೧. ಆಮ್ಲಪಿತ್ತದ ತೊಂದರೆ ಇರುವ ರೋಗಿಗಳು ತನ್ನಿಚ್ಛೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅವರಿಗೆ ವಿವಿಧ ಶಾರೀರಿಕ ತೊಂದರೆಗಳಾಗುತ್ತವೆ
ನಮ್ಮ ಸುತ್ತಮುತ್ತಲೂ ಆಮ್ಲಪಿತ್ತದ (ಆಸಿಡಿಟಿಯ) ತೊಂದರೆ ಇರುವ ೪-೫ ಜನರಾದರೂ ಇರುತ್ತಾರೆ. ಆಮ್ಲಪಿತ್ತದ ರೋಗಿಗಳು ತನ್ನಿಚ್ಛೆಯಂತೆ ಪಿತ್ತದ ಔಷಧಿಯನ್ನು ವರ್ಷಗಟ್ಟಲೆ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತದೆ. ಅದರಲ್ಲಿ ‘ಪ್ರೋಟಾನ್ ಪಂಪ್ ಇನಿವಿಬಿಟರ್ಸ್’ ಎಂಬ ವರ್ಗದ ಔಷಧಗಳನ್ನುಅತೀ ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಔಷಧಗಳು ವೈದ್ಯಕೀಯ ಸಲಹೆಯ ಹೊರತು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಕಿಡ್ನಿಯ ವಿವಿಧ ಕಾಯಿಲೆಗಳು, ಕೆಲವೊಮ್ಮೆ ಕಿಡ್ನಿ ನಿಷ್ಕ್ರಿಯವಾಗುವುದು, ವಿವಿಧ ಹೃದಯ ರೋಗಗಳು ಹಾಗೂ ಎಲುಬುಗಳು ದುರ್ಬಲವಾಗಿ ಅಸ್ಥಿಭಂಗವಾಗುವುದು ಇತ್ಯಾದಿ ಗಂಭೀರವಾದ ಸಮಸ್ಯೆಗಳು ಉದ್ಭವಿಸಬಹುದು. ಈ ಮಾತ್ರೆಗಳ ಜೊತೆಗೆ ರೋಗಿಗಳು ‘ಡೋಮಪೆರಿಡೋನ್’ ಎಂಬ ಔಷಧವನ್ನೂ ತಮ್ಮ ಇಚ್ಛೆಗನುಸಾರ ಪದೇ ಪದೇ ತೆಗೆದುಕೊಳ್ಳುತ್ತಿರುವುದು ಅರಿವಾಗುತ್ತದೆ. ಸ್ತ್ರೀಯರಲ್ಲಿ ‘ಡೋಮಪೆರಿಡೋನ್’ನಿಂದ ‘ಪ್ರೊಲಾಕ್ಟಿನ್’ ಎಂಬ ಹಾರ್ಮೋನ್‌ನ ಪ್ರಮಾಣ ಹೆಚ್ಚಾಗಿ ಋತುಸ್ರಾವ ಅನಿಯಮಿತವಾಗಬಹುದು. ಆದ್ದರಿಂದ ಈ ಔಷಧಗಳನ್ನು ಆಧುನಿಕ ವೈದ್ಯರ ಸಲಹೆಯ ಹೊರತು ತೆಗೆದುಕೊಳ್ಳಬಾರದು.
೨. ಆಮ್ಲಪಿತ್ತವನ್ನು ದೂರಗೊಳಿಸುವ ಉಪಾಯ !
