೧. ನಾಗಲಿಂಗಪುಷ್ಪಗಳು
೧ ಅ. ಪರಿಚಯ : ‘ಸಾಮಾನ್ಯವಾಗಿ ಫೆಬ್ರುವರಿ-ಮಾರ್ಚ್ ತಿಂಗಳುಗಳಲ್ಲಿ ಎಲೆಗಳು ಇಲ್ಲದಿರುವ, ಕೆಂಪು ಬಣ್ಣದ ಹೂವುಗಳಿಂದ ತುಂಬಿದ ಮತ್ತು ಕಾಂಡಗಳ ಮೇಲೆ ದಪ್ಪ ಮುಳ್ಳುಗಳಿರುವ ಒಂದು ಗಿಡವು ನಮಗೆ ಸಹಜವಾಗಿಯೇ ಕಾಣಿಸುತ್ತದೆ. ಇದಕ್ಕೆ ನಾಗಲಿಂಗಪುಷ್ಪದ ಗಿಡ ಎನ್ನುತ್ತಾರೆ. ಈ ಗಿಡಗಳು ಎಲ್ಲ ಕಡೆಗೆ ಕಂಡುಬರುತ್ತವೆ. ಫೆಬ್ರುವರಿ-ಮಾರ್ಚ್ ತಿಂಗಳುಗಳಲ್ಲಿ ಈ ಮರದ ಕೆಳಗೆ ತುಂಬ ಹೂವುಗಳು ಬಿದ್ದಿರುತ್ತವೆ. ಈ ಹೂವುಗಳನ್ನು ದನ-ಕರುಗಳು ಇಷ್ಟಪಟ್ಟು ತಿನ್ನುತ್ತವೆ. ಈ ಮರದ ಮೇಲೆ ಕೆಲವು ದಿನಗಳ ನಂತರ ತೆನೆಗಳು (ಕಾಯಿಗಳು) ತಯಾರಾಗುತ್ತವೆ. ಈ ಕಾಯಿಗಳಲ್ಲಿ ಅರಳೆ (ಹತ್ತಿ) ಇರುತ್ತದೆ. ಈ ಅರಳೆಯನ್ನು ತಲೆದಿಂಬು, ಹಾಸಿಗೆ ಇತ್ಯಾದಿಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ನಾಗಲಿಂಗಪುಷ್ಪಗಳ ಹತ್ತಿಯ ಗುಣಧರ್ಮವು ಶೀತಲವಾಗಿರುತ್ತದೆ.
೧ ಆ. ನಾಗಲಿಂಗಪುಷ್ಪಗಳ ಔಷಧೀಯ ಉಪಯೋಗ : ಪುಣೆಯಲ್ಲಿ ವಿವಿಧ ಭಾರತೀಯ ಉಪಚಾರಪದ್ಧತಿಗಳ ಅಧ್ಯಯನವನ್ನು ಮಾಡುವ ಶ್ರೀ. ಅರವಿಂದ ಜೋಶಿ ಎಂಬ ಓರ್ವ ಸದಗೃಹಸ್ಥರಿದ್ದಾರೆ. ಅವರು ಅವರ ಸಂಶೋಧಕ ವೃತ್ತಿಯಿಂದ ಈ ಹೂವುಗಳ ಔಷಧಿಯ ಗುಣಧರ್ಮವನ್ನು ಶೋಧಿಸಿ ಅನೇಕ ಜನರಿಗೆ ಅದರ ಲಾಭವನ್ನು ಮಾಡಿಕೊಟ್ಟಿದ್ದಾರೆ. ಅವರ ಬಳಿ ಈ ಹೂವುಗಳಿಂದ ಲಾಭವಾಗಿರುವ ಅನೇಕ ಉದಾಹರಣೆಗಳಿವೆ. ಅವರ ಒಂದು ಲೇಖನವನ್ನು ಓದಿ ನಾನು ಕೆಲವು ರೋಗಿಗಳಿಗೆ ಈ ಹೂವುಗಳನ್ನು ಕೊಟ್ಟಿದ್ದೆನು, ಅವರಿಗೂ ಇದರಿಂದ ತುಂಬಾ ಲಾಭವಾಗಿರುವುದು ಗಮನಕ್ಕೆ ಬಂದಿತು. ಶ್ರೀ. ಅರವಿಂದ ಜೋಶಿಯವರು ಈ ವೈಶಿಷ್ಟ್ಯಪೂರ್ಣ ಸಂಶೋಧನೆಯನ್ನು ಮಾಡಿರುವುದರಿಂದ ನಾನು ಅವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.
ನಾಗಲಿಂಗಪುಷ್ಪಗಳನ್ನು ಮುಂದಿನಂತೆ ಉಪಯೋಗಿಸಬೇಕು.
