ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳ ಶಬ್ದವನ್ನು ಆವರಣದ ವರೆಗೆ ಸೀಮಿತಗೊಳಿಸಿ !

ಉತ್ತರಪ್ರದೇಶ ಸರಕಾರದ ಆದೇಶ

ಅನುಮತಿಯ ಹೊರತು ಧ್ವನಿವರ್ಧಕಗಳನ್ನು ಬಳಸಲು ನಿರ್ಬಂಧ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಸರಕಾರವು ಧ್ವನಿವರ್ಧಕಗಳ ವಿಷಯದಲ್ಲಿ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿಯನ್ನು ನೀಡಲಾಗಿದ್ದರೆ, ಧ್ವನಿವರ್ಧಕಗಳ ಶಬ್ದವು ಧಾರ್ಮಿಕ ಕ್ಷೇತ್ರಗಳ ಆವರಣಕ್ಕೆ ಮಾತ್ರ ಸೀಮಿತವಾಗಿರಬೇಕು. ಆವರಣದ ಹೊರಗೆ ಶಬ್ದ ಬರುವ ಆವಶ್ಯಕತೆಯಿಲ್ಲ ಮತ್ತು ಅದರಿಂದ ಇತರರಿಗೆ ತೊಂದರೆಯಾಗಬಾರದು, ಎಂದು ಸರಕಾರವು ಹೇಳಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮಾತನಾಡುತ್ತ, ಪ್ರತಿಯೊಬ್ಬರಿಗೆ ತಮ್ಮ ಧಾರ್ಮಿಕ ಪರಂಪರೆಯ ಅನುಸಾರ ಧಾರ್ಮಿಕ ಕಾರ್ಯಕ್ರಮ ಮತ್ತು ಉತ್ಸವಗಳನ್ನು ಆಚರಿಸುವ ಅಧಿಕಾರವಿದೆ; ಆದರೆ ಇದಕ್ಕಾಗಿ ಯಾವುದೇ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಧ್ವನಿವರ್ಧಕಗಳನ್ನು ಬಳಸಲು ಅನುಮತಿಯಿದೆ. ಆದರೆ ಅದರಿಂದಾಗುವ ಶಬ್ದದಿಂದ ಇತರರಿಗೆ ತೊಂದರೆಯಾಗಬಾರದು. ಯಾವ ಕಾರ್ಯಕ್ರಮಗಳಿಗೆ ಮೊದಲೇ ಅನುಮತಿ ನೀಡಲಾಗಿದೆಯೋ ಅವರು ಮಾತ್ರ ಧ್ವನಿವರ್ಧಕಗಳನ್ನು ಬಳಸಬೇಕು. ಅನುಮತಿಯ ಹೊರತು ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧವಿದ್ದು ಈಗ ಯಾರಿಗೂ ಹೊಸದಾಗಿ ಅನುಮತಿ ನೀಡಲಾಗುವುದಿಲ್ಲ. ಅನುಮತಿಯ ಹೊರತು ಧಾರ್ಮಿಕ ಮೆರವಣಿಗೆಗಳನ್ನು ನಡೆಸಬಾರದು ಮತ್ತು ಅನುಮತಿಯನ್ನು ಕೇವಲ ಪಾರಂಪರಿಕ ಕಾರ್ಯಕ್ರಮಗಳಿಗೆ ಮಾತ್ರ ನೀಡಬೇಕು. ಯಾವುದೇ ಹೊಸ ಪರಂಪರೆಗಳನ್ನು ಆರಂಭಿಸಬಾರದು. ಗಲಭೆ ಎಬ್ಬಿಸುವ ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಪ್ರತಿಯೊಬ್ಬರ ಮೇಲೆ ಕಾರ್ಯಾಚರಣೆ ಆಗಲೇಬೇಕು ಎಂದಿದ್ದಾರೆ.