಪ್ರಕಾರಗಳು ಯಾವವು?’, ಎಂಬ ಪ್ರಶ್ನೆಯು ಹೊಸ ಪೀಳಿಗೆಯ ಮನಸ್ಸಿನಲ್ಲಿ ಮೂಡಬಹುದು. ಅವು ಪೇಯ, ಚೋಷ್ಯ ಅಥವಾ ಲೇಹ್ಯ (ನೆಕ್ಕುವುದು ಅಥವಾ ಚೀಪುವುದು), ಭೋಜ್ಯ ಮತ್ತು ಭಕ್ಷ್ಯ ಹೀಗೆ ೪ ವಿಧದಾಗಿವೆ.
೨. ಆಹಾರದಲ್ಲಿ ಪೇಯದ ಅವಶ್ಯಕತೆ!
ಪೇಯವೆಂದರೆ ಕುಡಿಯುವ ಪದಾರ್ಥಗಳು! ಹೌದು, ಅಂದರೆ ದ್ರವ ಅಥವಾ ಸಾಂದ್ರ ಪದಾರ್ಥಗಳು (‘ಸೆಮಿಸಾಲಿಡ್’). ಇದರಲ್ಲಿ ನೀರು, ಹಾಲು, ಸೂಪ, ವಿವಿಧ ಪಾಯಸಗಳು, ಸಾಂಬಾರು, ಮಜ್ಜಿಗೆ, ಮಸಾಲೆ ಮಜ್ಜಿಗೆ, ಮಜ್ಜಿಗೆ ಹುಳಿ, ಕಡಿ, ಸೋಲಕಡಿ ಇತ್ಯಾದಿ ಪದಾರ್ಥಗಳು ಬರುತ್ತವೆ. ಈ ವಿಷಯದ ಮೇಲೆ ಒಂದು ಸ್ವತಂತ್ರ ಪುಸ್ತಕವನ್ನು ಬರೆಯಬಹುದು, ಈ ವಿಷಯ ಅಷ್ಟು ದೊಡ್ಡದಾಗಿದೆ. ತುರ್ತು ವಿಷಯವೇನೆಂದರೆ ಊಟದ ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ಪೇಯವನ್ನು ಸೇವಿಸಬೇಕು.
ಚಳಿಗಾಲದಲ್ಲಿ ಅಥವಾ ಮಳೆಗಾಲದಲ್ಲಿ ವಾತ/ಕಫ ಪ್ರಕೃತಿಯ ವ್ಯಕ್ತಿಗಳ ಹಸಿವು ಮಂದವಾಗಿರುವಾಗ, ಸೂಪ, ಮಜ್ಜಿಗೆ ಹುಳಿ, ಸಾಂಬಾರು ಇಂತಹ ಬಿಸಿ ಪೇಯಗಳನ್ನು ಸೇವಿಸಬೇಕು. ಮಳೆ ಗಾಲದಲ್ಲಿಯಂತೂ ದ್ರವ ಪದಾರ್ಥಗಳ ಇಚ್ಛೆ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಪಿತ್ತ ಪ್ರಕೃತಿಯ ವ್ಯಕ್ತಿಗಳು ಹಾಲು, ಪಾಯಸ, ಸೋಲಕಡಿ ಇಂತಹ ತಂಪು ಪೇಯಗಳನ್ನು ಸೇವಿಸಬೇಕು. ಊಟದಲ್ಲಿ ಜಡಪದಾರ್ಥಗಳಿದ್ದರೆ, ಪಚನಕ್ರಿಯೆಗೆ ಸಹಾಯ ಮಾಡುವ ಮಜ್ಜಿಗೆ, ಮಸಾಲೆ ಮಜ್ಜಿಗೆ ಇಂತಹ ಪೇಯಗಳನ್ನು ಸೇವಿಸಬೇಕು. ೨೦೦ ರಿಂದ ೩೦೦ ಮಿ.ಲೀ.ನಷ್ಟು ಪ್ರಮಾಣದಲ್ಲಿ ನಾವು ಈ ಪೇಯಗಳನ್ನು ಸೇವಿಸಬಹುದು.