ಗಿಡಗಳಿಂದ ಸ್ವಚ್ಛ ಜಾಗದಲ್ಲಿ ಬಿದ್ದಿರುವ ನಾಗಲಿಂಗಪುಷ್ಪಗಳನ್ನು ಒಟ್ಟುಗೂಡಿಸಿ ಅವುಗಳನ್ನು ತೊಳೆಯದೇ ಬಿಸಿಲಿನಲ್ಲಿ ಒಣಗಿಸಬೇಕು ಮತ್ತು ಮಿಕ್ಸರನಲ್ಲಿ ಹಾಕಿ ಅವುಗಳ ಸಣ್ಣ ಪುಡಿ ಮಾಡಿಡಬೇಕು. ಈ ಪುಡಿಯನ್ನು ಬೆಳಗ್ಗೆ-ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ೧ ಚಮಚದಷ್ಟು (ಬೆಳಗ್ಗೆ ಅರ್ಧ ಚಮಚ ಸಾಯಂಕಾಲ ಅರ್ಧ ಚಮಚ) ತೆಗೆದುಕೊಳ್ಳಬೇಕು. ಹೀಗೆ ೩ ತಿಂಗಳು ಮಾಡಬೇಕು. ಈ ಹೂವುಗಳು ಸಾಧಾರಣ ಒಂದು ತಿಂಗಳವರೆಗೆಯೇ ಸಿಗುತ್ತವೆ. ಆದುದರಿಂದ ತಮಗೆ ಅಗತ್ಯವಿದ್ದಷ್ಟು ಅವುಗಳನ್ನು ಸಂಗ್ರಹಿಸಿ ಅವುಗಳ ಪುಡಿ ಮಾಡಿಡಬೇಕು. ಈ ಪುಡಿಯನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಸ್ನಾಯು, ಹಾಗೆಯೇ ಕೀಲು (Joints) ಮತ್ತು ಮೂಳೆಗಳ ರೋಗಗಳು ಕಡಿಮೆಯಾಗುವುದರ ಅನುಭವ ನಮಗೆ ಬಂದಿದೆ. ಸಂಧಿವಾತ, ಮಂಡಿನೋವು (ಮೊಣಕಾಲುಗಳ ನೋಯಿಸುವುದು), ಮೆಟ್ಟಲುಗಳನ್ನು ಇಳಿಯುವಾಗ ಅಥವಾ ಏರುವಾಗ ಮಂಡಿಗಳು (Knee Joints) ನೋಯಿಸುವುದು, ಕಣಕಾಲುಗಳು (ಎಂಕಲ್ ಜಾಯಿಂಟ) ನೋಯಿಸುವುದು ಅಥವಾ ಊದಿಕೊಳ್ಳುವುದು, ಭುಜಗಳ ನೋವು, ಮೊಣಕೈಗಳ (ಎಲ್ಬೋ) ನೋವು, ಮಣಿಕಟ್ಟುಗಳ ನೋವು, ಕುತ್ತಿಗೆ ನೋವು, ಬೆನ್ನು ನೋವು, ಸೊಂಟನೋವು ಇತ್ಯಾದಿ ರೋಗಗಳಿಗೆ ಈ ಪುಡಿಯು ತುಂಬಾ ಲಾಭದಾಯಕವಾಗಿದೆ.
ಮೆಕ್ಕೆಜೋಳಗಳ ಮೇಲಿನ ಕೂದಲುಗಳು
ಚಳಿಯ ದಿನಗಳಲ್ಲಿ ಮೆಕ್ಕೆಜೋಳದ ತೆನೆಗಳು ಎಲ್ಲೆಡೆ ಲಭ್ಯವಿರುತ್ತವೆ. ದೆಹಲಿಯಲ್ಲಿನ ಹಿರಿಯ ಮತ್ತು ಸುಪ್ರಸಿದ್ಧ ವೈದ್ಯರಾಜ ಸುಭಾಷ ಶರ್ಮಾ ಇವರು ಮೆಕ್ಕೆಜೋಳಗಳ ತೆನೆಗಳ ಮೇಲಿನ ಕೂದಲುಗಳನ್ನು ಮೂತ್ರಮಾರ್ಗದ ರೋಗಗಳಿಗೆ ತುಂಬಾ ಉಪಯೋಗಿಸುತ್ತಾರೆ. ಅವರಿಂದ ನನಗೆ ಇದರ ಗುಣಧರ್ಮವನ್ನು ಕಲಿಯಲು ಸಿಕ್ಕಿತು, ಅದಕ್ಕಾಗಿ ನಾನು ಅವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.