ಆಮ್ಲಪಿತ್ತದ ತೊಂದರೆಗಳ ಹಿಂದಿನ ಕಾರಣಗಳನ್ನು ತಜ್ಞರ ಸಹಾಯದಿಂದ ತಿಳಿದುಕೊಂಡು ಅದಕ್ಕೆ ಶಾಶ್ವತವಾದ ಉಪಚಾರವನ್ನು ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡುವ ಸಿದ್ಧತೆ ಇರಬೇಕು. ಪದೇ ಪದೇ ಸ್ವಲ್ಪಸ್ವಲ್ಪ ಆಹಾರ ಸೇವಿಸುವುದು, ಸೇವಿಸಿದ ನಂತರ ತಕ್ಷಣ ಮಲಗಬಾರದು, ಖಾರ ಅಥವಾ ಮಸಾಲೆಯ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು, ತಂಬಾಕು ಹಾಗೂ ಅಲ್ಕೋಹಾಲ್ ಸೇವಿಸದಿರುವುದು, ನಿಯಮಿತ ವ್ಯಾಯಾಮ ಮಾಡಿ ತೂಕವನ್ನು ಪ್ರಮಾಣದಲ್ಲಿಡುವುದು, ಮಾನಸಿಕ ಒತ್ತಡವನ್ನು ಹೋಗಲಾಡಿಸಲು ಪ್ರಯತ್ನಿಸುವುದು, ಇವೆಲ್ಲ ವಿಷಯಗಳಿಂದ ತುಂಬಾ ಲಾಭವಾಗಬಹುದು. ಹೊಟ್ಟೆ ಖಾಲಿ ಇರುವಾಗ ನೀರು ಕುಡಿಯುವುದರಿಂದಲೂ (ಬಿಸಿನೀರಲ್ಲ) ಲಾಭವಾಗುವುದು
೩. ಎದೆಯಲ್ಲಿ ಉರಿ ಬರುತ್ತಿದ್ದರೆ, ಲವಂಗ, ಶುಂಠಿ, ದಾಲ್ಚಿನಿ, ಮಜ್ಜಿಗೆ, ಜೀರಿಗೆ, ಬಡಿಸೋಪ್, ತಣ್ಣಗಿನ ಹಾಲು ಮತ್ತು ಎಳನೀರು ಇತ್ಯಾದಿ ಸೇವಿಸಬೇಕು !
ಅನ್ನನಾಳ ಮತ್ತು ಜಠರದ ನಡುವೆ ಒಂದು ಕವಾಟವಿರುತ್ತದೆ. ಜಠರದಲ್ಲಿ ಆಮ್ಲದ ಪ್ರಮಾಣ ಹೆಚ್ಚಾದಾಗ ಈ ಕವಾಟ ಮುಚ್ಚಲ್ಪಡುತ್ತದೆ ಹಾಗೂ ಆಮ್ಲವನ್ನು ಅನ್ನನಾಳಕ್ಕೆ ಬರಲು ಬಿಡುವುದಿಲ್ಲ. ಆಮ್ಲಪಿತ್ತ ಆಗುವುದಕ್ಕೆ ಒಂದು ಕಾರಣವೆಂದರೆ ಜಠರದಲ್ಲಿ ಕಡಿಮೆ ಆಮ್ಲ ಇರುವುದು ಕೂಡ ಆಗಿರಬಹುದು. ಆದ್ದರಿಂದ ಅನ್ನನಾಳ ಮತ್ತುಜಠರ ಇವುಗಳ ನಡುವಿನ ಕವಾಟವು ಸಂಪೂರ್ಣ ಮುಚ್ಚಲ್ಪಡುವುದಿಲ್ಲ ಹಾಗೂ ಆಮ್ಲವು ಅನ್ನನಾಳದಿಂದ ಮೇಲೆ ಬಂದು ಎದೆಉರಿ ಆರಂಭವಾಗುತ್ತದೆ. ಇಂತಹ ಸಮಯದಲ್ಲಿ ಆಮ್ಲಪಿತ್ತಕ್ಕಾಗಿ ಲವಂಗ, ಶುಂಠಿ, ದಾಲ್ಚಿನಿ, ಮಜ್ಜಿಗೆ, ಜೀರಿಗೆ, ಬಡೀಸೋಪ್, ತಣ್ಣಗಿನ ಹಾಲು, ಎಳನೀರು ಇಂತಹ ಪದಾರ್ಥಗಳನ್ನು ಸೇವಿಸಿದರೆ ಲಾಭವಾಗಬಹುದು. ನಿರಂತರ ಮಾತ್ರೆಗಳನ್ನು ಸೇವಿಸುವುದಕ್ಕಿಂತ ಇದು ಉತ್ತಮ ಹಾಗೂ ಸುರಕ್ಷಿತವಾಗಿದೆ. ಆಮ್ಲಪಿತ್ತದ ಹೆಚ್ಚು ತೊಂದರೆ ಇರುವವರು ಜಠರ ಮತ್ತು ಕರುಳಿನ ರೋಗಗಳ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ !
– ಡಾ. ಶಿಲ್ಪಾ ಚಿಟ್ನಿಸ್ ಜೋಶಿ, ಸ್ತ್ರೀ ರೋಗ ಮತ್ತು ಬಂಜೆತನ ನಿವಾರಣಾ ತಜ್ಞ, ಕೊಥ್‌ರೂಡ, ಪುಣೆ