ಸದ್ಯ ಜನರು ಉಪಹಾರಗೃಹಗಳಲ್ಲಿ ಭೋಜನವನ್ನು ಮಾಡುವ ಪ್ರಮಾಣದಲ್ಲಿ ಬಹಳ ಹೆಚ್ಚಳವಾಗಿದೆ. ಅಲ್ಲಿ ಎಲ್ಲಕ್ಕಿಂತ ಸುರಕ್ಷಿತ ಮತ್ತು ಶುದ್ಧವೆಂದು ಬಾಟಲಿಯ ತಂಪು ನೀರನ್ನು ಆಯ್ಕೆ ಮಾಡುತ್ತಾರೆ. ಮನೆಯಲ್ಲಿ ಶೀತಕಪಾಟಿನಲ್ಲಿ (ಫ್ರಿಜ್‌ನಲ್ಲಿ) ಶೀತಪೇಯಗಳ ದೊಡ್ಡ ಬಾಟಲಿಗಳನ್ನು ಇಟ್ಟು ಊಟದೊಂದಿಗೆ ಶೀತಪೇಯವನ್ನು ಕುಡಿಯುವವರೂ ಇದ್ದಾರೆ. ಸ್ವಲ್ಪ ಕಷ್ಟ ಪಟ್ಟು ಗಣಕಯಂತ್ರದ ಜ್ಞಾನಜಾಲತಾಣದಲ್ಲಿ (ಇಂಟರನೆಟ್‌ನಲ್ಲಿ) ಶೋಧಿಸಿದರೆ, ಈ ಪೇಯಗಳನ್ನು ಸೇವಿಸುವುದು ಎಷ್ಟು ಅಯೋಗ್ಯವಾಗಿದೆ ಎನ್ನುವ ವಿಷಯವು ನಿಮಗೆ ಸಹಜವಾಗಿ ತಿಳಿಯುವುದು.
ಊಟದ ಮೊದಲು ಯಾವುದೇ ದ್ರವಪದಾರ್ಥವನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬಾರದು. ಇದರಿಂದ ಹಸಿವು ಮಂದವಾಗುತ್ತದೆ. ಊಟದ ಬಳಿಕವೂ ಹೆಚ್ಚು ಪ್ರಮಾಣದಲ್ಲಿ ದ್ರವಪದಾರ್ಥವನ್ನು ಸೇವಿಸಬಾರದು. ಹಾಗೆ ಮಾಡಿದರೆ ಅನ್ನಪಚನ ಸರಿಯಾಗಿ ಆಗುವುದಿಲ್ಲ; ಆದ್ದರಿಂದ ಊಟವನ್ನು ಮಾಡುವಾಗಲೇ ಮಧ್ಯ ಮಧ್ಯದಲ್ಲಿ ದ್ರವಪದಾರ್ಥಗಳನ್ನು (ಉದಾ.ನೀರು, ಮಜ್ಜಿಗೆ ಇತ್ಯಾದಿ)ಕುಡಿಯಬೇಕು. ಇಂದಿನ ಸಾಮಾನ್ಯ ಪ್ರಚಲಿತ ಪದ್ಧತಿಯಲ್ಲಿ ಬೆಳಗ್ಗೆ ಉಪ್ಪಿಟ್ಟು ಅಥವಾ ಅವಲಕ್ಕಿ ಇಂತಹ ಅಲ್ಪಾಹಾರ ಮತ್ತು ಮಧ್ಯಾಹ್ನ ಚಪಾತಿ-ಪಲ್ಯದ ಟಿಫಿನ್ ಬಾಕ್ಸ್, ಈ ಎರಡೂ ಭೋಜನಗಳಲ್ಲಿ ದ್ರವಪದಾರ್ಥಗಳಿಗೆ ಎಲ್ಲಿಯೂ ಸ್ಥಾನ ಇಲ್ಲ. ಇದರಿಂದ ಆಹಾರ ಹೊಟ್ಟೆಗೆ ಹೋದ ನಂತರ, ಅದು ವ್ಯವಸ್ಥಿತವಾಗಿ ಮುದ್ದೆ ಆಗುವುದಿಲ್ಲ ಮತ್ತು ಪಚನಕ್ರಿಯೆ ಕೆಡುತ್ತದೆ. ಕರುಳು ಮತ್ತು ಮಲಕ್ಕೆ ರೂಕ್ಷತೆ(ಶುಷ್ಕ) ಬರಬಹುದು. ಇದೇ ರೂಕ್ಷತೆ (ಡ್ರೈನೆಸ್) ಮುಂದೆ ತ್ವಚೆ, ಕೂದಲು, ಕಣ್ಣುಗಳ ವರೆಗೆ ತಲುಪುತ್ತದೆ. ತಾತ್ಪರ್ಯ ಆಹಾರದಲ್ಲಿ ಒಂದಾದರೂ ದ್ರವ ಪದಾರ್ಥ ಇರಬೇಕು.
೩. ಲೇಹ ಮತ್ತು ಚೀಪುವುದು (ನೆಕ್ಕಿ ಅಥವಾ ಚೀಪಿ ತಿನ್ನುವ ಪದಾರ್ಥ)
ನೆಕ್ಕಿ ಅಥವಾ ಚೀಪಿ ತಿನ್ನುವ ಪದಾರ್ಥಗಳು ಇದರಲ್ಲಿ ಬರುತ್ತವೆ, ಉದಾಹರಣೆಗೆ ವಿವಿಧ ಉಪ್ಪಿನಕಾಯಿ, ಪಂಚಾಮೃತ, ಮೊರಂಬಾ, ಗುಳಂಬಾ, ಹಣ್ಣುಗಳ ಸಿಹಿ ಲೇಹ (ಜಾಮ, ಸಾಸ್ ಇತ್ಯಾದಿ), ವಿವಿಧ ಹಸಿ ಚಟ್ನಿಗಳು, ಶ್ರೀಖಂಡ, ಕುಂದಾ ಇತ್ಯಾದಿ. ಈ ಎಲ್ಲ ಪದಾರ್ಥಗಳನ್ನು ತಟ್ಟೆಯಲ್ಲಿ (ಎಲೆಯಲ್ಲಿ) ಎಡಗಡೆಗೆ ಬಡಿಸಲಾಗುತ್ತದೆ. ಇದರ ಅರ್ಥ ಅವುಗಳ ಪ್ರಮಾಣ ಊಟದಲ್ಲಿ ಸೀಮಿತವಾಗಿರಬೇಕು. ಈ ಪದಾರ್ಥಗಳು ರುಚಿಗೆ ಬಹುತೇಕ ಖಾರ, ಹುಳಿ, ಸಿಹಿಯಾಗಿರುತ್ತವೆ. ಊಟದಲ್ಲಿ ಮಧ್ಯೆ ಮಧ್ಯೆ ಇವುಗಳನ್ನು ನೆಕ್ಕುವುದರಿಂದ ಭೋಜನದ ರುಚಿ ಹೆಚ್ಚುತ್ತದೆ. ಲಾಲಾರಸ ದೊಡ್ಡ ಪ್ರಮಾಣದಲ್ಲಿ ಸ್ರವಿಸುತ್ತದೆ ಮತ್ತು ಅದರಿಂದ ಪಚನಕ್ಕೆ ಸಹಾಯವಾಗುತ್ತದೆ.
