ನಮ್ಮ ಸಹನೆಯನ್ನು ಪರೀಕ್ಷಿಸಬೇಡಿ ! – ತಾಲಿಬಾನಿನಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಪಾಕಿಸ್ತಾನವು ಅಫಘಾನಿಸ್ತಾನದಲ್ಲಿ ಮಾಡಿರುವ ‘ಏರ್‌ ಸ್ಟ್ರಾಯಿಕ್‌’ನ ಪ್ರಕರಣ

ಕಾಬೂಲ (ಅಫಘಾನಿಸ್ತಾನ) – ಪಾಕಿಸ್ತಾನದ ವಾಯುದಳವು ಏಪ್ರಿಲ್‌ ೧೬ರ ರಾತ್ರಿ ಅಫಘಾನಿಸ್ತಾನದ ಖೊಸ್ತ ಮತ್ತು ಕುನಾರ ಪ್ರಾಂತ್ಯದಲ್ಲಿ ನಡೆಸಿದ ‘ಏರ್‌ ಸ್ಟ್ರಾಯಿಕ್‌’ನಲ್ಲಿ (ನಿಯಂತ್ರಿತ ಆಕ್ರಮಣದಲ್ಲಿ) ೪೭ ಜನರು ಮೃತರಾದರು. ಇದರಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ದೊಡ್ಡ ಪ್ರಮಾಣದಲ್ಲಿರುವುದರಿಂದ ತಾಲಿಬಾನ ಸರಕಾರವು ರೊಚ್ಚಿಗೆದ್ದಿದೆ. ತಾಲಿಬಾನಿನ ವಕ್ತಾರ ಜಬಿಉಲ್ಲಾಹ ಮುಜಾಹಿದ ಮಾಡಿರುವ ಟ್ವೀಟ್‌ನಲ್ಲಿ ‘ಪಾಕಿಸ್ತಾನವು ಇಂತಹ ಪ್ರಕರಣಗಳಲ್ಲಿ ಅಫಘಾನಿಸ್ತಾನದ ಸಹನೆಯನ್ನು ಪರೀಕ್ಷಿಸಬಾರದು. ಇಂತಹ ತಪ್ಪು ಮರುಕಳಿಸಿದರೆ ಅದರ ಪರಿಣಾಮವು ಗಂಭೀರವಾಗಿರಲಿದೆ. ಎರಡೂ ದೇಶಗಳ ನಡುವಿನ ಸಮಸ್ಯೆಗಳ ಮೇಲೆ ರಾಜಕೀಯ ಮಾರ್ಗದಿಂದ ಉಪಾಯ ಕಂಡುಹಿಡಿಯಬೇಕು’ ಎಂದು ಹೇಳಿದ್ದಾರೆ. ಪಾಕಿಸ್ತಾನದ ಆಕ್ರಮಣದ ನಂತರ ಸಾವಿರಾರು ಆಫಘಾನಿ ಜನರು ರಸ್ತೆಗಿಳಿದು ಪಾಕಿಸ್ತಾನಕ್ಕೆ ಧಿಕ್ಕಾರ ಹಾಕಿದರು. ಪಾಕಿಸ್ತಾನ ಸರಕಾರವು ಈ ಆಕ್ರಮಣದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ‘ಏರ್‌ ಸ್ಟ್ರಾಯಿಕ್‌’ನ ಮಾಧ್ಯಮದಿಂದ ‘ತಹರಿಕ-ಎ-ತಾಲಿಬಾನ ಪಾಕಿಸ್ತಾನ’ ಎಂಬ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರನ್ನು ಗುರಿಯಾಗಿಸಲಾಗಿತ್ತು. ಈ ಹಿಂದೆಯೂ ಈ ಸಂಘಟನೆಯ ಭಯೋತ್ಪಾದಕರು ಪಾಕಿಸ್ತಾನದ ಸೈನ್ಯವನ್ನು ಗುರಿಯಾಗಿಸಿದ್ದರು.

ಅಫಘಾನಿಸ್ತಾನದ ವಿದೇಶಿ ಮಂತ್ರಾಲಯವು ಈ ಆಕ್ರಮಣವನ್ನು ತೀವ್ರ ಶಬ್ದಗಳಲ್ಲಿ ಧಿಕ್ಕರಿಸುತ್ತ ಪಾಕಿಸ್ತಾನದ ರಾಜದೂತ ಮನ್ಸೂರ್ ಅಹಮದ ಖಾನರಿಂದ ಸ್ಪಷ್ಟೀಕರಣ ಕೇಳಿದೆ.