ಮೆಕ್ಕೆಜೋಳದ ತೆನೆಗಳ ಕೂದಲು ಪ್ರೊಸ್ಟೇಟ್ ಗ್ರಂಥಿಯ ಬೆಳವಣಿಗೆಯ ಮೇಲೆ ಅತ್ಯುತ್ತಮ ಔಷಧಿಯಾಗಿದೆ. ಮೂತ್ರ ಮಾರ್ಗದಲ್ಲಿನ ಕಲ್ಲುಗಳನ್ನು ಹೊರಗೆ ಬೀಳಿಸಲೂ ಅವು ತುಂಬ ಉಪಯುಕ್ತವಾಗಿದೆ. ಗಂಟಲು ಮತ್ತು ಎದೆಯಲ್ಲಿ ಉರಿಯುವುದು, ಮೂತ್ರವಿಸರ್ಜನೆ ಮಾಡುವಾಗ ಉರಿಯುವುದು, ಮೂತ್ರ ನಿಧಾನವಾಗಿ ಆಗುವುದು, ಮೂತ್ರ ನಿಂತು ನಿಂತು ಆಗುವುದು (ಮೂತ್ರ ಸ್ವಲ್ಪ ಆಗುವುದು ಮತ್ತು ಸ್ವಲ್ಪ ಸಮಯ ಬಿಟ್ಟು ಮತ್ತೆ ಆಗುವುದು) ಮೂತ್ರ ವಿಸರ್ಜನೆ ಮಾಡಲು ಅವಸರವಾಗುವುದು, ಮೂತ್ರ ಪ್ರಾರಂಭವಾಗಲು ಸಮಯ ಬೇಕಾಗುವುದು, ಮೂತ್ರವು ಕಲುಷಿತವಾಗಿರುವುದು ಮತ್ತು ಮೂತ್ರಕ್ಕೆ ದುರ್ಗಂಧ ಬರುವುದು ಈ ರೋಗಗಳಿಗೆ ಇದು ತುಂಬಾ ಉಪಯುಕ್ತವಾಗಿದೆ. ಇದನ್ನು ಮುಂದಿನಂತೆ ಉಪಯೋಗಿಸಬೇಕು.
ಮೆಕ್ಕೆಜೋಳಗಳ ತೆನೆಗಳ ಮೇಲಿನ ಕೂದಲುಗಳನ್ನು ಎಸೆಯದೇ ಅವುಗಳನ್ನು ಸಂಗ್ರಹಿಸಿ ತೊಳೆದು ಬಿಸಿಲಿನಲ್ಲಿ ಒಣಗಿಸಿಡಬೇಕು. ನಮ್ಮ ಕೈ ಬೆರಳುಗಳನ್ನು ಸಂಪೂರ್ಣ ಒಳಗಡೆಗೆ ತಿರುಗಿಸಿ, ಅವುಗಳ ಉಗುರುಗಳು ಅಂಗೈಗೆ ತಾಗಿದ ನಂತರ ಯಾವ ಮುಷ್ಠಿ ತಯಾರಾಗುತ್ತದೆಯೋ, ಅದರಲ್ಲಿ ಹಿಡಿಯುವಷ್ಟು (ಇದಕ್ಕೆ ಆಯುರ್ವೇದದಲ್ಲಿ ‘ಅಂತರ್ನಖಮುಷ್ಟಿ ಪ್ರಮಾಣ’ ಎಂದು ಹೇಳುತ್ತಾರೆ.) ಮೆಕ್ಕೆಜೋಳದ ಕೂದಲುಗಳನ್ನು ತೆಗೆದುಕೊಂಡು ಅದರಲ್ಲಿ ೨ ಬಟ್ಟಲು ನೀರು ಹಾಕಿ ಕುದಿಸಿ ೧ ಬಟ್ಟಲು ಕಷಾಯವನ್ನು ತಯಾರಿಸಬೇಕು. ಈ ಕಷಾಯವನ್ನು ಸೋಸಿ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಕಷಾಯವನ್ನು ತಯಾರಿಸಿದ ನಂತರ ಉಳಿದಿರುವ ಕೂದಲುಗಳಲ್ಲಿ ಸಾಯಂಕಾಲ ಪುನಃ ೨ ಬಟ್ಟಲು ನೀರು ಸೇರಿಸಿ ೧ ಬಟ್ಟಲು ಕಷಾಯವನ್ನು ತಯಾರಿಸಬೇಕು ಮತ್ತು ಅದನ್ನು ತೆಗೆದುಕೊಂಡು ಉಳಿದಿರುವುದನ್ನು (ನಿಸ್ಸತ್ವವನ್ನು) ಎಸೆಯಬೇಕು. ಈ ರೀತಿ ಹೆಚ್ಚೆಂದರೆ ೧ ತಿಂಗಳವರೆಗೆ ಮಾಡಬೇಕು. (ಮುಂದೆ ಈ ಔಷಧಿಯನ್ನು ಮುಂದುವರಿಸುವುದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.)’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೨.೨೦೨೧)