ಬೇಸಿಗೆಯಲ್ಲಿ ಹಸಿವು ಕಡಿಮೆಯಿರುತ್ತದೆ ಮತ್ತು ಮಳೆಗಾಲದಲ್ಲಿ ನಮ್ಮ ಪಚನಶಕ್ತಿ ಕಡಿಮೆ ಇರುತ್ತದೆ. ವಿವಿಧ ರೋಗಗಳ ಸಮಯದಲ್ಲಿ ಮತ್ತು ರೋಗಗಳಿಂದ ಗುಣ ಮುಖವಾದ ಬಳಿಕ ನಾಲಿಗೆಗೆ ರುಚಿಯಿರುವುದಿಲ್ಲ ಅಥವಾ ತಿಂದ ಅನ್ನ ಪಚನವಾಗುವುದಿಲ್ಲ. ಇಂತಹ ಸಮಯದಲ್ಲಿ ಈ ನೆಕ್ಕುವ ಪದಾರ್ಥಗಳು ಊಟದಲ್ಲಿ ಕಡ್ಡಾಯವಾಗಿರಬೇಕು. ಕಫಪ್ರವೃತ್ತಿಯ ವ್ಯಕ್ತಿಯ ಜಠರಾಗ್ನಿ ಸ್ವಭಾವತಃ ಮಂದವಾಗಿರುತ್ತದೆ, ಅಂದರೆ ಅವರಿಗೆ ಹಸಿವು ಕಡಿಮೆಯಾಗುತ್ತದೆ ಮತ್ತು ಒಮ್ಮೆ ತಿಂದ ಬಳಿಕ ಅದು ಪಚನವಾಗಲೂ ಸಮಯ ತಗಲುತ್ತದೆ. ಅವರು ಪಚನಕ್ಕಾಗಿ ಈ ಪದಾರ್ಥಗಳ ಸಹಾಯವನ್ನು ಪಡೆದುಕೊಳ್ಳಬಹುದು; ಅವರು ಖಾರದ, ನೆಕ್ಕಿ ತಿನ್ನುವ ಮತ್ತು ಚಟ್ನಿಗಳನ್ನು ಉಪಯೋಗಿಸಬೇಕು. ಪಿತ್ತ ಪ್ರಕೃತಿಯ ಜನರು ಸಿಹಿ, ವಾತ ಪ್ರಕೃತಿಯ ಜನರು ಹುಳಿ, ಸಿಹಿಯನ್ನು ಊಟದ ಜೊತೆಗೆ ನೆಕ್ಕಲು ಉಪಯೋಗಿಸಬಹುದು
೪. ಭೋಜ್ಯ (ಅನ್ನ, ಉಪ್ಪಿಟ್ಟು, ಅವಲಕ್ಕಿ ಇತ್ಯಾದಿ)
ಯಾವ ಬೇಯಿಸಿದ ಆಹಾರವನ್ನು ನಾವು ತುತ್ತು ಮಾಡಿ ತಿನ್ನುತ್ತೇವೆ ಮತ್ತು ಅವುಗಳಿಗೆ ಕೆಲವು ಪ್ರಮಾಣದಲ್ಲಿ ಅಗಿಯುವ ಅವಶ್ಯಕತೆಯಿರುತ್ತದೆಯೋ, ಅವುಗಳಿಗೆ ಭೋಜ್ಯ ಎನ್ನುತ್ತಾರೆ, ಉದಾಹರಣೆಗೆ ಅಕ್ಕಿಯ ವಿವಿಧ ಪ್ರಕಾರಗಳು, ಉಪ್ಪಿಟ್ಟು, ಅವಲಕ್ಕಿ, ನೀರುದೋಸೆ ಇತ್ಯಾದಿ, ಈ ಪದಾರ್ಥಗಳಿಂದ ಹೊಟ್ಟೆ ತುಂಬಿದ ಅರಿವು ಅಥವಾ ತೃಪ್ತಿಯಾಗುತ್ತದೆ. (ಅದು ಆಗದಿದ್ದರೆ, ಮನುಷ್ಯನು ಹಾಗೆಯೇ ತಿನ್ನುತ್ತಾ ಕೂಡಬಹುದು) ಇದರಲ್ಲಿನ ಬಹುತೇಕ ಪದಾರ್ಥಗಳು ಶರೀರದ ಪೋಷಣೆಯನ್ನು ಉತ್ತಮ ಮಾಡುತ್ತವೆ; ಆದ್ದರಿಂದ ಅವುಗಳಿಗೂ ಆಹಾರದಲ್ಲಿ ಮಹತ್ವದ ಸ್ಥಾನವಿದೆ. ಇಂದಿನ ‘ಡಬ್ಬಿ’ ಪದ್ಧತಿಯಲ್ಲಿ ಈ ಪದಾರ್ಥಗಳು ಅಲ್ಪ ಪ್ರಮಾಣದಲ್ಲಿರುತ್ತವೆ. ಕೆಲವು ತರಕಾರಿಗಳು ಇವುಗಳಲ್ಲಿಯೇ ಬರುತ್ತವೆ.
೫. ಭಕ್ಷ್ಯ (ಕೋರೆ ಹಲ್ಲು ಮತ್ತು ದವಡೆ ಹಲ್ಲುಗಳನ್ನು ಉಪಯೋಗಿಸಿ ಸೇವಿಸುವ ಪದಾರ್ಥಗಳು)
ಕೋರೆ ಹಲ್ಲುಗಳು ಮತ್ತು ದವಡೆ ಹಲ್ಲುಗಳನ್ನು ಉಪಯೋಗಿಸಿ ಯಾವ ಪದಾರ್ಥಗಳನ್ನು ಮುರಿದು ಮತ್ತು ಅಗಿದು ತಿನ್ನಬೇಕಾಗುತ್ತದೆಯೋ, ಅಂತಹ ಭಕ್ಷ್ಯಗಳು ಈ ಸಾಲಿನಲ್ಲಿ ಸೇರುತ್ತವೆ. ಚಪಾತಿ, ರೊಟ್ಟಿ, ತಾಲಿಪೀಟ, ನಾನ್, ರೋಟಿ, ಪಾವ, ಸಲಾಡ್ ಇವು ಅಂತಹ ಪದಾರ್ಥಗಳಾಗಿವೆ. ಶರೀರದಲ್ಲಿರುವ ಅಸ್ಥಿಯಂತಹ ಕಠಿಣ ಧಾತುಗಳ ಸಹಿತ ಇತರ ಧಾತುಗಳ ಪೋಷಣೆಯ ಕೆಲಸವನ್ನು ಈ ಪದಾರ್ಥಗಳು ಮಾಡುತ್ತವೆ; ಹೆಚ್ಚಾಗಿ ಈ ಪದಾರ್ಥಗಳು ಒಣ ಪದಾರ್ಥಗಳಾಗಿರುತ್ತವೆ (ಶುಷ್ಕವಾಗಿರುತ್ತದೆ); ಆದ್ದರಿಂದ ನಮಗೆ ಬೇಸಿಗೆಯಲ್ಲಿ ಅವುಗಳನ್ನು ತಿನ್ನುವ ವಿಶೇಷ ಇಚ್ಛೆಯಿರುವುದಿಲ್ಲ. ವಾತ ಪ್ರಕೃತಿಯ ಜನರಿಗೂ ಒಣ ಅವಲಕ್ಕಿ, ಹಚ್ಚಿದ ಅವಲಕ್ಕಿ ಇಂತಹ ಒಣಪದಾರ್ಥಗಳು ಇಷ್ಟವಾಗುವುದಿಲ್ಲ. ಅವರಿಗೆ ಊಟದಲ್ಲಿ ರಸಪಲ್ಯ ಅಥವಾ ಸಾಂಬಾರು ಬೇಕಾಗುತ್ತದೆ. ಆಯಾ ಋತುಗಳಲ್ಲಿ ನಮ್ಮ ಆವಶ್ಯಕತೆಯ ಪ್ರಮಾಣದಲ್ಲಿ ಪ್ರತಿಯೊಬ್ಬರ ಆಹಾರದ ಭಕ್ಷ್ಯದ ಪದಾರ್ಥಗಳ ಪ್ರಮಾಣ ಬದಲಾಗುತ್ತದೆ. ಪಾರಂಪರಿಕ ಊಟದಲ್ಲಿ ತಟ್ಟೆಯಲ್ಲಿನ ಎಡಬದಿಯ ಪದಾರ್ಥಗಳೆಂದರೆ ಲೇಹ್ಯ ಪದಾರ್ಥಗಳು, ಬಲಬದಿಯ ಪದಾರ್ಥಗಳೆಂದರೆ ಭೋಜ್ಯ ಪದಾರ್ಥಗಳು ಮತ್ತು ಮದ್ಯದಲ್ಲಿನ ಪದಾರ್ಥಗಳು ಭೋಜ್ಯ ಮತ್ತು ಭಕ್ಷ್ಯ ಪದಾರ್ಥಗಳಿರುತ್ತವೆ. ಸಾಂಬಾರು, ತೊವ್ವೆ, ಮಜ್ಜಿಗೆ ಈ ದ್ರವ ಪದಾರ್ಥಗಳು ಪ್ರತಿ ದಿನದ ಊಟದಲ್ಲಿರಬೇಕು ಎಂದಿದೆ. ಈ ರೀತಿಯಿಂದ ಆಹಾರದಲ್ಲಿ ನಾಲ್ಕು ಪ್ರಕಾರದ ಅನ್ನಪದಾರ್ಥಗಳು ಸಮಾವೇಶಗೊಂಡಿರುವ ಆಹಾರವೆಂದರೆ ‘ಚತುರ್ವಿಧ ಆಹಾರ’.
ಇದರಲ್ಲಿ ರುಚಿ ಹಿಡಿದು ಪಚನದವರೆಗೆ ಎಲ್ಲ ವಿಷಯಗಳ ವಿಚಾರವಿದೆ. ವ್ಯಕ್ತಿಯ ಪ್ರಕೃತಿ, ದೇಶ, ಕಾಲ ಮತ್ತು ಇಷ್ಟ ಇದಕ್ಕನುಸಾರ ಈ ಪದಾರ್ಥಗಳ ಪ್ರಮಾಣವನ್ನು ಹೆಚ್ಚು-ಕಡಿಮೆ ಮಾಡಬಹುದು. ಇಂತಹ ಚತುರ್ವಿಧ ಭೋಜನವಿದ್ದರೆ ಪಲ್ಯ, ದ್ರವಪದಾರ್ಥಗಳು, ಕೋಸಂಬರಿ ಇವುಗಳಿಂದಲೂ ಹೊಟ್ಟೆ ತುಂಬಲು ಸಹಾಯವಾಗುತ್ತದೆ. ಇಂತಹ ಸಮಯದಲ್ಲಿ ಭೋಜ್ಯ ಮತ್ತು ಭಕ್ಷ ಪದಾರ್ಥಗಳನ್ನು ಕಡಿಮೆ ತಿನ್ನಲಾಗುತ್ತದೆ. ಇದರಿಂದ ಆಹಾರ ಸಮತೋಲನಗೊಂಡು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ. ಅತೀ ಪೋಷಕಜನ್ಯ ಆಹಾರಗಳನ್ನು ಕಡಿಮೆ ಮಾಡಬಹುದು. ಪ್ರತಿದಿನದ ಕಡಿಮೆಯೆಂದರೂ ಮಧ್ಯಾಹ್ನದ ಆಹಾರವಾದರೂ ಇಂತಹ ಚತುರ್ವಿಧ ಆಹಾರವಾಗಿರಬೇಕು. (ಸಮಯದ ಅಭಾವದಿಂದ ಜನರು ರಾತ್ರಿ ಇಂತಹ ಆಹಾರವನ್ನು ಸೇವಿಸುತ್ತಾರೆ; ನಿಜ ಹೇಳಬೇಕೆಂದರೆ ಸೂರ್ಯಾಸ್ತದ ಬಳಿಕ ಆಹಾರವನ್ನು ಸೇವಿಸಲೇಬಾರದು. ಸೇವಿಸಿದರೂ ಹಗುರವಾದ ಆಹಾರವನ್ನು ಸೇವಿಸಬೇಕು.)
೬. ಇಷ್ಟವಾಗುವ ಪದಾರ್ಥಗಳನ್ನು ಪ್ರತಿದಿನಕ್ಕಿಂತ ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು
ನಮ್ಮಲ್ಲಿ ಹಬ್ಬ-ಹರಿದಿನಗಳಲ್ಲಿ ಸಿಹಿ ಪದಾರ್ಥಗಳನ್ನು ಮಾಡುತ್ತಾರೆ. ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸೀಕರಣೆ ಇರುತ್ತದೆ. ಈ ಎಲ್ಲ ಪದಾರ್ಥಗಳು ಭೋಜ್ಯ ಅಥವಾ ಭಕ್ಷ್ಯ ಈ ಪ್ರಕಾರದಲ್ಲಿ ಬರುತ್ತವೆ. ಇವು ಪಚನವಾಗಲು ಸ್ವಲ್ಪ ಕಠಿಣವಾಗಿರುತ್ತವೆ; ಆದ್ದರಿಂದ ಇಂತಹ ಪದಾರ್ಥಗಳನ್ನು ತಿನ್ನುವಾಗ ತಟ್ಟೆಯಲ್ಲಿನ ಎಡ ಮತ್ತು ಬಲಗಡೆಯ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು ಅಥವಾ ಮುಖ್ಯ ಪದಾರ್ಥವನ್ನು ಕಡಿಮೆ ತಿನ್ನಬೇಕು. ಕೇವಲ ಎರಡು ಬಟ್ಟಲು ಮಾವಿನಹಣ್ಣಿನ ಸೀಕರಣೆಯನ್ನು ತಿಂದೆನು ಎಂದು ಲೆಕ್ಕಹಾಕದೇ, ಎರಡು ಬಟ್ಟಲು ಸೀಕರಣೆ, ನಾಲ್ಕು ಚಪಾತಿ, ಅರ್ಧ ಬಟ್ಟಲು ಪಲ್ಯ, ಕಾಲು ಬಟ್ಟಲು ಕೋಸಂಬರಿ, ಅರ್ಧ ಬಟ್ಟಲು ಅನ್ನ ಹೀಗೆ ಎಲ್ಲ ಪದಾರ್ಥಗಳನ್ನು ಲೆಕ್ಕದಲ್ಲಿ ಹಿಡಿಯಬೇಕು, ಅಂದರೆ ನಮಗೆ ಊಟವನ್ನು ಎಲ್ಲಿ ನಿಲ್ಲಿಸಬೇಕು, ಎಂಬುದು ತಿಳಿಯುತ್ತದೆ. ಎಷ್ಟೇ ಇಷ್ಟವಾಗುವ ಪದಾರ್ಥಗಳು ಇದ್ದರೂ, ಪ್ರತಿದಿನಕ್ಕಿಂತ ಅಧಿಕ ಪ್ರಮಾಣದಲ್ಲಿ ಊಟವನ್ನು ಸೇವಿಸದೇ ಇರುವುದು ಬಹಳ ಒಳ್ಳೆಯದು!
– ವೈದ್ಯೆ ಸುಚಿತ್ರಾ ಕುಲಕರ್ಣಿ (ಆಧಾರ : ದೈನಿಕ ‘ತರುಣ ಭಾರತ’)